ಫ್ಯಾಕ್ಟ್‌ಚೆಕ್: ಹಸು ಕದ್ದಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿಸಿ ಹತ್ಯೆ ಎಂದು ಹರಿಯಾಣದ ವಿಡಿಯೋ ತಪ್ಪಾಗಿ ಹಂಚಿಕೆ
ಹಸು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಎಂದು ಆರೋಪಿಸಿ , ಯುವಕರ ಗುಂಪು ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹೊಡೆಯುತ್ತಿರುವ ದೃಶ್ಯಗಳು CC ಕ್ಯಾಮರಾದಲ್ಲಿ ಸೆರೆಯಾಗಿದೆ. 6 ರಿಂದ 7 ಜನರಿರುವ ಗುಂಪೊಂದು ಒಬ್ಬ ವ್ಯಕ್ತಿಯನ್ನು ಮನಬಂದಂತೆ ಹೊಡೆಯುತ್ತಿದ್ದ ವೇಳೆ ಮಹಿಳೆಯೊಬ್ಬರು ಹೊಡೆಯದಂತೆ ಯುವಕರನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ, ಆದರೆ ಆಕೆಯ ಮನವಿಯನ್ನು ನಿರ್ಲಕ್ಷಿಸಿ ನೆಲಕ್ಕೆ ಹಾಕಿಕೊಂಡು ಹೊಡೆದು ಕೊಲ್ಲುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಈ ಘಟನೆಯನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮದ ಬಳಕೆದಾರರು ಹತ್ಯೆಗೀಡಾದ ವ್ಯಕ್ತಿ ಮೊಹಮ್ಮದ್ ಮುಸ್ತಕೀಮ್ ಎಂದು ಹೇಳಿದ್ದು, ಹಸು ಕದ್ದು ಸಾಗಸುತ್ತಿದ್ದನೆಂದು ಯುವಕರ ಗುಂಪು ಹೊಡೆದು ಕೊಂದಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಘಟನೆಯು ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.
बिहार: समस्तीपुर में बैल चोरी के आरोप में भीड़ द्वारा मोहम्मद मुस्तक़ीम नामी युवक की बेरहमी से पीट पीटकर हत्या कर दी गई…
पुलिस ने तीन नामज़द समेत अन्य अज्ञातों के ख़िलाफ़ मामला दर्ज किया है… pic.twitter.com/fpKNWqMGLZ— Shakeelsayed (@Shakeelsayed14) August 18, 2022
ಟ್ವಿಟರ್ ಬಳಕೆದಾರ ಶಕೀಲ್ ಸೈಯದ್ ಈ ವೀಡಿಯೊವನ್ನು ಹಂಚಿಕೊಂಡಿದ್ದು “ಬಿಹಾರ: ಸಮಸ್ತಿಪುರದಲ್ಲಿ ಗೂಳಿ ಕಳ್ಳತನದ ಆರೋಪದ ಮೇಲೆ ಗುಂಪೊಂದು ಮೊಹಮ್ಮದ್ ಮುಸ್ತಕೀಮ್ ಎಂಬ ಯುವಕನನ್ನು ಬರ್ಬರವಾಗಿ ಹೊಡೆದು ಕೊಂದಿದ್ದಾರೆ” ಎಂದು ಬರೆದಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್)
https://twitter.com/Mr_irfan666/status/1561656157466492928?t=oPGuhqMwyiIzgfuOR7272g&s=19
ಇರ್ಫಾನ್ ಅನ್ಸಾರಿ ಎಂಬ ಮತ್ತೊಬ್ಬ ಬಳಕೆದಾರರು ಇದೇ ರೀತಿಯ ಹೇಳಿಕೆಯೊಂದಿಗೆ ದೃಶ್ಯಗಳನ್ನು ಟ್ವೀಟ್ ಮಾಡಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್)
https://twitter.com/MdHarunMansuri4/status/1561733107186708480?t=yK_lto7gQKivgcLK-rLrCA&s=19
ಮೊಹಮ್ಮದ್ ಹರುನ್ ಮನ್ಸೂರಿ ಅವರು ಈ ವೀಡಿಯೊವನ್ನು ಸಮಸ್ತಿಪುರದ ಘಟನೆ ಎಂದು ಪ್ರತಿಪಾದಿಸಿ ಹಂಚಿಕೊಂಡಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್). ಹೀಗೆ ಸಾಮಾಜಿಕ ಮಾಧ್ಯಮದ ಹಲವು ಬಳಕೆದಾರರು ಘಟನೆಯನ್ನು ಹಂಚಿಕೊಂಡಿದ್ದು, ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಆಗಸ್ಟ್ 3, 2022 ರ ಟೈಮ್ಸ್ ನೌ ಲೇಖನವೊಂದು ಲಭ್ಯವಾಗಿದ್ದು, ಅದರಲ್ಲಿ ವೈರಲ್ ವೀಡಿಯೊವನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಹಾಗೆಯೇ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಸತ್ಯ ಪರಿಶೀಲನಾ ವರದಿಯನ್ನು ಪ್ರಕಟಿಸಿದೆ.
ಆಲ್ಟ್ ನ್ಯೂಸ್ ವರದಿಯ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೊಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ ಎಂದು ಹೇಳಿದೆ. ವರದಿಯ ಪ್ರಕಾರ ವಿಡಿಯೋದಲ್ಲಿರುವ ಘಟನೆಯು ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲ ಎಂದು ತಿಳಿಸಿದೆ. ವಾಸ್ತವವಾಗಿ ಹರಿಯಾಣದ ಹಿಸಾರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಗುಂಪೊಂದು ವಿಕಾಸ್ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಹೊಡೆದು ಕೊಂದಿದೆ, ಕೆಲ ವರ್ಷಗಳ ಹಿಂದೆ ವಿಕಾಸ್ ನ ತಂದೆ ಪೆಹಲ್ವಾನ್‌ನನ್ನು ಕೊಲೆ ಮಾಡಲಾಗಿತ್ತು.

ಕೆಲವು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ವಿಕಾಸ್ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು, ಹತ್ಯೆಗೆ ಹಳೆಯ ದ್ವೇಷ ಕಾರಣವಿರಬಹುದು ಎಂದು ಹೇಳಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಜಾಗರಣ್, ಈಟಿವಿ ಭಾರತ್, ಮತ್ತು ಹರಿ ಭೂಮಿ ಮುಂತಾದ ಔಟ್‌ಲೆಟ್‌ಗಳು ಈ ಘಟನೆ ಕುರಿತು ಮಾಡಿರುವ ವರದಿಗಳ ಮಾಹಿತಿಯಿಂದ ವೈರಲ್ ವಿಡಿಯೋದ ಘಟನೆಯು ಬಿಹಾರದ ಸಮಸ್ತಿಪುರ ಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟವಾಗಿದೆ.
ಸಮಸ್ತಿಪುರ ಘಟನೆಯಲ್ಲಿ ಏನು?
ಸಮಸ್ತಿಪುರದಲ್ಲಿ ನಡೆದಿರುವ ಘಟನೆ ಬಗ್ಗೆ ವರದಿ ಮಾಡಿರುವ ಆಲ್ಟ್‌ನ್ಯೂಸ್, ಆಗಸ್ಟ್ 1, 2022 ರ ಜೀ ನ್ಯೂಸ್ ಮತ್ತು ನವಭಾರತ್ ಟೈಮ್ಸ್‌ನ ಎರಡು ವರದಿಗಳನ್ನು ಉಲ್ಲೇಖಿಸಿ ಲೇಖನ ಪ್ರಕಟಿಸಿದೆ. ಹಸು ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಬಿಹಾರದ ಸಮಸ್ತಿಪುರ್ ಜಿಲ್ಲೆಯ ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ.
ಘಟನೆ ಬಗ್ಗೆ ಸಮಸ್ತಿಪುರ ಜಿಲ್ಲೆಯ ಬಿಭೂತಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಚಂದ್ರಕಾಂತ್ ಗೌರಿ, ಮಾಹಿತಿ ನೀಡಿದ್ದು, ಮೃತರನ್ನು ಮೊಹಮ್ಮದ್ ಮುಸ್ತಾಕಿಮ್ ಅಲಿಯಾಸ್ ಭೋಲಾ ಎಂದು ಗುರುತಿಸಲಾಗಿದ್ದು, ಅವರು ಬೇಗುಸರಾಯ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಎಘು ಗ್ರಾಮದ ನಿವಾಸಿಯಾಗಿದ್ದಾರೆ. ಪೊಲೀಸರು ಘಟನಾ ಸ್ಥಳದ ಬಳಿ ಮೊಬೈಲ್ ಫೋನ್‌ಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ್ಯೂಸ್ 18 ಬಿಹಾರ ಕೂಡ ದಾಳಿಗೆ ಸಂಬಂಧಿಸಿದ ವಿಡಿಯೋ ವರದಿಯನ್ನು ಟ್ವೀಟ್ ಮಾಡಿದೆ.
समस्तीपुर में भीड़ के हत्थे चढ़ा बैल चोरी का आरोपी, भीड़ ने की पीट-पीटकर हत्या। pic.twitter.com/dYs44or5zM
— News18 Bihar (@News18Bihar) August 1, 2022
ಸಂಕ್ಷಿಪ್ತವಾಗಿ ಹೇಳುವುದಾದರೆ, ಹರ್ಯಾಣದ ಹಿಸಾರ್‌ನಲ್ಲಿ ವಯುಕ್ತಿಕ ದ್ವೇಷದ ಕಾರಣಕ್ಕೆ ವಿಕಾಸ್ ಎಂಬುವನನ್ನು ಹತ್ಯೆಗೈದ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಗೋವು ಕಳ್ಳತನ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಹತ್ಯೆಗೈದ ಪ್ರಕರಣವೆಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋಗೂ, ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಘಟನೆಗೂ ಸಂಬಂಧವಿಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ ರಾಜಸ್ತಾನದ ದಲಿತ ವಿದ್ಯಾರ್ಥಿಯ ಸಾವಿನ ಘಟನೆಗೆ ಸಂಬಂಧಿಸಿದ್ದಲ್ಲ

