ಪ್ರಧಾನಿಯ ಬಗ್ಗೆ ನಿಮಗೆ ನಾಚಿಕೆಯೇ?; ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ತೆಗೆಯಲು ಕೋರಿದ್ದ ಅರ್ಜಿದಾರರಿಗೆ ಕೇರಳ ಹೈಕೋರ್ಟ್‌ ಪ್ರಶ್ನೆ!

ಕೊರೊನಾ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆಯುವಂತೆ ಕೋರಿ ಅರ್ಜಿಯ ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್‌, ಪ್ರಧಾನಿಯ ಬಗ್ಗೆ ನಾಚಿಕೆಯಾಗುತ್ತಿದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.

ಇತರ ದೇಶಗಳಲ್ಲಿ ಇಂತಹ ಪದ್ಧತಿ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ಕೇರಳ ಹೈಕೋರ್ಟ್‌ಗೆ ತಿಳಿಸಿದರು. ಇದಕ್ಕೆ ಮೌಖಿಕವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಅವರು ತಮ್ಮ ಪ್ರಧಾನಿಗಳ ಬಗ್ಗೆ ಹೆಮ್ಮೆಪಡದಿರಬಹುದು, ನಮ್ಮ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ವ್ಯಂಗ್ಯವಾಡಿದ್ದಾರೆ.

ದೇಶದ ಜನರಿಂದ ಪ್ರಧಾನಿಯನ್ನು ಅಧಿಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಲಸಿಕೆ ಪ್ರಮಾಣ ಪತ್ರದಲ್ಲಿ ಅವರ ಭಾವಚಿತ್ರ ಇರುವುದರಲ್ಲಿ ತಪ್ಪೇನು ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಹೇಳಿದ್ದಾರೆ.

“ನೀವು (ಅರ್ಜಿದಾರರು) ಪ್ರಧಾನ ಮಂತ್ರಿಯ ಬಗ್ಗೆ ಏಕೆ ನಾಚಿಕೆಪಡುತ್ತೀರಿ? ಅವರು ಜನರ ಆದೇಶದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ…. ನಾವು ವಿಭಿನ್ನ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರಬಹುದು, ಆದರೆ ಅವರು ಇನ್ನೂ ನಮ್ಮ ಪ್ರಧಾನಿ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲ ಪೀಟರ್ ಮೈಲಿಪರಂಪಿಲ್ ಅವರು “ಪ್ರಮಾಣಪತ್ರವು “ಖಾಸಗಿ ದಾಖಲೆ” ಆಗಿದ್ದು, ದಾಖಲೆಯಲ್ಲಿ ವೈಯಕ್ತಿಕ ವಿವರಗಳನ್ನು ಹೊಂದಿರುತ್ತದೆ. ಆದ್ದರಿಂದ ವ್ಯಕ್ತಿಯ ಗೌಪ್ಯತೆಗೆ ಒಳನುಗ್ಗುವುದು ಸೂಕ್ತವಲ್ಲ” ಎಂದು ಹೇಳಿದ್ದಾರೆ.

ಪ್ರಮಾಣ ಪತ್ರಕ್ಕೆ ಪ್ರಧಾನಮಂತ್ರಿಯವರ ಭಾವಚಿತ್ರವನ್ನು ಸೇರಿಸಿರುವುದು ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಪೀಟರ್‌ ಪ್ರತಿಪಾದಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸದ ಕೋರ್ಟ್‌, ದೇಶದ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿಯವರ ಫೋಟೊ ಇರುವುದರಿಂದ ತೊಂದರೆಯಾಗಿಲ್ಲ. ‘ನಿಮಗೇಕೆ ತೊಂದರೆ? ಎಂದು ಹೇಳಿದ್ದು, ಅರ್ಜಿಗೆ ಯಾವುದೇ ಅರ್ಹತೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಇಲ್ಲವೆಂದಾದರೆ, ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು ಎಂದು ಹೇಳಿದೆ.

ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೊಬ್ಬ ವಕೀಲ ಅಜಿತ್ ಜಾಯ್, ಪ್ರಧಾನಿಯ ಬಗ್ಗೆ ಹೆಮ್ಮೆ ಪಡಬೇಕೆ ಎಂಬುದು ಅವರ ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.

ಇದು ರಾಜಕೀಯ ಭಿನ್ನಾಭಿಪ್ರಾಯದ ವಿಷಯವಲ್ಲ. ಸಾರ್ವಜನಿಕ ಹಣವನ್ನು ಜಾಹೀರಾತು ಮತ್ತು ಪ್ರಚಾರಗಳಿಗೆ ಬಳಸಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ನೀಡಿದೆ ಎಂದು ಜಾಯ್‌ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಮಾಣಪತ್ರದಲ್ಲಿ ಫೋಟೋ ಇದ್ದರೆ ಮತದಾರರ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ. ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದು ಪ್ರಚಾರ ಹಿತಾಸಕ್ತಿ ಮೊಕದ್ದಮೆ ಎಂದು ಕೇಂದ್ರ ಸರ್ಕಾರವು ಮನವಿಯನ್ನು ವಿರೋಧಿಸಿದೆ.

ಅರ್ಜಿಸಲ್ಲಿಸಿರುವ ಅರ್ಜಿದಾರರು ಮತ್ತು ಹಿರಿಯ ನಾಗರಿಕರು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪ್ರಧಾನ ಮಂತ್ರಿಯವರ ಫೋಟೋ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂಓದಿ: ಗೋವಾ ಚುನಾವಣೆ: ವಿಪಕ್ಷಗಳ ಮೈತ್ರಿಗೆ ಕಾಂಗ್ರೆಸ್‌ ಪ್ರಯತ್ನ; ಇಲ್ಲವಾದರೆ ಬಿಜೆಪಿಗೆ ಮತ್ತೆ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights