ಫ್ಯಾಕ್ಟ್‌ಚೆಕ್ : ಸಾವರ್ಕರ್ ಕುರಿತ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ರಾ ರಾಹುಲ್ ಗಾಂಧಿ?

2019ರಲ್ಲಿ ಮೋದಿ ಉಪನಾಮ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪ್ರಧಾನಮಂತ್ರಿಯವರು ನನ್ನ ಮುಂದಿನ ಭಾಷಣದ ಬಗ್ಗೆ ಭಯಭೀತರಾಗಿದ್ದಾರೆ. ಲಂಡನ್‌ನಲ್ಲಿ ತಾವು ಮಾಡಿದ್ದ ಭಾಷಣಕ್ಕೆ ಮತ್ತು ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ರಾಹುಲ್‌ ಅವರು ತಮ್ಮ ಹೇಳಿಕೆಗಳಿಗೆ ಏಕೆ ಕ್ಷಮೆಯಾಚಿಸಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಾರಿ ಕೇಳಲು ನನ್ನ ಹೆಸರು ಸಾವರ್ಕರ್ ಅಲ್ಲ ಎಂದು ಹೇಳಿದ್ದರು.

”ನನ್ನ ಹೆಸರು ರಾಹುಲ್​ ಗಾಂಧಿ, ವೀರ್ ಸಾವರ್ಕರ್‌ರಂತೆ ನಾನು ಕ್ಷಮೆ ಕೇಳುವುದಿಲ್ಲ” ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ”ಸತ್ಯಕ್ಕಾಗಿ ಹೋರಾಡುವುದು ಹಾಗೂ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ರಕ್ಷಿಸುವುದು ನನಗೆ ಇರುವ ಒಂದೇ ಒಂದು ಹೆಜ್ಜೆ. ನಾನು ಯಾವುದೇ ಅಡೆತಡೆಗಳನ್ನು ಲೆಕ್ಕಿಸದೇ ಹೋರಾಟವನ್ನು ಮುಂದುವರಿಸುತ್ತೇನೆ,  ಅದಾನಿ ಕುರಿತ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ಮೋದಿ ಅವರು ಹೆದರಿ ನನ್ನ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದ್ದರು.

ವಿ.ಡಿ.ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂದು ರಾಹುಲ್ ವಿರುದ್ಧ ಮೊಮ್ಮಗ ರಂಜಿತ್ ಸಾವರ್ಕರ್ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ತಮ್ಮ ವಿರುದ್ಧ ಕೇಸು ದಾಖಲಾಗುತ್ತದೆ ಎಂಬ ಭಯದಿಂದ ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಿಂದ ಸಾವರ್ಕರ್ ಕುರಿತಾದ ಎಲ್ಲಾ ಟ್ವೀಟ್‌ಗಳನ್ನು ಅಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ರಾಹುಲ್ ಗಾಂಧಿ ಸಾವರ್ಕರ್ ಕುರಿತು ಆಡಿದ ಮಾತುಗಳಿಗೆ ಮಾಲೇಗಾಂವ್‌ನಲ್ಲಿ ಭಾಷಣ ಮಾಡಿದ್ದ ಉದ್ಧವ್ ಠಾಕ್ರೆ, ಸಾವರ್ಕರ್‌ಗೆ ಅವಮಾನಿಸುವುದನ್ನು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಇನ್ನು ಮುಂದೆ ಸಹಿಸುವುದಿಲ್ಲ ಎಂದು ರಾಹುಲ್ ಗಾಂಧಿಗೆ ಎಚ್ಚರಿಸಿದ್ದರು. “ಸಾವರ್ಕರ್ ನಮ್ಮ ಪಾಲಿನ ಆರಾಧ್ಯ ದೈವ. ಅವರಿಗೆ ಯಾವುದೇ ಬಗೆಯ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ” ಎಂದು ಠಾಕ್ರೆ ಕಿಡಿ ಕಾರಿದ್ದರು.

ಹಾಗಿದ್ದರೆ ರಾಹುಲ್ ಗಾಂಧಿ ತನ್ನ ಮೇಲೆ ಮತ್ತೆ ಕೇಸ್ ದಾಖಲಾಗುತ್ತದೆ ಎಂಬ ಭಯದಿಂದ ಸಾವರ್ಕರ್ ಕುರಿತಾಗಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ್ದ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ರಾಹುಲ್ ಗಾಂಧಿಯವರ ಟ್ವಿಟರ್ ಅಕೌಂಟ್‌ ಅನ್ನು ಪರಿಶೀಲಿಸಿದಾಗ, ರಾಹುಲ್ ಗಾಂಧಿ ಅವರು ಕಳೆದೆರಡು ವಾರಗಳಲ್ಲಿ ತಮ್ಮ ಯಾವುದೇ ಟ್ವೀಟ್ ಅನ್ನು ಅಳಿಸಿಲ್ಲ. ಹಾಗಾಗಿ ಸಾವರ್ಕರ್ ಅವರ ಎಲ್ಲಾ ಟ್ವೀಟ್‌ಗಳನ್ನು ಅಳಿಸಿದ್ದಾರೆ ಎಂಬ ಹೇಳಿಕೆಗಳು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿವೆ. ಇದಲ್ಲದೆ, ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಆಧರಿಸಿ ಸಾವರ್ಕರ್ ಅವರ ಬಗ್ಗೆ ಅನೇಕ ಟ್ವೀಟ್‌ಗಳು ಇನ್ನೂ ಕಾಂಗ್ರೆಸ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಲೈವ್ ಆಗಿವೆ.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ರಾಹುಲ್ ಗಾಂಧಿ ಅವರ ಟ್ವೀಟ್‌ಗಳನ್ನು ಅಳಿಸಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ ಅನೇಕರು ರಾಹುಲ್ ಗಾಂಧಿ ಅವರು ಇತ್ತೀಚೆಗೆ ತಮ್ಮ ಯಾವುದೇ ಟ್ವೀಟ್‌ಗಳನ್ನು ಅಳಿಸಿಲ್ಲ ಎಂದು ತಿಳಿದ ನಂತರ ತಮ್ಮ ಟ್ವೀಟ್‌ಗಳನ್ನು ಅಳಿಸಿಹಾಕಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ತಮ್ಮ ಸಂದತ್ ಸದಸ್ಯ ಸ್ಥಾನ ಅನರ್ಹಗೊಳಿಸಿದ್ದ ನಂತರ ಕ್ಷಮೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಸುವಾಗ ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ಎಂದು ಹೇಳಿದ್ದರು, ನಂತರ ಸಾವರ್ಕರ್‌ಗೆ ಅವಮಾನ ಮಾಡಿದ್ದಾರೆ ಎಂದು ಅವರ ಮೊಮ್ಮಗ ರಂಜಿತ್ ಸಾವರ್ಕರ್ ರಾಹುಲ್ ಗಾಂಧಿ ವಿರುದ್ದ ಪ್ರಕರಣ ದಾಖಲಿಸುತ್ತಾರೆ ಎಂಬ ಮಾತುಗಳು ಕೇಳಿಬಂದ ಹಿನ್ನಲೆಯಲ್ಲಿ ಸಾವರ್ಕರ್ ಅವರ ಬಗ್ಗೆ ಮಾಡಿದ ಟ್ವೀಟ್‌ಗಳನ್ನು ಅಳಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಗಳೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಯೂಟರ್ನ್.ಇನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights