ಬಿಜೆಪಿ ಪರ ಪ್ರಚಾರಕ್ಕೆ ಹೋದರೆ ಜನ ಉಗಿಯುತ್ತಾರೆ: ಶಿವಮೊಗ್ಗದಲ್ಲಿ ಬಿಜೆಪಿ ಅಧ್ಯಕ್ಷ ರಾಜೀನಾಮೆ!

ಬಿಜೆಪಿ ಪಕ್ಷ ಜನಪರ ಸರ್ಕಾರ ನೀಡಲಿದೆ ಎಂದು ನಂಬಿದ್ದೆ. ಆದರೆ, ಬಿಜೆಪಿ ಜನವಿರೋಧಿ ನೀತಿ ತಳೆದಿದೆ. ಬಿಜೆಪಿ ಪರ ಪ್ರಚಾರಕ್ಕೆ ಹೋದರೆ ಜನ ಉಗಿಯುತ್ತಾರೆ ಎಂದು ಶಿವಮೊಗ್ಗದ ಅಶೋಕನಗರದ ಬೂತ್ ಮಟ್ಟದ ಅಧ್ಯಕ್ಷರೊಬ್ಬರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಸ್ಥಳೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಬೂತ್‌ ಮಟ್ಟದಲ್ಲಿ ಕಮಿಟಿಗಳನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ ನಾಮಫಲಕ ಅಭಿಯಾನವನ್ನು ಬಿಜೆಪಿಗರು ಆರಂಭಿಸಿದ್ದಾರೆ. ಈ ವೇಳೆ ಅಶೋಕ ನಗರ ಬೂತ್‌ ಅಧ್ಯಕ್ಷರಾದ ಎಲ್.ಶೇಖರ್ ಅವರಿಗೆ ಬಿಜೆಪಿಗರು ನಾಮಫಲಕ ನೀಡಲು ತೆರಳಿದ್ದ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿಯೇ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಪತ್ರ ನೀಡಿರುವ ಅವರು, ಪತ್ರದಲ್ಲಿ, ಬಿಜೆಪಿ ಪಕ್ಷ ಜನಪರ ಸರ್ಕಾರ ನೀಡಲಿದೆ ಎಂದು ನಂಬಿದ್ದೆ. ಆದರೆ ಈಗ ಗೃಹೋಪಯೋಗಿ ವಸ್ತುಗಳು, ಅಡುಗೆ ಅನಿಲ, ವಿದ್ಯುತ್, ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದೆ ಕಷ್ಟಕರವಾಗಿದೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಹಾಗೂ ಸ್ಥಳೀಯ ಪಾಲಿಕೆಯವರೆಗೂ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದೆ. ಆದರೆ, ಏನು ಪ್ರಯೋಜನವಾಗಿಲ್ಲ. ಹೀಗಿರುವಾಗ ಪಕ್ಷದ ಪರವಾಗಿ ಜನರಲ್ಲಿ ಪಕ್ಷದ ಬಗ್ಗೆ ಅರಿವು ಮೂಡಿಸಿ ಮಾತನಾಡಲು ಮೌನವಾಗಿರುವೆ ಎಂದು ಅವರು ಹೇಳಿದ್ದಾರೆ.

“ಪಕ್ಷದಲ್ಲಿ ಬೂತ್ ಅಧ್ಯಕ್ಷರದ್ದು ಪ್ರಮುಖ ಜವಾಬ್ದಾರಿಯಾಗಿದೆ. ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳೇ ಜನರ ಬಳಿಗೆ ಹೋಗುವುದು. ಎಲ್ಲರೂ ಈಗ ನಮಗೆ ಬಯ್ಯುತ್ತಿದ್ದಾರೆ. ಹಾಗಾಗಿ ಬೇಜಾರಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ. ಬೇರೆ ಸಂದರ್ಭ ಅಥವಾ ಬೇರೆ ಜಾಗದಲ್ಲಿ ರಾಜೀನಾಮೆ ಕೊಟ್ಟಿದ್ದರೆ ನಾಲ್ಕು ಜನಕ್ಕೆ ವಿಚಾರ ತಿಳಿಯುತ್ತಿರಲಿಲ್ಲ. ಅಲ್ಲದೆ ನನ್ನಿಂದಾಗಿ ಬೇರೆಯವರು ವಿಚಾರ ತಿಳಿಯುವಂತಾಗಲಿ ಅನ್ನುವ ಉದ್ದೇಶದಿಂದ ಮನೆ ಬಾಗಿಲಿಗೆ ಮುಖಂಡರು ಬಂದಾಗ ರಾಜೀನಾಮೆ ನೀಡಿದ್ದೇನೆ” ಎಂದು ಅವರು ಹೇಳಿದರು.

ಇದನ್ನೂ ಓದಿ: 70 ಲಕ್ಷ ಲಂಚಕ್ಕೆ ಬೇಡಿಕೆ; ಕಂದಾಯ ಇಲಾಖೆ ಉನ್ನತಾಧಿಕಾರಿ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights