Fact check: ಹನುಮಂತನ ದೇವಾಲಯದ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂಬ ಸುದ್ದಿಯ ಹಿಂದಿನ ವಾಸ್ತವವೇನು?

“ನಮಸ್ಕಾರ, ಒಂದು ವೇಳೆ ಪೊಲೀಸರು ಸರಿಯಾದ ಸಮಯಕ್ಕೆ ಬಾರದೆ ಹೋಗಿದ್ದರೆ, ನಮ್ಮ ವಾಹನ ಎಂದು ಹೇಳುವ ಮಾತಿನ ಮದ್ಯ ಒಂದು ಬೀಪ್ ಸೌಂಡ್ ಬರುತ್ತದೆ. ನಾನು ಒಂದು ವಿನಂತಿಯನ್ನು ಮಾಡುತ್ತಿದ್ದೇನೆ ಸಹೋದರರೇ.., ಇದೀಗ ಆ**** ಮಕ್ಕಳು ಬಂದು ನಮ್ಮ ಮೇಲೆ ದಾಳಿ ಮಾಡಿದರು. ನಾವು ಗೋರಕ್ಷಕರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಅವರು ನೇರವಾಗಿ ನಮ್ಮ ಮೇಲೆ ದಾಳಿ ಮಾಡಿದರು. ಸಿಸಿಟಿವಿ ದೃಶ್ಯಾವಳಿಗಳು ಇನ್ನೂ ಹೊರಬಂದಿಲ್ಲ. ನೀವೆಲ್ಲರೂ ಧೈರ್ಯವಾಗಿ ದೇವಸ್ಥಾನಕ್ಕೆ ಬನ್ನಿ. ಜೈ ಶ್ರೀ ರಾಮ್”,  ಎಂದು ಹೇಳುತ್ತ ಹಿಂಸಾಚಾರದ ಸಂದರ್ಭದಲ್ಲಿ ಮುಸ್ಲಿಮರು ತೆಲಂಗಾಣದ ಕರ್ಮಾನ್‌ಘಾಟ್ ಹನುಮಾನ್ ದೇವಾಲಯದ ಮೇಲೆ ದಾಳಿ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಬಲಪಂಥೀಯ ಪ್ರತಿಪಾದನೆಯ ಖಾತೆಯಿಂದ @squineon ಈ ವೀಡಿಯೊವನ್ನು Twitter ನಲ್ಲಿ ಪೋಸ್ಟ್ ಮಾಡಲಾಗಿದ್ದು ಸುಮಾರು 40,000 ವೀವ್ಸ್ ಆಗಿದೆ.

ಫೆಬ್ರವರಿ 22 ರಂದು ತೆಲಂಗಾಣದ ಯಾದಾದ್ರಿ ಭೋಂಗಿರ್ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಉಂಟಾಯಿತು. ಗೋರಕ್ಷಕರ ಗುಂಪು ರಾಚಕೊಂಡದ ಕರ್ಮಾನ್‌ಘಾಟ್ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರೊಂದಿಗೆ ಘರ್ಷಣೆ ನಡೆಸಿತು. ಹಿಂಸಾಚಾರದ ವೇಳೆ ಕಲ್ಲು ತೂರಾಟವೂ ನಡೆದಿದೆ ಎಂದು ತೆಲಂಗಾಣ ಟುಡೇ ವರದಿ ಮಾಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಗೋರಕ್ಷಕರು ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು, ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವವರನ್ನು ಬಂಧಿಸುವಂತೆ ಒತ್ತಾಯಿಸಿದರು. ಕೆಲವು ಗೋರಕ್ಷಕರು ತಮ್ಮನ್ನು ಅಟ್ಟಿಸಿಕೊಂಡು ಹೋಗಿ ದಾಳಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಹಾಗಿದ್ದರೆ ಈ ಗಂಭೀರ ಸ್ವರೂಪದ ಆರೋಪ ಪ್ರತ್ಯಾರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊವನ್ನು ಪರಿಶೀಲಿಸಿದಾಗ ಎಲ್ಲಿಯೂ  ದೇವಾಲಯದ ಮೇಲೆ ದಾಳಿ ನಡೆದಿದೆ ಎಂದು ವ್ಯಕ್ತಿ ಹೇಳಿಕೊಳ್ಳುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಗೋರಕ್ಷಕರ ಮೇಲೆ ಹಲ್ಲೆ ನಡೆಸಲು ಜನರ ಗುಂಪೊಂದು ದೇವಾಲಯಕ್ಕೆ ಪ್ರವೇಶಿಸಿದೆ ಎಂದು ಅವರು ಹೇಳಿದರು. ಘಟನೆಯ ವಿವರವಾದ ಆವೃತ್ತಿಯನ್ನು ರಾಚಕೊಂಡ ಪೊಲೀಸರು ಟ್ವೀಟ್ ಮಾಡಿದ್ದಾರೆ. ಪೊಲೀಸ್ ವರದಿಯಲ್ಲಿ  ದೇವಾಲಯದ ಮೇಲೆ ದಾಳಿಯಾಗಿದೆ ಎಂದು ಎಲ್ಲೂ ಹೇಳಿಲ್ಲ. ಗೋರಕ್ಷಕರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ಏಳು ಮಂದಿಯ ಹೆಸರನ್ನು ಪ್ರಕಟಿಸಿದೆ. ಅಕ್ರಮವಾಗಿ ಜಾನುವಾರು ಸಾಗಾಟವೇ ಕೋಮು ಸಂಘರ್ಷಕ್ಕೆ ಮೂಲ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ, “ ದೂರುದಾರರು ಭಯಭೀತರಾದರು ಮತ್ತು ಆರೋಪಿಗಳಿಂದ ಪಾರಾಗಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹತ್ತಿರದ ಹನುಮಾನ್ ದೇವಸ್ಥಾನದ ಕರ್ಮಾನ್‌ಘಾಟ್‌ಗೆ ತನ್ನ ಸ್ನೇಹಿತರೊಂದಿಗೆ ಓಡಿಹೋದರು, ಈ ಮಧ್ಯೆ ಆರೋಪಿಗಳಾದ A1 ಮತ್ತು A2 ತಮ್ಮ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡು  ಕರ್ಮಾನ್‌ಘಾಟ್‌ನ ಹನುಮಾನ್ ದೇವಸ್ಥಾನದ ಆವರಣಕ್ಕೆ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ನಂತರ ಆ ಗುಂಪು  ಗೋರಕ್ಷರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ದೂರುದಾರರು ಮತ್ತು ಅವರ ಸ್ನೇಹಿತರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದೇವಾಲಯದ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿಲ್ಲ, ಬದಲಿಗೆ “ಆರೋಪಿಗಳು ಗೋರಕ್ಷಕರನ್ನು ಹನುಮಾನ್ ದೇವಾಲಯದ ಆವರಣಕ್ಕೆ ಬೆನ್ನಟ್ಟಿದ್ದಾರೆ” ಎಂದು ಹೇಳುತ್ತದೆ ಎಂಬುದನ್ನು ಓದುಗರು ಗಮನಿಸಬೇಕು.

ಈ ಘಟನೆಯ ನಂತರ ಸರೂರ್‌ನಗರ ಪಿಎಸ್‌ ವ್ಯಾಪ್ತಿಯ ಕರ್ಮಾನ್‌ಘಾಟ್‌ನ ಹನುಮಾನ್‌ ದೇವಸ್ಥಾನಕ್ಕೆ ಅನ್ಯ ಧರ್ಮೀಯರು ಹನುಮಾನ್‌  ಪ್ರವೇಶಿಸುವುದನ್ನು ವಿರೋಧಿಸಿ ಅಪಾರ ಸಂಖ್ಯೆಯ ಹಿಂದೂ ಕಾರ್ಯಕರ್ತರು ಜಮಾಯಿಸಿ ಧರಣಿ ನಡೆಸಿ, ಅನ್ಯ ಕೋಮಿನ  ವಿರುದ್ಧ ಘೋಷಣೆಗಳನ್ನು ಕೂಗಿದರು, ಈ ಪ್ರತಿಭಟನೆಯನ ವೇಳೆ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿ, ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು  ಪ್ರಯತ್ನಿಸಿದಾಗ, ಅವರು ಪೊಲೀಸರ ಮೇಲೆ  ಕಲ್ಲು ತೂರಾಟ ನಡೆಸಿದರು, ಎಸ್‌ಐಪಿ- ಮಾಧವ ರೆಡ್ಡಿ, ವನಸ್ಥಲಿಪುರಂ ಪಿಎಸ್ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡರು,  ತಕ್ಷಣ ಅವರನ್ನು ಚಿಕಿತ್ಸೆಗಾಗಿ  ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.

ಘಟನೆಯನ್ನು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದ್ದು, “ಕೆಲವು ಕಿಡಿಗೇಡಿಗಳು ಪೂಜಾ ಸ್ಥಳದ ಮೇಲೆ ದಾಳಿಯ ವದಂತಿಗಳನ್ನು ಹಬ್ಬಿಸಿದ್ದಾರೆ. ತಕ್ಷಣ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ” ಎಂದಿದೆ. ರಾಚಕೊಂಡ ಪೊಲೀಸ್ ಕಮಿಷನರೇಟ್‌ನ ಮೀರ್‌ಪೇಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹೇದರ್ ರೆಡ್ಡಿ ಅವರು ಆಲ್ಟ್ ನ್ಯೂಸ್‌ನೊಂದಿಗೆ ದೂರವಾಣಿ ಕರೆ ಮೂಲಕ ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಕರ್ಮಂಘಾಟ್ ಹನುಮಾನ್ ದೇವಸ್ಥಾನದ ಮೇಲೆ ದಾಳಿ ನಡೆದಿಲ್ಲ ಎಂದು ಅವರು ಮಾಹಿತಿ ನೀಡಿದರು.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎ ದೀಪ್ತಿ ಸಂಪರ್ಕಿಸಲಾಗಿದ್ದು  “ದೇವಾಲಯದ ಒಳಗೆ ಯಾವುದೇ ದಾಳಿ ನಡೆದಿಲ್ಲ. ಮೂರರಿಂದ ಆರು ಮಂದಿ ದೇವಸ್ಥಾನದ ಆವರಣದ ಹೊರಗೆ ಗಲಾಟೆಗೆ ಮಾಡಿದ್ದಾರೆ. ಆಗ ನಮ್ಮ ಭದ್ರತಾ ಸಿಬ್ಬಂದಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಗೂ (ಕೋಮು ಘರ್ಷಣೆಗೂ) ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದೀಪ್ತಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ದೀಪ್ತಿಯವರು ಬರೆದಿರುವ ಪತ್ರದ ಅನುವಾದವನ್ನು ಚಿತ್ರದಲ್ಲಿ ನೋಡಬಹುದು. ಇದರ ಜೊತೆಗೆ ಎರಡು ದಶಕಗಳಿಂದ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಅಧಿಕಾರಿಯೊಂದಿಗೆ ಮಾತನಾಡಿದ್ದು, ದೇವಸ್ಥಾನದ ಮೇಲೆ ದಾಳಿ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕರ್ಮಾನ್‌ಘಾಟ್ ಘಟನೆಯ ಬಗ್ಗೆ ಸಂಬಂಧಪಟ್ಟ ಡಿಜಿಪಿ ಅಂಜನಿ ಕುಮಾರ್ ಪರಿಶೀಲನೆ ನಡೆಸಿದ್ದಾರೆ ಎಂದು ಔಟ್‌ಲೆಟ್ ವರದಿ ಮಾಡಿದೆ ಎಂದು ಈಟಿವಿ ಭಾರತ್ ತೆಲಂಗಾಣ ಮುಖ್ಯಸ್ಥ ಡಿಐ ವಿಜಯಭಾಸ್ಕರ್ ಮಾಹಿತಿ ನೀಡಿದ್ದಾರೆ. ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕುಮಾರ್ ಎಚ್ಚರಿಕೆ ನೀಡಿದರು. ಈ ಘಟನೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಪೊಲೀಸರ ಗಮನಕ್ಕೆ ತರಲು ಕೋರಲಾಗಿದೆ. ಸದ್ಯ ಸರೂರ್ ನಗರ ಪಿಎಸ್ ವ್ಯಾಪ್ತಿಯಲ್ಲಿ ಐದು ಪ್ರಕರಣಗಳು ದಾಖಲಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. ಅವರನ್ನು ಚರ್ಲಪಲ್ಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.

ಫೆಬ್ರವರಿ 22 ರಂದು ತೆಲಂಗಾಣದ ಯಾದಾದ್ರಿ ಭೋಂಗಿರ್ ಜಿಲ್ಲೆಯಲ್ಲಿ ಕೋಮುಗಲಭೆಯ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕರ್ಮಾನ್‌ಘಾಟ್ ಹನುಮಾನ್ ದೇವಾಲಯದ ಮೇಲೆ ಮುಸ್ಲಿಂ ಸಮುದಾಯದ ಸದಸ್ಯರಿಂದ ದಾಳಿ ಮಾಡಲಾಗಿದೆ ಎಂಬ ಸುಳ್ಳು ಹೇಳಿಕೆಯನ್ನು ವೈರಲ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.  ದೇವಾಲಯದ ಟ್ರಸ್ಟ್ ಮತ್ತು ಪೊಲೀಸ್ ಅಧಿಕಾರಿಗಳು ಕೂಡ ಇದನ್ನು ಸ್ಪಷ್ಟಪಡಿಸಿದ್ದು ಸುಳ್ಳು ಸುದ್ದಿಗೆ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ  ಎಂದು ಪ್ರಕಟಣೆಯಲ್ಲಿ ತಿಳಿಸಿವೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಲಾಗಿರುವ ಹೇಳಿಕೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿರಿ: Fact check: ಮೊದಲ ಹೆಣ್ಣು ಬೊಂಬೆಯನ್ನು ಚೀನಾ ನಿರ್ಮಿಸಿದೆ ಎಂಬುದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights