FACT CHECK | ಕಂಗನಾ ಕೆನ್ನೆಗೆ ಹಸ್ತದ ಗುರುತು ಬರುವಂತೆ ಕಪಾಳಮೋಕ್ಷ ಮಾಡಲಾಗಿತ್ತೇ?

ಚಂಡೀಘಡ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಸಂಸದೆ ಕಂಗನಾ ರಾಣಾವತ್‌ಗೆ ಕಪಾಳಮೋಕ್ಷ ಮಾಡಿರುವ ಘಟನೆ ದೇಶಾದ್ಯಂತ ಅದರಲ್ಲೂ ಸೋಷಿಯಲ್‌ ಮೀಡಿಯಾಗಳಲ್ಲಿ ಪರವಿರೋಧಗಳ ಚರ್ಚೆ ಜೋರಾಗಿ ನಡೆಯುತ್ತಿದೆ.

ಅನೇಕರು ಈ ಘಟನೆಯನ್ನು ವಿರೋಧಿಸಿದರೆ, ಇನ್ನೂ ಕೆಲವರು ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸುತ್ತಿದ್ದಾರೆ. “ಕಂಗನಾ ಎಂಬ ಬೆಡಗಿ MP ಚುನಾವಣೆಯಲ್ಲಿ ಆಯ್ಕೆಯಾಗಿದ್ದು “ಕಮಲ” ಗುರುತಿನಲ್ಲಿ ಆದರೆ ನಿನ್ನೆ ಅವಳ ಕೆನ್ನೆಯ ಮೇಲೆ ಬಿದ್ದಿದ್ದು ”ಹಸ್ತದ ” ಗುರುತು.” ಎಂದು ಅನೇಕರು ಕಂಗಾನ ಅವರ ಕೆನ್ನೆಯಲ್ಲಿ ಮೂಡಿದ ಬಾಸುಂಡೆಯ(ಕಪಾಳಮೋಕ್ಷದ ಗುರುತು) ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. 

ಹಾಗಿದ್ದರೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್ ಅವರು ಕಂಗನಾ ರನೌತ್ ಗೆ ಗುರುತು ಬೀಳುವಂತೆ ಹೊಡೆದಿದ್ದಾರೆ ಎಂದು ಹಂಚಿಕೊಳ್ಳುತ್ತಿರುವ ಚಿತ್ರಗಳ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಘಟನೆ ವಿವರ 

ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಂದಿದ್ದ ರೈತವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಕುರಿತು ಕಂಗನಾ ರನೌತ್ ಪ್ರತಿಭಟನೆಗೆ ಕೂತಿರುವ ಮಹಿಳಾ ರೈತರು 100 ರೂಪಾಯಿ ಆಸೆಗೆ ರೈತರ ವೇಷದಲ್ಲಿ ಬಂದು ಕುಳಿತಿದ್ದಾರೆ ಎಂದು ಹೇಳಿದ್ದರು. ಅವರು ಈ ಹೇಳಿಕೆಯನ್ನು ನೀಡಿದಾಗ ನನ್ನ ತಾಯಿ ಕೂಡ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇಂತಹ ಅವಹೇಳನಕಾರಿ ಹೇಳಿಕೆಯನ್ನ ನೀಡಿದ್ದಕ್ಕೆ ನಾನು ಕಪಾಳ ಮೋಕ್ಷ ಮಾಡಿದ್ದೇನೆ. ನನ್ನ ತಾಯಿಗೆ ಆದ ಅವಮಾನವನ್ನು ಸಹಿಸಲಾಗಲಿಲ್ಲ” ಎಂದು ಕುಲ್ವಿಂದರ್ ಕೌರ್ ಹೇಳಿದ್ದಾರೆ.

ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಂಸದೆ ಕಂಗನಾ ರಣಾವತ್ ಅವರ ಕೆನ್ನೆಯಲ್ಲಿ ಮೂಡಿದ ಕಪಾಳಮೋಕ್ಷದ ಗುರುತು ಎಂದು ಪ್ರಸಾರವಾಗುತ್ತಿರುವ ಚಿತ್ರ ಕಂಗನಾರದ್ದಲ್ಲ. ಸೊಳ್ಳೆ ಸ್ಪ್ರೇಗಾಗಿ ಮಾಡಿದ ಜಾಹಿರಾತಿನ ಪೋಟೋವಾಗಿದೆ.

ವೈರಲ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 30 ಮೇ 2006ರಲ್ಲಿ ಪ್ರಕಟಿಸಿದ ಜಾಹೀರಾತಿನ ಚಿತ್ರ ಎಂಬ ಮಾಹಿತಿ ಲಭ್ಯವಾಗಿದೆ. ಸೊಳ್ಳೆಗಳಿಂದ ರಕ್ಷಣೆ ಪಡೆಯುವ ಬ್ರ್ಯಾಂಡ್ ಬೇಗಾನ್‌ ಸ್ಪ್ರೇಗಾಗಿ ಚಿತ್ರಿಸಿರುವ ಜಾಹಿರಾತು ಎಂದು ತಿಳಿದು ಬಂದಿದೆ. Ads of the World ಮಾಧ್ಯಮದಲ್ಲಿ ಈ ಚಿತ್ರವು ಲಭ್ಯವಿದ್ದು, ಇದನ್ನು ಸುಮಾರು 18 ವರ್ಷಗಳ ಹಿಂದೆ ಚಿತ್ರೀಕರಿಸಲಾಗಿದೆ.” ಎಂದು ಶೀರ್ಷಿಕೆ ನೀಡಲಾಗಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರ ಮತ್ತು ಜಾಹೀರಾತಿನ ಚಿತ್ರವನ್ನು ಹೋಲಿಕೆ ಮಾಡಿದಾಗ ಎರಡೂ ಚಿತ್ರಗಳು ಒಂದೇ ಆಗಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೊಳ್ಳೆಗಳನ್ನು ನಾಶಪಡಿಸಲು ಬಳಸುವ ಬೇಗಾನ್ ಸ್ಪ್ರೇ ಜಾಹೀರಾತಿಗೆ ಬಳಕೆ ಮಾಡಲಾದ ಚಿತ್ರವನ್ನು ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದಾಗ ಮೂಡಿರುವ ಹಸ್ತದ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ 78 ಮಂದಿ ಮುಸ್ಲಿಂ ಅಭ್ಯರ್ಥಿಗಳು, 98 ಜನ ಹೇಗೆ ಆಯ್ಕೆಯಾಗ್ತಾರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights