ಫ್ಯಾಕ್ಟ್‌ಚೆಕ್: ಹಿಂದೂಗಳ ರ್‍ಯಾಲಿ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹಳೆಯ ವಿಡಿಯೊ ಹಂಚಿಕೆ

ಮಹಾರಾಷ್ಟ್ರದಲ್ಲಿ ಹಿಂದೂ ರ್‍ಯಾಲಿಗೆ ಮುಸ್ಲಿಮರು ಅಡ್ಡಿಪಡಿಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಪೋಸ್ಟ್‌ಅನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮುಂಬೈನಲ್ಲಿ ಇತ್ತೀಚೆಗೆ ಹಿಂದೂ ಸಂಘಟನೆಗಳು ‘ಹಿಂದೂ ಜನ ಆಕ್ರೋಷ್ ಮೋರ್ಚಾ‘ ಬ್ಯಾನರ್ ಅಡಿಯಲ್ಲಿ ಬೃಹತ್ ರ್‍ಯಾಲಿಯನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ಈ ರೀತಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಿಡಿಯೊದ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 22 ಏಪ್ರಿಲ್ 2022 ರಂದು ಫೇಸ್‌ಬುಕ್‌ನಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಹನುಮ ಜಯಂತಿ ಶೋಭಾ ಯಾತ್ರೆಯ ಸಮಯದಲ್ಲಿ ಮುಸ್ಲಿಮರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತ, ಅಶ್ಲೀಲ ಕೈ ಸನ್ನೆಗಳನ್ನು ಮಾಡುವ ದೃಶ್ಯಗಳು ಎಂದು ಉಲ್ಲೇಖಿಸಿದ್ದಾರೆ. ಇದೇ ರೀತಿಯ ದೃಶ್ಯಗಳನ್ನು ತೋರಿಸುವ ಫೋಟೋವನ್ನು ಹಂಚಿಕೊಂಡಿರುವ The Quint, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಶೋಭಾ ಯಾತ್ರೆಯ ವೇಳೆ ಬಿಜೆಪಿ ನಾಯಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿ ಮಾಡಿದೆ.


ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡುತ್ತಾ, ಹಲವಾರು ಸುದ್ದಿ ವೆಬ್‌ಸೈಟ್‌ಗಳು ಏಪ್ರಿಲ್ 2022 ರಲ್ಲಿ ಲೇಖನಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವರದಿಗಳ ಪ್ರಕಾರ, ಆಂದ್ರದ ನೆಲ್ಲೂರು ಕೋರ್ಟ್ ಕಾಂಪೌಂಡ್ ಮುಖ್ಯರಸ್ತೆಯಲ್ಲಿರುವ ಮಸೀದಿಯನ್ನು ಹನುಮ ಜಯಂತಿ ಶೋಭಾ ಯಾತ್ರೆ ದಾಟುತ್ತಿದ್ದಾಗ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಯಾತ್ರೆಯು ಮಸೀದಿಯನ್ನು ದಾಟುತ್ತಿದ್ದಾಗ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಜನರು ಆಡಿಯೋ ಸಿಸ್ಟಂನ ಧ್ವನಿಯನ್ನು ಹೆಚ್ಚಿಸಿದರು ಮತ್ತು ಹಿಂದೂ ಘೋಷಣೆಗಳನ್ನು ಕೂಗುತ್ತ, ಕರ್ಕಶವಾಗಿ ವಾಹನಗಳ ಹಾರ್ನ್ ಮಾಡಲಾಗಿದೆ ಎಂದು ವರದಿಯಾಗಿದೆ.

ಮೆರವಣಿಗೆಯಲ್ಲಿ ನಡೆದ ಈ ಬೆಳವಣಿಗೆಯಿಂದ ಪ್ರತಿಕ್ರಿಯೆಯಾಗಿ ಮಸೀದಿಯಲ್ಲಿ ನೆರೆದಿದ್ದ ಮುಸ್ಲಿಮರು “ಅಲ್ಲಾಹು ಅಕ್ಬರ್” ಎಂದು ಜೋರು ಘೋಷಣೆಗಳನ್ನು ಕೂಗಿದರು ಮತ್ತು ಮುಸ್ಲಿಮರಲ್ಲಿ ಒಬ್ಬರು ತಮ್ಮ ಮಧ್ಯದ ಬೆರಳಿನಿಂದ ಅಸಭ್ಯವಾಗಿ ಸನ್ನೆ ಮಾಡಿದರು. ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ನಡೆದಿದೆ ಎಂಬ ಬಿಜೆಪಿ ಹೇಳಿಕೆಯನ್ನು ನೆಲ್ಲೂರು ಪೊಲೀಸ್ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದು ಮತ್ತು ಮಹಾರಾಷ್ಟ್ರದಿಂದಲ್ಲ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಏಪ್ರಿಲ್ 2022 ರಲ್ಲಿ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಹನುಮ ಜಯಂತಿ ಶೋಭಾ ಯಾತ್ರೆಯ ವೇಳೆ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿರುವ  ಘಟನೆಯನ್ನು, ಮಹಾರಾಷ್ಟ್ರದಲ್ಲಿ ನಡೆದ ಹಿಂದೂ ರ್ಯಾಲಿಗೆ ಮುಸ್ಲಿಮರು ಅಡ್ಡಿಪಡಿಸುವ ಇತ್ತೀಚಿನ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋಗೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ 100 ಡಾಲರ್ ಮುಖಬೆಲೆಯ ಕರೆನ್ಸಿಯನ್ನು ಅಮೆರಿಕಾ ಬಿಡುಗಡೆ ಮಾಡಿದಿಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights