Fact check: ನಟ ಸೋನು ಸೂದ್ ಕಾಂಗ್ರೆಸ್ ಸೇರಿದ್ದಾರೆ ಎಂಬ ಸುದ್ದಿ ನಿಜವೇ?

ನಟ ಸೋನು ಸೂದ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ! ಕೋವಿಡ್ ನ ಸಂಕಷ್ಟದ ಪರಿಸ್ಥಿತಿಯಲ್ಲಿ ಬಡ ಜನರ ಸಹಾಯಕ್ಕೆ ಸಾಕಷ್ಟು ಶ್ರಮಿಸಿ ಬಡವರ ಪಾಲಿನ ನಿಜವಾದ ಹೀರೋ ಆಗಿದ್ದರು.  ಹಾಗಾಗಿ ಸೋನು ಸೂದ್ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರೂ ನಿಜ ಜೀವನದಲ್ಲಿ ಎಲ್ಲರ ಪಾಲಿನ ಹೀರೋ ಆಗಿದ್ದು ಮಾತ್ರ ಸುಳ್ಳಲ್ಲ. “ಸೋನು ಸೂದ್ ಆ ಕೆಲಸಗಳನ್ನು ಮಾಡಿದ್ದು ಹೆಸರಿಗಾಗಿ ಅಲ್ಲ, ಬಡವರ ಮೇಲಿದ್ದ ನಿಜವಾದ ಕಾಳಜಿಯಿಂದಾಗಿ” ಎಂದು ಇಡೀ ದೇಶದ ತುಂಬೆಲ್ಲ ಸೋನು ಸೂದ್ ಹೆಸರು ಹರಿದಾಡಿತ್ತು.

ಈಗ ಮತ್ತೆ ಸೋನು ಸೂದ್ ಹೆಸರು  ದೇಶದ ತುಂಬ ಹರಿದಾಡುತ್ತಿದೆ. ಕಾರಣ ಪಂಜಾಬ್ ವಿಧಾನಸಭೆ ಚುನಾವಣೆ.  2022 ಫೆಬ್ರವರಿಯಲ್ಲಿ ಪಂಜಾಬ್ ಅಸೆಂಬ್ಲಿ ಚುನಾವಣೆ ನಡೆಯುತ್ತಿದೆ. ಅದಕ್ಕೂ ಮುಂಚಿತವಾಗಿ ನಟ ಸೋನು ಸೂದ್ ಅವರು  ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂಬ ಸುದ್ದಿಯೊಂದಿಗೆ  ನಟ ಸೋನು ಸೂದ್ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸುದ್ದಿ ಸಾಕಷ್ಟು ವೈರಲ್ ಕೂಡ ಆಗಿದೆ.  ಈ ಸುದ್ದಿ ಎಷ್ಟು ನಿಜ ಎಂದು ತಿಳಿದುಕೊಳ್ಳೋಣ.

ಫ್ಯಾಕ್ಟ್ ಚೆಕ್:

ಸೋನು ಸೂದ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ ಸಂಬಂಧ ಸರ್ಚ್ ಮಾಡಿದಾಗ ಸೂನು ಸೂದ್ ರಾಜಕೀಯ ಪ್ರವೇಶಿಸಿರುವುದಾಗಲಿ, ಕಾಂಗ್ರೆಸ್ ಸೇರಿದ್ದಾರೆಂಬುದು ಅಧಿಕೃತವಾಗಿ ಘೋಷಣೆಯಾಗಿರುವುದಾಗಲೀ ಕಂಡು ಬಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸುಳ್ಳಾಗಿದೆ.

ನಾವು ಸೋನು ಸೂದ್ ಅವರ ಟ್ವಟರ್ ಅಕೌಂಟ್ ಅನ್ನು ಸರ್ಚ್ ಮಾಡಿದಾಗ ವೈರಲ್ ಆಗಿರುವ ಹೇಳಿಕೆಯ ಯಾವ ಪೋಸ್ಟ್ ಗಳು ಲಭ್ಯವಾಗಲಿಲ್ಲ .ಆದರೆ ತಮ್ಮ ಸೋದರಿ ಕಾಂಗ್ರೆಸ್ ಸೇರಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿರುವ ಸೂದ್, ಕಾಂಗ್ರೆಸ್‌ಗೆ ಸೇರಿರುವ ತಮ್ಮ ಸಹೋದರಿ ಮಾಳವಿಕಾ ಸೂದ್‌ಗೆ ಶುಭ ಕೋರಿದ್ದಾರೆ.

ಕ್ವಿಂಟ್ ಜೊತೆ ಮಾತನಾಡಿರುವ ಸೂದ್, “ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಯಾವುದೇ ರಾಜಕೀಯ ಪಕ್ಷಕ್ಕೂ ನಾನು ಸೇರಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ವೈರಲ್‌ ಆಗಿರುವ ಪೋಸ್ಟ್‌ನಲ್ಲಿರುವ ಕೀವರ್ಡ್‌ಗಳನ್ನು ಬಳಸಿಕೊಂಡು, ಸೋನು ಸೂದ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತ ಸುದ್ದಿ ವರದಿಗಳನ್ನು ನಾವು ಸರ್ಚ್ ಮಾಡಿದ್ದೇವೆ.  ಜನವರಿ 11 ರಂದು ಪ್ರಕಟವಾದ ದಿ ಕ್ವಿಂಟ್‌ನಲ್ಲಿನ ಲೇಖನವು ಸೋನು ಸೂದ್ ಅವರ ಸಹೋದರಿ ಮಾಳವಿಕಾ ಕಾಂಗ್ರೆಸ್‌ಗೆ ಸೇರಿದ್ದಾರೆ ಎಂದು ಹೇಳಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಅವರು ತಮ್ಮ ತವರು ಕ್ಷೇತ್ರವಾದ ಮೊಗಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.

“ಸಾಮಾಜಿಕ ಕಾರ್ಯಕರ್ತ ಮತ್ತು ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ” ಎಂದು ಪಂಜಾಬ್‌ ಮುಖ್ಯಮಂತ್ರಿ ಚರಂಜಿತ್‌ ಸಿಂಗ್‌ ಚನ್ನಿಯವರು ಜನವರಿ 10 ರಂದು ಟ್ವೀಟ್ ಮಾಡಿದ್ದರು.

ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಚನ್ನಿ ಮತ್ತು ಕಾಂಗ್ರೆಸ್‌ನ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಸಮ್ಮುಖದಲ್ಲಿ ಮಾಳವಿಕಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು,  ಆ ಸಂದರ್ಭದಲ್ಲಿ ನಟ ಸೋನು ಸೂದ್ ಅವರೂ ಇರುವುದನ್ನು ಫೋಟೋದಲ್ಲಿ ಕಾಣಬಹುದು. ಇದೇ ಫೋಟೋಗಳನ್ನು ಸೋನುಸೂದ್  ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಲ್ಲದೆ, ನಾವು ಸೋನು ಸೂದ್ ಅವರ ಅಧಿಕೃತ ಟ್ವಿಟರ್ ಪ್ರೊಫೈಲ್‌ ಸರ್ಚ್ ಮಾಡಿದಾಗ  ಬಾಲಿವುಡ್ ನಟರಿಂದ ಅಂತಹ ಯಾವುದೇ ಟ್ವೀಟ್‌ ಆಗಲಿ, ಹೇಳಿಕೆಗಳಾಗಲಿ, ಪೋಸ್ಟ್‌ಗಳಾಗಲೀ ಆಗಿಲ್ಲ.  ತಮ್ಮ ಸಹೋದರಿ ಮಾಳವಿಕಾ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಟ್ವೀಟ್  ಮಾಡಿರುವುದು ಮಾಡಿರುವುದು ಕಂಡು ಬಂದಿದೆ. ಸಹೋದರಿಯ ರಾಜಕೀಯ ಪ್ರಯಾಣಕ್ಕೆ ಶುಭ ಹಾರೈಸಿರುವ ಅವರು, ನಟ ಮತ್ತು ಮಾನವತಾವಾದಿಯಾಗಿ ತಮ್ಮ ಕೆಲಸವು “ಯಾವುದೇ ರಾಜಕೀಯ ಸಂಬಂಧಗಳು ಅಥವಾ ಗೊಂದಲಗಳಿಲ್ಲದೆ” ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಸಂಬಂಧಿತವಾಗಿ ಸೋನು ಸೂದ್  ಪ್ರತಿಕ್ರಿಯಿಸಿದ್ದು ವೈರಲ್ ಆಗುತ್ತಿರುವ ಸುದ್ದಿ ತನಗೂ ಯಾವುದೇ  ಸಂಬಂಧವಿಲ್ಲ ಎಂದು ಹೇಳಿದ್ದಾರೆ. “ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಈಗ ಏನು ಮಾಡುತ್ತಿದ್ದೇನೋ ಅದನ್ನು ಮಾಡುತ್ತಲೇ ಇರುತ್ತೇನೆ. ನಟನೆ , ಸಾಮಾಜಿಕ ಕಾರ್ಯಗಳು, ನನ್ನದೇ ಆದ ಆಸಕ್ತಿಯ ವಿಷಯಗಳಿವೆ. ಅದರ ಕಡೆ ನಾನು ನನ್ನನ್ನು ಕೇಂದ್ರೀಕರಿಸಲು ಬಯಸುತ್ತೇನೆ. ಹಾಗಾಗಿ ರಾಜಕೀಯ ಪ್ರವೇಶಿಸಿದ್ದೇನೆ ಎಂಬುದೆಲ್ಲ ಸುಳ್ಳು” ಎಂದಿದ್ದಾರೆ.


ಇದನ್ನು ಓದಿರಿ: Fact check: ಯುಪಿಯ ಗೋರಖ್‌ಪುರದಲ್ಲಿ ವಿಶ್ವದ ಅತಿ ಉದ್ದದ LPG ಪೈಪ್‌ಲೈನ್‌ ಫೋಟೋದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights