Fact Check: ಬಾಂಗ್ಲಾದೇಶದ ನಮಾಜ್‌ ಚಿತ್ರವನ್ನು ಗುರುಗ್ರಾಮದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ!

ಹರಿಯಾಣದ ಗುರುಗ್ರಾಮದಲ್ಲಿರುವ ಸಾರ್ವಜನಿಕ ಸ್ಥಳಗಳಲ್ಲಿ ಶುಕ್ರವಾರ ನಮಾಜ್ ಮಾಡಿದ ಮುಸ್ಲಿಮರ ವಿರುದ್ಧ ಸ್ಥಳೀಯರು ಮತ್ತು ಬಲಪಂಥೀಯ ಗುಂಪುಗಳ ಸದಸ್ಯರು ಕಳೆದ ಮೂರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. “2018 ರಲ್ಲಿ, ಇದೇ ರೀತಿಯ ಪ್ರತಿಭಟನೆಗಳ ನಂತರ, ಅಲ್ಲಿನ ಆಡಳಿತವು ನಮಾಜ್‌ಗಾಗಿ ಗೊತ್ತುಪಡಿಸಿದ ಜಾಗಗಳ ಸಂಖ್ಯೆಯನ್ನು 108 ರಿಂದ 37 ಕ್ಕೆ ಇಳಿಸಿತ್ತು. ಈ ನವೆಂಬರ್‌ನಲ್ಲಿ, ಗೊತ್ತುಪಡಿಸಿದ ಸ್ಥಳಗಳ ಸಂಖ್ಯೆಯನ್ನು ಮತ್ತಷ್ಟು ಮೊಟಕುಗೊಳಿಸಿದ್ದು, 20ಕ್ಕೆ ಇಳಿಸಿದೆ” ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕೆನಡಾದ ಅಂಕಣಕಾರ ತಾರೆಕ್ ಫತಾಹ್ ಅವರು ನೂರಾರು ಜನರು ಸಾರ್ವಜನಿಕವಾಗಿ ನಮಾಜ್ ಮಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. “ಇದು ಇತರರನ್ನು ಬೆದರಿಸಲು ಉದ್ದೇಶಿಸಿರುವ ಸಂಖ್ಯೆಗಳ ಪ್ರದರ್ಶನವಾಗಿದೆ” ಎಂದು ಫತಾಹ್ ಬರೆದಿದ್ದಾರೆ. ಅವರ ಟ್ವೀಟ್ 2,000ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಫೇಸ್‌ಬುಕ್ ಪುಟಗಳಾದ ಐ ಸಪೋರ್ಟ್‌ ಅರ್ನಾಬ್ ಗೋಸ್ವಾಮಿ; ಡಿವೈನ್ ಶಾಲಿಗ್ರಾಮ್ ಮತ್ತು ಎಟರ್ನಲ್ ಹಿಂದೂ – ಶಾಶ್ವತ ಹಿಂದೂ ಎಂಬ ಪೇಜ್‌ಗಳು ಒಂದೇ ರೀತಿಯ ಹೇಳಿಕೆಯನ್ನು ಪೋಸ್ಟ್‌ ಮಾಡಿವೆ.

ಸತ್ಯ – ಈ ಪೋಟೋ ಬಾಂಗ್ಲಾದೇಶದ ಹಳೆಯ ಚಿತ್ರ:

ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದೊಂದು ಬಸ್‌ನಲ್ಲಿ ಬಿಆರ್‌ಟಿಸಿ ಎಂದು ಬರೆಯಲಾಗಿದೆ. ಅದೊಂದು ಡಬಲ್ ಡೆಕ್ಕರ್ ಬಸ್ ಆಗಿದೆ.

BRTC ಎಂಬುದು ಬಾಂಗ್ಲಾದೇಶ ರಸ್ತೆ ಸಾರಿಗೆ ನಿಗಮದ ಸಂಕ್ಷಿಪ್ತ ರೂಪವಾಗಿದೆ. ಇದೇ ರೀತಿಯ ಬಸ್‌ಗಳ ಛಾಯಾಚಿತ್ರಗಳು ಬಾಂಗ್ಲಾದೇಶ ಮೂಲದ ಔಟ್‌ಲೆಟ್‌ಗಳಾದ ದಿ ಡೈಲಿ ಸ್ಟಾರ್, ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಮತ್ತು ಬಾಂಗ್ಲಾದೇಶ ಲೈವ್‌ನಲ್ಲಿ ಕಂಡುಬಂದಿವೆ.

ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಸ್ಟಾಕ್ ಫೋಟೋಗ್ರಫಿ ವೆಬ್‌ಸೈಟ್ ಅಲಾಮಿಯಲ್ಲಿ ಇದೇ ಚಿತ್ರವನ್ನು ಹೊಂದಿರುವ ವರದಿ ದೊರೆತಿದೆ. ವೈರಲ್ ಚಿತ್ರವು ಮೂಲ ಚಿತ್ರದಿಂದ ಕ್ರಾಪ್ ಮಾಡಿದ ಆವೃತ್ತಿಯಾಗಿದೆ. ಚಿತ್ರದ ವಿವರಗಳ ಪ್ರಕಾರ, ಇದನ್ನು 2020 ರಲ್ಲಿ ಶೇಖ್ ಮೊಹಮ್ಮದ್ ಮಹದಿ ಹಾಸನ್ ಅವರು ಸೆರೆ ಹಿಡಿದಿದ್ದಾರೆ. ಚಿತ್ರದ ಶೀರ್ಷಿಕೆಯು, “ಹಜ್ ನಂತರ ವಿಶ್ವದ ಮುಸ್ಲಿಮರ ಎರಡನೇ ಅತಿದೊಡ್ಡ ಸಭೆಯಾದ ಬಿಶ್ವಾ ಇಜ್ತೆಮಾದಲ್ಲಿ ಮುಸ್ಲಿಮರು ಜುಮ್ಮಾ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ.” ಎಂದು ಬರೆಯಲಾಗಿದೆ.

ವೈರಲ್ ಆಗಿರುವ ಚಿತ್ರದ ಭಾಗವನ್ನು ಕೆಳಗೆ ಗುರುತಿಸಲಾಗಿದೆ.

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ತಾರೆಕ್ ಫತಾಹ್ ಅವರು ಬಾಂಗ್ಲಾದೇಶದಲ್ಲಿ ನಡೆದ ಸಾರ್ವಜನಿಕ ನಮಾಜ್‌ನ ಚಿತ್ರವನ್ನು ತಪ್ಪಾಗಿ ಪೋಸ್ಟ್ ಮಾಡಿದ್ದಾರೆ.

ಕೃಪೆ: ಆಲ್ಟ್‌ ನ್ಯೂಸ್‌

ಇದನ್ನೂ ಓದಿ: Fact Check: ಮೋದಿ ಪ್ರಭಾವದಿಂದ ದಲ್ವೀರ್‌‌‌ ಭಂಡಾರಿ ಅವರು ಅಂತಾರಾಷ್ಟ್ರೀಯ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸತ್ಯವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights