FACT CHECK | 2015ರ ನೇಪಾಳದ ಭೂಕಂಪನದ ಹಳೆಯ ವಿಡಿಯೋವನ್ನು ಟಿಬೆಟ್‌ನದ್ದು ಎಂದು ತಪ್ಪಾಗಿ ಹಂಚಿಕೆ

ಭೂಕಂಪದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಮುಖ್ಯರಸ್ತೆಯೊಂದ ವೃತ್ತದಲ್ಲಿ ಭೂಮಿ ಕಂಪಿಸುವಾಗ ಜನರು ಭಯಭೀತರಾಗಿ ಹೋಡಿ ರಕ್ಷಣೆಗಾಗಿ ನೆಲದಲ್ಲಿ ಕೂರುವುದನ್ನು ನೋಡಬಹುದು. ಇದನ್ನು ನೇಪಾಳದಲ್ಲಿ ಜನವರಿ 7 ರಂದು ಸಂಭವಿಸಿದ ಭೂಕಂಪದ ವೀಡಿಯೊ ಎಂದು ಹೇಳಲಾಗಿದೆ.

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಜನವರಿ 7, 2025 ರಂದು ಸಿಸಿಟಿವಿ ದೃಶ್ಯಾವಳಿಯ ವೀಡಿಯೊವನ್ನು ಹಂಚಿಕೊಂಡು, ‘‘ನೇಪಾಳದಲ್ಲಿ 7.0 ತೀವ್ರತೆಯ ಭೂಕಂಪ, ದೆಹಲಿಯಿಂದ ಪಾಟ್ನಾದ ವರೆಗೂ ಪರಿಣಾಮ’’ ಎಂದು ಬರೆದುಕೊಂಡಿದ್ದಾರೆ. ಇದೇ ವೀಡಿಯೊ ಯೂಟ್ಯೂಬ್, ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ನೆಪಾಳದಲ್ಲಿ ಸಂಭವಿಸಿದ ಭೂಕಂಪನದ ವಿಡಿಯೋ ಎಂದು ಹಳೆಯ ಸಂಬಂಧವಿಲ್ಲದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಫೇಕ್ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ಹಾಗಾಗಿ ಈ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಿದಾಗ, ಇದೂ ಕೂಡ ಫೇಕ್‌ ಎಂದು ತಿಳಿದುಬಂದಿದೆ.

ವಾಸ್ತವವಾಗಿ, ಈ ವೈರಲ್ ವೀಡಿಯೊಕ್ಕೂ ಜನವರಿ 7 ರಂದು ಸಂಭವಿಸಿದ ಭೂಕಂಪಕ್ಕೂ ಯಾವುದೇ ಸಂಬಂಧವಿಲ್ಲ. ಇದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ 2015 ರಲ್ಲಿ ಸಂಭವಿಸಿದ ಭೂಕಂಪವಾಗಿದೆ.

ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 30, 2015 ರಲ್ಲಿ, ಯುರೋ ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದು ಲಭ್ಯವಾಗಿದೆ. “ಇನ್‌ಕ್ರೆಡಿಬಲ್ ಸಿಸಿಟಿವಿ: ನೇಪಾಳದಲ್ಲಿ 7.9 ತೀವ್ರತೆಯ ಭೂಕಂಪ ಸಂಭವಿಸಿದೆ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಏಪ್ರಿಲ್ 30, 2015 ರಂದು, ನೇಪಾಳದ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ ಭೂಕಂಪ ಸಂಭವಿಸಿದೆ. ತ್ರಿಪುರೇಶ್ವರ್ ಸ್ಟ್ರೀಟ್‌ನಲ್ಲಿ ಈ ದೃಶ್ಯಗಳನ್ನು ತೆಗೆಯುವಾಗ, ಭೂಕಂಪದ ತೀವ್ರತೆ 7.9 ಆಗಿತ್ತು. ಭೂಕಂಪದ ತೀವ್ರತೆಗೆ ಅಲ್ಲಿದ್ದ ಹಳೆಯ ಕಂಬವೊಂದು ಕುಸಿದು ಬಿದ್ದಿದೆ’’ ಎಂದು ಹೇಳಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಕೀವರ್ಡ್ ಮೂಲಕ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಏಪ್ರಿಲ್ 30, 2015 ರಂದು ಪ್ರಕಟಿಸಲಾದ ದಿ ಗಾರ್ಡಿಯನ್‌ನ ಸುದ್ದಿ ವರದಿಯನ್ನು ನೋಡಿದ್ದೇವೆ. ವರದಿಯಲ್ಲಿ ಇದೇ ವೈರಲ್ ವೀಡಿಯೊವನ್ನು ಕಾಣಬಹುದು. ‘‘ಈ ಘಟನೆ ನೈಋತ್ಯ ಕಠ್ಮಂಡುವಿನ ತ್ರಿಪುರೇಶ್ವರ್ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದ ಕ್ಷಣವನ್ನು ತೋರಿಸುತ್ತದೆ. 7,879 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ’’ ಎಂದು ಹೇಳಿದೆ.

ಹಾಗೆಯೆ ಇಂಡಿಯಾ ಟುಡೇ ಕೂಡ ವೈರಲ್ ವಿಡಿಯೋ ಸ್ಕ್ರೀನ್ ಶಾಟ್​ನೊಂದಿಗೆ 30 ಏಪ್ರಿಲ್ 2015 ರಂದು ಪ್ರಕಟಿಸಿದ ವರದಿಯನ್ನು ನಾವು ನೋಡಿದ್ದೇವೆ. ವರದಿಯ ಪ್ರಕಾರ, ‘‘ನೇಪಾಳದ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ ಸಂಭವಿಸಿದ ಭೂಕಂಪನವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕೃತಿಯ ವಿಕೋಪಕ್ಕೆ ಅನೇಕರು ಸಾವನ್ನಪ್ಪಿದ್ದಾರೆ, ಆಸ್ತಿ-ಪಾಸ್ತಿಗಳು ನಾಶವಾಗಿವೆ’’ ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ 2015 ರಲ್ಲಿ ಸಂಭವಿಸಿದ ಭೂಕಂಪದ ವಿಡಿಯೋವನ್ನು, ಇತ್ತೀಚೆಗೆ ಜನವರಿ 7, 2025 ರಂದು ನೇಪಾಳದ ಗಡಿಭಾಗದಲ್ಲಿ ಸಂಭವಿಸಿದ ಭೂಕಂಪನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚೀನಾದಲ್ಲಿ ನಡೆದ ಬೆಂಕಿ ಆಟವನ್ನು ಉತ್ತರಪ್ರದೇಶದ ಮಹಾಕುಂಭಮೇಳದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights