ಫ್ಯಾಕ್ಟ್‌ಚೆಕ್: ಶಬ್ದ ಮಾಡುವ ಊದು ಪಾವೈ ಎಂಬ ಔಷಧಿಯ ಸಸ್ಯ ಎಲ್ಲಿದೆ ?

“ಈ ವಿಡಿಯೊದಲ್ಲಿರುವ ಸಸ್ಯವು ಪ್ರಕೃತಿಯ ವಿಸ್ಮಯವಾಗಿದ್ದು, ಶಬ್ದದೊಂದಿಗೆ ಪರಾಗವನ್ನು ಹೊರಗೆ ಸೂಸಿಸುತ್ತಿದೆ. ಇದು ಊದು ಪಾವೈ ಎಂಬ ಔಷಧೀಯ ಸಸಿಯಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ, ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರಸೂಸುತ್ತದೆ” ಎಂಬ ಪ್ರತಿಪಾದನೆಯೊಂದಿಗೆ ಒಂದು ಪೋಸ್ಟ್‌ ವೈರಲ್‌ ಆಗಿದೆ. ಈ ವಿಡಿಯೋವನ್ನು ಇದೇ ಪ್ರತಿಪಾದನೆಯೊಂದಿಗೆ ಐಎಫ್‌ಎಸ್‌ ಅಧಿಕಾರಿಯೊಬ್ಬರೂ ಟ್ವಿಟರ್‌ನಲ್ಲಿ ಹಂಚಿಕೊಂಡು, ಆನಂತರದಲ್ಲಿ ಡಿಲೀಟ್‌ ಮಾಡಿರುವ ಪ್ರಹಸನವೂ ನಡೆದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಊದು ಪಾವೈ ಎಂಬ ಔಷಧೀಯ ಸಸ್ಯದ ವಿಶೇಷತೆ ಬಗ್ಗೆ ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ವಾಟ್ಸಾಪ್‌ಗೆ ಮನವಿಯ ಸಂದೇಶಗಳು ಬಂದಿದ್ದು, ವೈರಲ್ ವಿಡಿಯೊದ ಸತ್ಯಾಸತ್ಯತೆ ಏನೆಂದು? ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ನಾವು ಸೂಕ್ಷ್ಮವಾಗಿ ನೋಡಿದರೆ ಈ ವಿಡಿಯೋದಲ್ಲಿ ‘LUKE PENRY EXR’ ಎಂದು ವಾಟರ್‌ ಮಾರ್ಕ್‌ ಇರುವುದು ಕಂಡು ಬರುತ್ತದೆ. ಈ ಸಾಕ್ಷಿಯ ಆಧಾರದಲ್ಲಿ ಗೂಗಲ್‌ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಸರ್ಚ್ ಮಾಡಿದಾಗ ಲ್ಯೂಕ್‌ ಪೆನ್ರಿ ಎಂಬವರ ಟ್ವಿಟ್ಟರ್‌ ಖಾತೆ ಕಂಡುಬಂದಿದೆ. ಈಗ ಹರಿದಾಡಿರುವ ವಿಡಿಯೋ ರೀತಿಯಲ್ಲೇ ಇರುವ ವಿಡಿಯೋ 2021ರ ಸೆಪ್ಟೆಂಬರ್‌ 17ರಂದು ‘ನ್ಯೂ ಸೌಂಡ್‌ ಆನ್‌’ ಶೀರ್ಷಿಕೆಯೊಂದಿದೆ ಅವರ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

 

ಈ ವಿಡಿಯೋವು 3ಡಿ ಕಲಾವಿದ ಲ್ಯೂಕ್‌ ಪೆನ್ರಿ ಎಂಬವರು ಸೃಷ್ಟಿಸಿದ್ದು, ವಾಸ್ತವವಾಗಿ ಇದು ಡಿಜಿಟಲ್‌ ಶಬ್ದ ಕಲೆಯಾಗಿದೆ. Foundation.app ನಲ್ಲಿ ಲ್ಯೂಕ್‌ ಅವರು ಈ ಕಲೆಯನ್ನು ಹರಾಜಿಗೂ ಇರಿಸಿದ್ದರು. ಆದುದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ ಎಂದು ಫ್ಯಾಕ್ಟ್‌ಲಿ.ಕಾಮ್‌ ವರದಿ ಮಾಡಿದೆ.

 

ಲ್ಯೂಕ್‌‌ ಹೆನ್ರಿಯವರ ಟ್ವಿಟ್ಟರ್‌ ಖಾತೆಯ ವಿವರಣೆಯಲ್ಲಿ ಇವರು 3ಡಿ ಕಲಾವಿದ ಎಂದಿದೆ. ಸಾಕಷ್ಟು ಡಿಜಿಟಲ್ ಶಬ್ದಕಲೆಯ ವಿಡಿಯೋಗಳನ್ನು ಇವರ ಟೈಮ್‌ಲೈನ್‌‌ನಲ್ಲಿ ನೋಡಬಹುದು. ಡಿಜಿಟಲ್‌ ಕಲೆಗಳ ನೇರ ಹರಾಜು ವೇದಿಕೆಯಲ್ಲಿ ಒಂದಾದ Foundation.appನಲ್ಲಿ ಇದನ್ನು ಲ್ಯೂಕ್‌ ಹರಾಜಿಗೂ ಇರಿಸಿದ್ದರು. ಕಲಾಕೃತಿಯ ಮಾಹಿತಿ ವಿಭಾಗದಲ್ಲಿ ಅದನ್ನು ಲೂಪಿಂಗ್ ಅನಿಮೇಷನ್ ಎಂದು ಗುರುತಿಸಲಾಗಿದೆ. ‘ಜಂಗಲ್ ಪೈಪ್ಸ್’ ಎಂಬ ಶೀರ್ಷಿಕೆ ನೀಡಲಾಗಿದೆ. ಇದಲ್ಲದೆ, ಮಾಹಿತಿ ವಿಭಾಗದಲ್ಲಿ ಲ್ಯೂಕ್‌ ಹೀಗೆ ಬರೆದಿದ್ದಾರೆ: “ವಿಡಿಯೋವು ಭಾರತದಲ್ಲಿ ಹೆಚ್ಚು ಗೊಂದಲಕ್ಕೆ ಕಾರಣವಾಯಿತು. ಶಬ್ದದೊಂದಿಗೆ ಹೊಗೆಯನ್ನು ಹೊರಗೆ ಸೂಸುವ ಊದು ಪಾವೈ ಎಂಬ ಔಷಧೀಯ ಸಸ್ಯ ಇದಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ. ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರ ಬಿಡುತ್ತದೆ ಎಂದು ಹಲವು ಚಾನೆಲ್‌ಗಳು ವರದಿ ಮಾಡಿವೆ.”

ಮುಂದುವರಿದು, “ಐಎಫ್‌ಎಸ್ ಅಧಿಕಾರಿಯು ಅದೇ ವೀಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಹೀಗಾಗಿ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಯಿತು” ಎಂದು ಕಲಾವಿದ ತಮ್ಮ ಮಾಹಿತಿಯನ್ನು ಸೇರಿಸಿದ್ದಾರೆ.

ಹೆಚ್ಚಿನ ಹುಡುಕಾಟ ನಡೆಸಿದಾಗ ವೈರಲ್‌ ಪ್ರತಿಪಾದನೆಯೊಂದಿಗೆಯೇ ಐಎಫ್‌ಎಸ್‌‌ ಅಧಿಕಾರಿಯ ಟ್ವೀಟ್‌ ಕಂಡು ಬಂದಿದೆ. ಅವರು ಕೂಡ ಇದೇ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಶೇರ್‌ ಮಾಡಿದ್ದು, “ಊದು ಪಾವೈ ಎಂಬ ಔಷಧೀಯ ಸಸಿ ಇದಾಗಿದ್ದು, ದಟ್ಟವಾದ ಮಳೆ ಕಾಡುಗಳಲ್ಲಿ ಬೆಳೆಯುತ್ತದೆ. ಶಬ್ದವನ್ನು ಮಾಡುತ್ತಾ ಪರಾಗವನ್ನು ಹೊರ ಬಿಡುತ್ತದೆ” ಎಂದಿದ್ದಾರೆ. ಆದರೆ ಈ ಟ್ವೀಟ್ ಅನ್ನು ಆನಂತರದಲ್ಲಿ ಡಿಲೀಟ್‌ ಮಾಡಿದ್ದಾರೆ.

ಆದಾಗ್ಯೂ, ವೀಡಿಯೊ ಡಿಜಿಟಲ್ ಕಲೆಯಾಗಿದೆ ಮತ್ತು ಶಬ್ದಗಳನ್ನು ಉತ್ಪಾದಿಸುವ ನಿಜವಾದ ಸಸ್ಯವಲ್ಲ. ತನ್ನ ಟ್ವಿಟ್ಟರ್ ಟೈಮ್‌ಲೈನ್‌ನಲ್ಲಿ ಲ್ಯೂಕ್ ಪೆನ್ರಿ ಅವರು ತಮಿಳು ವ್ಯಕ್ತಿಯೊಬ್ಬರು ಸತ್ಯಾಂಶವನ್ನು ವಿವರಿಸಿರುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

https://twitter.com/eLPenry/status/1441337978807193611?ref_src=twsrc%5Etfw%7Ctwcamp%5Etweetembed%7Ctwterm%5E1441337978807193611%7Ctwgr%5E%7Ctwcon%5Es1_&ref_url=https%3A%2F%2Fnaanugauri.com%2Fread-the-story-of-the-medicinal-plant-and-enjoy%2F

ಪ್ರತಿಪಾದಿಸಿರುವಂತೆ ಊದು ಪಾವೈ ಎಂಬ ಔಷಧೀಯ ಸಸಿಯ ಕುರಿತು ನಮಗೆ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋದಲ್ಲಿರುವುದು ಡಿಜಿಟಲ್ ಶಬ್ದ ಕಲೆ ಎಂಬುದು ಖಚಿತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights