FACT CHECK | ಕೇರಳ ಸರ್ಕಾರ ಶಾಲಾ ಪಠ್ಯದಲ್ಲಿ ಹಿಂದೂಗಳನ್ನು ಕೀಳಾಗಿ ಚಿತ್ರಿಸಲಾಗಿದೆಯೇ?

ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಕೇರಳ ಸರ್ಕಾರವು ಶಾಲಾ ಪಠ್ಯ ಪುಸ್ತಕದಲ್ಲಿ ಹಿಂದೂಗಳನ್ನು ಕೀಳಾಗಿ ಚಿತ್ರಿಸಿ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುತ್ತಿದೆ. ಮುಸ್ಲಿಮರು ಹಿಂದೂಗಳಿಗಿಂತಲೂ ಶ್ರೇ‍ಷ್ಠ ಎಂದು ಪ್ರತಿಪಾದಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಪುಸ್ತಕದ ಪಠ್ಯಗಳನ್ನು ಹಂಚಿಕೊಂಡಿದ್ದಾರೆ.

ಇಸ್ಲಾಮಿಕ್ ಸಾಂಪ್ರದಾಯನ್ನು ಪ್ರಚಾರ ಮಾಡುವ ಮತ್ತು ಅದನ್ನು ವಿದ್ಯಾರ್ಥಿಗಳು  ಕಲಿಯುತ್ತಾ ಅದನ್ನೆ ಅನುಸರಿಸುವಂತೆ ಮಾಡುವ  ಪಠ್ಯಪುಸ್ತಕವನ್ನು ರೂಪಿಸಲಾಗಿದೆ ಎಂದು ಆರೋಪಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. @MrSinha_ಎಂಬುವವರು ಹಂಚಿಕೊಂಡ ಪೋಸ್ಟ್‌ 2 ಮಿಲಿಯನ್‌ಗೂ ಹೆಚ್ಚಿನ ವೀವ್ಸ್‌ ಪಡೆದುಕೊಂಡಿದೆ.

Image

ವೈರಲ್ ಫೋಟೋವನ್ನು ಪರಿಶೀಲಿಸಿದ X ಹ್ಯಾಂಡಲ್ ಶ್ರೀ ಸಿನ್ಹಾ (@MrSinha_) ಎಂಬುವವರು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆ ಹೀಗಿದೆ, “ಮುಸಿಮ್ ಅಸ್ಲಂ: ನೈರ್ಮಲ್ಯ, ನಾವು ಅವರ ಅಂಗಡಿಯಿಂದ ಸಿಹಿತಿಂಡಿಗಳನ್ನು ಖರೀದಿಸಬೇಕು –
ಹಿಂದೂ ಅಪ್ಪನ್: ಅನೈರ್ಮಲ್ಯ, ಯಾರೂ ಅವರ ಸಿಹಿತಿಂಡಿಗಳನ್ನು ಖರೀದಿಸಬಾರದು –

ಮುಸ್ಲಿಂ ಆದಿಲ್: ನೈರ್ಮಲ್ಯ ಮತ್ತು ಉತ್ತಮ ಅಭ್ಯಾಸಗಳು –
ಹಿಂದೂ ಅಭಿಮನ್ಯು: ಅನೈರ್ಮಲ್ಯ, ಎಂದಿಗೂ ಸ್ನಾನ ಮಾಡುವುದಿಲ್ಲ, ದುರ್ವಾಸನೆ ಬೀರುತ್ತಿದೆ.

ಕೇರಳ ಸರ್ಕಾರವು ತಮ್ಮ ಶಾಲೆಗಳಲ್ಲಿ ಕಲಿಸುತ್ತಿರುವುದು ಇದನ್ನೇ. ಕಮ್ಯುನಿಸ್ಟರು ಚಿಕ್ಕ ಮಕ್ಕಳ ಬ್ರೈನ್‌ವಾಶ್ ಮಾಡುವುದು ಹೀಗೆಯೇ” ಎಂದು ಹಂಚಿಕೊಂಡಿದ್ದಾರೆ. @MrSinha ಅವರ ಖಾಕೆಯಿಂದ ಹಂಚಿಕೊಳ್ಳಲಾದ ಫೋಟೊ ಮತ್ತು ಅದಕ್ಕೆ ನೀಡಿರು ವಿವರಣೆಯನ್ನು ಪೋಸ್ಟ್‌ನಲ್ಲಿ ನೋಡಬಹುದು. ಹಾಗಿದ್ದರೆ ಕೇರಳ ಸರ್ಕಾರ ಇಸ್ಲಾಮಿಕ್ ಸಂಪ್ರದಾಯವನ್ನು ಪ್ರಚಾರ ಮಾಡುವ ಮೂಲಕ ಮಕ್ಕಳಿಗೆ ಅದನ್ನೆ ಬೋಧಿಸುತ್ತಿದೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 12, 2016 ರಂದು ದಿ ನ್ಯೂಸ್ ಮಿನಿಟ್‌ ಮಾಡಿದ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ ಶಾಲೆಯೊಂದರ ಪಠ್ಯಪುಸ್ತಕದ ಫೋಟೋಗಳು ವೈರಲ್ ಆಗಿದ್ದು, ಪಠ್ಯ ಪುಸ್ತಕದಲ್ಲಿ ವಿವಾದಾತ್ಮಕ ವಿಷಯಗಳನ್ನು ಅಳವಡಿಸುವ ಮೂಲಕ ಮಕ್ಕಳಲ್ಲಿ ದ್ವೇಷದ ಭಾವನೆಯನ್ನು ಬಿತ್ತಲಾಗುತ್ತಿದೆ ಎಂದು ಆರೋಪಿಸಿ ಕೊಚ್ಚಿಯ ಶಾಲೆಯೊಂದರ ವಿರುದ್ಧ ಪೊಳಿಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ವೈರಲ್ ಫೋಟೊ 2021ರಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ. ಎರ್ನಾಕುಲಂನ ಪೀಸ್ ಇಂಟರ್‌ನ್ಯಾಶನಲ್ ಶಾಲೆಗೆ ಆಕ್ಷೇಪಾರ್ಹ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಮುದ್ರಿಸಿದ್ದಕ್ಕಾಗಿ ಮುಂಬೈ ಮೂಲದ ಮೂವರು ಪ್ರಕಾಶಕರನ್ನು ಕೊಚ್ಚಿ ನಗರ ಪೊಲೀಸರು ಡಿಸೆಂಬರ್ 3, 2016 ರಂದು ಬಂಧಿಸಿದ್ದರು ಎಂದು ದಿ ನ್ಯೂಸ್ ಮಿನಿಟ್ ವರದಿಯಲ್ಲಿ ಉಲ್ಲೇಖಿಸಿದೆ.

ಎರ್ನಾಕುಲಂನ ಪೀಸ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಕೋಮು ಪ್ರಚೋದಿತ ವಿಷಯಗಳನ್ನು ಬೋಧಿಸುತ್ತಿದ್ದ ಕಾರಣಕ್ಕೆ ಕೇರಳ ಸರ್ಕಾರವು ಜನವರಿ 2018 ರಲ್ಲಿ  ಪೀಸ್ ಇಂಟರ್‌ನ್ಯಾಶನಲ್ ಶಾಲೆಯನ್ನು  ಮುಚ್ಚಲು ಆದೇಶಿಸಿತ್ತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಎರ್ನಾಕುಲಂ ಶಾಖೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರಿಸಬೇಕೆಂದು ವರದಿಯಲ್ಲಿ ತಿಳಿಸಲಾಗಿದೆ.

ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಈ ಪುಸ್ತಕವನ್ನು ಕೇರಳ ಸರ್ಕಾರದ ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿಲ್ಲ ಎಂದು ಹೇಳುವ ವೈರಲ್ ಫೋಟೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.  “ಈ ಪುಸ್ತಕವನ್ನು ಕೇರಳ ಸರ್ಕಾರದ ಶಿಕ್ಷಣ ಇಲಾಖೆ ಪ್ರಕಟಿಸಿಲ್ಲ. ರಾಜ್ಯದ ವಿರುದ್ಧ ದ್ವೇಷವನ್ನು ಹರಡಲು ಸುಳ್ಳು ಆರೋಪಗಳನ್ನು ಮಾಡುವ ಸಲುವಾಗಿ ಮತ್ತೊಂದು ಪ್ರಯತ್ನ ಆಗಿದೆ. ನಮ್ಮ ಕೇರಳದ ಬಗ್ಗೆ ತಿಳಿದಿರುವವರು ನಮ್ಮ ರಾಜ್ಯದ ಜನರ ನಡುವಿನ ಸೌಹಾರ್ದತೆ ಮತ್ತು ಏಕತೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಕೇರಳವನ್ನು ಕೋಮು ದ್ವೇಷದ ಮೂಲಕ ಒಡೆಯಲು ಸಾಧ್ಯವಿಲ್ಲ ಎಂದು ಇಲ್ಲಿಯ ಜನರಿಗೆ ಅರ್ಥವಾಗಿದೆ ಎಂದು ಪೋಸ್ಟ್‌ ಮೂಲಕ ತಿರುಗೇಟು ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ,  2016ರಲ್ಲಿ ಕೇರಳದ ಎರ್ನಾಕುಲಂನ ಪೀಸ್ ಇಂಟರ್‌ನ್ಯಾಶನಲ್ ಎಂಬ ಖಾಸಗೀ ಶಾಲೆಯೊಂದರಲ್ಲಿ ಮಕ್ಕಳ ಮನಸ್ಸಿನಲ್ಲಿ ಕೋಮು ಪ್ರಚೋದನೆ ಬಿತ್ತುವ ಪಠ್ಯಗಳನ್ನು ಅಳವಡಿಸಿದ ಹಳೆಯ ಫೋಟೋವನ್ನು ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡು ಪ್ರಸ್ತುತ ಕೇರಳ ಸರ್ಕಾರವನ್ನು ಗುರಿಯಾಗಿಸಿಕೊಂಡು ಕೇರಳ ಶಾಲೆಗಳಲ್ಲಿ ಇಸ್ಲಾಂ ಸಂಪ್ರದಾಯವನ್ನು ಬೋಧಿಸಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಪಾಕ್ ಧ್ವಜಗಳನ್ನು ಹಾರಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights