FACT CHECK | ಜಾರ್ಖಂಡ್ ರೈಲು ಅಪಘಾತಕ್ಕೆ ಮುಸ್ಲಿಮರು ಕಾರಣವೆಂಬ ಕೋಮು ದ್ವೇಷದ ಚಿತ್ರ ವೈರಲ್! ಆದ್ರೆ ವಾಸ್ತವವೇನು?
ಸಾಮಾಜಿಕ ಮಾಧ್ಯಮದಲ್ಲಿ, ಪಾಕ್ ಮೂಲದ ಹ್ಯಾಂಡಲ್, ಮುಸ್ಲಿಂ ವ್ಯಕ್ತಿಯೊಬ್ಬರು ರೈಲ್ವೆ ಹಳಿ ಮೇಲೆ ಕಲ್ಲು ಹಾಕುತ್ತಿರುವ ಚಿತ್ರವನ್ನು “ಗುಡ್ ಜಾಬ್ ಇಂಡಿಯನ್ ಮುಸ್ಲಿಂ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಜಾರ್ಖಂಡ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ನಂತರ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
G00D J0B, lND!AN MUSL!MS.#Jharkhand pic.twitter.com/IY8f5jw6c0
— PSYWAR Bureau (@PSYWAROPS) July 30, 2024
ಜಾರ್ಖಂಡ್‌ನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಮುಸ್ಲಿಮರು ಕಾರಣ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ರೈಲು ಅಪಘಾತಕ್ಕೆ ನಿಜವಾಗಿಯೂ ಕಾರಣ ಏನು? ಪೋಸ್ಟ್‌ನಲ್ಲಿ ಆಪಾದಿಸಿದಂತೆ ಈ ಘಟನೆಗೆ ಮುಸ್ಲಿಮರು ಕಾರಣವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಜಾರ್ಖಂಡ್‌ನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಮುಸ್ಲಿಮರು ಕಾರಣವೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಜಾರ್ಖಂಡ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ಕುರಿತು ಅನೇಕ ಮಾಧ್ಯಮ ವರದಿಗಳು ಲಭ್ಯವಾಗಿದೆ.

ಹಿಂದೂಸ್ತಾನ್ ಟೈಮ್ಸ್ ಪ್ರಕಾರ, “ಹೌರಾ-ಮುಂಬೈ ಮೇಲ್ ಎದುರುಗಡೆಯಿಂದ ಹಾದು ಹೋಗುತ್ತಿದ್ದ ಗೂಡ್ಸ್ ರೈಲು ಹಳಿತಪ್ಪಿ ಡಿಕ್ಕಿ ಹೊಡೆದ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಜಮ್ಶೆಡ್‌ಪುರದ ಟಾಟಾ ಮುಖ್ಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಎಕನಾಮಿಕ್ಸ್ ಟೈಮ್ಸ್‌ನ ವರದಿ ಲಭ್ಯವಾಗಿದ್ದು, “ಹೌರಾ-ಮುಂಬೈ ಮೇಲ್‌ನ 18 ಬೋಗಿಗಳು ಜಾರ್ಖಂಡ್‌ನ ರಾಜ್‌ಖರ್ಸಾವನ್ ನಿಲ್ದಾಣದ ಬಳಿ ಸರಕು ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿದಾಗ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ” ಎಂದು ವರದಿಯಾಗಿದೆ.

ಇದಲ್ಲದೆ, ವೈರಲ್ ಚಿತ್ರವನ್ನು AI ಇಮೇಜ್ ಡಿಟೆಕ್ಟರ್‌ಗಳನ್ನು ಬಳಸಿಕೊಂಡು ಪರಿಶೀಲಿಸಿದಾಗ, ಡಿಟೆಕ್ಟರ್‌ಗಳು ಇದನ್ನು AI-ರಚಿಸಲಾಗಿದೆ ಎಂದು ದೃಢಪಡಿಸಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಜಾರ್ಖಂಡ್ ರೈಲು ಅಪಘಾತ ಭಾರತೀಯ ಮುಸ್ಲಿಮರಿಂದಾಗಿ ಸಂಭವಿಸಿದೆ ಎಂಬುದು ಸುಳ್ಳು, ಈ ಅಪಘಾತಕ್ಕೆ ಗೂಡ್ಸ್ ರೈಲು ಹಳಿತಪ್ಪಿ ಎದುರಿನಿಂದ ಹಾದು ಹೋಗುತ್ತಿದ್ದ ಹೌರಾ-ಮುಂಬೈ ಮೇಲ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಭಾರತದಲ್ಲಿ ಇಂತಹ ಘಟನೆಗಳು ಸಂಭವಿಸಿದಾಗ, ತಕ್ಷಣಕ್ಕೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೋಮು ದ್ವೇಷದ ನಿರೂಪಣೆಯೊಂದಿಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಹಂಚಿಕೊಳ್ಳುವ ಮೂಲಕ ಹಿಂದೂ ಮುಸ್ಲಿಂ ಸಮುದಾಯದ ನಡುವೆ ವಿಷ ಬೀಜ ಬಿತ್ತುವ ಪ್ರವೃತ್ತಿ ಹೆಚ್ಚುತ್ತಿದೆ. ಹಾಗಾಗಿ ಈ ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದದನ್ನು ಓದಿರಿ : FACT CHECK | ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ನೇತ್ರಾವತಿ ನದಿ ಎಂದು ಕೇರಳದ ಪಟ್ಟಾಂಬಿ ಸೇತುವೆಯ ವಿಡಿಯೋ ಹಂಚಿಕೆ

