ಫ್ಯಾಕ್ಟ್‌ಚೆಕ್: ಗಾಂಧಿ ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು
ಗಾಂಧಿ ಜಯಂತಿ ಅಕ್ಟೋಬರ್ 2 ಬಂತೆಂದರೆ, ಮಹಾತ್ಮ ಗಾಂಧಿಯವರನ್ನು ಕುರಿತು ಅನೇಕ ವಿಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತವೆ. ಬಹುತೇಕರು ಗಾಂಧಿ ಮತ್ತು ಅವರ ಕೊಡುಗೆಗನ್ನು ಸ್ಮರಿಸಿದರೆ ಇನ್ನು ಕೆಲವರು ಗಾಂಧಿ ವಿರುದ್ಧ ಕಿಡಿಕಾರುತ್ತಾರೆ. ಅವರ ಬಗ್ಗೆ ಅನೇಕ ಕಪೋಲ ಕಲ್ಪಿತ ಕತೆಗಳನ್ನು ಕಟ್ಟಿ ಅದನ್ನೆ ನಿಜವೆಂದು ಪ್ರತಿಪಾದಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವವರು ನಮ್ಮ ನಡುವೆ ಕೆಲವರಿದ್ದಾರೆ.
ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದು ಹರಿದಾಡುತ್ತಿದ್ದು ಮಹಾತ್ಮ ಗಾಂಧಿಯವರು ವೈಯಕ್ತಿಕ ನಿರ್ವಹಣೆಗಾಗಿ ಭತ್ಯೆಯಾಗಿ ತಿಂಗಳಿಗೆ 100 ರೂ. ಪಿಂಚಣಿಯನ್ನು ಬ್ರಿಟೀಷರಿಂದ ಪಡೆಯುತ್ತಿದ್ದರು ಎಂದು ಟ್ವೀಟ್ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
An important find on the payment of Rs 100 per month as allowance for personal maintenance to M.K. Gandhi in 1930. This was the peak of the Civil Disobedience movement incidentally.
Source: National Archives of India , https://t.co/zCsWj63H4F https://t.co/p836kF8fbC— Dr. Vikram Sampath, FRHistS (@vikramsampath) October 3, 2022
ಡಾ. ವಿಕ್ರಮ್ ಸಂಪತ್ ಅವರು ಒಂದು ಉಲ್ಲೇಖವನ್ನು ಟ್ವೀಟ್ ಮಾಡಿದ್ದು “1930 ರಲ್ಲಿ ಅಸಹಕಾರ ಚಳುವಳಿಯು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಗಾಂಧಿ ಅವರಿಗೆ ವೈಯಕ್ತಿಕ ನಿರ್ವಹಣೆಗಾಗಿ ಭತ್ಯೆಯಾಗಿ ತಿಂಗಳಿಗೆ 100 ರೂ. ಪಾವತಿಯ ಕುರಿತು ಒಂದು ಪ್ರಮುಖ ಸಂಶೋಧನೆ ಎಂಬ ಹೇಳಿಕೆಯೊಂದಿಗೆ ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಎಂಬ ಲಿಂಕ್ ಅನ್ನು ಸಹ ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಮಹಾತ್ಮ ಗಾಂಧಿ ಬ್ರಿಟೀಷರಿಂದ 100 ರೂ ಪಿಂಚಣೆ ಪಡೆಯುತ್ತಿದ್ದದ್ದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.
ಫ್ಯಾಕ್ಟ್‌ಚೆಕ್ :
ಗಾಂಧಿ ಕುರಿತಾದ ಈ ಟ್ವೀಟ್‌ಅನ್ನು ಪರಿಶೀಲಿಸಲು, ಕೆಲವು ನಿರ್ದಿಷ್ಟ ಕೀವರ್ಡ್‌ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಲೇಖಕ ಮತ್ತು ಇತಿಹಾಸಕಾರ ಅಶೋಕ್ ಪಾಂಡೆ ಅವರ ಟ್ವೀಟ್ ಲಭ್ಯವಾಗಿದೆ, ಅದರಲ್ಲಿ, “ಗಾಂಧಿ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರೆಯೇ? ಸತ್ಯ ನೋಡಿ ಎಂಬ ಪೋಸ್ಟ್‌ನೊಂದಿಗೆ ಯೂಟ್ಯೂಬ್ ಲಿಂಕ್‌ವೊಂದನ್ನು ಹಂಚಿಕೊಂಡಿದ್ದಾರೆ.
क्या गांधी को अंग्रेजों से पेंशन मिलती थी?
देखिए सच : Did #mahatmagandhi asked for allowances ?
Link : https://t.co/8TcX2fWWZF pic.twitter.com/HYBDyCCgl7
— Ashok Kumar Pandey अशोक اشوک (@Ashok_Kashmir) October 6, 2022
ಅಶೋಕ್ ಕುಮಾರ್ ಪಾಂಡೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿರುವ ವೀಡಿಯೊದಲ್ಲಿ, “ಮಹಾತ್ಮಗಾಂಧಿ ಭತ್ಯೆ ಕೇಳಿದ್ದು ನಿಜವೇ?” ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಗಾಂಧಿ ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂಬುದರ ಬಗ್ಗೆ ಮಾತನಾಡಿದ್ದು ಅದರ ಸತ್ಯಾಸತ್ಯತೆಗಳನ್ನು ಹೊರಹಾಕಿದ್ದಾರೆ.
ಇತಿಹಾಸಕಾರ ಅಶೋಕ್ ಕುಮಾರ್ ಪಾಂಡೆ ಅವರು ವೀಡಿಯೊದಲ್ಲಿ 3:40 ನಿಮಿಷಗಳಲ್ಲಿ ಹೇಳುವುದನ್ನು ಕೇಳಬಹುದು,
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಗಾಂಧಿಯವರಿಗೆಂದೇ ಹೊಸದಾಗಿ ನೀಡುತ್ತಿರುವ ಭತ್ಯೆ ಎಂಬಂತೆ ಪತ್ರವನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಇದು ಜೈಲಿನಲ್ಲಿ ಇರುವ ಪ್ರತಿ ಕೈದಿಗಳಿಗೆ ನೀಡುವ ಭತ್ಯೆಯ ಪತ್ರ ಎಂಬುದನ್ನು ಅಶೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆಗ ಗಾಂಧಿ ಯರವಾಡ ಜೈಲಿನಲ್ಲಿದ್ದರು ಎಂಬುದು ಇಡೀ ವಿಷಯದ ವಸ್ತುವಾಗಿದ್ದು, ಜೈಲು ಪ್ರಾಧಿಕಾರವು ಗಾಂಧಿ ಮತ್ತು ಅವರ ಸಹಚರರಿಗೆ ಒಂದು ಬಜೆಟ್ ಅನ್ನು ಅಂಗೀಕರಿಸಿತು. ಆ ಕಾಲದ ಯಾವುದೇ ವ್ಯಕ್ತಿಯ ಜೀವನಚರಿತ್ರೆಯನ್ನು ಓದಿದರೆ ನಮಗೆ ಇದು ಸ್ಪಷ್ಟವಾಗುತ್ತದೆ, ಪ್ರತಿಯೊಬ್ಬ ಖೈದಿಗೂ ಸ್ವಲ್ಪ ಬಜೆಟ್ (ಆಹಾರ ಮತ್ತು ಇತರ ಅಗತ್ಯಗಳಿಗಾಗಿ) ಇರುತ್ತದೆ. ರಾಹುಲ ಸಾಂಕೃತ್ಯಾಯನ್ ಅವರ ಜೀವನ ಚರಿತ್ರೆ ಓದುವಾಗಲೂ ಅನೇಕ ಕೈದಿಗಳು ಭತ್ಯೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದನ್ನು ಉಲ್ಲೇಖಿಸಿ ಇದು ಸಾಮಾನ್ಯ ಸಂಗತಿಯಾಗಿತ್ತು ಎಂದು ಹೇಳಿದ್ದಾರೆ. ನೀವು ಜೈಲಿನಲ್ಲಿ ಇರುವಾಗ, ಮಸೂರ (ದಾಲ್) ಮತ್ತು ಬ್ರೆಡ್ ಪಡೆಯುತ್ತೀರಿ, ಇತರ ಅಗತ್ಯಗಳನ್ನು ಪೂರೈಸಲು ಬಜೆಟ್ ನೀಡಲಾಗುತ್ತದೆ. ಎಂದು ಪ್ರತಿಪಾದಿಸಿದ್ದಾರೆ.
ಇದಲ್ಲದೆ, ಅಶೋಕ್ ಕುಮಾರ್ ಪಾಂಡೆ ಮತ್ತೊಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ. 10 ಮೇ 1930 ರಂದು, ಗಾಂಧಿಯವರು ಗೃಹ ಇಲಾಖೆಯ ಮೇಜರ್ ಇ ಡಾಯ್ಲ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಗಾಂಧೀಜಿಯವರು “ನನ್ನ ಮತ್ತು ನನ್ನ ಸಹೋದ್ಯೋಗಿಗಳ ಜೈಲು ವೆಚ್ಚಕ್ಕಾಗಿ 100 ರೂಪಾಯಿ ಕೊಡಲು ನಿರ್ಧರಿಸಿದ್ದೀರಿ, ಆ ಹಣ ನನಗೆ ಬೇಡ, ನನಗೆ ಅದರ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.
ನೀವು ನನಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ಪ್ರಸ್ತಾಪಿಸುತ್ತಿದ್ದೀರಿ. ಆದರೆ ಅದಾವುದರ ಅಗತ್ಯವೂ ನನಗಿಲ್ಲ. ನನ್ನ ಪ್ರಕಾರ, ಇಲ್ಲಿ ಹಸಿವಿನಿಂದ ಮಲಗುವ ಲಕ್ಷಗಟ್ಟಲೆ ಜನರಿದ್ದಾರೆ. ಅವರ ಪಾಲನ್ನು ಕಡಿತಗೊಳಿಸಿದ ನಂತರ ಅಂತಹ ಭತ್ಯೆ ನಮಗೆ ನೀಡಲಾಗುತ್ತದೆ. ಜೈಲುಗಳಲ್ಲಿ ಮಾಡುವ ಬೇಧಭಾವ ಚಿಕಿತ್ಸೆಯ ಬಗ್ಗೆ ನನ ವಿರೋದವಿದೆ. A ಗ್ರೇಡ್ ಖೈದಿ, B ಗ್ರೇಡ್ ಮತ್ತು C ಗ್ರೇಡ್ ಖೈದಿ ಎಂಬ ವರ್ಗೀಕರಣಕ್ಕೆ ನೀಡಿರುವ ವಿವಿಧ ಸೌಲಭ್ಯಗಳನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ. ಖೈದಿ ಯಾರೇ ಆಗಿರಲಿ, ಕೊಲೆಗಾರನೇ ಆಗಿರಲಿ, ಅವರ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಅವರ ಹಕ್ಕು ಎಂದು ನಾನು ನಂಬುತ್ತೇನೆ ಎಂದು ಗಾಂಧಿ ಬರೆದಿದ್ದಾರೆ.
ಈ 100 ರೂಪಾಯಿಯನ್ನು ಸರ್ಕಾರ ಗಾಂಧಿ ಮತ್ತು ಸಹಚರರ ಮೇಲೆ ಖರ್ಚು ಮಾಡಲೇಬೇಕಾಗಿತ್ತು. ಅದು ಅನುದಾನವೂ ಅಲ್ಲ, ಅವರ ಬ್ಯಾಂಕ್ ಖಾತೆಗೆ ಹಣವೂ (ಚೆಕ್) ಅಲ್ಲ ಎಂದು ಇತಿಹಾಸಕಾರ ಅಶೋಕ್ ಪಾಂಡೆ ಹೇಳುತ್ತಾರೆ. ಗಾಂಧೀಜಿಯನ್ನು ಅವರ ಅನೇಕ ಸಹಚರರೊಂದಿಗೆ ಬಂಧಿಸಲಾಯಿತು, ಅವರಿಗೆ ಸರ್ಕಾರವು ರೂ 100 ಜೈಲು ಭತ್ಯೆಯನ್ನು ನೀಡಿತು, ಅದನ್ನು ಬಾಪು ತಿರಸ್ಕರಿಸಿದ್ದರು ಎಂದು ಅಶೋಕ್ ಕುಮಾರ್ ಪಾಂಡೆಯವರು ಗಾಂಧಿ ಪಿಂಚಣಿ ತೆಗೆದುಕೊಂಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಬ್ರಿಟಿಷ್ ಸರ್ಕಾರವು ಗಾಂಧೀಜಿಗೆ ಪಿಂಚಣಿ ನೀಡುತ್ತಿತ್ತು ಎಂದು ಡಾ.ವಿಕ್ರಂ ಸಂಪತ್ ಮತ್ತು ಸಮೀರ್ ಕಸ್ತೂರೆ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರ ಹೇಳಿಕೆಯು ಸುಳ್ಳು. ಗಾಂಧಿಯವರ ಬಗ್ಗೆ ಈ ರೀತಿ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪದೇ ಪದೇ ಹಂಚಿಕೊಳ್ಳಲಾಗುತ್ತಿದ್ದು ಗಾಂಧೀಜಿ ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿರಲಿಲ್ಲ ಎಂಬುದು ಇದರಿಂದ ಸ್ವಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಹಾವೊಂದು ನಿಧಿ ಕಾಯುತ್ತಿರುವ ವಿಡಿಯೋದ ವಾಸ್ತವವೇನು?