FACT CHECK | ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕೆ ಥಳಿಸಲಾಗಿದೆ ಎಂಬುದು ನಿಜವೇ?
ಯುವಕನೊಬ್ಬನನ್ನು ಗುಂಪೊಂದು ದೊಣ್ಣೆಗಳಿಂದ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಕಾರಣಕ್ಕಾಗಿ ಹಿಂದೂ ವ್ಯಕ್ತಿಯೊಬ್ಬನ ಮೇಲೆ ಹೇಗೆ ಹಲ್ಲೆ ನಡೆಸಲಾಗಿದೆ ಎಂಬುದನ್ನು ಈ ವಿಡಿಯೋ ತೋರಿಸಿದೆ ಎಂದು ಆರೋಪಿಸಲಾಗಿದೆ.
“ಈ ದೇಶದಲ್ಲಿ ಹಿಂದೂ ಧರ್ಮವನ್ನು ತೊರೆದು ಇತರ ಧರ್ಮಕ್ಕೆ ಮತಾಂತರಗೊಳ್ಳುವುದು ಅಪರಾಧವೇ? ಈ ವ್ಯಕ್ತಿ ಹಿಂದೂ ಧರ್ಮವನ್ನು ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಕಾರಣಕ್ಕಾಗಿ ಹಿಂದೂ ಜನರ ಗುಂಪೊಂದು ಕ್ರೂರವಾಗಿ ಥಳಿಸುತ್ತಿದೆ” ಎಂದು ಬರೆದುಕೊಂಡು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಮತ್ತೊಂದು ಪೋಸ್ಟ್ ಹೀಗಿದೆ: “ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ ಹಿಂದೂಗಳ ದಾಳಿ.” ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದಿಂದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 2022 ರಲ್ಲಿ X ನಲ್ಲಿ ಹಂಚಿಕೊಂಡ ಅದೇ ಕ್ಲಿಪ್ ಲಭ್ಯವಾಗಿದೆ. ಪೋಸ್ಟ್‌ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ ತೆಲಂಗಾಣದ ಸಂಗಾರೆಡ್ಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಬೇಗರಿ ನರೇಶ್ ಎಂಬಾತನ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಎಂದು ಹೇಳಲಾಗಿದ್ದು, ಧಾರ್ಮಿಕ ಮತಾಂತರದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.
ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಮತ್ತಷ್ಟು ಸರ್ಚ್ ಮಾಡಿದಾಗ, ಅದೇ ಘಟನೆಯ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿರುವ ಆನ್‌ಲೈನ್ ಸುದ್ದಿ ವೆಬ್‌ಸೈಟ್ ದಿ ಮೂಕನಾಯಕ್‌ನಲ್ಲಿ ಪ್ರಕಟವಾದ ವರದಿ ಲಭ್ಯವಾಯಿತು. ವರದಿಯ ಪ್ರಕಾರ, ಸಂತ್ರಸ್ತ ಬಿ ನರೇಶ್ (26) ದಲಿತ ಯುವಕನಾಗಿದ್ದು, ಅದೇ ಗ್ರಾಮದ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಎಂದು ಆರೋಪಿಸಿ ಆಕೆಯ ಸಂಬಂಧಿಕರು ಥಳಿಸಿದ್ದಾರೆ.
ಜುಲೈ 4, 2022 ರಂದು ತೆಲಂಗಾಣ ಟುಡೆ ವರದಿಯ ಪ್ರಕಾರ, ತಮ್ಮ ಕುಟುಂಬದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ದೊಣ್ಣೆಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಝರಸಂಗಂ ಮಂಡಲದ ಚೆಲೆಮಾಮಿಡಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಬೀಗರಿ ನರೇಶ್ (26) ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.
ಜುಲೈ 5, 2022 ರಂದು, ಮಹಿಳೆಯ ಪತಿ ಮತ್ತು ಅವರ ಸಂಬಂಧಿಕರು ಸಂತ್ರಸ್ತೆಯನ್ನು ಸಹ ಥಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ನರೇಶ್ ಅವರ ರಕ್ಷಣೆಗೆ ಬಂದ ಪೋಷಕರು ಮತ್ತು ಅಜ್ಜಿಗೂ ಥಳಿಸಲಾಗಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಮಹಿಳೆಯ ಪತಿ ಮತ್ತು ಆತನ ಸಂಬಂಧಿಕರ ವಿರುದ್ಧ ಝರಸಂಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಎರಡು ವರ್ಷಗಳ ಹಿಂದಿನ ಘಟನೆಯನ್ನು ಭಾರತದಲ್ಲಿ ಧಾರ್ಮಿಕ ಮತಾಂತರದ ಪ್ರಕರಣವೆಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ