ಫ್ಯಾಕ್ಟ್‌ಚೆಕ್: ಡಾಲಿ ಧನಂಜಯ್ JDS ನಿಂದ ಚುನಾವಣಾ ಅಖಾಡಕ್ಕೆ ಎಂಬುದು ಸುಳ್ಳು ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಡಾಲಿ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಹಾಸನ ಜಿಲ್ಲೆಯ ಅರಸೀಕೆರೆ ಲೋಕಸಭಾ ಕ್ಷೇತ್ರದಿಂದ JDS ನಿಂದ ಅಖಾಡಕ್ಕಿಳಿಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಹಾಗಿದ್ದರೆ  ಧನಂಜಯ್ ಅರಸೀಕೆರೆಯಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿಯು ನಿಜವೇ ಎಂದು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ಸಿನಿಮಾರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿ ನೆಲೆ ಕಂಡುಕೊಂಡಿರುವ ಬಹುಬೇಡಿಕೆ ನಟ ಡಾಲಿ ಧನಂಜಯ್ ಅವರು ಶೀಘ್ರದಲ್ಲೇ ರಾಜಕೀಯ ಅಖಾಡಕ್ಕೆ ಧುಮುಕಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ತಮ್ಮ ನಟನಾ ಕೌಶಲ್ಯದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿರುವ ನಟ ಧನಂಜಯ್ ರಾಜಕೀಯದಲ್ಲೂ ಗೆದ್ದು ಜನ ಸೇವೆ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ.

ಸುದ್ದಿಗಳು.ಕಾಂ  ಸುದ್ದಿಯೊಂದನ್ನು ಪ್ರಕಟಿಸಿದ್ದು ಸುದ್ದಿಯ ಪ್ರಕಾರ  ಅರಸೀಕೆರೆ ಕ್ಷೇತ್ರದ ಎಂಎಲ್‌ಎ ಆಗಿರುವ ಶಿವಲಿಂಗೇಗೌಡರಿಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ನಡುವೆ ಮನಸ್ತಾಪವಿದೆ. ಕೆಲ ಮನಸ್ತಾಪಗಳಿಂದಾಗಿ ಶಿವಲಿಂಗೇಗೌಡರು ಜೆಡಿಎಸ್ ಪಕ್ಷವನ್ನು ಶೀಘ್ರದಲ್ಲೇ ಬಿಡಲಿದ್ದಾರೆ ಎಂದು ಸುದ್ದಿ ಮಾಡಿದೆ.

ಸುದ್ದಿಗಳು.ಕಾಂ ಮಾಡಿರುವುದು ಸುಳ್ಳು ಸುದ್ದಿ

ಇದೇ ಕಾರಣಕ್ಕೆ ಅರಸೀಕೆರೆ ಕ್ಷೇತ್ರಕ್ಕೆ ಸ್ಥಳೀಯರನ್ನೆ ಹುಡುಕಿ JDS ನಿಂದ ಟಿಕೇಟ್ ನೀಡಿ ಕಣಕಿಳಿಸಲಾಗುವುದು ಎಂದು ಹೇಳಲಾಗುತ್ತಿದೆ ಎಂದು ಸುದ್ದಿಗಳು.ಕಾಂ ವರದಿ ಮಾಡಿದೆ. ಈ ವರದಿಯು ಸುಳ್ಳು ಎಂದು Ensuddi.com ಪರಿಶೀಲಿಸಿದೆ. ಸುದ್ದಿಗಳು.ಕಾಂ ಮಾಡಿರುವ ಸುದ್ದಿಯಲ್ಲಿ ” ಶಿವಲಿಂಗೇಗೌಡರು ಶೀಘ್ರದಲ್ಲೇ ಜೆಡಿಎಸ್ ಬಿಡಲಿದ್ದಾರೆ  ಹಾಗಾಗಿ ಅರಸೀಕೆರೆ ಲೋಕಸಭಾ ಕ್ಷೇತ್ರದಿಂದ ನಟ ಡಾಲಿ ಧನಂಜಯ್ ಅವರನ್ನು ಕಣಕ್ಕಿಳಿಸಲು ದಳಪತಿಗಳು( ಕುಮಾರಸ್ವಾಮಿ ಮತ್ತು ದೇವೇಗೌಡರು) ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಎಂದು ವರದಿ ಮಾಡಿದೆ .

ಸುದ್ದಿಗಳು.ಕಾಂ ಮಾಡಿದ್ದ ಸುದ್ದಿಯ ಆರ್ಕೈವ್ ಮಾಡಲಾದ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಅರಸೀಕರೆಯು ಹಾಸನ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಹಾಸನ ಲೋಕಸಭಾ ಕ್ಷೇತ್ರವು ಹಾಸನದ 7ವಿಧಾನಸಭಾ ಕ್ಷೇತ್ರ ಸೇರಿ ಚಿಕ್ಕಮಗಳೂರಿನ ಕಡೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದೆ. ಹಾಗಾಗಿ ಅರಸೀಕೆರೆ ಲೋಕಸಭಾ ಕ್ಷೇತ್ರವೆಂಬುದು ಅಸ್ಥಿತ್ವದಲ್ಲಿಲ್ಲ. ಇನ್ನು ನಟ ಧನಂಜಯ್ ಅವರು JDS ನಿಂದ ಸ್ಪರ್ಧಿಸುತ್ತಿದ್ದಾರೆ ಎನ್ನುವುದು ಕೂಡ ಸುಳ್ಳು ಎಂದು ಸ್ವತಃ ಧನಂಜಯ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಧನಂಜಯ್ ಏನ್ ಹೇಳ್ತಾರೆ ಗೊತ್ತಾ?

ನಾನು shooting ಅಲ್ಲಿ ಎಷ್ಟು ಮುಳುಗಿ ಹೋಗಿದಿನಿ ಅಂದ್ರೆ ನನಗೆ ಈ ತರ ಒಂದು news ಆಗಿದೆ ಅನ್ನೋದೆ ಗೊತ್ತಾಗಿರಲಿಲ್ಲ. ಈ ವಿಷಯಕ್ಕೂ ನನಗೂ , ರಾಜಕೀಯಕ್ಕು ನನಗೂ ಯಾವುದೆ ಸಂಬಂಧ ಇಲ್ಲ. ಕಲಾವಿದನಾಗಿ ಜನ ಸ್ವೀಕರಿಸಿ ಅಪ್ಪಿದ್ದಾರೆ. ನೂರಾರು ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ರಂಜಿಸುವ ಕೆಲಸವಷ್ಟೆ ನನ್ನದು. ಸುಮ್ನೆ ಏನೇನೊ ಸುದ್ದಿ ಬರೆಯೋದು, ತೋರಿಸೋದು, ಕೇಳೋದು, ನೋಡೋದು, ನಂಬೋದು, ಎಲ್ಲ ಬಿಟ್ಟು, ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡನ ” . ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ನಟ ಧನಂಜಯ್ ಅವರು JDS ಸೇರಿ ಚುನಾವಣೆಯಲ್ಲಿ ಅರಸೀಕೆರೆ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬುದು ಸುಳ್ಳು ಯಾಕೆಂದರೆ ಅರಸೀಕೆರೆ ಲೋಕಸಭಾ ಕ್ಷೇತ್ರವು ಅಸ್ಥಿತ್ವದಲ್ಲೆ ಇಲ್ಲ. ಇನ್ನು ಮುಂದುವರೆದು ಧನಂಜಯ್ ಅವರೇ ಸ್ಪಷ್ಟಪಡಿಸಿದ್ದು ನಾನು ನಟನಾಗಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ, ರಾಜಕೀಯಕ್ಕೆ ಬರುತ್ತೇನೆ ಎಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights