FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರು ಬುರ್ಖಾ ಧರಿಸಿಲ್ಲ ಎಂದು ನಡು ರಸ್ತೆಯಲ್ಲಿ ಹಲ್ಲೆ ಎಂಬ ವಿಡಿಯೋದ ವಾಸ್ತವವೇನು?

ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ಹಿಂದೂ ಮಹಿಳೆಯರನ್ನು ಬೆನ್ನಟ್ಟಿ ಥಳಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಕೆಲ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಬಾಂಗ್ಲಾದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ನೋಡಿ. ಹಿಂದೂ ಹೆಣ್ಣು ಮಕ್ಕಳು ಬುರ್ಕಾ ಹಾಕದೆ ರಸ್ತೆಯಲ್ಲಿ ಹೋಗುತ್ತಾ ಇದ್ದಾರೆ ಎಂದು, ಅವರನ್ನು ಸೂ*ಯರು ಎಂದು ನಡು ರಸ್ತೆಯಲ್ಲಿ ಜರಿದು ಒಬ್ಬ ಮತಾಂಧ ಜಿಹಾದಿ ಮುಸ್ಲಿಂ ಯುವಕ ಹೇಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾ ಇದ್ದಾರೆ ನೋಡಿ, ಮನುಷ್ಯತ್ವ ಇಲ್ಲದವರು’ ಎಂಬ ಬರಹದೊಂದಿಗೆ ಪದ್ಮನಾಭ ಉಪಾಧ್ಯಾಯ ಎಂಬ ಎಕ್ಸ್‌ ಖಾತೆ ಬಳಕೆದಾರರೊಬ್ಬರು ‘ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

‘ಬಾಂಗ್ಲಾದೇಶದಲ್ಲಿ ಬುರ್ಖಾ ಹಾಕಿಲ್ಲ ಎಂಬ ಕಾರಣಕ್ಕೆ ಹಿಂದೂ ಹುಡುಗಿಯರನ್ನು ಬೆನ್ನಟ್ಟಿ ಥಳಿಸಲಾಗುತ್ತಿದೆ. ಈ ಭೂಮಿಯನ್ನು ನರಕವನ್ನಾಗಿ ಮಾಡಲು ಮಾತ್ರ ಅವರನ್ನು ಕಳುಹಿಸಲಾಗಿದೆ. ಭವಿಷ್ಯದಲ್ಲಿ ನಿಮ್ಮ ಮುಂದಿನ ಪೀಳಿಗೆಯನ್ನು ನಾವು ನೋಡುತ್ತಿದ್ದೇವೆ. ಇದು ನಿಮಗೆ ಇನ್ನೂ ಅರ್ಥವಾಗುತ್ತಿಲ್ಲವೇ’ ಎಂದು 11 ಸೆಪ್ಟಂಬರ್, 2024 ರಂದು ಸನಾತನಿ ಹಿಂದೂ ರಾಕೇಶ್ ಎಂಬ ಎಕ್ಸ್ ಖಾತೆ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೋದ ಮೇಲೆ ಇಸ್ಲಾಮಿಕ್ ಮೀಡಿಯಾ ಟಿವಿ ತಬಕ್‌ಪುರ್ ಎಂದು ಬರೆದಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಚ್ ಮಾಡಿದಾಗ, 30 ಆಗಸ್ಟ್‌ 2024 ರಂದು ಫೇಸ್​ಬುಕ್​ ಪೇಜ್‌ನಲ್ಲಿ ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ. ಈ ಘಟನೆ ಢಾಕಾದ ಶ್ಯಾಮೋಲಿ ಚೌಕದಲ್ಲಿ ನಡೆದಿದೆ ಎಂದು ಬರೆಯಲಾಗಿದೆ.

‘ದಯವಿಟ್ಟು ಕೊನೆಯವರೆಗೂ ವೀಡಿಯೊ ನೋಡಿ ಅದಕ್ಕು ಮೊದಲು ಕಾಮೆಂಟ್ ಮಾಡಬೇಡಿ. ಈ ವಿಡಿಯೋದಲ್ಲಿರುವುದು ಮುಖ್ಯ ಮಾಲೀಕ ಮಹಿಳೆ. ನೀವು ಅವಳನ್ನು ನೋಡಿದರೆ ಕೊಲ್ಲಿ. ಇದು ನಿಮ್ಮ ಧಾರ್ಮಿಕ ಜವಾಬ್ದಾರಿಯಾಗಿದೆ. ಸೇನಾ ಪೊಲೀಸರು ನಮ್ಮ ಬೆಂಬಲಕ್ಕೆ ಇದ್ದಾರೆ. ದಯವಿಟ್ಟು ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ವಿಡಿಯೋವನ್ನು ಆದಷ್ಟು ಶೇರ್ ಮಾಡಿ. ಶ್ಯಾಮೋಲಿ ಚೌಕದಲ್ಲಿ ಇದು ನಡೆದಿದೆ. ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿ’ ಎಂದು ಬರೆಯಲಾಗಿದೆ.

ಸ್ಪಷ್ಟ ಮಾಹಿತಿ ಸಿಗದ ಕಾರಣ ನಾವು ಈ ಘಟನೆಯ ಕುರಿತು ಹೆಚ್ಚಿನ ವಿವರಣೆಗಾಗಿ ಗೂಗಲ್​ನಲ್ಲಿ ‘dhaka men beaten women’ ಎಂದು ಕೀವರ್ಡ್ ಸರ್ಚ್ ಮಾಡಿದೆವು. ಆಗ ಬೆಂಗಾಲಿ ಭಾಷೆಯಲ್ಲಿ ಪ್ರಕಟವಾದ ಕೆಲವು ಲೇಖನ ಲಭ್ಯವಾಗಿದೆ. Our News BD ಎಂಬ ವೆಬ್​ಸೈಟ್​ನಲ್ಲಿ ಇದೇ ವಿಡಿಯೋದ ಸ್ಕ್ರೀನ್ ಶಾಟ್​ನೊಂದಿಗೆ ಸೆ. 2, 2024 ರಂದು ಸುದ್ದಿ ಪ್ರಕಟವಾಗಿದ್ದು ‘ರಾಜಧಾನಿಯಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸಿದ ವಿಡಿಯೋ ವೈರಲ್ ಆಗಿದೆ’ ಎಂದ ಶೀರ್ಷಿಕೆ ನೀಡಲಾಗಿದೆ.

ವರದಿಯ ಪ್ರಕಾರ, ಡಾಕಾದ ಹಲವು ಪ್ರದೇಶಗಳಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸಿದ ವಿಡಿಯೋ ವೈರಲ್ ಆಗಿದೆ. ಲೈಂಗಿಕ ಕಾರ್ಯಕರ್ತರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದೆ ಎಂದು ಸಂತ್ರಸ್ತ ಲೈಂಗಿಕ ಕಾರ್ಯಕರ್ತರು ದೂರಿದ್ದಾರೆ. ಯುವಕನೋರ್ವ ಹಸಿರು ಬಣ್ಣದ ಪೈಪ್‌ನಿಂದ ಮಹಿಳೆಗೆ ತೀವ್ರವಾಗಿ ಥಳಿಸಿದ್ದಾನೆ.

ಕಲ್ಯಾಣಮಯಿ ನಾರಿ ಸಂಘ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ, ಕಳೆದ ಆಗಸ್ಟ್ 27 ರಿಂದ ಲೈಂಗಿಕ ಕಾರ್ಯಕರ್ತೆಯರ ಮೇಲೆ ಒಬ್ಬರ ನಂತರ ಒಬ್ಬರು ಹಲ್ಲೆ ನಡೆಸುತ್ತಿದ್ದಾರೆ. ಕನಿಷ್ಠ 60 ಮಹಿಳಾ ಲೈಂಗಿಕ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಈಗಾಗಲೇ ಮಾತನಾಡಿದ್ದೇವೆ ಎಂದು ಮಹಿಳಾ ಸಂಘ ನೀಡಿದ ಹೇಳಿಕೆ ಈ ವರದಿಯಲ್ಲಿದೆ.

ಹಾಗೆಯೆ ಬಾಂಗ್ಲಾದೇಶದ Kaler Kanthojaijaidinbd ಮಾಧ್ಯಮ ಕೂಡ ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸುವ ವಿಡಿಯೋ ವೈರಲ್ ಆಗಿದೆ. ಕೆಲವು ಯುವಕರು ವಿವಿಧ ಪ್ರದೇಶಗಳಲ್ಲಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಸಂತ್ರಸ್ತ ಲೈಂಗಿಕ ಕಾರ್ಯಕರ್ತರು ದೂರಿದ್ದಾರೆ’ ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಢಾಕಾದಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸಿರುವ ಘಟನೆಯನ್ನು ಬುರ್ಖಾ ಧರಿಸದ ಕಾರಣಕ್ಕಾಗಿ ಹಿಂದೂ ಮಹಿಳೆಯರನ್ನು ಥಳಿಸಲಾಗಿದೆ ಎಂಬ ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿಯೊಬ್ಬ ವಂದೇ ಭಾರತ್ ರೈಲಿನ ಗಾಜನ್ನು ಸುತ್ತಿಗೆಯಿಂದ ಹೊಡೆದ್ದಾನೆ ಎಂಬುದು ನಿಜವೇ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights