ಫ್ಯಾಕ್ಟ್‌ಚೆಕ್: ನೆದರ್‌ಲ್ಯಾಂಡ್ ತನ್ನ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಪಠ್ಯದಲ್ಲಿ ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು!

ಸದ್ಯ ಕರ್ನಾಟಕದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಣ್ಣಗಾಗುತ್ತಿರುವ ಸಂದರ್ಭದಲ್ಲಿ, ಗುಜರಾತಿನಲ್ಲಿ ಶಾಲಾ ಮಕ್ಕಳಿಗೆ ಭಗವದ್ಗೀತೆಯನ್ನು ಪಠ್ಯವಾಗಿ ಸೇರಿಸಿರುವ ಬೆನ್ನಲ್ಲೆ ಕರ್ನಾಟಕದಲ್ಲೂ ಭಗದ್ಗೀತೆಯನ್ನು ಪಠ್ಯದಲ್ಲಿ ಸೇರಿಸಬೇಕು ಎಂಬ ಶಿಕ್ಷಣ ಸಚಿವರ ಹೇಳಿಕೆಗೆ ಪರ ವಿರೋದ ಚರ್ಚೆಗಳು ಪ್ರಾರಂಭವಾಗಿವೆ. ಭಗವದ್ಗೀತೆ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ.

ನೆದರ್‌ಲ್ಯಾಂಡ್ಸ್‌‌ ದೇಶವು ಡಚ್‌‌‌‌‌ ವಿದ್ಯಾರ್ಥಿಗಳಿಗೆ 5 ನೇ ತರಗತಿಯಿಂದ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಿದೆ ಎಂಬ ಪೋಸ್ಟ್‌‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಭಗವದ್ಗೀತೆಯನ್ನು ನೆದರ್‌ಲ್ಯಾಂಡ್ ದೇಶವು ತನ್ನ ದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿದೆ ಎಂದು ಪ್ರತಿಪಾದಿಸಿದ ಪೋಸ್ಟ್‌ನ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ವೈರಲ್‌ ಚಿತ್ರ

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ, ಅದೇ ಚಿತ್ರ 20 ಸೆಪ್ಟೆಂಬರ್ 2013 ರಂದು ‘ಇಸ್ಕಾನ್ ಡಿಸೈರ್ ಟ್ರೀ’ ವೆಬ್‌ಸೈಟ್‌ನಲ್ಲಿ ಇರುವುದು ಕಂಡು ಬಂದಿದೆ. ವೆಬ್‌ಸೈಟ್‌ನಲ್ಲಿ ಭಗವದ್ಗೀತೆಯೊಂದಿಗೆ ಇರುವ ಹಲವಾರು ಮಕ್ಕಳ ಚಿತ್ರಗಳು ಕಂಡುಬಂದಿವೆ. ಈ ಚಿತ್ರಗಳ ಶೀರ್ಷಿಕೆಯಲ್ಲಿ ‘ಸುಂದರವಾದ ಪುಟ್ಟ ವೈಷ್ಣವ !!!!’ ಎಂದು ಬರೆದಿದೆ.

 

ಈ ವೆಬ್‌ಸೈಟ್‌ನಲ್ಲಿ ನೆದರ್‌ಲ್ಯಾಂಡ್ಸ್ ತನ್ನ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಕಡ್ಡಾಯಗೊಳಿಸಿದ ಬಗ್ಗೆ ಯಾವುದೆ ಉಲ್ಲೇಖವಿಲ್ಲ. 2014 ರಿಂದಲೂ ಇದೇ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಸುಳ್ಳು ಸುದ್ದಿಗೆ ಹೆಸರು ವಾಸಿಯಾಗಿರುವ, ಬಿಜೆಪಿ ಪರವಾಗಿ ಪ್ರೊಪಗಾಂಡ ಸೃಷ್ಟಿಸುವ ‘ಪೋಸ್ಟ್‌ಕಾರ್ಡ್‌‌’ ಅವರ ಲೋಗೋ ಇರುವ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದ್ದು, ನೆದರ್‌ಲ್ಯಾಂಡ್ ತನ್ನ ದೇಶದ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಖಡ್ಡಾಯಗೊಳಿಸಿದೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ.

ನೆದರ್‌ಲ್ಯಾಂಡ್ಸ್‌‌ ದೇಶದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಲಿಸಲಾಗುತ್ತಿರುವ ವಿಷಯಗಳ ಬಗ್ಗೆ ಅವರ ವೆಬ್‌ಸೈಟ್‌ನಲ್ಲಿ ಕೂಡಾ ಭಗವದ್ಗೀತೆಯ ಬಗ್ಗೆ ಉಲ್ಲೇಖವಿಲ್ಲ.ಇದನ್ನು ಕೆಳಗೆ ನೋಡಬಹುದಾಗಿದೆ.

ಒಟ್ಟಿನಲ್ಲಿ ಡಚ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಲಾಗಿಲ್ಲ. ನೆದರ್‌ಲ್ಯಾಂಡ್ಸ್‌‌ ದೇಶದ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಬೇಕಾಗದ ವಿಷಯಗಳ ಪಟ್ಟಿಯಲ್ಲಿ ಭಗವದ್ಗೀತೆಯ ಉಲ್ಲೇಖವಿಲ್ಲ. ಆದ್ದರಿಂದ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳಾಗಿದೆ.

 


ಇದನ್ನೂ ಓದಿ: Fact check: ಪಾಕ್ ವ್ಯಕ್ತಿಯಿಂದ ‘ಹಿಂದೂ ಹುಡುಗಿ’ಯ ಬಲವಂತದ ಮತಾಂತರ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights