Fact check: ಯುದ್ದದಿಂದ ಜನ ನರಳುತ್ತಿದ್ದರೆ ಉಕ್ರೇನ್‌ ಅಧ್ಯಕ್ಷ ಝಲೆನ್ಸ್ಕಿ ಪತ್ನಿಯೊಂದಿಗೆ ಹಾಡು ಹಾಡುತ್ತಿದ್ದರೆ?

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಪತ್ನಿಯೊಂದಿಗೆ ‘ಎಂಡ್ಲೆಸ್ ಲವ್’ ಹಾಡನ್ನು ಹಾಡುತ್ತಿರುವ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಉಕ್ರೇನ್-ರಷ್ಯಾ ನಡುವಿನ ಸಂಘರ್ಷದ ನಡುವೆ, “ಉಕ್ರೇನ್‌ನಲ್ಲಿ ಯುದ್ದದಿಂದ ಜನ ನರಳುತ್ತಿದ್ದರೆ ಹೇಗೆ ಹೆಂಡತಿಯೊಂದಿಗೆ ಝೆಲೆನ್ಸ್ಕಿ ಹಾಡು ಹಾಡುತ್ತಿದ್ದಾನೆ ನೋಡಿ” ಎಂದು ಹೇಳಿಕೆಯಿರುವ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ಝಲೆನ್ಸ್ಕಿ ತನ್ನ ಜನರನ್ನು ರಕ್ಷಣೆ ಮಾಡದೆ ತನ್ನ ಪತ್ನಿಯೊಂದಿಗೆ ಹಾಡು ಹಾಡಿಕೊಂಡು ಕಾಲ ಕಳೆಯುತ್ತಿದ್ದದ್ದು ನಿಜವೆ? ಹಾಗಾಗಿ ಇದರ ಸತ್ಯಾಸತ್ಯತೆಗಳನ್ನು ತಿಳಿಯಲು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಗೂಗಲ್‌ ರಿವರ್ಸ್ ಇಮೇಜ್‌ ಸರ್ಚ್ ಮಾಡಲಾಗಿದ್ದು, 20 ಫೆಬ್ರವರಿ 2022 ರಂದು ಬೋಯ್ಸ್ ಅವೆನ್ಯೂ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಅಪ್‌ಲೋಡ್‌ ಮಾಡಲಾಗಿದೆ. ವೀಡಿಯೊದ ವಿವರಣೆಯ ಪ್ರಕಾರ, “ಬಾಯ್ಸ್ ಅವೆನ್ಯೂ ಮತ್ತು ಕೊನ್ನಿ ಟಾಲ್ಬೋಟ್‌ನ “ಎಂಡ್‌ಲೆಸ್ ಲವ್” ನ ಅಕೌಸ್ಟಿಕ್ ಕವರ್ ಲಿಯೋನೆಲ್ ರಿಚಿ ಅಡಿ ಡಯಾನಾ ರಾಸ್ ಅವರಿಂದ ಹಾಡು” ಎಂದು ಬರೆದಿದೆ.  ಈ ವೀಡಿಯೊ ಇಂಗ್ಲಿಷ್ ಗಾಯಕ ಕೋನಿ ಟಾಲ್ಬೋಟ್ ಅವರು ಸಂಗೀತಗಾರ ಮತ್ತು ‘ಬಾಯ್ಸ್ ಅವೆನ್ಯೂ’ ಬ್ಯಾಂಡ್ ಗುಂಪಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅಲೆಜಾಂಡ್ರೊ ಮಂಜಾನೊ ಅವರೊಂದಿಗೆ ‘ಎಂಡ್ಲೆಸ್ ಲವ್’ ಹಾಡನ್ನು ಹಾಡಿದ್ದಾರೆ. ‘ಬಾಯ್ಸ್ ಅವೆನ್ಯೂ‘ ಎಂಬುದು 2004 ರಲ್ಲಿ ಸಹೋದರರಾದ ಅಲೆಜಾಂಡ್ರೊ ಲೂಯಿಸ್ ಮಂಜಾನೊ, ಡೇನಿಯಲ್ ಎನ್ರಿಕ್ ಮಂಜಾನೊ ಮತ್ತು ಫ್ಯಾಬಿಯನ್ ರಾಫೆಲ್ ಮಂಜಾನೊರಿಂದ ರಚಿಸಲ್ಪಟ್ಟ ಅಮೇರಿಕನ್ ಕವರ್ ಬ್ಯಾಂಡ್ ಆಗಿದೆ.

14 ಫೆಬ್ರವರಿ 2022 ರಂದು ಕೋನಿ ಟಾಲ್ಬೋಟ್ ತನ್ನ YouTube ಚಾನಲ್‌ನಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲೆಜಾಂಡ್ರೊ ಮಂಜಾನೊ ಜೊತೆಗೆ ಕೋನಿ ಟಾಲ್ಬೋಟ್ ಹಾಡಿರುವ ಕೆಲವು ಇತರ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಾಗಿ ಚಿತ್ರದಲ್ಲಿರುವುದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಲ್ಲ ಎಂದು ಹೇಳಬಹುದು.

ಒಲೆನಾ ಝೆಲೆನ್ಸ್ಕಾ, ಉಕ್ರೇನ್‌ನ ಪ್ರಥಮ ಮಹಿಳೆ, ವೃತ್ತಿಯಲ್ಲಿ ಚಿತ್ರಕಥೆಗಾರರಾಗಿದ್ದಾರೆ ಮತ್ತು ‘ಸ್ಟುಡಿಯೋ ಕ್ವಾರ್ಟಲ್ 95’ ನಿರ್ಮಾಣ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಒಲೆನಾ ಝೆಲೆನ್ಸ್ಕಾ ಅವರ ಪತಿ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಇತ್ತೀಚೆಗೆ, ಒಲೆನಾ ಝೆಲೆನ್ಸ್ಕಾ ತನ್ನ ದೇಶದ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಪತ್ರವನ್ನು ಬರೆದಿದ್ದರು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸಂಬಂಧವಿಲ್ಲದ ವೀಡಿಯೊವನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ಪತ್ನಿಯೊಂದಿಗೆ ‘ಎಂಡ್ಲೆಸ್ ಲವ್’ ಹಾಡನ್ನು ಹಾಡುವ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ:ಫ್ಯಾಕ್ಟ್ಲಿ


ಇದನ್ನು ಓದಿರಿ: Fact check: ವಿಶ್ವ ಜನಸಂಖ್ಯಾ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂಬ ವರದಿ ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights