ಐತಿಹಾಸಿಕ ರೈತ ಹೋರಾಟಕ್ಕೆ ವಿರೋಧ ಪಕ್ಷಗಳ-ನಾಯಕರ ತಾತ್ಸಾರವೇಕೆ?

ಚಳಿ ಬಿಸಿಲು ಮಳೆ ಎನ್ನದೆ ಕಳೆದ ಒಂದು ವರ್ಷದಿಂದ ರೈತರು ದೆಹಲಿ ಗಡಿಗಳಲ್ಲಿ ಬೀಡುಬಿಟ್ಟಿದ್ದಾರೆ. ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಉಗ್ರ ಹೋರಾಟ ನಡೆಸುತ್ತಿದ್ದಾರೆ. ಈ ರೈತರ ಹೋರಾಟ ಸ್ವಾತಂತ್ರ್ಯದ ನಂತರ ಭಾರತ ಸಾಕ್ಷೀಕರಿಸುತ್ತಿರುವ ಅತಿದೊಡ್ಡ ಜನ ಹೋರಾಟ ಎಂದರೂ ಅತಿಶಯೋಕ್ತಿಯಲ್ಲ. ಭಾರತ ಮಾತ್ರವಲ್ಲ ಇಷ್ಟು ದೀರ್ಘ ಕಾಲದ ರೈತ ಹೋರಾಟ ವಿಶ್ವದ ಯಾವ ದೇಶದಲ್ಲೂ ಈವರೆಗೆ ನಡೆದಿಲ್ಲ ಎಂದೂ ಹೇಳಲಾಗುತ್ತಿದೆ. ಹರಿವ ಜರಿಗೆ ನೂರು ಕಾಲು ಎಂಬಂತೆ ಹೋರಾಟ ದಿನೇ ದಿನೇ ದೊಡ್ಡದಾಗುತ್ತಿದ್ದರೂ ಸಹ ಒಂದು ವಿಚಾರದಲ್ಲಿ ಮಾತ್ರ ರೈತರು ಸ್ಪಷ್ಟವಾಗಿದ್ದರು.

ಹೌದು…ಇದು ರೈತ ಹೋರಾಟವೇ ವಿನಃ ಯಾವುದೇ ಪಕ್ಷದ ಹೋರಾಟವಲ್ಲ, ಅಲ್ಲದೆ, ಯಾವ ಪಕ್ಷದವರೂ ಈ ಹೋರಾಟ ಕ್ರೆಡಿಟ್ ತೆಗೆದುಕೊಳ್ಳುವಂತಿಲ್ಲ. ಹೋರಾಟ ಸಂದಣಿಯ ನಡುವೆ ಯಾವ ಪಕ್ಷದ ಬಾವುಟಗಳನ್ನೂ ಇಡುವಂತಿಲ್ಲ ಎಂಬ ವಿಚಾರದಲ್ಲಿ ಭಾರೀ ಸ್ಪಷ್ಟತೆಯನ್ನು ಹೊಂದಿದ್ದರು. ಇನ್ನೂ ಗೋಧಿ ಮೀಡಿಯಾಗಳನ್ನೂ ಸಾಧ್ಯವಾದಷ್ಟು ದೂರವೇ ಇಟ್ಟಿದ್ದ ರೈತರು, ನವ ಮಾಧ್ಯಮಗಳ ಮೂಲಕ ತಮ್ಮ ಸುದ್ದಿಗಳನ್ನು ತಾವೇ ಜನರ ಬಳಿ ತಲುಪಿಸಿದ್ದೂ ಸಹ ಭಾರತ ಎಂದೂ ಮರೆಯಲಾರದ ರೋಚಕ ಇತಿಹಾಸ ಎಂದರೂ ತಪ್ಪಾಗಲಾರದು.

ರೈತ ಹೋರಾಟದ ಕ್ರೆಡಿಟ್ ಅನ್ನು ರಾಜಕೀಯ ಪಕ್ಷಗಳು ತೆಗೆದುಕೊಳ್ಳಬಾರದು ಎಂಬುದೇನೋ ಸರಿಯೇ. ಆದರೆ, ರೈತ ಹೋರಾಟ ಇಂದಿಗೆ ಸರಿಯಾಗಿ ಒಂದು ವರ್ಷ ಪೂರ್ಣಗೊಳಿಸಿದ್ದು “ಐತಿಹಾಸಿಕ ಹೋರಾಟ” ಎಂದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ. ಇಂತಹ ಸಂದರ್ಭದಲ್ಲೂ ವಿರೋಧ ಪಕ್ಷಗಳು ರೈತ ಹೋರಾಟಕ್ಕೆ ಬೆಂಬಲ ನೀಡುವುದಿರಲಿ, ಕನಿಷ್ಟ ಒಂದು ಹೇಳಿಕೆ, ಒಂದು ಟ್ವೀಟ್ ಸಹ ಮಾಡದೆ ಹೋದದ್ದು ವಿಪರ್ಯಾಸವಾಗಿದೆ.

ಪ್ರತಿಪಕ್ಷಗಳಿಗೆ ತಾತ್ಸಾರವೇಕೆ?

ಕೇಂದ್ರ ಸರ್ಕಾರ ಮಾತ್ರವಲ್ಲ, ಕರ್ನಾಟಕದಲ್ಲೂ ಸಹ ರಾಜ್ಯ ಸರ್ಕಾರ ಅನೇಕ ಜನ ವಿರೋಧಿ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ. ದೇಶದ ಐತಿಹಾಸಿಕ ರೈತ ಹೋರಾಟಕ್ಕೆ ಬೆಂಬಲ ಸೂಚಿಸುವ ಜೊತೆಗೆ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಹತ್ತಾರು ಸಂಘಟನೆಗಳು ಇಂದು ರಸ್ತೆಗಿಳಿದು ಪ್ರತಿಭಟಿಸುತ್ತಿವೆ. ಕರ್ನಾಟಕ ಜನಶಕ್ತಿ ಸಂಘಟನೆ ಬೆಂಗಳೂರಿನಿಂದ ಮೈಸೂರಿಗೆ ಬೈಕ್-ಕಾರು ಜಾಥ ನಡೆಸುವ ಮೂಲಕ ರೈತ ಹೋರಾಟಕ್ಕೆ ಬಲ ತುಂಬಿದೆ.

ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ನಾನಾ ಮೂಲೆಗಳಲ್ಲಿ ಹಲವು ಹೋರಾಟಗಳು ನಡೆಯುತ್ತಲೇ ಇವೆ. ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರ್ ಗಡಿಗಳಿಗೆ ಪಂಜಾಬ್-ಹರಿಯಾಣದಿಂದ ಅಸಂಖ್ಯಾತ ರೈತರು ಕಳೆದ ಎರಡು ದಿನಗಳಿಂದ ಟ್ರಾಕ್ಟರ್ ಸೇರಿದಂತೆ ನಾನಾ ವಾಹಗಳ ಜೊತೆ ಆಗಮಿಸುತ್ತಿದ್ದಾರೆ. ಇಡೀ ದೇಶ ಇಂದು ದೆಹಲಿಯ ಗಡಿ ಸುದ್ದಿಗಳ ಕಡೆಗೆ ಮುಖ ಮಾಡಿದೆ. ಆದರೆ, ವಿಪರ್ಯಾಸ ನೋಡಿ ಕರ್ನಾಟಕ ಯಾವ ವಿರೋದ ಪಕ್ಷದ ನಾಯಕರಿಗೂ ವಿಚಾರ ಗೊತ್ತೇ ಇಲ್ಲವೇನೋ? ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ವಿರೋಧ ಪಕ್ಷವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ನೆಲೆಯನ್ನು ತುಸುವಾದರೂ ಭದ್ರಪಡಿಸಿಕೊಳ್ಳಬೇಕಾದರೆ ರೈತ ಹೋರಾಟದ ಬಗ್ಗೆ ಕನಿಷ್ಠ ಮಾತನಾಡುವ ಅಗತ್ಯ ಇತ್ತು. ಈ ಹೋರಾಟವನ್ನು ಮುಂದಿಟ್ಟು ಆಡಳಿತ ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಕಷ್ಟು ಸಾಧ್ಯತೆಗಳು ಕಣ್ಣ ಮುಂದೆ ಇತ್ತು. ಆದರೆ, ಈ ಎಲ್ಲಾ ಸಾಧ್ಯತೆಗಳನ್ನು ವಿರೋಧ ಪಕ್ಷಗಳು ಕೈಚೆಲ್ಲಿವೆ.

ಆದರೆ, ಮಾತೆತ್ತಿದರೆ ರೈತನ ಬಗ್ಗೆ ಮಾತನಾಡುವ ವಿರೋಧ ಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಸೇರಿದಂತೆ ಯಾವೊಬ್ಬ ನಾಯಕರು ದೇಶದ ರೈತ ಹೋರಾಟ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ದಿನದಂದು ಉಸಿರೂ ಬಿಡದೆ ಇರುವುದು, ಕನಿಷ್ಟ ಒಂದು ಟ್ವೀಟ್ ಸಹ ಮಾಡದೆ ಇರುವುದು ಸಾಕಷ್ಟು ಅನುಮಾನಕ್ಕೆ ಮತ್ತು ನಿರಾಸೆಗೆ ಕಾರಣವಾಗಿದೆ. ವಿರೋಧ ಪಕ್ಷಗಳ ಈ ನಡೆ ಅವರನ್ನೂ ಬಿಜೆಪಿ ಮನಸ್ಥಿತಿಗೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ರೈತಾಂದೋಲನಕ್ಕೆ ದಿಗ್ವಿಜಯ; ಬೆಂಗಳೂರಿನಿಂದ ಮೈಸೂರಿಗೆ ಬೈಕ್-ಕಾರ್ ಜಾಥಾ ಹೊರಟ ಜನಶಕ್ತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights