ಫ್ಯಾಕ್ಟ್‌ಚೆಕ್: ಒಮ್ಮೆಗೆ 11 ಶಿಶುಗಳಿಗೆ ಜನ್ಮ ನೀಡಿದ ತಾಯಿ! ಜಗತ್ತಿನಲ್ಲೆ ಮೊದಲ ಎಂಬುದರ ವಾಸ್ತವವೇನು?

‘ಪಾರ್ಸಿ ಹುಡುಗಿಯೊಬ್ಬಳು 11 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ, ಇದು ಜಗತ್ತಿನಲ್ಲೇ ಮೊದಲ ಘಟನೆ’ ಎಂಬ ಹೇಳಿಕೆಯೊಂದಿಗೆ ವೈದ್ಯರು ಸಿಸೇರಿಯನ್ ಮಾಡುವ ವೀಡಿಯೊವೊಂದರ  ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಸೂರತ್‌ನ ನಾನ್‌ಪುರ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ಸತ್ಯಾಸತ್ಯೆಗಳನ್ನು ತಿಳಿಯಲು ಸೂರತ್‌ನಲ್ಲಿ ಅಥವಾ ಭಾರತದ ಯಾವುದೇ ಭಾಗದಲ್ಲಿ ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ 11 ಮಕ್ಕಳಿಗೆ ಜನ್ಮ ನೀಡಿದ ವರದಿಗಳಿಲ್ಲ. ಇದಲ್ಲದೆ, ಕೀವರ್ಡ್ ಮೂಲಕ ಸರ್ಚ್ ಮಾಡಿದಾಗಲೂ  ಸೂರತ್‌ನ ನಾನ್‌ಪುರ ಆಸ್ಪತ್ರೆಯ ಕುರಿತು ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.

10 ನವೆಂಬರ್ 2011 ರಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, 11-11-11 ಈ ದಿನಾಂಕವು ವಿಶೇಷವಾಗಿದ್ದು ಅದೇ ದಿನದಂದು ಮಗುವಿಗೆ ಜನ್ಮ ನೀಡಬೇಕೆಂದು ಕೆಲವರು ಇಚ್ಚೆ ಪಟ್ಟಿದ್ದರು. ಹಾಗಾಗಿ ‘ಸೂರತ್ ಮೂಲದ ಇನ್ ವಿಟ್ರೋ ಫರ್ಟಿಲೈಸೇಶನ್ (IVF) ಕೇಂದ್ರವು  11 ಗರ್ಭಿಣಿಯರನ್ನು ಗುರುತಿಸಿ ಅದೇ ದಿನ ಹೆರಿಗೆ ಆಗುವಂತೆ  ಚಿಕಿತ್ಸೆ ಮಾಡಲಾಗಿದೆ ಎಂದು ವರದಿ ಮಾಡಿದೆ. ಆದರೆ 11 ಶಿಶುಗಳಿಗೆ ಒಬ್ಬರೆ ಜನ್ಮ ನೀಡದ್ದಾರೆ ಎಂಬುದು ಸುಳ್ಳು.

ಇದಲ್ಲದೆ, ಒಂಬತ್ತು ತಿಂಗಳ ಹಿಂದೆ ಐವಿಎಫ್ ಮೂಲಕ ಸುಮಾರು 30 ಮಹಿಳೆಯರು ಗರ್ಭಧರಿಸಿದ್ದರು. ಅದರಲ್ಲಿ  ’11 ದಂಪತಿಗಳು ಈ ವಿಶೇಷ ದಿನಾಂಕದಂದು ಹೆರಿಗೆ ಮಾಡಸಬೇಕೆಂದು ಬಯಸಿದ್ದರು’ ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ಸುದ್ದಿಯನ್ನು ಇಟ್ಟುಕೊಂಡು ಹನ್ನೊಂದು ಮಕ್ಕಳಿಗೆ ಜನ್ಮ ನೀಡಿದ ತಾಯಿ ಎನ್ನುವ ಪೋಸ್ಟ್ ಮಾಡಿರಬಹುದು ಎಂದು ಅಂದಾಜಿಸಬಹುದು.

ಆದರೂ ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಗೆ ಅನುಗುಣವಾಗಿ ಯಾವುದೇ ವರದಿಗಳಿಲ್ಲ. ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, ನಾಡಿಯಾ ಸುಲೇಮಾನ್ ಎಂಬುವವರು ಒಂದೇ ಹೆರಿಗೆಯಲ್ಲಿ ಹೆಚ್ಚು ಮಕ್ಕಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. 2009 ರ ಜನವರಿ 26 ರಂದು ಕೈಸರ್ ಪರ್ಮನೆಂಟೆ ಮೆಡಿಕಲ್ ಸೆಂಟರ್‌ನಲ್ಲಿ ಸುಲೇಮಾನ್ 6 ಗಂಡು ಮತ್ತು 2 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಚಿಕಿತ್ಸೆಯ ನೆರವಿನಿಂದ ಗರ್ಭಧರಿಸಲಾಯಿತು ಮತ್ತು ಸಿಸೇರಿಯನ್ ಮೂಲಕ ಒಂಬತ್ತು ವಾರಗಳ ಅವಧಿಗೆ ಮುಂಚೆಯೇ ಹೆರಿಗೆಯಾಗಿತ್ತು ಎಂದು ಹೇಳಲಾಗಿದೆ.

ಜೂನ್ 2021 ರಲ್ಲಿ, ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ಏಕಕಾಲದಲ್ಲಿ 10 ಶಿಶುಗಳಿಗೆ ಜನ್ಮ ನೀಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ ಎಂದು ಹಲವು ಮಾಧ್ಯಮಗಳು ಸುದ್ದಿ ಪ್ರಕಟಿಸಿದವು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಆದರೆ, ನಂತರ ಈ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ. ಸುದ್ದಿ ವರದಿಗಳ ಪ್ರಕಾರ, ಗೌಟೆಂಗ್ ಪ್ರಾಂತ್ಯದ ಯಾವುದೇ ಆಸ್ಪತ್ರೆಯಲ್ಲಿ ಡಿಕ್ಯೂಪ್ಲೆಟ್ಸ್ ಜನನದ ದಾಖಲೆಗಳಿಲ್ಲ ಎಂದು ಅಧಿಕೃತ ವಿಚಾರಣೆಯು ಕಂಡುಹಿಡಿದಿದೆ. ಹೀಗಾಗಿ ಒಂದೇ ಹೆರಿಗೆಯಲ್ಲಿ ಅತಿ ಹೆಚ್ಚು ಮಕ್ಕಳನ್ನು ಪಡೆದ ಗಿನ್ನಿಸ್ ದಾಖಲೆಯನ್ನು ನಾಡಿಯಾ ಸುಲೇಮಾನ್ ಇಂದಿಗೂ ಹೊಂದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೊ ಎಲ್ಲಿಯದು?

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ  ವಿಡಿಯೋದ ಸ್ಕ್ರೀನ್‌ಶಾಟ್‌ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಟರ್ಕಿಯ ಶಿಶುವೈದ್ಯರಾದ ಬಾನು ಇನ್ಸ್ ಡೆಮಿರ್ಪೆನ್ಸೆ ಅವರ 2018 ರ Instagram ಪೋಸ್ಟ್‌ ಲಭ್ಯವಾಗಿದೆ. ಅದು ಅದೇ ದೃಶ್ಯಗಳನ್ನು ಹಂಚಿಕೊಂಡಿದೆ. ಪೋಸ್ಟ್‌ನ ವಿವರಣೆಯ ಪ್ರಕಾರ, ವಿಡಿಯೋದಲ್ಲಿ ಆರು ಶಿಶುಗಳನ್ನಷ್ಟೆ ಕಾಣಲಾಗುತ್ತದೆ, ಪೋಸ್ಟ್‌ನಲ್ಲಿ ಹೇಳಿಕೊಂಡಂತೆ 11 ಶಿಶುಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ  ಸೂರತ್‌ನ  ಪಾರ್ಸಿ ಮಹಿಳೆ ಒಂದೇ ಹೆರಿಗೆಯಲ್ಲಿ 11 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಪೊಸ್ಟ್‌ನಲ್ಲಿ ಹೇಳಿರುವುದು ಸುಳ್ಳು.

ಕೃಪೆ:ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೆಹಲಿ ಗಲಭೆಗೆ ಸಂಬಂಧಿಸಿದ್ದು ಎಂದು ಹಳೆಯ ಫೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights