FACT CHECK | ತಂಗಿಯ ಅತ್ಯಾಚಾರ ಮಾಡಿದವನ ತಲೆ ಕತ್ತರಿಸಿದನೇ ಅಣ್ಣ? ಫೋಟೊದ ಅಸಲೀಯತ್ತೇನು ಗೊತ್ತೇ?

ವ್ಯಕ್ತಿಯೊರ್ವನ ಬಟ್ಟೆಯೆಲ್ಲ ರಕ್ತಸಿಕ್ತವಾಗಿದ್ದು, ಆತ ಮತ್ತೊಬ್ಬ ವ್ಯಕ್ತಿಯ ಕತ್ತರಿಸಿದ ರುಂಡವನ್ನು ಹಿಡಿದುಕೊಂಡು ಹೋಗುತ್ತಿರುವ ಭಯಾನಕ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಫೋಟೋದಲ್ಲಿರುವ ವ್ಯಕ್ತಿ ತನ್ನ ಸಹೋದರಿಯನ್ನು ಅತ್ಯಾಚಾರ ಮಾಡಿದವನನ್ನು ಕೊಂದು ಆತನ ರುಂಡ ಹಿಡಿದು ಪೊಲೀಸ್ ಠಾಣೆಗೆ ಹೋಗುತ್ತಿದ್ದಾನೆ ಎಂದು ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಹಂಚಿಕೊಂಡಿದ್ದಾರೆ.

ವೈರಲ್ ಆಗುತ್ತಿರುವ ಫೋಟೋದಲ್ಲಿ ”ಈ ವ್ಯಕ್ತಿಯ ಸಹೋದರಿಯನ್ನು ಅತ್ಯಾಚಾರ ಮಾಡಲಾಗಿದೆ. ಈ ವಿಚಾರ ತಿಳಿದ ತಕ್ಷಣ ಆಕೆಯ ಅಣ್ಣ ಅತ್ಯಾಚಾರಿಯ ತಲೆಯನ್ನು ಕತ್ತರಿಸಿ, ರುಂಡವನ್ನು ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಹೋಗುತ್ತಿದ್ದಾನೆ,” ಎಂದು ಬರೆಯಲಾಗಿದೆ.

ಶ್ರೆಯಿ ಎಂಬ ಎಕ್ಸ್ ಬಳಕೆದಾರರು ಜುಲೈ 22, 2024 ರಂದು ಈ ಫೋಟೋವನ್ನು ಹಂಚಿಕೊಂಡಿದ್ದು, ”ಭಾರತದ ನಾಗರಿಕರು ಅತ್ಯಾಚಾರಿಗಳಿಗೆ ಹೇಗೆ ಶಿಕ್ಷೆಯಾಗಬೇಕೆಂದು ಬಯಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಭಾರತದ ನ್ಯಾಯಾಂಗ ವ್ಯವಸ್ಥೆಗೆ ಕೆಲವು ಅನುಷ್ಠಾನದ ಅಗತ್ಯವಿದೆ,” ಎಂದು ಕ್ಯಾಪ್ಶನ್ ನೀಡಿದ್ದಾರೆ.

ಹಾಗೆಯೆ ಸಾನ್ವಿ ಎಂಬ ಎಕ್ಸ್ ಬಳಕೆದಾರರು ಕೂಡ ಇದೇ ಫೋಟೋವನ್ನು ಹಂಚಿಕೊಂಡಿದ್ದು, ”ಈ ವ್ಯಕ್ತಿಗೆ ಸೆಲ್ಯೂಟ್ ಹೊಡೆಯಬೇಕು,” ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾಧ್ಯಮಗಳಲ್ಲಿ ಪ್ರಕಟವಾದ ಹಲವು ವರದಿಗಳು ಲಭ್ಯವಾಗಿವೆ. 2018ರ ಅಕ್ಟೋಬರ್ 4 ರಂದು  ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ಲಭ್ಯವಾಗಿದೆ. ಇದರಲ್ಲಿ ‘ಸ್ನೇಹಿತನ ರುಂಡದೊಂದಿಗೆ ಠಾಣೆಗೆ ಬಂದ: ವೀಡಿಯೋ’ ಎಂಬ ಶೀರ್ಷಿಕೆಯೊಂದಿಗೆ ಮಾಹಿತಿ ನೀಡಲಾಗಿದೆ.

”ತಾಯಿಯ ಬಗ್ಗೆ ಕೆಟ್ಟದಾಗಿ ಮಾತಾನಾಡಿದ್ದಕ್ಕೆ ಸ್ನೇಹಿತನ ರುಂಡ ಕತ್ತರಿಸಿ, ತಲೆಯನ್ನು ಕೈಯಲ್ಲಿ ಹಿಡಿದು ಪೊಲೀಸ್‌ ಠಾಣೆಗೆ ಬಂದ ಘಟನೆ ಮಂಡ್ಯದ ಮಳವಳ್ಳಿ ಠಾಣೆಯಲ್ಲಿ ನಡೆದಿದೆ. ಸೆ. 29ರಂದು ಘಟನೆ ನಡೆದಿದ್ದು, ಪಶುಪತಿ ಎಂಬಾತ ತನ್ನ ಸ್ನೇಹಿತ ಗಿರೀಶ್‌ ಎಂಬವನ ರುಂಡ ಹಿಡಿದು ಪೊಲೀಸ್‌ ಠಾಣೆಗೆ ಬಂದಿದ್ದಾನೆ. ವಿಚಾರಣೆ ವೇಳೆ ಗಿರೀಶ್‌ ತನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಇಬ್ಬರ ನಡುವೆ ಜಗಳ ಉಂಟಾಗಿದೆ. ಇದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,” ಎಂದು ಬರೆಯಲಾಗಿದೆ.

ಹಾಗೆಯೆ ಸೆಪ್ಟೆಂಬರ್ 29, 2018 ರಂದು ಕನ್ನಡಪ್ರಭ ವೆಬ್ಸೈಟ್‌ನಲ್ಲಿ ಕೂಡ ಈ ಬಗ್ಗೆ ವರದಿ ಆಗಿದೆ. ‘ತನ್ನ ತಾಯಿಯನ್ನು ಕೆಟ್ಟದಾಗಿ ನೋಡಿ, ಸನ್ನೆ ಮಾಡಿ ಕರೆದ ಎಂಬ ಕಾರಣಕ್ಕೆ ಮಗ ಆ ವ್ಯಕ್ತಿಯ ತಲೆ ಕಡಿದು, ಅದನ್ನು ಪೊಲೀಸ್‌ ಠಾಣೆಗೆ ತಂದು ಶರಾಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕೆಬಾಗಿಲು ಗ್ರಾಮದಲ್ಲಿ ನಡೆದಿದೆ,’ ಎಂದು ಬರೆಯಲಾಗಿದೆ.

ಹಾಗಾಗಿ ತಂಗಿಯ ಅತ್ಯಾಚಾರ ಮಾಡಿದವನ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಹೋಗುತ್ತಿದ್ದಾನೆ ಎಂದು ಹೇಳಲಾಗುತ್ತಿರುವ ಈ ಫೋಟೋದಲ್ಲಿರುವ ಬರಹ ಸುಳ್ಳು ಎಂಬುದಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕೆಬಾಗಿಲು ಗ್ರಾಮದಲ್ಲಿ ನಡೆದ ಹಳೆಯ ಘಟನೆಯ ಫೋಟೋವನ್ನು ಹಂಚಿಕೊಂಡು ತಂಗಿಯ ಅತ್ಯಾಚಾರ ಮಾಡಿದ್ದಕ್ಕೆ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಹೋಗುತ್ತಿದ್ದಾನೆ ಎಂದು ತಪ್ಪು ಶೀರ್ಷಿಕೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಿಸ್ಟರ್ ಬೀನ್ ಪಾತ್ರದಾರಿ ರೋವನ್ ಅಟ್ಕಿನ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಎಡಿಟೆಡ್ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights