ಫ್ಯಾಕ್ಟ್ಚೆಕ್: ಗರ್ಭಿಣಿಯರು ಪರಂಗಿ ಹಣ್ಣು ತಿಂದರೆ ಗರ್ಭಪಾತವಾಗುತ್ತದೆಯೇ? ತಜ್ಞರು ಏನೇಳುತ್ತಾರೆ?
ಗರ್ಭಿಣಿಯರಿಗೆ ಎಲ್ಲ ರೀತಿಯ ಪೋಷಕಾಂಶಗಳ ಅಗತ್ಯ ಇರುವುದರಿಂದ ಎಲ್ಲ ಬಗೆಯ ಹಣ್ಣುಗಳನ್ನು ತಿನ್ನಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಆದರೆ ಹಲವರು ಅದರಲ್ಲೂ ವಯಸ್ಸಾದ ಹಿರಿಯರಿದ್ದರೆ, ಗರ್ಭಿಣಿಯರು ಪಪ್ಪಾಯಿ ಹಣ್ಣನ್ನು ತಿನ್ನಬಾರದು ಎಂದು ಹೇಳುತ್ತಾರೆ.

ಇಂತಹದೇ ಪೋಸ್ಟ್ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ಇದ್ದಾಗ ಪಪ್ಪಾಯಿ ತಿನ್ನುವುದು ಅಸುರಕ್ಷಿತವಾಗಿದ್ದು, ಗರ್ಭಪಾತಕ್ಕೆ ಕಾರಣವಾಗಬಹುದು ಎಂದು Instagram ನಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಗರ್ಭಿಣಿಯರು ಪಪ್ಪಾಯಿ ಹಣ್ಣು ತಿನ್ನುವುದರಿಂದ ಗರ್ಭಪಾತಕ್ಕೆ ಕಾರಣವಾಗುವುದೇ? ವೈದ್ಯರು ಏನು ಹೇಳುತ್ತಾರೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಪರಂಗಿ ಹಣ್ಣು ಅಥವಾ ಪಪ್ಪಾಯಿ ಎಲ್ಲಾ ಸೀಸನ್ಗಳಲ್ಲೂ ಯಥೇಚ್ಛವಾಗಿ ಸಿಗುವ ಹಣ್ಣು. ಇದರಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳಿವೆ. ಪ್ರತಿಯೊಬ್ಬರ ದೇಹಕ್ಕೂ ಪೋಷಕಾಂಶಗಳು ತುಂಬಾ ಮುಖ್ಯ. ಮುಖ್ಯವಾಗಿ ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಯುತ ಆಹಾರ ಸೇವನೆ ತುಂಬಾ ಅಗತ್ಯ. ಅಂತಹ ಸಮಯದಲ್ಲಿ ಯಾವ ರೀತಿಯ ಆಹಾರವನ್ನು ತೆಗೆದುಕೊಳ್ಳಬೇಕು? ಏನು ತಿನ್ನಬೇಕು ಮತ್ತು ಯಾವುದು ತಿನ್ನಬಾರದು ಎಂಬುದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಇದಕ್ಕೆ ವೈದ್ಯರು ಏನು ಹೇಳುತ್ತಾರೆ ಎಂದು ನೋಡೋಣ.
ಗರ್ಭಾವಸ್ಥೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಗರ್ಭಪಾತವಾಗುತ್ತದೆ ಎಂಬ ಕಲ್ಪನೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವಾಸ್ತವವಾಗಿ, ಪಪ್ಪಾಯಿಯು ಪೌಷ್ಟಿಕಾಂಶದ ಹಣ್ಣಾಗಿದ್ದು, ಇದು ವಿಟಮಿನ್ಗಳು, ಖನಿಜಗಳು ಮತ್ತು ಫೈಬರ್ನ ಉತ್ತಮ ಮೂಲವನ್ನು ಒಳಗೊಂಡಂತೆ ಗರ್ಭಿಣಿ ಮಹಿಳೆಯರಿಗೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ತಜ್ಞ ವೈದ್ಯರ ಪ್ರಕಾರ
ಗರ್ಭಾವಸ್ಥೆಯ ಸಂದರ್ಭದಲ್ಲಿ ಹೆಚ್ಚು ಸದ್ದು ಮಾಡುವ ಹಣ್ಣೆಂದರೆ ಅದು ಪಪ್ಪಾಯಿ. ಪಪ್ಪಾಯಿ ಹಣ್ಣು ತಿನ್ನುವುದರಿಂದ ಗರ್ಭಿಣಿಯರು ತೊಂದರೆಗೆ ಒಳಗಾಗುತ್ತಾರೆ ಎಂಬ ತಪ್ಪು ಕಲ್ಪನೆಗಳಿವೆ. ಆದರೆ ಮಾಗಿದ ಅಥಾವ ಚೆನ್ನಾಗಿ ಹಣ್ಣಾದ ಪಪ್ಪಾಯಿಯನ್ನು ಸೇವಿಸುವುದರಿಂದಯ ಗರ್ಭಿಣಿ ಮಹಿಳೆಯರಿಗೆ ಯಾವುದೇ ತೊಂದೆರೆ ಸಂಭವಿಸುವುದಿಲ್ಲ ಆದರೆ ಮೊದಲು ಮೂರು ತಿಂಗಳು ಪರಂಗಿ ಕಾಯಿ ಜೊತೆಗೆ ಎಳ್ಳು ಮತ್ತು ಟೀಯನ್ನು ಸೇವಿಸಬಾರದು ಎಂಬ ಸಲಹೆಯನ್ನು ನೀಡುತ್ತೇವೆ ಎನ್ನುತ್ತಾರೆ ಬೆಂಗಳೂರಿನ ರಾಜಶೇಖರ್ ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ. ಶುಭುಧ.

ಹಸಿ ಪಪ್ಪಾಯಿಯು ಅಥವಾ ಸಂಪೂರ್ಣ ಹಣ್ಣಾಗದ ಪಪ್ಪಾಯದಲ್ಲಿರುವ ಎಂಜೈಮ್ಗಳು ಗರ್ಭಕೋಶದ ಕಾಂಟ್ರ್ಯಾಕ್ಷನ್ಗೆ ಕಾರಣವಾಗುತ್ತವೆ. ಆದ್ದರಿಂದ ಗರ್ಭಾವಸ್ಥೆಯ ಮೊದಲು ಮೂರು ತಿಂಗಳು ಪರಂಗಿ ಕಾಯಿಯನ್ನು ತಿನ್ನದಿರುವುದು ಉತ್ತಮ ಎಂಬ ಸಲಹೆಯನ್ನು ನೀಡುತ್ತೇವೆ. ಪರಂಗಿ ಕಾಯಿ ಅಥವಾ ಹಣ್ಣಾಗದ ಪರಂಗಿಯಲ್ಲಿ ಪ್ಯಾಪೈನ್ ಎಂಬ ರಾಸಾಯನಿಕ ಅಂಶ ಇದೆ. ಹೀಗಾಗಿ ಗರ್ಭಿಣಿಯರು ಇದನ್ನು ಸೇವಿಸಿದರೆ, ಗರ್ಭಕೋಶದಲ್ಲಿ ಮಗುವಿನ ಸುತ್ತಲಿನ ಪೊರೆಗಳನ್ನು ದುರ್ಬಲಗೊಳಿಸುತ್ತದೆ. ಪರಂಗಿ ಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಗರ್ಭಾಶಯದ ಮೇಲೆ ಒತ್ತಡ ಉಂಟಾಗಿ ಗರ್ಭಪಾತವಾಗುವ ಸಂಭವವಿದೆ ಆದರೆ ನನಗೆ ತಿಳಿದ ಹಾಗೆ ಇಲ್ಲಿಯವರೆಗೆ ಪಪ್ಪಾಯಿ ಬಳಸಿದ ಕಾರಣಕ್ಕೆ ಗರ್ಭಪಾತವಾದ ಪ್ರಕರಣ ನನ್ನ ಅನುಭವಕ್ಕೆ ಬಂದಿಲ್ಲ ಎನ್ನುತ್ತಾರೆ ವೈದ್ಯೆ ಶುಭುದ.
ಇನ್ನೊಂದೆಡೆ ಮಾಗಿದ ಅಥವಾ ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಗರ್ಭಾವಸ್ಥೆಯಲ್ಲಿ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ ಹಣ್ಣಾದ ಪಪ್ಪಾಯಿಯಲ್ಲಿ ಫೋಲೇಟ್, ಫೈಬರ್, ಕೋಲೀನ್, ವಿಟಮಿನ್ ಎ, ಬಿ ಮತ್ತು ಸಿ ಇದೆ. ಇದರಲ್ಲಿ ಬೀಟಾ ಕ್ಯಾರೋಟಿನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಗರ್ಭಿಣಿಯರಿಗೆ ಅಗತ್ಯವಾದ ವಿಟಮಿನ್ಗಳಿವೆ. ಆದರೆ ಮುಂಜಾಗ್ರತಾ ಕ್ರಮವಾಗಿ ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಮಾಗಿದ ಪಪ್ಪಾಯಿಯನ್ನು ತೆಗೆದುಕೊಳ್ಳದಿರುವುದೇ ಒಳ್ಳೆಯದು ಎನ್ನುತ್ತಾರೆ ವೈದ್ಯರು.
ಗರ್ಭಿಣಿಯರು ಪಪ್ಪಾಯಿ ಹಣ್ಣನ್ನು ಎಷ್ಟು ತಿನ್ನಬೇಕು
ಗರ್ಭಿಣಿಯರು ವಾರಕ್ಕೆ ಎರಡು ಅಥವಾ ಮೂರು ಬಾರಿ ಒಂದು ಕಪ್ ಅಥವಾ 100 ಗ್ರಾಂನಷ್ಟು ಪರಂಗಿ ಹಣ್ಣನ್ನು ತಿನ್ನಬಹುದು. ಆದರೆ ಮಲಗುವ ಮುನ್ನ ಇದನ್ನು ತೆಗೆದುಕೊಳ್ಳಬಾರದು. ಇದರಿಂದ ಅಜೀರ್ಣವಾಗುವ ಸಾಧ್ಯತೆ ಇದೆ. ಮಾಗಿದ ಪಪ್ಪಾಯಿಯನ್ನು ಹೆರಿಗೆಯ ನಂತರವೂ ಸೇವಿಸಬಹುದು. ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು, ಹಾಲಿನ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸೂಕ್ತ ಪ್ರಮಾಣದಲ್ಲಿ ಪರಂಗಿ ಹಣ್ಣನ್ನು ಗರ್ಭಿಣಿಯರು ತಿನ್ನುವುದರಿಂದ ಯಾವುದೇ ಅಪಾಯವಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಇದನ್ನು ತಿನ್ನದಿರುವುದೇ ಒಳ್ಳೆಯದು. ಒಂದು ವೇಳೆ ಈ ಹಣ್ಣನ್ನು ತಿನ್ನುವ ಬಗ್ಗೆ ನಿಮಗೆ ಇನ್ನೂ ಗೊಂದಲವಿದ್ದರೆ, ನಿಮ್ಮ ಆಪ್ತ ವೈದ್ಯರ ಸಲಹೆಯ ಮೇರೆಗೆ ಸೇವಿಸಿ.
ಕೃಪೆ: The Healthy Indian Project
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: 2019ರ ಹಳೆಯ ದೃಶ್ಯಗಳನ್ನು ಟರ್ಕಿ ಮತ್ತು ಸಿರಿಯಾದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೆ

