Fact check: ತಾಲಿಬಾನಿಗಳು ಮಹಿಳೆಯರ ಮೊಬೈಲ್‌ ಕಸಿದು ಸುಟ್ಟರೆಂಬ ವಿಡಿಯೊದ ಅಸಲಿಯತ್ತೇನು?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ತೀವ್ರವಾದ ನಿರ್ಬಂಧಗಳನ್ನು  ಹೇರಿದೆ. ಅದರಲ್ಲೂ ಮೊಬೈಲ್ ಫೋನ್‌ಗಳ ಬಳಕೆ , ಸಂಗೀತ ಆಲಿಸುವುದು ಸೇರಿದಂತೆ ವಸ್ತ್ರ ಸಂಹಿತೆ  ಮತ್ತು ಜೀವನಕ್ರಮಗಳ  ಮೇಲೂ ನಿರ್ಬಂಧಗಳನ್ನು ವಿಸ್ತರಿಸಿದೆ.  ತಾಲಿಬಾನ್ ನಡೆಸುತ್ತಿರುವ ಈ ಕೃತ್ಯಗಳ ದೃಶ್ಯಾವಳಿಗಳು ಇವೆಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿದ್ದು, ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ಮತ್ತು ಟ್ಯಾಬ್‌ಗಳನ್ನು ವಶಪಡಿಸಿಕೊಂಡು ಅವುಗಳನ್ನು ನಾಶಪಡಿಸುತ್ತಿರುವ ವಿಡಿಯೋವನ್ನು ವೈರಲ್ ಮಾಡಲಾಗಿದೆ. ತಾಲಿಬಾನ್‌ ಸಶಸ್ತ್ರ ಪಡೆಗಳ ಕೃತ್ಯವಿದೆಂದು ಪ್ರತಿಪಾದಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸೆಲ್‌ಫೋನ್‌ಗಳನ್ನು ನಿಷೇಧಿಸಿದ್ದಾರೆ ಮತ್ತು ಈ ರೀತಿ  ಸಾರ್ವಜನಿಕರ ಮೊಬೈಲ್ ಫೋನ್‌ಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಬಿಂಬಿಸಲಾಗಿದೆ.

ಫ್ಯಾಕ್ಟ್ ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ  ವೀಡಿಯೊದ ವಾಸ್ತವವನ್ನು ತಿಳಿದುಕೊಳ್ಳಲು ಗೂಗಲ್ ಸರ್ಚ್ ಮಾಡಿದಾಗ ಅಫ್ಘಾನಿಸ್ತಾನದ ಸುದ್ದಿ ಎಂದು ವೈರಲ್ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆ ತಿಳಿದು ಬಂದಿದೆ. ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ವಿಡಿಯೋ ಪಾಕಿಸ್ತಾನದ್ದು ಎಂದು ತಿಳಿದು ಬಂದಿದೆ. ನಿಷೇದಿತ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದವರಿಂದ ಸರಕುಗಳನ್ನು ವಶಪಡಿಸಿಕೊಂಡ ಪಾಕಿಸ್ತಾನದ ಅಧಿಕಾರಿಗಳು ಅವುಗಳನ್ನು ನಾಶಪಡಿಸುತ್ತಿರುವ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿರುವ ಅಧಿಕಾರಿಗಳ ಸಮವಸ್ತ್ರಗಳನ್ನು ಗುರುತಿಸಲಾಗಿದ್ದು ಅದು ಪಾಕಿಸ್ತಾನದ ಸೈನಿಕರ ಸಮವಸ್ತ್ರದಂತೆ ಕಂಡುಬಂದಿವೆ. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಪಾಕಿಸ್ತಾನದ ರಾಷ್ಟ್ರ ಧ್ವಜವನ್ನು ಕಾಣಬಹುದು.

ಪಾಕಿಸ್ತಾನದ ಮೂಲದ “ಉರ್ದು ನ್ಯೂಸ್” ಸುದ್ದಿ ವಿಭಾಗದ  ಪತ್ರಕರ್ತರಾದ ರಾಯ್ ಶಾನವಾಜ್ ಈ ಕುರಿತು ವಿವರಣೆ ನೀಡಿದ್ದಾರೆ. “ವಿಡಿಯೋದಲ್ಲಿ ಇರುವ ದೃಶ್ಯಗಳು ಪಾಕಿಸ್ತಾನದ ಕರಾಚಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆ ಸರಕುಗಳನ್ನು ನಾಶಪಡಿಸುತ್ತಿರುವುದಕ್ಕೆ ಸಂಬಂಧಿಸಿವೆ.  ಮಾದಕ ದ್ರವ್ಯ, ಮದ್ಯ, ಮೊಬೈಲ್ ಸೇರಿದಂತೆ ಕಳ್ಳಸಾಗಣೆ ವಸ್ತುಗಳನ್ನು ಈ ರೀತಿ ನಾಶಪಡಿಸುವುದು ಹೊಸ ಪದ್ಧತಿಯಲ್ಲ, ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ” ಎಂದು ಶಾನವಾಜ್‌ ಸ್ಪಷ್ಟಪಡಿಸಿದ್ದಾರೆ.

ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಉರ್ದು ಮತ್ತು ಇಂಗ್ಲಿಷ್ ಕೀವರ್ಡ್‌ಗಳನ್ನು ಬಳಸಿ,  ಗೂಗಲ್ ಸರ್ಚ್ ನಡೆಸಿದಾಗ ಇದೇ ರೀತಿಯ ಕೆಲವು ವೀಡಿಯೊಗಳು ಪತ್ತೆಯಾಗಿವೆ.  (ಡಿಸೆಂಬರ್ 2021 ರಲ್ಲಿ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ಸ್ಥಳೀಯ ಮಾಧ್ಯಮಗಳು ಈ ವಿಡಿಯೊಗಳನ್ನು ಹಂಚಿಕೊಂಡಿರುವುದನ್ನು ಕಾಣಬಹುದು.) ಇವೆಂಟ್‌ನ ಇತರ ಕ್ಲಿಪ್ಪಿಂಗ್‌ಗಳೊಂದಿಗೆ ವೈರಲ್ ವಿಡಿಯೊವನ್ನು ಹೋಲಿಸಿದಾಗ ವೈರಲ್ ವಿಡಿಯೊದಲ್ಲಿ ಕಂಡುಬರುವ ಅಧಿಕಾರಿಗಳ ಎಡಗೈಯಲ್ಲಿರುವ ಬ್ಯಾಡ್ಜ್ ಪಾಕಿಸ್ತಾನದ ಕಸ್ಟಮ್ಸ್‌ಗೆ ಸೇರಿದೆ ಎಂದು ತಿಳಿದು ಬಂದಿದೆ.

ಈ ಘಟನೆಯನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ. “ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್” ವರದಿಯ ಪ್ರಕಾರ, ಡಿಸೆಂಬರ್ 29, 2021 ರಂದು ಕರಾಚಿಯಲ್ಲಿ ಕಸ್ಟಮ್ಸ್ (ಜಾರಿ) ಕಲೆಕ್ಟರೇಟ್ ನಡೆಸಿದ ಕಾರ್ಯಾಚರಣೆಯಲ್ಲಿ ರೂ.2.5 ಶತಕೋಟಿ ಮೌಲ್ಯದ ಕಳ್ಳಸಾಗಣೆ ಮತ್ತು ನಿಷಿದ್ಧ ವಸ್ತುಗಳನ್ನು ನಾಶಪಡಿಸಲಾಗಿದೆ. ವರದಿಗಳ ಪ್ರಕಾರ, ನಾಶಪಡಿಸಲಾದ ವಸ್ತಗಳಲ್ಲಿ  39,470 ಮೊಬೈಲ್‌ಗಳೂ ಸೇರಿವೆ.

“VICE ವರ್ಲ್ಡ್ ನ್ಯೂಸ್” ನೊಂದಿಗೆ ಮಾತನಾಡುತ್ತಾ, ಪಾಕಿಸ್ತಾನದ ಆಂಟಿ-ನಾರ್ಕೋಟಿಕ್ಸ್ ಫೋರ್ಸ್ನ ಸಹಾಯಕ ನಿರ್ದೇಶಕ ಮೊಹಮ್ಮದ್ ಸಮೀವುಲ್ಲಾ, “ನಾವು ಪ್ರತಿ ವರ್ಷ ರಾವಲ್ಪಿಂಡಿ, ಇಸ್ಲಾಮಾಬಾದ್ ಮತ್ತು ಪೇಶಾವರ್ನಲ್ಲಿ ಈ ರೀತಿಯ ಕಾರ್ಯಾಚರಣೆಯನ್ನು ನಡೆಸುತ್ತೇವೆ,. ಈ ರೀತಿ ಕಾರ್ಯಾಚರಣೆ ನಡೆಸಿದಾಗ ವಶಪಡಿಸಿಕೊಂಡ ಗಣನೀಯ ಪ್ರಮಾಣದ ಮಾದಕ ದ್ರವ್ಯಗಳು ಮತ್ತು ಆಲ್ಕೋಹಾಲ್ ಅನ್ನು ಕ್ವೆಟ್ಟಾ ಮತ್ತು ಕರಾಚಿಯಲ್ಲಿ ನಾಶಪಡಿಸುವ ದೊಡ್ಡ ಇವೆಂಟ್ ನಡೆಸುತ್ತೇವೆ” ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಈ ಹಿಂದೆಯೂ ಇಂತಹ ಕಳ್ಳಸಾಗಣೆ ವಸ್ತುಗಳನ್ನು ನಾಶಮಾಡಿರುವ  ಮತ್ತು ಆ ಕಾರ್ಯಾಚರಣೆಯನ್ನು ದೃಢಪಡಿಸುವ ಅನೇಕ ಮಾಧ್ಯಮ ವರದಿಗಳು ಲಭ್ಯವಾಗಿವೆ. ಆದ್ದರಿಂದ, ಅಫ್ಘಾನಿಸ್ತಾನದ ಹಲವಾರು ಪ್ರಾಂತ್ಯಗಳಲ್ಲಿ ತಾಲಿಬಾನ್ ಮೊಬೈಲ್ ಫೋನ್‌ಗಳನ್ನು ನಿಷೇಧಿಸುವ ವರದಿಗಳಿದ್ದರೂ, ಈ ನಿರ್ದಿಷ್ಟ ವೀಡಿಯೋ ಪಾಕಿಸ್ತಾನದ ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆ ಸರಕುಗಳನ್ನು ನಾಶಪಡಿಸುತ್ತಿರುವ ವಿಡಿಯೋ ಎಂಬುದು ಸ್ಪಷ್ಟವಾಗಿದೆ.

ಕೃಪೆ: ಇಂಡಿಯಾ ಟುಡೆ


ಇದನ್ನು ಓದಿರಿ: fact check: ಮಹಾಭಾರತದ ಪಳೆಯುಳಿಕೆಗಳು ಸಿಕ್ಕಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.