ಫ್ಯಾಕ್ಟ್‌ಚೆಕ್ : ಬ್ಯಾಗ್‌ವೊಂದರ ಜಾಹಿರಾತಿನಲ್ಲಿ ಲವ್ ಜಿಹಾದ್ ಅಂಶ ಸೇರಿಸಲಾಗಿದೆ ಎಂದು ಎಡಿಟೆಡ್ ವಿಡಿಯೊ ಹಂಚಿಕೆ

ಲವ್ ಜಿಹಾದ್ ಅನ್ನು ಉತ್ತೇಜಿಸುವ ಸ್ಕೈ ಬ್ಯಾಗ್ ಜಾಹಿರಾತನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಕೇರಳದಲ್ಲಿ ‘ಲವ್ ಜಿಹಾದ್‌’ಗೆ ಪ್ರೇರಣೆ ನೀಡಲಾಗುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿವೆ.

ಸ್ಕೈ ಬ್ಯಾಗ್‌ಗಳ ಜಾಹೀರಾತಿನಲ್ಲಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಪರಸ್ಪರ ಪ್ರೀತಿಯ ಸಲ್ಲಾಪದೊಂದಿಗೆ ಯುವತಿಗೆ ಸಲ್ವಾರ್ ಉಡುಗೊರೆಯಾಗಿ ನೀಡುತ್ತಾನೆ ಮತ್ತು ವೀಡಿಯೊದ ಕೊನೆಯಲ್ಲಿ ಆಕೆಯ ಬಿಂದಿ ತೆಗೆದು  ದುಪ್ಪಟ್ಟಾವನ್ನು ತಲೆಯ ಮೇಲೆ ಮುಚ್ಚುತ್ತಾನೆ. ಅಂತಿಮವಾಗಿ, ವಿಐಪಿ ಸ್ಕೈ ಬ್ಯಾಗ್‌ಗಳ ಸೂಟ್‌ಕೇಸ್‌ನ ದೃಶ್ಯದೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ವಿಐಪಿ ಸ್ಕೈ ಬ್ಯಾಗ್‌ ನ ಜಾಹಿರಾತು ಮೂಲಕ ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಈ ಜಾಹಿರಾತಿನಲ್ಲಿ ನಿಜವಾಗಿಯೂ ಲವ್ ಜಿಹಾದ್ ಅಂಶಗಳನ್ನು ಅಳವಡಿಸಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಮೂಲ ದೃಶ್ಯಗಳು ಜಾಹಿರಾತಿನದಲ್ಲ. ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಪಾತ್ರದ ಮೂಲ ದೃಶ್ಯಗಳು  ವಾಸ್ತವವಾಗಿ ಇಬ್ಬರು ಮಲಯಾಳಿ ನಟರು ಅಭಿನಯಿಸಿರುವ ‘ಸೂಫಿಯುಂ ಸುಜಾತಯುಂ’ ಚಿತ್ರದ ಪ್ರಸಿದ್ಧ ಮಲಯಾಳಿ ಹಾಡಿನ ಮರುಸೃಷ್ಟಿಯಾಗಿದೆ.

 

View this post on Instagram

 

A post shared by Sumi Rashik (@sumirashik_official_)

ವಿಡಿಯೊದಲ್ಲಿ ಎರಡು ಬೇರೆ ಬೇರೆ ದೃಶ್ಯಗಳನ್ನು ಸೇರಿಸಿ ಎಡಿಟ್ ಮಾಡಲಾಗಿದೆ ಎಂದು ‘ಫ್ಯಾಕ್ಟ್‌ಲಿ’ ವರದಿ ಮಾಡಿದೆ. ಮಲಯಾಳಂ ಚಿತ್ರರಂಗದ  ಸುಮಿ ರಶಿಕ್ ಹಾಗೂ ವಿಷ್ಣು ವಿಜಯನ್ ಅವರು ನಟಿಸಿದ್ದ ‘ಸೂಫಿಯುಮ್ ಸುಜಾತಾಯುಮ್’ ಚಿತ್ರದ ಗೀತೆಯ ತುಣುಕೊಂದು ಈ ವಿಡಿಯೊದಲ್ಲಿದೆ. ಸ್ಕೈಬ್ಯಾಗ್‌ ಸಂಸ್ಥೆಯು 2015ರಲ್ಲಿ ನಿರ್ಮಿಸಿದ್ದ, ಬಾಲಿವುಡ್ ನಟ ವರುಣ್ ಧವನ್ ಕಾಣಿಸಿಕೊಂಡಿರುವ ಜಾಹೀರಾತಿನ ಒಂದು ದೃಶ್ಯವನ್ನು ಈ ವಿಡಿಯೊಗೆ ಸೇರಿಸಲಾಗಿದೆ. ಇದು ನಕಲಿ ವಿಡಿಯೊ ಎಂದು ವಿಐಪಿ ಬ್ಯಾಗ್ಸ್‌ ಸ್ಪಷ್ಟನೆ ನೀಡಿದ್ದು, ಪೊಲೀಸರಿಗೆ ದೂರನ್ನೂ ನೀಡಿದೆ.

ವಿಡಂಬನೆ ಉದ್ದೇಶಕ್ಕೆ ತೆರೆಯಲಾಗಿರುವ ‘ಪಫಿಂಗ್ಟನ್ ಘೋಸ್ಟ್’ ಎಂಬ ಫೇಸ್‌ಬುಕ್ ಪುಟದಲ್ಲಿ ತಿರುಚಲಾದ ಈ ವಿಡಿಯೊವನ್ನು ಮೊದಲು ಅಪ್‌ಲೋಡ್ ಮಾಡಲಾಗಿದೆ. ಇದನ್ನೇ ಕಂಪನಿಯ ಜಾಹೀರಾತು ಎಂಬುದಾಗಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ‘ಫ್ಯಾಕ್ಟ್‌ಲಿ’ ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಲೆಯಾಳಂ ಚಿತ್ರದ ಹಾಡಿನ ದೃಶ್ಯವನ್ನು ಎಡಿಟ್ ಮಾಡಿ ವಿಐಪಿ ಸ್ಕೈಬ್ಯಾಗ್‌ ನ ಜಾಹಿರಾತಿನ ದೃಶ್ಯಗಳನ್ನು ಸೇರಿಸಿ ಲವ್ ಜಿಹಾದ್ ಎಂಬ ಆರೋಪವನ್ನು ಮಾಡಲಾಗುತ್ತಿದೆ. ವಾಸ್ತವವಾಗಿ ಇದು ತಿರುಚಿದ ದೃಶ್ಯಾವಳಿಗಳು ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮೋದಿ ಉದ್ಘಾಟಿಸಿದ ಮೊದಲ ದಿನವೇ ಮಳೆಗೆ ಸೋರಿದ ವಂದೇ ಭಾರತ್ ರೈಲು ಎಂದು ಹಳೆಯ ಚಿತ್ರ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights