FACT CHECK | ಮುಸ್ಲಿಂ ಹುಡುಗನೊಬ್ಬ ಹಿಂದೂಗಳನ್ನು ಗುರಿಯಾಗಿಸಿಕೊಂಡು ವಿದ್ಯುತ್ ಕಂಬವನ್ನು ಬೀಳಿಸುತ್ತಿದ್ದಾನೆ ಎಂದು ಹಂಚಿಕೊಂಡ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಕುರ್ತಾ-ಪೈಜಾಮ ಧರಿಸಿದ ಹುಡುಗನೊಬ್ಬ ರಾಜಕಾಲುವೆ ಬಳಿಯೊಂದರಲ್ಲಿ ಇರುವ ವಿದ್ಯುತ್ ಕಂಬವನ್ನು ಕೆಡವಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ವಿದ್ಯುತ್ ಕಂಬ ಕೆಡವಲು ಪ್ರಯತ್ನಸುತ್ತಿರುವ ಈತ, ದೇಶದ ಬೇರನ್ನು ಕೂಡ ಕತ್ತರಿಸಲು ಹಿಂಜರಿಯುವುದಿಲ್ಲ. ಅವನ ಬಟ್ಟೆಯಿಂದ, ಅವನು ಯಾರೆಂದು ನೀವು ಗುರುತಿಸಬಹುದು? ಎಂಬ ಹೇಳಿಕೆಯೊಂದಿಗೆ ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ದೊಡ್ಡ ಕಾಲುವೆಯೊಂದರ ಬಳಿ ಕುರ್ತಾ-ಪೈಜಾಮ ಧರಿಸಿದ ಯುವಕನೊಬ್ಬ ವಿದ್ಯುತ್ ಕಂಬದ ನಟ್ಟು ಬೋಲ್ಟ್‌ಗಳನ್ನು ಕತ್ತರಿಸುತ್ತಿರುವ ವಿಡಿಯೋವನ್ನು ಕೆಲವರು ಹಂಚಿಕೊಳ್ಳುತ್ತಿದ್ದು, ಹಿಂದೂಗಳನ್ನು ಕೊಲ್ಲುವ ಉದ್ದೇಶದಿಂದ ಕಂಬವನ್ನು ದುರ್ಬಲಗೊಳಿಸಲು ಸಂಚು ನಡೆಸುತ್ತಿರುವ ಮುಸ್ಲಿಂ ಎಂದು ಹೇಳುತ್ತಿದ್ದಾರೆ.

ಎಕ್ಸ್‌ ಖಾತೆ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, “ಈ ಹುಡುಗ ಹೇಗೆ ವಿದ್ಯುತ್ ಕಂಬವನ್ನು ಕತ್ತರಿಸುತ್ತಿದ್ದಾನೆ, ಅದೇ ರೀತಿಯಲ್ಲಿ ಈ ಜಿಹಾದಿಗಳು ದೇಶದ ಬೇರುಗಳನ್ನು ಅಗೆಯುತ್ತಿದ್ದಾರೆ. ಅವನ ಬಟ್ಟೆಗಳನ್ನು ನೋಡಿ ಅವನ ಧರ್ಮವನ್ನು ನೀವು ಊಹಿಸಬಹುದು. ಕಂಬನ್ನು ಕುಯ್ಯುತ್ತಿದ್ದಾನೆ, ಕಂಬ ಬಿದ್ದು ಹಲವರು ಸಾವಿಗೀಡಾಗುತ್ತಾರೆ, ಆಗ ಕಂಬ ಬಿದ್ದು ಕೆಲವರು ಅಪಘಾತದಲ್ಲಿ ಸತ್ತಿದ್ದಾರೆ ಎಂಬ ಸುದ್ದಿ ಬರುತ್ತದೆ” ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಈ ಆಘಾತಕಾರಿ ವಿಡಿಯೋದ ಆರಂಭದಲ್ಲಿ, ಕುರ್ತಾ-ಪೈಜಾಮ ಧರಿಸಿದ ಹುಡುಗ ರಸ್ತೆಬದಿಯ ದೊಡ್ಡ ಚರಂಡಿಯ ಬಳಿ ನಿಂತು ಸಾರ್ವಜನಿಕರು ಬರುವುದನ್ನು ಗಮನಿಸಿ ಯಾರು ಬರದ ಸಂದರ್ಭ ನೋಡಿಕೊಂಡು, ರಾಜಕಾಲುವೆ ದಡದಲ್ಲಿ ನಿರ್ಮಿಸಲಾದ ವಿದ್ಯುತ್ ಕಂಬದ ಬಳಿ ನಿಂತು ಉಪಕರಣವನ್ನು ಬಳಸಿ  ಕಂಬದ ಸಂಧಿಗೆ ನೂಕುತ್ತಿರುವುದನ್ನು ವ್ಯಕ್ತಿಯೊಬ್ಬ ಗಮನಿಸಿ ವಿಡಿಯೋ ಮಾಡಿಕೊಳ್ಳತ್ತಿರುತ್ತಾನೆ.  ಕಂಬವನ್ನು ಕತ್ತರಿಸಲು ಪ್ರಯತ್ನವನ್ನು ಯುವಕ ಯಾವಾಗ ಮತ್ತೆ ಮುಂದುವರೆಸುತ್ತಾನೋ ಆಗ ಯುವಕನನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಗದರಿಸಿ ಓಡಿಸಿವುದನ್ನು ಕಾಣಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ವೀಡಿಯೊ ಕಳೆದ ವರ್ಷ ಜೂನ್-ಜುಲೈನಲ್ಲಿ ವೈರಲ್ ಆಗಿರುವುದು ಕಂಡುಬಂದಿದೆ. ಜುಲೈ 4, 2023 ರಂದು ‘ನೇಷನ್ ಆಫ್ ಪಾಕಿಸ್ತಾನ್ ನ್ಯೂಸ್’ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಈ ವೀಡಿಯೊ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ.

“ಇವರು ಕಳ್ಳರ ಮಕ್ಕಳು, ಅವರು ಹಗಲಿನಲ್ಲಿ ಬೀದಿ ದೀಪಗಳನ್ನು ಕತ್ತರಿಸುತ್ತಿದ್ದಾರೆ ಮತ್ತು ಯಾರೂ ಕೇಳಲು ಹೋಗುವುದಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ಮುರವ್ವತ್ ಪಾರ್ಕ್ ಹಿಲ್ ಟೌನ್ ಮಂಜೂರ್ ಅವಾಮಿ ಚೌಕ್.’ ಈ ಪೋಸ್ಟ್‌ನಲ್ಲಿ ‘ಕರಾಚಿ’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ನೀಡಲಾಗಿದೆ.

vishvasnews

ಈ ಸಮಯದಲ್ಲಿ, ಅನೇಕ ಪಾಕಿಸ್ತಾನಿ ಬಳಕೆದಾರರು ಉರ್ದು ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಕರಾಚಿಯ ಮಂಜೂರ್ ಕಾಲೋನಿ, ಮಾರ್ವತ್ ಪಾರ್ಕ್‌ನಲ್ಲಿದೆ ಎಂದು ಕೆಲವರು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಹೇಳಿದ್ದರು.

ಈ ಮಾಹಿತಿಯ ಸಹಾಯದಿಂದ ನಾವು Google Maps ನಲ್ಲಿ ಈ ಸ್ಥಳವನ್ನು ಹುಡುಕಲು ಪ್ರಯತ್ನಿಸಿದ್ದೇವೆ. ನಾವು ಕರಾಚಿಯಲ್ಲಿ ಮಾರ್ವತ್ ಪಾರ್ಕ್ ಎಂಬ ಸ್ಥಳವನ್ನು ಕಂಡುಕೊಂಡೆವು. ಈ ಸ್ಥಳದ ಉಪಗ್ರಹ ವೀಕ್ಷಣೆಯಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವ ಇದೇ ರೀತಿಯ ರಾಜಕಾಲುವೆಯನ್ನು ನೋಡಬಹುದು.

ಮಾರ್ವತ್ ಪಾರ್ಕ್‌ಗೆ ಸಂಬಂಧಿಸಿದ ಕೆಲವು ಉರ್ದು ಭಾಷೆಯ ಸುದ್ದಿಗಳನ್ನು ನಾವು ಫೇಸ್‌ಬುಕ್‌ನಲ್ಲಿಯೂ ಲಭ್ಯವಾಗಿದೆ. ಈ ಸುದ್ದಿಯೊಂದರಲ್ಲಿ, ಮಾರ್ವತ್ ಪಾರ್ಕ್‌ನ ವಿಡಿಯೋವನ್ನು ತೋರಿಸಲಾಗಿದೆ. ಈ ವೀಡಿಯೊದಲ್ಲಿ, ಉದ್ಯಾನವನದ ಸುತ್ತಲೂ ಅದೇ ವಿನ್ಯಾಸದ ಮನೆಗಳು ಕಂಡುಬರುತ್ತವೆ, ಇದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು.

ಇದಲ್ಲದೆ, ಕರಾಚಿಯಲ್ಲಿ ಪೊಲೀಸರು ಟೆಲಿಕಾಂ ಕೇಬಲ್‌ಗಳನ್ನು ಕದಿಯುವ ಕಳ್ಳರ ಗುಂಪನ್ನು ಹೇಗೆ ಹಿಡಿದಿದ್ದಾರೆಂದು ಹೇಳಲಾದ ಕೆಲವು ಪಾಕಿಸ್ತಾನಿ ಸುದ್ದಿಗಳೂ ಲಭ್ಯವಾಗಿದ್ದು. ನೀವು ವೈರಲ್ ವೀಡಿಯೊವನ್ನು ಎಚ್ಚರಿಕೆಯಿಂದ ಆಲಿಸಿದರೆ, ವೀಡಿಯೊವನ್ನು ಚಿತ್ರೀಕರಿಸುವ ವ್ಯಕ್ತಿ ಯುವಕನನ್ನು ಪ್ರಶ್ನಿಸಿದಾಗ, ಹುಡುಗನು ತಂತಿಯನ್ನು ಕತ್ತರಿಸುತ್ತಿದ್ದೇನೆ ಎಂದು ಹೇಳುವುದನ್ನು ಇಲ್ಲಿ ಗಮನಿಸಬೇಕು.

ಕಳ್ಳತನ ಮಾಡುವ ಉದ್ದೇಶದಿಂದ ಈ ಹುಡುಗ ಕೇಬಲ್ ವೈರ್ ಗಳನ್ನೂ ಕಟಿಂಗ್ ಮಾಡುತ್ತಿದ್ದ ಸಾಧ್ಯತೆ ಇದೆ. ಆದರೆ, ಹುಡುಗ ಕಂಬದ ಬಳಿ ಏನು ಮಾಡುತ್ತಿದ್ದಾನೆಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲ. ಆದರೆ ಈ ವಿಡಿಯೋಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಇದು ಪಾಕಿಸ್ತಾನದ ಕರಾಚಿಯಲ್ಲಿ ನಡೆದ ವಿಡಿಯೋ ಆಗಿದೆ. ಆದರೆ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಭಾರತದ್ದು ಎಂದು ಕೋಮು ಆಯಾಮದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ವಿಶ್ವಾಸ್‌ ನ್ಯೂಸ್‌

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 2024 ಸೆಪ್ಟಂಬರ್‌ 30ರೊಳಗೆ LICಯು ತನ್ನ ಎಲ್ಲಾ ಯೋಜನೆಯನ್ನು ಸ್ಥಗಿತಗೊಳಿಸಲಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights