ಬಸವನಗುಡಿ: ಸಂಗೀತ ದಿಗ್ಗಜ ಹಂಸಲೇಖ ಜೊತೆಗೆ ಸೆಲ್ಫಿ, ಫೋಟೋ ತೆಗೆದುಕೊಂಡ ಪೊಲೀಸರು!

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಗೀತ ದಿಗ್ಗಜ ಹಂಸಲೇಖರವರ ಭಾಷಣದ ವಿರುದ್ಧ ಬೆಂಗಳೂರಿನ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ, ಹಂಸಲೇಖ ಅವರು ಗುರವಾರ ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಬಸವನಗುಡಿ ಠಾಣೆಗೆ ಹಾಜರಾದ ಸಂದರ್ಭದಲ್ಲಿ ಹಂಸಲೇಖರವರು ಉತ್ಸಾಹದಿಂದಿದ್ದರು. ಒಂದು ಗಂಟೆಗಳ ಕಾಲ ಬಹಳ ಖುಷಿ ಮತ್ತು ಉತ್ಸಾಹದಿಂದ ಎಸಿಪಿ, ಡಿಸಿಪಿ, ಸಬ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಗಳ ಜೊತೆ ಅವರ ಹಳೆಯ ಸಿನಿಮಾಗಳು ಮತ್ತು ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದರು.

ಪೊಲೀಸ್ ಸಿಬ್ಬಂದಿಗಳು ಹಂಸಲೇಖರವರಿಗೆ ಚಹಾ ಮತ್ತು ಬಿಸ್ಕೆಟ್ ಕೊಟ್ಟು ಸತ್ಕರಿಸಿದರು. ಹೇಳಿಕೆ ನೀಡಿ ಮುಗಿಸಿ ಕೊನೆಗೆ ತೆರಳುವ ಸಂದರ್ಭದಲ್ಲಿ ಎಸಿಪಿ, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಬಹುತೇಕ ಸಿಬ್ಬಂದಿಗಳು ಹಂಸಲೇಖರವರೊಂದಿಗೆ ಫೋಟೊ, ಸೆಲ್ಫಿ ತೆಗೆದುಕೊಂಡು ಗೌರವಯುತವಾಗಿ ಕಳಿಸಿಕೊಟ್ಟರು ಎಂದು ನಮ್ಮ ಮೂಲಗಳು ತಿಳಿಸಿವೆ. ಈ ವೇಳೆ ಹಂಸಲೇಖರವರ ಅಪಾರ ಅಭಿಮಾನಿಗಳು ಠಾಣೆ ಎದುರು ಜಮಾಯಿಸಿದ್ದರು.

ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಪರವಾಗಿ ಅವರ ಮೇಲೆ ನಡೆಯುತ್ತಿರುವ ಮಾನಸಿಕ ದಾಳಿಗಳನ್ನು ಖಂಡಿಸಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ಶುಕ್ರವಾರ ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಜಾಥಾ ಪ್ರಾರಂಭವಾಗಿದೆ. ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ (ಕರ್ನಾಟಕ) ಯು ಈ ಜಾಥಾವನ್ನು ಆಯೋಜಿಸಿದ್ದು, ಸಂವಿಧಾನ ಸಮರ್ಪಣಾ ದಿನ ಮತ್ತು ಕಾನೂನು ದಿನದ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾ ಮತ್ತು ಸಮಾವೇಶ ನಡೆಯುತ್ತಿದೆ.

ಜಾಥಾದಲ್ಲಿ ಹಲವಾರು ಸಾಹಿತಿಗಳು, ಹೋರಾಟಗಾರರು, ದಲಿತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದಾರೆ. ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಹೊರಟ ರ್‍ಯಾಲಿಯು ಫ್ರೀಡಂ ಪಾರ್ಕಿನವರೆಗೆ ಸಾಗಲಿದ್ದು, ಅಲ್ಲಿ ಪ್ರತಿಭಟನಾಕಾರರು ತಮ್ಮೊಂದಿಗೆ ತಂದಿರುವ ಬಾಡೂಟದ ಬುತ್ತಿಯನ್ನು ತೆರೆದು ಊಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ರೈತ ಹೋರಾಟಕ್ಕೆ ವಿರೋಧ ಪಕ್ಷಗಳ-ನಾಯಕರ ತಾತ್ಸಾರವೇಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights