FACT CHECK | ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು ರಾಹುಲ್ ಗಾಂಧಿ ಹೇಳಿದ್ದು ನಿಜವೇ?
ಹೆಸರಾಂತ ಮಾಧ್ಯಮ ಸಂಸ್ಥೆಯಾದ ಎಬಿಪಿ ನ್ಯೂಸ್ ನೆಟ್‌ವರ್ಕ್‌ನ ಲೋಗೋ ಬಳಸಿಕೊಂಡು ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಕುರಿತು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ನನ್ನ ಪೂರ್ವಜರು ಮುಸ್ಲಿಮರು,ಹಾಗಾಗಿ ನಾನೊಬ್ಬ ಅಪ್ಪಟ ಮುಸಲ್ಮಾನ, ಅಲ್ಲದೆ ನಮ್ಮ ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ನಾನೊಬ್ಬ ಮುಸಲ್ಮಾನ ಆಗಿರುವುದರಿಂದ ನಾನು ಪಾಕಿಸ್ತಾನಕ್ಕೆ ಸಹಾಯ ಮಾಡುವುದು ಅಗತ್ಯವಿದೆ!ನಾನು ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಸಹಾಯ ಪ್ರಥಮವಾಗಿ ಮಾಡೇ ಮಾಡುತ್ತೇನೆ! ನಾವು ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ತಾನಕ್ಕೆ 8 ಸಾವಿರ ಕೋಟಿಗಳನ್ನು ಬಡ್ಡಿರಹಿತ ಸಾಲವಾಗಿ 50 ವರ್ಷಗಳಿಗೆ ನೀಡಲಿದ್ದೇವೆ: ರಾಹುಲ್ ಗಾಂಧಿ!
ಕರ್ನಾಟಕದ ವಿಜಯದಿಂದ ಸ್ಫೂರ್ತಿ ಪಡೆದ ಹಿಂದೂಗಳು ಕಾಂಗ್ರೆಸ್ಸಿಗೆ ಓಟ್ ಹಾಕುತ್ತಾರೆ ಅನ್ನೋ ಅತಿಯಾದ ಭರವಸೆಯಿಂದ ರಾಹುಲ್ ಗಾಂಧಿ ಮಾಧ್ಯಮದ ಮುಂದೆ ಹೇಳಿದ ಮನದಾಳದ ಮಾತುಗಳು! ಕಾಂಗ್ರೆಸ್ಸಿಗೆ ಓಟ್ ಹಾಕಿದ ಹಿಂದೂಗಳೇ ನಿಮಗೆ ಮಾನ ಮರ್ಯಾದೆ ಏನಾದರೂ ಇದ್ದರೆ… ಇದನ್ನು ಓದಿದ ಮೇಲೆ ಕೇಳಿದ ಮೇಲಾದರೂ ಬದಲಾಗದಿದ್ದರೆ ಮುಂದಿನ ದಿನಗಳಲ್ಲಿ ನೀವು ಅಲ್ಲದಿದ್ದರೂ ನಿಮ್ಮ ಮಕ್ಕಳು ಅನುಭವಿಸಬೇಕಾಗುತ್ತದೆ ಎಚ್ಚರ ಹಿಂದೂಗಳೇ ಎಚ್ಚರ. ಎಂಬ ಹೇಳಿಕೆಯೊಂದಿಗೆ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಸಂದೇಶದಲ್ಲಿ ಹೇಳಿರುವಂತೆ ರಾಹುಲ್ ಗಾಂಧಿ ಇಂತಹ ಹೇಳಿಕೆ ನೀಡಿದ್ದಾರೆಯೇ? ಇದರ ಸತ್ಯಾಸತ್ಯತೆಯನ್ನು ತಿಳಿಸುವಂತೆ ಏನ್‌ಸುದ್ದಿ.ಕಾಂ ಅನ್ನು ವಿನಂತಿಸಿದ್ದಾರೆ. ಈ ವೈರಲ್ ಸಂದೇಶದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2018ರಲ್ಲಿ ಹಲವು ಸುದ್ದಿ ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿವೆ.
2018ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಕಾಂಗ್ರೆಸ್‌ನ ಆಂತರಿಕ ಸಭೆಯೊಂದರಲ್ಲಿ ಮಾತನಾಡುವಾಗ ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು ಹೇಳಿದ್ದಾರೆ ಎಂದು ಉರ್ದು ಪತ್ರಿಕೆಯೊಂದು ವರದಿ ಮಾಡಿದೆ. ಈ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಪ್ರಧಾನಿ ಮೋದಿ 2019ರ ಚಳಿಗಾಲದ ಅಧಿವೇಶನದಲ್ಲಿ ರಾಹುಲ್ ಗಾಂಧಿ ವಿರುದ್ದ ಟೀಕೆ ಮಾಡಿದ್ದರು ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಭಾರತೀಯ ಜನತಾ ಪಕ್ಷದ ರಾಜಕಾರಣಿಗಳು ಇಂಕ್ವಿಲಾಬ್ ವರದಿಯನ್ನು ಬಳಸಿಕೊಂಡು ಕಾಂಗ್ರೆಸ್ “ಅಲ್ಪಸಂಖ್ಯಾತರನ್ನು ಸಮಾಧಾನಪಡಿಸುವ” ಗುರಿಯನ್ನು ಹೊಂದಿರುವ “ಹಿಂದೂ ವಿರೋಧಿ” ಪಕ್ಷವಾಗಿದೆ ಎಂದು ಹೇಳಿದ್ದರು.
ವಾಸ್ತವವಾಗಿ ಇಂಕ್ವಿಲಾಬ್ ಪತ್ರಿಕೆಯಲ್ಲಿ ಮಾಡಲಾದ ವರದಿ ಸುಳ್ಳು ಮತ್ತು ತಪ್ಪು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.
https://twitter.com/priyankac19/status/1017381412310315008
ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಸಾಮಾನ್ಯ, ಇಂಕ್ವಿಲಾಬ್ ಎಂಬ ಉರ್ದು ಪತ್ರಿಕೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್‌ಅನ್ನು ಮುಸ್ಲಿಮರ ಪಕ್ಷ ಎಂದು ಹೇಳಿದ್ದಾರೆ ಎಂಬ ಸುಳ್ಳು ವರದಿಯನ್ನು ಬಿಜೆಪಿ ನಾಯಕರು ಬಳಸಿಕೊಂಡು ರಾಹುಲ್ ವಿರುದ್ದ ಟೀಕೆ ಮಾಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿಯನ್ನು ಪ್ರಕಟಿಸಿವೆ.
Taken a back to hear that Rahul Gandhi is being accused of calling the Congress a Muslim party in a meeting where I was present. It seems to have malicious intent, no such issue came up at all.
— S lrfan Habib एस इरफान हबीब عرفان حبئب (@irfhabib) July 13, 2018
ಕಾಂಗ್ರೆಸ್ ಯಾವಾಗಲು ಮುಸ್ಲಿಮರ ಪರ ಎಂದು ಬಿಜೆಪಿ ಆರೋಪಿಸುತ್ತದೆ. ಪರವಾಗಿಲ್ಲ ನಾವು ದುರ್ಬಲರ ಪರ ಎನ್ನಲು ನಮಗೇನು ತೊಂದರೆ ಇಲ್ಲ. ಮುಸ್ಲಿಮರ ಹಕ್ಕು ಮತ್ತು ನ್ಯಾಯಕ್ಕಾಗಿ ನಮ್ಮ ಪಕ್ಷ ಹೋರಾಡುತ್ತದೆ ಎಂದು ಹೇಳಿದ್ದಾರೆ. ಆದರೆ ಎಲ್ಲಿಯೂ ನಮ್ಮದು ಮುಸ್ಲಿಂ ಪಕ್ಷ ಎಂದು ರಾಹುಲ್ ಗಾಂಧಿ ಹೇಳಿಲ್ಲ.
ನಾನು ಮುಸ್ಲಿಂ ಆಗಿರುವುದರಿಂದ ನಾನು ಪಾಕಿಸ್ತಾನಕ್ಕೆ ಸಹಾಯ ಮಾಡುವುದು ಅಗತ್ಯವಿದೆ. ನಾನು ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ 8 ಸಾವಿರ ಕೋಟಿಗಳನ್ನು ಬಡ್ಡಿರಹಿತ ಸಾಲವಾಗಿ 50 ವರ್ಷಗಳಿಗೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯನ್ನು ಮಾಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಇಂಕ್ವಿಲಾಬ್ ಎಂಬ ಉರ್ದು ಪತ್ರಿಕೆ ಮಾಡಿದ ಸುಳ್ಳು ವರದಿನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮಾಡಿದ ಸುಳ್ಳು ಆರೋಪಗಳನ್ನು ಈಗ ಹಂಚಿಕೊಳ್ಳುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸಲು ಇಂತಹ ಸುಳ್ಳು ಆರೋಪಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಂದೇಶ ಸಂಪೂರ್ಣ ಸುಳ್ಳು
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 1 ಏಪ್ರಿಲ್ 2024ರಿಂದ BBMP ವ್ಯಾಪ್ತಿಯಲ್ಲಿ ದುಪ್ಪಟ್ಟಾಗಲಿದೆಯೇ ಆಸ್ತಿ ತೆರಿಗೆ ?