41 ವರ್ಷಗಳ ನಂತರ ಅತ್ಯಾಚಾರದ ಪ್ರಕರಣ ವಿಚಾರಣೆ: ಅಧ್ಯಾಯ ಮುಗಿದಿದೆ – ಪ್ರಕರಣವನ್ನು ಮುಗಿಸಿ ಎಂದ ಮಹಿಳೆ

ಕ್ರಿಮಿನಲ್ ನ್ಯಾಯಾಲಯಗಳು ಇತ್ತೀಚೆಗೆ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ತ್ವರಿತವಾಗಿ ನ್ಯಾಯವನ್ನು ನೀಡಲು ಪ್ರಯತ್ನಿಸುತ್ತಿವೆ. ಆದರೆ, ಒಂದು ಅತ್ಯಾಚಾರ ಪ್ರಕರಣವು ದಾಖಲಾದ 41 ವರ್ಷಗಳ ಬಳಿಕ ವಿಚಾರಣೆಗೆ ಬಂದಿದ್ದು, ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಬೇಕಾದ ಸಂದರ್ಭ ಅಹಮದಾಬಾದ್ ನ್ಯಾಯಾಲಯಕ್ಕೆ ಎದುರಾಗಿದೆ.

ಈಗ 55 ವರ್ಷ ವಯಸ್ಸಿನವರಾದ ಮಹಿಳೆ, ತಾನು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದು, ತಮಗೆ ಬೆಳದ ಮಕ್ಕಳಿದ್ದು, ಇನ್ನು ಮುಂದೆ ಕಾನೂನು ಪ್ರಕ್ರಿಯೆಗಳನ್ನು ಸಹಿಸಿಕೊಳ್ಳಲು ತಾವು ಬಯಸುವುದಿಲ್ಲ. ಹೀಗಾಗಿ, ತಾವು ವ್ಯಾಜ್ಯವನ್ನು ಮುಂದುವರೆಸಲು ಬಯಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅವರು ಪುರ್ಸಿಸ್ (ಲಿಖಿತ ಹೇಳಿಕೆ) ಮೂಲಕ ತಮ್ಮ ಹೇಳಿಕೆಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಡಿ ಎಂ ವ್ಯಾಸ್ ಅವರು ತಮ್ಮ ಆದೇಶದಲ್ಲಿ ದಾಖಲಿಸಲಾಗಿರುವ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅತ್ಯಾಚಾರ ಆರೋಪದ ಆರೋಪಿಗಳನ್ನು ನ್ಯಾಯಾಲಯವು ಈ ವರ್ಷ ನವೆಂಬರ್ 30 ರಂದು ದೋಷಮುಕ್ತಗೊಳಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ಮುಂಬೈನ ಟ್ಯಾಕ್ಸಿ ಡ್ರೈವರ್ ಜೂನ್ 30, 1980 ರಂದು ಅಹಮದಾಬಾದ್‌ನ ಸರ್ಖೇಜ್ ಪ್ರದೇಶದಿಂದ ಮಹಿಳೆಯೊಂದಿಗೆ ಮನೆ ಬಿಟ್ಟು ಹೋಗಿದ್ದರು ಎಂದು ಹೇಳಲಾಗಿದೆ. ಅವರು ಮುಂಬೈಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದಂಪತಿಗಳೊಂದಿಗೆ ಮಹಿಳೆಯ ಸ್ನೇಹಿತ ಜೊತೆಗೂಡಿದರು. ಅದೇ ವರ್ಷ ಜುಲೈ 3 ರಂದು ಸ್ನೇಹಿತ ಅಹಮದಾಬಾದ್‌ಗೆ ಹಿಂದಿರುಗಿದ್ದ ಮತ್ತು ಜುಲೈ 8 ರಂದು ಮಹಿಳೆಯನ್ನು ಪೊಲೀಸರು ಪತ್ತೆಹಚ್ಚಿದ್ದರು.

ಮಹಿಳೆಯ ತಂದೆ ಸೇರಿದಂತೆ ನಾಲ್ವರು ಸಾಕ್ಷಿಗಳ ಹೇಳಿಕೆಯ ಮೂಲಕ, ಟ್ಯಾಕ್ಸಿ ಡ್ರೈವರ್ ಇಬ್ಬರೂ ಮಹಿಳೆಯರನ್ನು ಮುಂಬೈಗೆ ಕರೆದೊಯ್ದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿದುಬಂದಿತ್ತು. ಚಾಲಕ ಮಹಿಳೆಯನ್ನು ವಾಲ್ಕೇಶ್ವರದಲ್ಲಿರುವ ಆಕೆಯ ಮನೆಯಲ್ಲಿ ಬಿಟ್ಟಿದ್ದನು ಎಂದು ಪ್ರತ್ಯಕ್ಷದರ್ಶಿಯೊಬ್ಬರು ನ್ಯಾಯಾಲಯಕ್ಕೆ ತಿಳಿಸಿದ್ದರು. ಹೀಗಾಗಿ, ಮಹಿಳೆಯನ್ನು ಆರೋಪಿಗಳು ಬಂಧಿಸಿರಲಿಲ್ಲ ಎಂದು ನ್ಯಾಯಾಲಯ ಗಮನಿಸಿತ್ತು.

ಪ್ರಕರಣದ ವಿಚಾರಣೆಯ ಕೇಂದ್ರವಾಗಿರುವ ಸರ್ಖೇಜ್‌ನ ಮಹಿಳೆ ಸಾಕ್ಷಿ ಹೇಳಲು ನಿರಾಕರಿಸಿರುವ ಕಾರಣದಿಂದಾಗಿ, ಪ್ರತ್ಯಕ್ಷ ಅಥವಾ ಪರೋಕ್ಷ ಸಾಕ್ಷ್ಯಗಳ ಅನುಪಸ್ಥಿತಿಯಲ್ಲಿ, ಇತರ ಸಾಕ್ಷಿಗಳ ಸಾಕ್ಷ್ಯಗಳು ಅತ್ಯಲ್ಪವಾಗುತ್ತವೆ. ಅವುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಜುಲೈ 1, 1980 ರಂದು ಆರೋಪಿಯು ವಿವಾಹವಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ, ಸರ್ಖೇಜ್ ಮಹಿಳೆಯನ್ನು ಮದುವೆಯಾಗಿರುವುದು ಸಾಬೀತಾಗಿಲ್ಲ. ಸಾಕ್ಷ್ಯವು ಆಕೆಯ ಅಪಹರಣ, ಮದುವೆ ಅಥವಾ ಅತ್ಯಾಚಾರವನ್ನು ದೃಢೀಕರಿಸಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಆರೋಪಿಯನ್ನು ಖುಲಾಸೆಗೊಳಿಸಿದೆ.

Also Read: ಅತ್ಯಾಚಾರದ ಬಗ್ಗೆ ಉದಾಸೀನದ ಹೇಳಿಕೆ: ಕ್ಷಮೆ ಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights