ಮುಂಬೈ: ಡ್ಯಾನ್ಸ್ ಬಾರ್‌ ಮೇಲೆ ದಾಳಿ; 17 ಮಹಿಳೆಯರ ರಕ್ಷಣೆ

ಮುಂಬೈನ ಅಂಧೇರಿಯಲ್ಲಿರುವ ಡ್ಯಾನ್ಸ್ ಬಾರ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ, 17 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಮೇಕಪ್ ಕೋಣೆಗೆ ಸಂಪರ್ಕ ಹೊಂದಿದ್ದ ರಹಸ್ಯ ನೆಲಮಾಳಿಗೆಯೊಳಗೆ ಮಹಿಳೆಯರನ್ನು ಅಡಗಿಸಿಡಲಾಗಿತ್ತು. ಬಾರ್‌ನ ಆವರಣದಲ್ಲಿ ಇರಿಸಲಾದ ಸುಧಾರಿತ ಎಲೆಕ್ಟ್ರಾನಿಕ್ ಸಿಸ್ಟಮ್ ಸಹಾಯದಿಂದ ದಾಳಿಯ ಬಗ್ಗೆ ಬಾರ್‌ ಸಿಬ್ಬಂದಿ ಅಲರ್ಟ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂಧೇರಿಯಲ್ಲಿರುವ ದೀಪಾ ಬಾರ್‌ನಲ್ಲಿ ಗ್ರಾಹಕರ ಮುಂದೆ ಮಹಿಳೆಯರಿಂದ ನೃತ್ಯ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಲಾಯಿತು. ಆದಾಗ್ಯೂ ಪೊಲೀಸರ ತಂಡಕ್ಕೆ ತಕ್ಷಣವೇ ಯಾವ ಮಹಿಳೆಯರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ಬಾತ್‌ ರೂಮ್‌, ಸ್ಟೋರ್‌ ರೂಮ್‌ ಮತ್ತು ಅಡುಗೆಮನೆಯಂತಹ ಅಡಗು ತಾಣಗಳಲ್ಲಿಯೂ ಮಹಿಳೆಯರು ಪತ್ತೆಯಾಗಲಿಲ್ಲ. ಬಾರ್ ಮ್ಯಾನೇಜರ್, ಕ್ಯಾಷಿಯರ್ ಮತ್ತು ಸಪ್ಲೈಯರ್‌ಗಳನ್ನು ಪದೇಪದೇ ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಾರ್‌ನಲ್ಲಿ ನೃತ್ಯ ಮಾಡಲು ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು ಬಾರ್‌ ಸಿಬ್ಬಂದಿ ನಿರಾಕರಿಸುತ್ತಲೇ ಇದ್ದರು.

ಆದರೆ, ಮೇಕಪ್ ಕೊಠಡಿಯಲ್ಲಿದ್ದ ದೊಡ್ಡ ಕನ್ನಡಿ ಪೊಲೀಸ್‌ ಅಧಿಕಾರಿಗಳ ಗಮನ ಸೆಳೆಯಿತು. ಕನ್ನಡಿಯನ್ನು ಗೋಡೆಯಿಂದ ತೆಗೆಯುವ ಪ್ರಯತ್ನ ವಿಫಲವಾಯಿತು. ಯಾಕೆಂದರೆ ಕನ್ನಡಿಯನ್ನು ಬಹಳ ವ್ಯವಸ್ಥಿತವಾಗಿ ಜೋಡಿಸಲಾಗಿತ್ತು.

ಕನ್ನಡಿಯನ್ನು ಸುತ್ತಿಗೆಯಿಂದ ಒಡೆದಾಗ ನೆಲಮಾಳಿಗೆ ಇರುವ ಸುರಂಗಮಾರ್ಗ ಪತ್ತೆಯಾಯಿತು. ಈ ಅಡಗುತಾಣದಲ್ಲಿ ಹದಿನೇಳು ಮಹಿಳೆಯರು ಕಂಡುಬಂದರು. ನೆಲಮಾಳಿಗೆಯಲ್ಲಿ ಎಸಿ, ಬೆಡ್‌ಗಳಂತಹ ಎಲ್ಲಾ ಸೌಲಭ್ಯಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬಾರ್‌ನ ಮ್ಯಾನೇಜರ್, ಕ್ಯಾಷಿಯರ್ ಸೇರಿದಂತೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗೋವಾ ಚುನಾವಣೆ: ವಿಪಕ್ಷಗಳ ಮೈತ್ರಿಗೆ ಕಾಂಗ್ರೆಸ್‌ ಪ್ರಯತ್ನ; ಇಲ್ಲವಾದರೆ ಬಿಜೆಪಿಗೆ ಮತ್ತೆ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights