FACT CHECK | ಚೀನಾದಲ್ಲಿ ನಡೆದ ಬೆಂಕಿ ಆಟವನ್ನು ಉತ್ತರಪ್ರದೇಶದ ಮಹಾಕುಂಭಮೇಳದ್ದು ಎಂದು ತಪ್ಪಾಗಿ ಹಂಚಿಕೆ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭದ ವ್ಯಕ್ತಿಯೊಬ್ಬರು ಬೆಂಕಿಯಲ್ಲಿ ಭಯಾನಕ ಆಟವನ್ನು ಆಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಬಳಕೆದಾರರು ಇದನ್ನು ಪ್ರಯಾಗ್‌ರಾಜ್‌ನಿಂದ ಎಂದು ಹೇಳುತ್ತಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯು ಕಪ್ಪು ಬಟ್ಟೆ ಮತ್ತು ಕೆಂಪು ನಿಲುವಂಗಿಯನ್ನು ಧರಿಸಿ ರಸ್ತೆಯಲ್ಲಿ ನಿಂತಿದ್ದಾನೆ. ಸುತ್ತಲೂ ಜನರು ನಿಂತಿದ್ದಾರೆ. ವ್ಯಕ್ತಿಯು ಇದ್ದಕ್ಕಿದ್ದಂತೆ ರಾಡ್ ತರಹದ ವಸ್ತುವನ್ನು ಎತ್ತುತ್ತಾನೆ. ಈ ರಾಡ್‌ನ ಎರಡೂ ತುದಿಗಳಲ್ಲಿ ಅಳವಡಿಸಲಾದ ಕಬ್ಬಿಣದ ಬಲೆಗಳಲ್ಲಿ ಪ್ರಕಾಶಮಾನವಾದ ಬೆಂಕಿಯು ಗೋಚರಿಸುತ್ತದೆ. ಆ ವ್ಯಕ್ತಿ  ರಾಡ್ ಅನ್ನು ಅಲುಗಾಡಿಸುತ್ತಲೇ ನಡೆಯುತ್ತಾನೆ. ಇದರಿಂದಾಗಿ ಬೆಂಕಿ ಮತ್ತಷ್ಟು ಹೊತ್ತಿ ಉರಿದು ಒಂದು ಕ್ಷಣ ಆ ವ್ಯಕ್ತಿಯೇ ಮಾಯವಾದಂತೆ ಭಾಸವಾಗುತ್ತದೆ.

ಎಕ್ಸ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಹಾ ಕುಂಭ 2025 ನಿಮ್ಮ ಪ್ರಯಾಗರಾಜ್‌ನಲ್ಲಿ. ಪ್ರಯಾಗ್‌ರಾಜ್‌ನಲ್ಲಿ ಈ ಬಾರಿಯ ಕುಂಭವು ಐತಿಹಾಸಿಕವಾಗಿದೆ. ಆದ್ದರಿಂದ ಈ ಮಹಾಕುಂಭದಲ್ಲಿ ಭಾಗವಹಿಸಲು ಪ್ರಯತ್ನಿಸಿ ಮತ್ತು ಕೆಲವು ಅನನ್ಯ ನೆನಪುಗಳನ್ನು ನಿಮ್ಮದಾಗಿಸಿ’’ ಎಂದು ಬರೆದಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಅಸಲಿಗೆ ಈ ವಿಡಿಯೋ ಭಾರತದ್ದು ಅಥವಾ ಪ್ರಯಾಗ್ರಾಜ್​ದು ಅಲ್ಲ, ಈ ವಿಡಿಯೋ ಚೀನಾದಿಂದ ಬಂದಿದೆ. ವೈರಲ್ ವಿಡಿಯೋದಲ್ಲಿ ಕೆಲವು ಬೋರ್ಡ್‌ಗಳು ಚೀನೀ ಭಾಷೆಯಲ್ಲಿ ಬರೆದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ ಮತ್ತು ಅಕ್ಟೋಬರ್ 2024ರಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಇದು ಚೀನಾದ ಸಾಂಸ್ಕೃತಿಕ ಪದ್ಧತಿಯಾಗಿದೆ ಎಂದು ಈ ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಹುವೋಹು ಅಥವಾ ಫೈರ್ ಪಾಟ್ ಪ್ರದರ್ಶನ ಎಂದು ಕರೆಯಲಾಗುತ್ತದೆ.

ಇದನ್ನು ನೋಡಿದ ನಮಗೆ ಈ ವಿಡಿಯೋ ಚೀನಾದೊಂದಿಗೆ ಏನಾದರೂ ಸಂಪರ್ಕ ಹೊಂದಿರಬಹುದೆಂದು ಅನಿಸಿತು. ಹೀಗಾಗಿ ವಿಡಿಯೋದಲ್ಲಿ ಕಂಡುಬರುವ ಕೆಂಪು ಬಣ್ಣದ ಬೋರ್ಡ್‌ನಲ್ಲಿ ಬರೆದ ಪಠ್ಯವನ್ನು ನಾವು ಗೂಗಲ್ ಟ್ರಾನ್ಸ್​ಲೇಟರ್ ಸಹಾಯದಿಂದ ಅನುವಾದಿಸಿದಾಗ. “ಯುವಾನ್ ಗುವಾನ್ ಆಫ್ ಜಿಯುಚೆಂಗ್” ಎಂದು ಇದರಲ್ಲಿ ಬರೆಯಲಾಗಿದೆ. ಇನ್ನು ವಿಡಿಯೋದಲ್ಲಿ ಕಂಡುಬರುವ ಹೋರ್ಡಿಂಗ್‌ನಲ್ಲಿ, ಅದನ್ನು ಚೈನೀಸ್ ಭಾಷೆಯಲ್ಲಿ ಬರೆಯಲಾಗಿದೆ ಇದು “ಹ್ಯಾಪಿ ಮಾರ್ಕೆಟ್” ಎಂದಾಗಿದೆ.

ವಿಡಿಯೋದಲ್ಲಿ ತುಂಬಾ ಎತ್ತರದ ಕಟ್ಟಡಗಳು ಎಲ್ಲೂ ಗೋಚರಿಸುವುದಿಲ್ಲ. ಅಲ್ಲದೇ ಈ ಸ್ಟಂಟ್ ನಡೆಸುತ್ತಿರುವ ರಸ್ತೆ ಸಾಕಷ್ಟು ಅಗಲವಾಗಿದೆ. ಇದನ್ನು ನೋಡಿದರೆ ಇದು ಜನಸಾಂದ್ರತೆಯ ಪ್ರದೇಶವಲ್ಲ, ನಗರದ ಅಥವಾ ಪಟ್ಟಣದ ಹೊರ ಭಾಗ ಎಂದು ತೋರುತ್ತದೆ. ಈ ಎಲ್ಲಾ ವಿಷಯಗಳನ್ನು ಆಧರಿಸಿ, ಈ ವಿಡಿಯೋ ಚೀನಾದ್ದು ಆಗಿರುವ ಸಾಧ್ಯತೆಯಿದೆ ಎಂದು ಹೇಳಬಹುದು. ಆದಾಗ್ಯೂ, ಈ ವಿಡಿಯೋ ಚೀನಾದ ಯಾವ ಸ್ಥಳದಿಂದ ಬಂದಿದೆ ಎಂಬುದನ್ನು ನಾವು ಖಚಿತಪಡಿಸಲು ಸಾಧ್ಯವಾಗಲಿಲ್ಲ.

‘ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್’ (ಸಿಜಿಟಿಎನ್) ವರದಿಯ ಪ್ರಕಾರ, ಬೆಂಕಿ ಪಾತ್ರೆ (ಫೈರ್ ಪಾಟ್) ಪ್ರದರ್ಶನವನ್ನು ಪ್ರದರ್ಶಿಸುವ ಕಲಾವಿದರು ಬೆಂಕಿ ನಿರೋಧಕ ಬಟ್ಟೆಗಳನ್ನು ಧರಿಸುತ್ತಾರೆ, ಅಂದರೆ ಬೆಂಕಿಗೆ ತುತ್ತಾಗದ ಬಟ್ಟೆಗಳನ್ನು ಧರಿಸುತ್ತಾರೆ. ಅವರು ಕಬ್ಬಿಣದ ಬಲೆಗಳಲ್ಲಿ ಸುತ್ತುವರಿದ ಸುಡುವ ಕಲ್ಲಿದ್ದಲಿನ ತುಂಡುಗಳನ್ನು ಅಲುಗಾಡಿಸುತ್ತಾರೆ, ಇದರಿಂದಾಗಿ ಕಿಡಿಗಳು ಹೊರಹೊಮ್ಮುತ್ತವೆ. ಈ ಸಂಪ್ರದಾಯವು ಚೀನಾದಲ್ಲಿ ಬಹಳ ಹಿಂದಿನಿಂದಲೂ ಇದೆ. ಇದು ಚಿಂಗ್ ರಾಜವಂಶದ (1644-1911) ಕಾಲದಿಂದಲೂ ನಡೆದುಕೊಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭದಲ್ಲಿ ವ್ಯಕ್ತಿಯೊಬ್ಬರು ಬೆಂಕಿಯಲ್ಲಿ ಆಟವನ್ನು ಆಡುತ್ತಿರುವ ವಿಡಿಯೋ ಎಂದು ಚೀನಾದಲ್ಲಿ ನಡೆಯುವ ಸಾಂಸ್ಕೃತಿಕ ಹಬ್ಬದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರೇಷನ್ ಕಾರ್ಡ್‌ನಲ್ಲಿ ಹೆಸರು ತಪ್ಪಾಗಿ ಮುದ್ರಿಸಿದಕ್ಕೆ ಅಧಿಕಾರಿಗಳ ಬಳಿ ನಾಯಿಯಂತೆ ‘ಬೌ ಬೌ’ ಎಂದು ಬೊಗಳಿದ ಘಟನೆ ಇತ್ತೀಚಿನದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights