ಫ್ಯಾಕ್ಟ್‌ಚೆಕ್: ಹಾವೊಂದು ನಿಧಿ ಕಾಯುತ್ತಿರುವ ವಿಡಿಯೋದ ವಾಸ್ತವವೇನು?

ಕೆಲ ದಿನಗಳ ಹಿಂದೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ ನ ರಸ್ತೆ ಕಾಮಗಾರಿ ವೇಳೆ ನಿಧಿ ಸಿಕ್ಕಿದೆ ಎಂದು ಕೆಲವು ಚಿನ್ನದ ಹಳೆಯ ನಾಣ್ಯಗಳಂತೆ ಕಾಣುವ ಫೋಟೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಸುದ್ದಿಯ ಅಸಲಿ ಕತೆಯನ್ನು ಏನ್‌ ಸುದ್ದಿ.ಕಾಂ ಬಹಿರಂಗ ಪಡಿಸುವ ಮೂಲಕ ಇದೊಂದು ಸುಳ್ಳು ಸುದ್ದಿ ಎಂದು ಫ್ಯಾಕ್ಟ್‌ಚೆಕ್ ವರದಿಯನ್ನು ಮಾಡಿತ್ತು.

ಈಗ ಮತ್ತೆ ಅಂತಹದ್ದೆ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಮಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಿಧಿ  ಪತ್ತೆಯಾಗಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಕಾಣುವ ದೃಶ್ಯಾವಳಿಗಳು ಭಯ ಉಂಟು ಮಾಡುವಂತಿದ್ದು ಈ ಸುದ್ದಿ ನಿಜವೇ ಎಂದು ಪರಿಶೀಲಿಸುವಂತೆ ನಮ್ಮ ಏನ್ ಸುದ್ದಿ.ಕಾಂ ಗೆ ವಿಡಿಯೋದೊಂದಿಗೆ ವಿನಂತಿ ಸಂದೇಶಗಳು ಬಂದಿವೆ. ಹಾಗಾಗಿ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, Hazine avcısı ಎಂಬ ಫೇಸ್‌ಬುಕ್ ಅಕೌಂಟ್‌ ನಿಂದ  ಸೆಪ್ಟಬಂರ್ 23, 2022 ರಂದು ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ.  ಈ ವಿಡಿಯೋದ ಪ್ರಕಾರ ನಿಗೂಢ ನಿಧಿಯ ಹುಡುಕಾಟ ಎಂಬ ಟ್ಯಾಗ್‌ ಲೈನ್‌ನೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಏನಿದೆ:

Hazine avcısı ಎಂಬ ಫೇಸ್‌ಬುಕ್ ಅಕೌಂಟ್‌ ನಲ್ಲಿ ಲಭ್ಯವಾಗಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ನಿಗೂಢ ನಿಧಿಯ ವಿಡಿಯೋದ ಅಸಲೀಯತ್ತು ತಿಳಿಯುತ್ತದೆ. ವಿಡಿಯೋದಲ್ಲಿ ನಿಧಿ(ಲೋಹ) ಪತ್ತೆ ಮಾಡುವಂತಹ ಶೋಧಕವನ್ನು ಬಳಸಿಕೊಂಡು ಭೂಮಿಯೊಳಗಿರುವ ನಿಧಿಯ ಇರುವಿಕೆಯನ್ನು ಪತ್ತೆಹಚ್ಚುವಂತೆ ಮಾಡಿ, JCB ಯಂತ್ರದಲ್ಲಿ ನಿಧಿ ಇರುವ ಜಾಗವನ್ನು ಅಗೆಯಲಾಗುತ್ತದೆ. 5 ರಿಂದ 6 ಅಡಿಯಷ್ಟು ಆಳದಲ್ಲಿ ಕೊಪ್ಪರಿಕೆಯೊಂದು ಪತ್ತೆಯಾಗುತ್ತದೆ ಅದನ್ನು ಮೇಲೆ ತಂದು ತೆರೆದಾಗ ಅದರೊಳಗೆ ಹಾವು(ಕೇರೆ ಹಾವು) ಕಾವಲು ಕಾಯುತ್ತಿರುವಂತೆ ಮಾಡಲಾಗಿದೆ. ಹಾವನ್ನು ಹೊರಕಳುಹಿಸಿ ತೆಗೆದಾಗ ಅದರಲ್ಲಿ ಸತ್ತಿರುವ ಕಪ್ಪೆಯೊಂದು ಕಂಡುಬರುತ್ತದೆ ಅದೆಲ್ಲವನ್ನು ಕೆಳಗೆ ಸುರಿದಾಗ ಚಿನ್ನದ ನಾಣ್ಯಗಳು ಮತ್ತು ಚಿನ್ನದ ವಸ್ತುಗಳು ಕಂಡುಬರುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ಮಂಗಳೂರಿನ ಸೆಂಟ್ರಲ್ ಕಾಲೇಜು ಎಂಬ ಹೇಳಿಕೆಯನ್ನು ನೋಡಬಹುದು. ಆದರೆ ವಾಸ್ತವವಾಗಿ ಮಂಗಳೂರಿನಲ್ಲಿ ಸೆಂಟ್ರಲ್ ಕಾಲೇಜ್‌ ಎಂಬುದೇ ಇಲ್ಲ ಹಾಗಾಗಿ ಈ ಸುದ್ದಿ ಸುಳ್ಳು ಎಂದು ಸ್ಪಷ್ಟವಾಗಿದೆ.

ಮೂಲ ವಿಡಿಯೋವನ್ನು ಯಾರು? ಯಾವ ಉದ್ದೇಶಕ್ಕೆ ಮಾಡಿದ್ದಾರೆ ಎಂದು ಪರಿಶೀಲಿಸಲು ಸಾಧ್ಯವಾಗಿಲ್ಲ. ಆದರೆ ಅದೂ ಕೂಡ ನಿಜವಾದ ನಿಧಿ ಅಲ್ಲ, ನಾಟಕೀಯ ವಿಡಿಯೋ ಎಂಬಂತಿದೆ. ಆ ವಿಡಿಯೋ ಚಿತ್ರೀಕರಣಕ್ಕೂ ಮೊದಲೆ ನಿಧಿ ರೂಪದ ವಸ್ತುಗಳನ್ನು ಭೂಮಿಯಲ್ಲಿ ಉದುಗಿಸಿಟ್ಟು, ನಂತರ ನಿಗೂಢ ನಿಧಿಯನ್ನು ಹುಡುಕುವಂತೆ ಮಾಡಿ ಭೂಮಿಯಿಂದ ಹೊರ ತೆಗೆಯುವಂತೆ ಮಾಡಲಾಗಿದ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ನಿಧಿ ಇಷ್ಟು ಸುಲಭವಾಗಿ ಸಿಗಲು ಸಾಧ್ಯವೆ ?

ನಿಗೂಢ ನಿಧಿ ಸಿಕ್ಕರೆ ಯಾರು ಬಿಡ್ತಾರೆ ಹೇಳಿ ? ನಿಧಿ ಸಿಗೋದು ಇಷ್ಟೊಂದು ಸುಲಭವೆ ? ಸಿಗೋದೇ ಆಗಿದ್ರೆ ಪ್ರತಿಯೊಬ್ಬರೂ ಸುಲಭವಾಗಿ ಶ್ರೀಮಂತರಾಗಿ ಹೋಗುತ್ತಿದ್ದರು. ಯಾಕೆಂದರೆ ಯಾರಿಗೂ ಸಿಗಬಾರದು ಅಂತಾನೇ ನಿಧಿಯನ್ನ ಗುಪ್ತ ಜಾಗಗಳಲ್ಲಿ, ಅಂದರೆ ನಿಗೂಢ ಜಾಗಗಳಲ್ಲಿ ಅಡಗಿಸಿ ಇಡುತ್ತಿದ್ದರು ಎಂಬ ನಂಬಿಕೆ ಇದೆ. ಆದರೆ ವಿಡಿಯೋದಲ್ಲಿ ಇರುವ ದೃಶ್ಯಗಳನ್ನು ಗಮನಿಸಿದರೆ 5 ರಿಂದ 6 ಅಡಿ ಜಾಗದಲ್ಲಿ ನಿಗೂಢ  ನಿಧಿಯು ಪತ್ತೆಯಾಗುವುದನ್ನು ಕಾಣಬಹುದು. ಅಂದರೆ ಇಷ್ಟು ಮೇಲ್ಭಾಗದಲ್ಲಿ ನಿಧಿನ್ನು ಇಡುತ್ತಿದ್ದರು ಎಂದರೆ ನಂಬಲು ಸಾಧ್ಯವೆ?

ನಿಧಿಯ ಹೆಸರಿನಲ್ಲಿ ವಂಚನೆ:

ನಿಧಿ ಶೋಧಿಸುತ್ತೇವೆ ಎಂದು ಹೇಳಿಕೊಂಡು ಸ್ವಾಮಿಜಿಗಳಂತೆ ವೇಷ ಹಾಕಿ ಬಂದು ವಂಚಿಸಿರುವ ಹಲವು ನಿದರ್ಶನಗಳನ್ನು ಕಾಣಬಹುದು. ಇತ್ತೀಚೆಗೆ ಹಾಸನದ ತೊಟದ ಮನೆಯಲ್ಲಿ ನಿಧಿ ಹುಡುಕಿಕೊಡುತ್ತೇನೆ ಎಂದು ಸುಳ್ಳು ಹೇಳಿ ವಂಚಿಸಿರುವ ಪ್ರಕರಣ ವರದಿಯಾಗಿದೆ. ಇದಲ್ಲದೆ ನಿಗೂಢ ನಿಧಿಯನ್ನು ಹುಡುಕಲು ಮಾಟ ಮಂತ್ರಗಳ ಹೆಸರಿನಲ್ಲಿ ಮಕ್ಕಳನ್ನು ಬಲಿಕೊಡುವ ನಿದರ್ಶನಗಳು ಕಂಡುಬಂದಿವೆ.

ಜನರ ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಂಡು ನಿಧಿ ಹುಡುಕಿಕೊಡುತ್ತೇವೆ ಎಂದು ತಂತ್ರ ಮಂತ್ರಗಳ ಹೆಸರಿನಲ್ಲಿ ವಂಚಿಸುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಅಂತಹ ಸಂದರ್ಭದಲ್ಲಿ ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ನಿಧಿ ಸಿಕ್ಕಿದೆ ಎಂದು ಯೋಜಿತ ವಿಡಿಯೋಗಳನ್ನು ಮಾಡಿ ಹಂಚಿಕೊಂಡರೆ, ಕೆಲವರು ಇದನ್ನೆ ನಿಜವೆಂದು ನಂಬಿ ಮೌಢ್ಯಕ್ಕೆ ಬೀಳುತ್ತಾರೆ. ಹಾಗಾಗಿ ಇಂತಹ ವಿಡಿಯೊಗಳನ್ನು ನಂಬಬೇಡಿ. ಯಾವುದೇ ನಿಧಿ ಸಿಕ್ಕರೂ ಅದು ಸರ್ಕಾರದ ಸ್ವತ್ತು ಎಂಬ ಕಾನೂನಿದೆ. ನಿಧಿ ಆಸೆಗೆ ಬಲಿಯಾಗಿ ಮೋಸಹೋಗುವ ಮುನ್ನ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಗಾಂಧಿಯ ಈ ಫೋಟೋಗಳ ಬಗ್ಗೆ ನಿಮಗೆಷ್ಟು ಗೊತ್ತು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights