Fact check: ಶೃಂಗೇರಿ ಪೀಠದ ಶ್ರೀಗಳು ರಾಹುಲ್ ಗಾಂಧಿಗೆ ಆಶೀರ್ವಾದ ನೀಡಲು ನಿರಾಕರಿಸಿದ್ದು ನಿಜವೆ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ 2018 ರಲ್ಲಿ ಶೃಂಗೇರಿ ಮಠಕ್ಕೆ ಭೇಟಿ ನೀಡಿದ ವೇಳೆ ‘ಶ್ರೀ ಶೃಂಗೇರಿ ಶಾರದಾ ಪೀಠ’ದ ಶ್ರೀಗಳ ಬಳಿ ಆಶಿರ್ವಾದ ಪಡೆಯಲು ಮುಂದಾದಾಗ ‘ಶ್ರೀ ಶೃಂಗೇರಿ ಶಾರದಾ ಪೀಠ’ದ ಶ್ರೀಗಳು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ನಿಲುವುಗಳ ಕಾರಣಕ್ಕಾಗಿ ಆಶೀರ್ವಾದ ನೀಡಲು ನಿರಾಕರಿಸಿದ್ದಾರೆ ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಪೋಸ್ಟ್‌ನಲ್ಲಿ  ಹೇಳಿರುವಂತೆ ಶೃಂಗೇರಿ ಮಠದ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯವರಿಗೆ ಆಶಿರ್ವಾದ ನೀಡಲು ನಿಜಯಾಗಿಯೂ ನಿರಾಕರಿಸಿದ್ದರಾ? ಈ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನು ಫ್ಯಾಕ್ಟ್‌ಚೆಕ್ ಮೂಲಕ ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಕುರಿತಾದ ಪೋಸ್ಟ್‌ ಗೆ ಸಂಬಂಧಿಸಿದ ಹಾಗೆ ಅದರಲ್ಲಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲನೆ ಮಾಡಿದಾಗ ಒಂದೇ ರೀತಿಯ ಫೋಟೋಗಳೊಂದಿಗೆ ಅನೇಕ ಸುದ್ದಿ ಲೇಖನಗಳು ಕಂಡುಬಂದಿವೆ. ಮಾರ್ಚ್ 2018 ರಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರೂ ಇತರ ನಾಯಕರೊಂದಿಗೆ ಶೃಂಗೇರಿ ಮಠಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋ ಎಂದು ಉಲ್ಲೇಖಿಸಲಾಗಿದೆ. ‘ಕರ್ನಾಟಕ ಕಾಂಗ್ರೆಸ್’ ತನ್ನ ಟ್ವಿಟರ್‌ ಅಕೌಂಟ್ ನಿಂದ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಮಠಕ್ಕೆ ಭೇಟಿ ನೀಡಿದ ಫೋಟೋಗಳನ್ನು ಟ್ವೀಟ್ ಮಾಡಿದೆ. ‘ಕರ್ನಾಟಕ ಕಾಂಗ್ರೆಸ್’ ಮಾಡಿರುವ ಟ್ವೀಟ್‌ನಲ್ಲಿ ನಾಯಕರು ಶ್ರೀಗಳ ಆಶೀರ್ವಾದ ಪಡೆದಿರುವುದನ್ನು ಗಮನಿಸಬಹುದು.

2018 ರಲ್ಲಿ ’ಕರ್ನಾಟಕ ಕಾಂಗ್ರೆಸ್’ ತನ್ನ ಟ್ವಿಟರ್‌ ಅಕೌಂಟ್ ನಿಂದ ಮಾಡಿರುವ ಟ್ವೀಟ್

ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ  ’ಶ್ರೀ ಶೃಂಗೇರಿ ಶಾರದಾ ಪೀಠ’ದ ಶ್ರೀಗಳು ಆಶೀರ್ವಾದ ನನೀಡಲು ನಿರಾಕರಿಸಿದ್ದಾರೆ ಎಂದು ಯಾವುದೇ ಪ್ರತಿಷ್ಠಿತ ಸುದ್ದಿ ಸಂಸ್ಥೆ ವರದಿ ಮಾಡಿಲ್ಲ.  ವರದಿಗಳಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದ ಪಡೆದರು ಎಂದು ವರದಿ ಮಾಡಿದ್ದಾರೆ. ಅವುಗಳಲ್ಲಿ ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಅಲ್ಲದೆ, ಮಠಾಧೀಶರು ರಾಹುಲ್ ಗಾಂಧಿಯವರಿಗೆ ಅವರ ತಂದೆ ರಾಜೀವ್ ಗಾಂಧಿ (ರಾಜೀವ್ ಗಾಂಧಿಯವರು ಮಠಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋ) ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಮಠಾಧೀಶರು ಮತ್ತು ರಾಹುಲ್ ಗಾಂಧಿ ನಡುವಿನ ಸಂಭಾಷಣೆಯ ಕುರಿತು ಹಲವಾರು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ಲೇಖನಗಳನ್ನು ಪ್ರಕಟಿಸಿವೆ, ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಆ ಯಾವ ವರದಿಗಳಲ್ಲೂ ಶ್ರೀಗಳು ಆಶಿರ್ವಾದ ನೀಡಲು ನಿರಾಕರಿಸಿದರು ಎಂಬ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಗೆ ಶೃಂಗೇರಿ ಮಠದ ಶ್ರೀಗಳು ಆಶೀರ್ವಾದ ನೀಡಿದ್ದಾರೆ ಎಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಹಾಗಾಗಿ ಮಠಾಧೀಶರು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಆಶೀರ್ವಾದ ನಿರಾಕರಣೆ ಕುರಿತು ಪೋಸ್ಟ್‌ನಲ್ಲಿ ಮಾಡಿರುವ ಹೇಳಿಕೆಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಫ್ಯಾಕ್ಟ್‌ಚೆಕ್ ಮೂಲಕ ತಿಳಿದು ಬಂದಿದೆ.


ಇದನ್ನು ಓದಿರಿ: Fact check: ‘RSS ದಾಳಿಯಿಂದ ಗ್ರಾಮ ತೊರೆದ ಮುಸ್ಲಿಮರು’ ಎಂಬ ವಿಡಿಯೊದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights