FACT CHECK | ರಾಹುಲ್‌ ಗಾಂಧಿ ಒಬ್ಬ ನಿಷ್ಪ್ರಯೋಜಕ ಎಂದು ಹೇಳಿದ್ರಾ ಉದ್ಧವ್‌ ಠಾಕ್ರೆ?

ಸಾಮಾಜಿಕ ಜಾಲತಾಣದಲ್ಲಿ ಶಿವಸೇನ ನಾಯಕ ಉದ್ಧವ್‌ ಠಾಕ್ರೆ “ರಾಹುಲ್‌ ಗಾಂಧಿ ಒಬ್ಬ ನಿಷ್ಪ್ರಯೋಜಕ ಮತ್ತು ಆತನಿಗೆ ಬೂಟಿನಲ್ಲಿ ಹೊಡೆಯಬೇಕು ಎಂದು ಇತ್ತೀಚೆಗೆ ಹೇಳಿದ್ದಾರೆ. ಇದು ಇಂಡಿಯಾ ಮೈತ್ರಿಕೂಟದ ಒಳಜಗಳ ಹೇಗಿದೆ ಎಂಬುದು ತಿಳಿದು ಬರುತ್ತಿದೆ. ಇಂತಹ ಘಟಬಂಧನವನ್ನು ಹೇಗೆ ನಂಬುವುದು ಎಂದು” ಉದ್ಧವ್‌ ಠಾಕ್ರೆಯವರ ವಿಡಿಯೋದೊಂದಿಗೆ ಹಲವರು ಟೀಕಿಸಿ ಬರೆದ ಬರಹಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

 

ಈ ವಿಡಿಯೋವನ್ನು ಗಮನಿಸಿದಾಗ ಇದು ಉದ್ಧವ್‌ ಠಾಕ್ರೆ ಅವರೇ ಮಾತನಾಡಿರುವುದು ಎಂದು ತಿಳಿದು ಬರುತ್ತದೆ. ಅವರದ್ದೇ ಧ್ವನಿಯಲ್ಲಿ ಟೀಕಿಸಿರುವ ಮಾತುಗಳು ಕೂಡ ಕೇಳಿ ಬಂದಿವೆ. ಹೀಗಾಗಿ ನಿಜಕ್ಕೂ ಇಂಡಿಯಾ ಮೈತ್ರಿ ಕೂಟದಲ್ಲಿ ಕಿತ್ತಾಟಗಳು ಆರಂಭವಾಗಿದೆ ಎಂದು ಹಲವರು ವಿವಿಧ ಪೋಸ್ಟ್‌ಗಳೊಂದಿಗೆ ವೈರಲ್‌ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಗೊಂದಲಕ್ಕೆ ಕೂಡ ಸಿಲುಕಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಜಾಲತಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು ಕೆಲವು ಕೀ ಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  “ಸಾವರ್ಕರ್‌ ಅವರನ್ನು ಓಡಿ ಹೋದವರು ಎಂದ ರಾಹುಲ್‌ ಗಾಂಧಿಗೆ ಬೂಟಿನಲ್ಲಿ ಹೊಡೆಯಬೇಕು ಎಂದ ಉದ್ಧವ್‌ ಠಾಕ್ರೆ”ಎಂಬ ಶೀರ್ಷಿಕೆಯೊಂದಿಗೆ ಯೂಟ್ಯುಬ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ.

ಈ ವರದಿಯ ಪ್ರಕಾರ ವಿಕ್ರಮ್ ಸಂಪತ್ ಅವರ ಪುಸ್ತಕವಾದ ‘ಸಾವರ್ಕರ್: ಎಕೋಸ್ ಫ್ರಮ್ ಎ ಫಾರ್ಗಾಟನ್ ಪಾಸ್ಟ್’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಉದ್ಧವ್‌ ಠಾಕ್ರೆ ಅವರು ಭಾಷಣ ಮಾಡುವ ವೇಳೆ ಈ ಹೇಳಿಕೆಯನ್ನು ನೀಡಿದ್ದು, ಇದರ ಸಂಪೂರ್ಣ ವಿಡಿಯೋ ಸಾವರ್ಕರ್‌ ಸ್ಮಾರಕ್‌ ಎಂಬ ಯೂಟ್ಯುಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಕೂಡ ಮಾಡಲಾಗಿದೆ. ಈ ವಿಡಿಯೋದ 11 ನಿಮಿಷ 20 ಸೆಕೆಂಡ್‌ನಲ್ಲಿ ಅವರು ಈ ಹೇಳಿಕೆಯನ್ನು ನೀಡಿರುವುನ್ನು ಕಾಣಬಹುದಾಗಿದೆ. ಆದರೆ ಈ ವಿಡಿಯೋ 18 ಸೆಪ್ಟಂಬರ್‌ 2019ರಂದು ಆಪ್‌ಲೋಡ್‌ ಮಾಡಲಾಗಿದ್ದು, ಇದು 4 ವರ್ಷಗಳ ಹಿಂದಿನ ವಿಡಿಯೋ ಎಂಬುದು ಖಚಿತವಾಗಿದೆ.

ಆದರೆ ಇಲ್ಲಿ ಇಂಡಿಯಾ ಮೈತ್ರಿ ಕೂಡ ರಚನೆಯಾದದ್ದು 17 ಜುಲೈ 2023 ರಂದು ಈ ಮೈತ್ರಿಕೂಟ ರಚನೆಯಾದ ನಂತರದಲ್ಲಿ ಉದ್ಧವ್‌ ಠಾಕ್ರೆ ಬಣದ ಶಿವಸೇನ ಸಂಪೂರ್ಣವಾಗಿ ಈ ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ ಮತ್ತು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸಿ ಯಶಸ್ಸನ್ನು ಕೂಡ ಕಂಡು ಕೊಂಡಿದೆ. ಒಂದು ವೇಳೆ ಇತ್ತೀಚೆಗೆ ಉದ್ಧವ್‌ ಠಾಕ್ರೆ ಅವರು ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ್ದೇ ಆದಲ್ಲಿ ಈ ಬಗ್ಗೆ ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಶಿವಸೇನೆಯ ನಾಯಕ ಉದ್ದವ್ ಠಾಕ್ರೆಯವರು ಈ ಟೀಕೆ ಮಾಡಿದಾಗ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಆದರೆ ಮಹಾರಾಷ್ಟ್ರದಲ್ಲಿ 2019ರ ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆಯ ನಂತರ ಉದ್ದವ್ ಠಾಕ್ರೆಯವರು ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಸೇರಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದರು. ಹಾಗಾಗಿ ಈ ಘಟನೆ ಮಹಾ ವಿಕಾಸ್ ಅಘಾಡಿ ಮೈತ್ರಿಗೂ ಹಿಂದಿನದ್ದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2019ರಲ್ಲಿ ಉದ್ಧವ್‌ ಠಾಕ್ರೆ ರಾಹುಲ್‌ ಗಾಂಧಿ ಅವರನ್ನು ಟೀಕಿಸಿ, ಬೂಟಿನಲ್ಲಿ ಹೊಡೆಯಬೇಕು ಎಂದು ನೀಡಿದ್ದಾರೆ ಎಂಬ ಹೇಳಿಕೆ 4 ವರ್ಷಗಳ ಹಿಂದನದ್ದಾಗಿದೆ. ಅಂದರೆ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತ-ಪಾಕ್ ಟಿ20 ಪಂದ್ಯದ ವೇಳೆ ಅನುಷ್ಕಾ ಶರ್ಮಾ ದಲಿತ ವ್ಯಕ್ತಿಯ ಮೇಲೆ ಕೋಪಗೊಂಡರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights