Fact check: ವಿಶ್ವ ಜನಸಂಖ್ಯಾ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂಬ ವರದಿ ನಿಜವೆ?

ಸಾಮಾಜಿಕ ಮಾಧ್ಯಮಗಳಲ್ಲಿ ಜನಸಂಖ್ಯಾ ವಿಚಾರ ಚರ್ಚೆಯಾಗುತ್ತಿದ್ದು  04 ಮಾರ್ಚ್ 2022 ರಂದು ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ  ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ, ಭಾರತದ ಜನಸಂಖ್ಯೆಯು 1,415,653,821  (141 ಕೋಟಿಗೂ ಹೆಚ್ಚು) ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ತೈವಾನ್ ಪ್ರದೇಶದ ಸುದ್ದಿ ಔಟ್‌ಲೆಟ್ ಐ-ಮೀಡಿಯಾ, ಚೀನಾದ ಜನಪ್ರಿಯ  ಮಾಧ್ಯಮ ನೆಟ್‌ವರ್ಕ್ ಸಿಜಿಟಿಎನ್ ಪ್ರಕಟಿಸಿದ  ವರದಿಯ ಪ್ರಕಾರ,  04 ಮಾರ್ಚ್ 2022 ರಂತೆ ಭಾರತದ ಜನಸಂಖ್ಯೆಯು 1,415,653,821 ಆಗಿದ್ದು ಚೀನಾವನ್ನು ಮೀರಿಸಿದೆ, ಇದರ ಮೂಲಕ ವಿಶ್ವದಲ್ಲೆ ಅತೀ ಹೆಚ್ಚು ಜನಸಂಖ್ಯೆ  ಹೊಂದಿರುವ ದೇಶವಾಗಿದೆ ಎಂದು ಲೇಖನದಲ್ಲಿ ಪ್ರಕಟಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಪೋಸ್ಟ್‌ ಪ್ರಕಟಗೊಂಡ ಲೇಖನದ ಸಂಖ್ಯೆಯನ್ನೆ ಪ್ರತಿಪಾದಿಸಿದೆ ಆದರೆ  CGTN ಲೇಖನವು I-Media ದ ಪ್ರತಿಪಾದನೆಯನ್ನು ತಳ್ಳಿಹಾಕಿದೆ, ಏಕೆಂದರೆ ಭಾರತೀಯ ಜನಸಂಖ್ಯೆಗೆ ಸಂಬಂಧಿಸಿದಂತೆ ಇದು ಭಾರತ ಸರ್ಕಾರದ ಅಧಿಕೃತ ಜನಸಂಖ್ಯಾ ವರದಿ ಅಲ್ಲ ಮತ್ತು ಚೀನಾ ಕೂಡ ತನ್ನ ಅಧಿಕೃತ ಜನಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿಲ್ಲ.

ಸಾಮಾನ್ಯವಾಗಿ ಭಾರತವು ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ಸಮೀಕ್ಷೆಯನ್ನು ನಡೆಸುತ್ತದೆ. 2011 ರಲ್ಲಿ ಬಿಡುಗಡೆಯಾದ ಕೊನೆಯ ಜನಗಣತಿ ವರದಿಯಲ್ಲಿ ಭಾರತದ ಜನಸಂಖ್ಯೆಯನ್ನು 1,210,193,422 ಎಂದು ಘೋಷಿಸಿದೆ. 2021ಕ್ಕೆ ಜನಗಣತಿಯನ್ನು ಮಾಡಬೇಕಿತ್ತು ಆದರೆ ಕೋವಿಡ್ ಕಾರಣಕ್ಕೆ ಜನಸಂಖ್ಯಾ ಸಮೀಕ್ಷೆಯನ್ನು ನಡೆಸಲಾಗಿಲ್ಲ ಹಾಗಾಗಿ ಭಾರತ ಸರ್ಕಾರ ಸದ್ಯ ತನ್ನ ಅಧಿಕೃತ ಜನಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿಲ್ಲ.

2021 ರಲ್ಲಿ ವಿಶ್ವಸಂಸ್ಥೆಯ ಜನಸಂಖ್ಯಾ ವರದಿಯು ಭಾರತದ ಪ್ರಸ್ತುತ ಜನಸಂಖ್ಯೆಯನ್ನು 1.4 ಶತಕೋಟಿ ಎಂದು ಅಂದಾಜಿಸಿದೆ. ಆದರೆ 2020 ರಲ್ಲಿ, UN ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಮತ್ತು ವಿಶ್ವ ಬ್ಯಾಂಕ್ ಭಾರತದ ಜನಸಂಖ್ಯೆಯನ್ನು 1.38 ಶತಕೋಟಿ ಎಂದು ಅಂದಾಜಿಸಿದೆ.

ಯುಎನ್ ಜನಸಂಖ್ಯೆಯ  ಪ್ರಸ್ತುತ ಜನಸಂಖ್ಯೆಯ ವರದಿಯನ್ನು ಬಳಸಿಕೊಂಡು ಟ್ರ್ಯಾಕಿಂಗ್ ವೆಬ್‌ಸೈಟ್‌ಗಳು ಪ್ರಸ್ತುತ ಭಾರತೀಯ ಜನಸಂಖ್ಯೆಯನ್ನು ಸುಮಾರು 1.403 ಬಿಲಿಯನ್ ಎಂದು ಅಂದಾಜಿಸಿದೆ. ಇತ್ತೀಚಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ, 2021 ವರ್ಷದ ಕೊನೆಯ ವೇಳೆಗೆ  ಚೀನಾದ  ಒಟ್ಟು ಜನಸಂಖ್ಯೆಯು 1.4126 ಶತಕೋಟಿಯಷ್ಟಿತ್ತು. ಇದರರ್ಥ ಭಾರತದ ಒಟ್ಟು ಜನಸಂಖ್ಯೆಯು ಚೀನಾಕ್ಕಿಂತ ಕಡಿಮೆ ಇದೆ ಎಂದು ಸೂಚಿಸುತ್ತದೆ.

2027 ರ ವೇಳೆಗೆ ಭಾರತವು ಅತೀ ಹೇಚ್ಚಿನ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾವನ್ನು ಮೀರಿಸುತ್ತದೆ ಎಂದು ವಿಶ್ವಸಂಸ್ಥೆಯು ಮೊದಲೇ ಭವಿಷ್ಯ ನುಡಿದಿತ್ತು. ವಾಸ್ತವವಾಗಿ, ವಿಶ್ವಸಂಸ್ಥೆಯು ಊಹಿಸಿದ್ದಕ್ಕಿಂತ ಮುಂಚೆಯೇ ಭಾರತವು ಚೀನಾವನ್ನು ಮೀರಿಸುತ್ತದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಆದಾಗ್ಯೂ, ಭಾರತೀಯ ಜನಸಂಖ್ಯೆಯು ಚೀನಾವನ್ನು ಮೀರಿಸಿದೆ ಎಂದು ಪ್ರತಿಪಾದಿಸುವ ಯಾವುದೇ ಇತ್ತೀಚಿನ ಅಧ್ಯಯನಗಳು ಅಥವಾ ಸರ್ಕಾರಗಳು ಅಥವಾ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಭಾರತ ಹೆಚ್ಚಿನ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾ ದೇಶವನ್ನು ಮೀರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿರುವ ಸುದ್ದಿಯು ತಪ್ಪಾಗಿದ್ದು, ಈ ವರದಿಗೆ ಯಾವ ಅಧಿಕೃತತೆ ಇಲ್ಲ.


ಇದನ್ನು ಓದಿರಿ: Fact check: ಅನೀಲ್ ಉಪಾಧ್ಯಾಯ ಎಂಬ ಕಾಂಗ್ರೆಸ್ ಶಾಸಕ ಜಿಂಕೆಯನ್ನು ಗುಂಡಿಕ್ಕಿ ಹತ್ಯೆಗೈದ ಸುದ್ದಿ ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights