ಫ್ಯಾಕ್ಟ್‌ಚೆಕ್: ಕೆನಡಾದ ಶ್ರೀ ಭಗವದ್ಗೀತಾ ಪಾರ್ಕ್ಅನ್ನು ಧ್ವಂಸಗೊಳಿಸಲಾಗಿದೆ ಎಂಬುದು ಸುಳ್ಳು

ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಇದ್ದ ಟ್ರಾಯರ್ಸ್ ಉದ್ಯಾನವನ್ನು ಕಳೆದ ತಿಂಗಳು ಸೆಪ್ಟೆಂಬರ್ 28ರಂದು ಭಗವದ್ಗೀತೆ ಪಾರ್ಕ್ ಎಂದು ನಾಮಕರಣ ಮಾಡಲಾಗಿತ್ತು. ಆ ಪಾರ್ಕ್ ಅನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ ಎಂದು ಹಲವು ಮುಖ್ಯವಾಹಿನಿಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.

ಮುಖ್ಯವಾಗಿ ಪ್ರಜಾವಾಣಿ, ವಿಜಯಕರ್ನಾಟಕ, ಏಷಿಯಾ ನೆಟ್‌ ಸುವರ್ಣ, ಒನ್‌ ಇಂಡಿಯಾ, ಉದಯವಾಣಿ ಸೇರಿದಂತೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಭಗವದ್ಗೀತೆ ಪಾರ್ಕ್ ಅನ್ನು ದ್ವಂಸಗೊಳಿಸಲಾಗಿದೆ ಎಂದು ವರದಿ ಮಾಡಿದ್ದವು. ಅಲ್ಲದೆ ಈ ವಿಧ್ವಂಸಕ ಕೃತ್ಯದ ವರದಿಗಳನ್ನು ಖಂಡಿಸಿದ ಭಾರತೀಯ ಹೈಕಮಿಷನ್ ಅಪರಾಧಿಗಳ ವಿರುದ್ಧ ತ್ವರಿತ ಕ್ರಮಕ್ಕೆ ಆಗ್ರಯಿಸಿತ್ತು.

ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲು ಭಾರಿ ವೈರಲ್ ಆಗಿತ್ತು, ಇದನ್ನು ಹಲವರು ಹಂಚಿಕೊಳ್ಳುವ ಮೂಲಕ ಇದರ ಸತ್ಯಾಸತ್ಯತೆಗಳನ್ನು ತಿಳಿಸುವಂತೆ ಏನ್‌ಸುದ್ದಿ.ಕಾಂ ವಾಟ್ಸಾಪ್‌ಗೆ ವಿನಂತಿ ಸಂದೇಶಗಳನ್ನು ಕಳುಹಿಸಿದ್ದರು. ಹಾಗಾಗಿ ಈ ಸುದ್ದಿ ಹಿಂದಿರುವ ವಾಸ್ತವ ಏನೆಂದು ಪರಿಶಿಲಿಸೋಣ.

ಫ್ಯಾಕ್ಟ್‌ಚೆಕ್ : 

ಈ ಸುದ್ದಿಗೆ ಸಂಬಂಧಿಸಿದಂತೆ ಗೂಗಲ್ ಸರ್ಚ್ ಮಾಡಿದಾಗ ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಭಗವದ್ಗೀತೆ ಪಾರ್ಕ್ ಎಂದು ಹೊಸದಾಗಿ ನಾಮಕರಣಗೊಂಡಿದ್ದ ಉದ್ಯಾನವನ್ನು ದ್ವಂಸಗೊಳಿಸಲಾಗಿಲ್ಲ ಇದೊಂದು ಸುಳ್ಳು ಸುದ್ದಿ ಎಂದು ಬೂಮ್ ವರದಿ ಮಾಡಿದೆ.

BOOM ಬ್ರಾಂಪ್ಟನ್‌ನಲ್ಲಿನ ಉದ್ಯಾನವನದ ಸ್ಥಳೀಯರೊಂದಿಗೆ ಮಾತನಾಡುತ್ತಾ, ವೈರಲ್ ಫೋಟೋಗಳಲ್ಲಿ ಎರಡು ಬೇರೆ ಬೇರೆ ನಾಮಫಲಕಗಳಿದ್ದು ಅದರಲ್ಲಿ ಒಂದು ಖಾಲಿ ನಾಮಫಲಕದ ಫೋಟೋವು ಉದ್ಯಾನದಲ್ಲಿರುವ ಶಾಶ್ವತ ಫಲಕದ ಹಿಂಭಾಗದ ಫೋಟೊ ಎಂದು ಖಚಿತಪಡಿಸಿದ್ದಾರೆ, ಅದು ಸೋಮವಾರದವರೆಗೆ ಯಾವುದೇ ಬರಹವನ್ನು ಹೊಂದಿರಲಿಲ್ಲ ಎಂದು ವರದಿ ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಸುದ್ದಿ ವರದಿಗಳನ್ನು ಗಮನಿಸಿದಾಗ ಅವುಗಳಲ್ಲಿ ಬಹುತೇಕ ವರದಿಗಳು ಭಗವದ್ಗೀತಾ ಉದ್ಯಾನವನದಲ್ಲಿ  ವಿಧ್ವಂಸಕ ಕೃತ್ಯವನ್ನು ಖಂಡಿಸಿ ಭಾರತೀಯ ಹೈಕಮಿಷನ್ ಮಾಡಿದ ಟ್ವೀಟ್ ಅನ್ನು ಮಾತ್ರ ಉಲ್ಲೇಖಿಸಿ ವರದಿಗಳನ್ನು ಮಾಡಿದ್ದವು ಆದರೆ ಕೃತ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರಗಳನ್ನಾಗಲಿ, ಪುರಾವೆಗಳನ್ನಾಗಲಿ ಉಲ್ಲೇಖ ಮಾಡಿರಲಿಲ್ಲ ಎಂಬ ಅಂಶವನ್ನು ಮುಖ್ಯವಾಗಿ ಬೂಮ್  ವರದಿ ಮಾಡಿದೆ.

ಕೆನಡಾದಲ್ಲಿ ಭಗವದ್ಗೀತೆ ಉದ್ಯಾನವನದ ಫಲಕವನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ, ಈ ಸುದ್ದಿಯನ್ನು ತಳ್ಳಿ ಹಾಕಿರುವ ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್, ಇದು ಸುಳ್ಳು ಸುದ್ದಿ. ಭಗವದ್ಗೀತೆ ಉದ್ಯಾನದಲ್ಲಿ ಸ್ಥಾಪಿಸಲಾದ ಖಾಲಿ ಫಲಕವನ್ನು ಬಿಲ್ಡರ್ ಸರಿ ಮಾಡಿದ್ದಾರೆ. ಅದರಲ್ಲಿ ಇನ್ನೂ ಏನನ್ನೂ ಬರೆದಿಲ್ಲ ಎಂದಿದ್ದಾರೆ.

3.75 ಎಕರೆಗಳಷ್ಟು ವಿಸ್ತಾರವಾಗಿರುವ ಈ ಉದ್ಯಾನವನದಲ್ಲಿ ಕೆಲವು ಹಿಂದೂ ದೇವತೆಗಳ ಪ್ರತಿಮೆಗಳು ಮತ್ತು ಸಾರಥಿಗಳಾದ ಕೃಷ್ಣಾರ್ಜುನರ ಪ್ರತಿಮೆಗಳನ್ನು ಇರಿಸಲಾಗಿತ್ತು. ಈ ಭಗವದ್ಗೀತೆ ಪಾರ್ಕ್ ಫಲಕವನ್ನು ಧ್ವಂಸಗೊಳಿಸಲಾಗಿದೆ ಎಂಬ ಗೊಂದಲದ ಸುದ್ದಿಯನ್ನು ಹರಡಲಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದುದು ಎಂದು ಮೇಯರ್ ಪ್ಯಾಟ್ರಿಕ್ ಬ್ರೌನ್ ಟ್ವೀಟ್ ಮಾಡಿದ್ದಾರೆ. ಭಗವದ್ಗೀತೆ ಪಾರ್ಕ್ ಸ್ಥಾಪನೆಯ ಸಮಯದಲ್ಲಿ ಫಲಕವು ಹಾನಿಗೊಳಗಾಗಿದೆ. ನಿನ್ನೆಯಷ್ಟೇ ಹೊಸ ಬೋರ್ಡ್​ ಹಾಕಲಾಗಿದೆ. ಅದನ್ನು ತಾತ್ಕಾಲಿಕವಾಗಿ ಪಾರ್ಕ್​ನಲ್ಲಿ ಹಾಕಲಾಗಿದೆ ಎಂದಿದ್ದಾರೆ.

ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದ ಪೋಟೋಗಳಲ್ಲಿ ಇರುವುದು ಒಂದೇ ನಾಮಫಲಕವಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಇದು ಒಂದು ಚಿತ್ರದಲ್ಲಿ ನೀಲಿ ಬಣ್ಣದ ತಳ ಹಾಸಿನ ಮೇಲೆ ಕಂಡುಬಂದರೆ, ಇನ್ನೊಂದು ಚಿತ್ರದಲ್ಲಿ ಹಸಿರು ಹುಲ್ಲುಹಾಸಿನ ಮೇಲೆ ಸೈನ್ಬೋರ್ಡ್ ಕಂಡುಬರುತ್ತದೆ.

ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಉದ್ಘಾಟನಾ ಸಮಾರಂಭದಲ್ಲಿ ಬಳಸಿದ ತಾತ್ಕಾಲಿಕ ಸೈನ್‌ಬೋರ್ಡ್‌ನ ಫೋಟೋವನ್ನು ಟ್ವೀಟ್ ಮಾಡಿದೆ ಮತ್ತು ಅದನ್ನು ಶಾಶ್ವತ ಸೈನ್‌ಬೋರ್ಡ್‌ನ ಹಿಂಭಾಗದ ಚಿತ್ರದೊಂದಿಗೆ ಹಂಚಿಕೊಂಡಿದ್ದೆ.

ಕೆನಡಾದಲ್ಲಿ ನೆಲೆಸಿರುವ ಭಾರತೀಯರಿಗೆ ಭಾರತ ನೀಡಿದ ಸಲಹೆ ಏನು?
“ಉದ್ಯಾನದಲ್ಲಿ ಯಾವುದೇ ಶಾಶ್ವತ ಗುರುತು ಅಥವಾ ರಚನೆಯನ್ನು ಧ್ವಂಸಗೊಳಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಕಳೆದ ತಿಂಗಳು, ಭಾರತ ಕೆನಡಾದಲ್ಲಿರುವ ತನ್ನ ನಾಗರಿಕರಿಗೆ ಜಾಗರೂಕರಾಗಿರಲು ಸಲಹೆಯನ್ನು ನೀಡಿತ್ತು, “ದ್ವೇಷ ಅಪರಾಧ, ಕೋಮು ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳೇ ಇದಕ್ಕೆ ಕಾರಣ” ಎಂದು ಭಾರತ ಹೇಳಿತ್ತು.

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: Parle-G ಬಿಸ್ಕೆಟ್‌ನ ಕವರ್ ಫೋಟೋದಲ್ಲಿರುವ ಮಗು ಚಿತ್ರ ಸುಧಾಮೂರ್ತಿಯವರದ್ದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights