FACT CHECK | ಆರೋಗ್ಯ ಮತ್ತು ಜೀವ ವಿಮೆ ಮೇಲಿನ GST ಹೊರೆಯನ್ನು ಇಳಿಸಿದೆಯೇ ಕೇಂದ್ರ ಸರ್ಕಾರ?
ಸರಕು ಮತ್ತು ಸೇವಾ ತೆರಿಗೆ (GST) ಕೌನ್ಸಿಲ್ ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿಯನ್ನು ಶೇಕಡಾ 18% ರಿಂದ ಶೇಕಡಾ 5 % ಕ್ಕೆ ಇಳಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಅನ್ನು ಪ್ರಸಾರ ಮಾಡಲಾಗುತ್ತಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದರು ಎಂಬ ವರಿಗಳು ಈ ಹಿಂದೆ ಪ್ರಕಟವಾಗಿದ್ದವು. ಈ ಕಾರಣಕ್ಕೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸಚಿವ ನಿತಿನ್ ಗಡ್ಕರಿಯವರಿಗೆ ಧನ್ಯವಾದ ಹೇಳಿದ್ದಾರೆ.
ಹಾಗಿದ್ದರೆ ನಿಜವಾಗಿಯೂ ಕೇಂದ್ರ ಸರ್ಕಾರ ಆರೋಗ್ಯ ವಿಮೆಯ ಮೇಲಿನ GSTಯನ್ನು ಶೇಕಡಾ 18% ರಿಂದ ಶೇಕಡಾ 5 % ಕ್ಕೆ ಇಳಿಸಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಲಾಗಿದೆಯೇ ಎಂದು ಪರಿಶೀಲಿಸಲು “ಆರೋಗ್ಯ ವಿಮೆ” ಮತ್ತು “GST ಕಡಿತ” ಎಂಬ ಕೀವರ್ಡ್ ಸರ್ಚ್ ಮಾಡಿದಾಗ, GST ಕೌನ್ಸಿಲ್, ಜಿಎಸ್‌ಟಿ ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಿದೆ ಎಂದು ಆದೇಶಗಳನ್ನು ಹೊರಡಿಸಿದೆ ಎಂಬ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ.
ಆರೋಗ್ಯ ಮತ್ತು ಜೀವ ವಿಮಾ ಕಂತುಗಳ ಮೇಲೆ ಜಿಎಸ್‌ಟಿ ವಿಧಿಸುವುದರ ವಿರುದ್ಧ ಕೇಳಿ ಬಂದಿರುವ ಮಾತುಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಸಚಿವರ ತಂಡವನ್ನು ರಚಿಸಿದೆ. ತಂಡವು ವಸ್ತುಸ್ಥಿತಿ ಅಧ್ಯಯನ ಮಾಡಿ ಜಿಎಸ್‌ಟಿ ಕೌನ್ಸಿಲ್‌ಗೆ ವರದಿ ನೀಡಲಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಮಂಡಳಿಯು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಜಿಎಸ್‌ಟಿಯನ್ನು ಪೂರ್ಣವಾಗಿ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದಂತೆ ಕಾಣುತ್ತಿಲ್ಲ. ತೆರಿಗೆ ಕಡಿತಕ್ಕೆ ಮಾತ್ರ ಒಲವು ತೋರಿದಂತಿದೆ. ಎಂದು ಪ್ರಜಾವಾಣಿ ವರದಿಯೊಂದನ್ನು ಪ್ರಕಟಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸಚಿವರೊಂದಿಗೆ ಈ ವಿಷಯದ ಕುರಿತು ವ್ಯಾಪಕವಾಗಿ ಚರ್ಚಿಸುವಾಗ ತೆರಿಗೆ ದರವನ್ನು ಕಡಿಮೆ ಮಾಡಬೇಕೆ? ಅಥವಾ GST ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆ? ಯಾರಿಗೆ ವಿನಾಯಿತಿಯನ್ನು ನೀಡಬೇಕು? ಮತ್ತು ಗುಂಪು ವಿಮಾ ಪಾಲಿಸಿಗಳು ಹೇಗೆ ಕೆಲಸವನ್ನು ನಿರ್ವಹಿಸುತ್ತವೆ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿದವು ಎಂದು ವರದಿಗಳನ್ನು ತಯಾರಿಸಲಾಗಿದೆ.
ವರದಿಗಳಲ್ಲಿ ಪ್ರಕಟವಾಗಿರುವ ಎಲ್ಲಾ ಸಮಸ್ಯೆಗಳನ್ನು ತ್ವರಿತವಾಗಿ ಪರಿಶೀಲಿಸಲು GOM ಗೆ ಭೇಟಿ ನೀಡಬೇಕು ಮತ್ತು ನವೆಂಬರ್‌ನಲ್ಲಿ ಮತ್ತೊಮ್ಮೆ GST ಕೌನ್ಸಿಲ್ ಸಭೆಯನ್ನು ಕರೆದು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸೀತಾರಾಮನ್ ಹೇಳಿದ್ದಾರೆ ಎಂದು ವರದಿಗಳಲ್ಲಿ ದಾಖಲಾಗಿದೆ.
ಕೆಲವು ವರ್ಷಗಳಿಂದೀಚೆಗೆ ಆರೋಗ್ಯ ಸೇವೆ ದುಬಾರಿಯಾಗುತ್ತಿದೆ. ರೋಗಿಗಳ ಆಸ್ಪತ್ರೆ ವೆಚ್ಚ ಜಾಸ್ತಿಯಾಗುತ್ತಿದೆ. ಕಳೆದ ವರ್ಷ ವೈದ್ಯಕೀಯ ಹಣದುಬ್ಬರ ಶೇ 14ರಷ್ಟಿತ್ತು. ಇದು ವಿಮಾ ಕಂಪನಿಗಳಿಗೆ ಹೊರೆಯಾಗುತ್ತಿದೆ. ಇದರೊಂದಿಗೆ GSTಯೂ ಜಾಸ್ತಿ ಇರುವುದರಿಂದ ವಿಮಾ ಕಂತುಗಳ ಮೊತ್ತ ಹೆಚ್ಚಳವಾಗಿದೆ. ಹೀಗಾಗಿ GSTಯಲ್ಲಿ ಕಡಿತ ಮಾಡಬೇಕು ಎಂಬುದು ವಿಮಾ ಕ್ಷೇತ್ರದಲ್ಲಿ ತೊಡಗಿಕೊಂಡವರ ಹೇಳಿಕೆ. ಭಾರತೀಯ ಸಾಮಾನ್ಯ ವಿಮಾ ಏಜೆಂಟರ ಮಹಾ ಒಕ್ಕೂಟವು ಜೂನ್ ತಿಂಗಳಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಸಾಮಾನ್ಯ ವಿಮೆಗಳ ಮೇಲಿನ ಜಿಎಸ್‌ಟಿಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿತ್ತು. ಎಂದು ಪ್ರಜಾವಾಣಿ ವರದಿ ಮಾಡಿದೆ.
ವಿಮೆ ಮೇಲೆ GST ವಿಧಿಸಬಾರದು ಎಂಬ ಒತ್ತಾಯ ಹಲವು ಸಮಯದಿಂದ ಕೇಳಿಬರುತ್ತಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜುಲೈ 31ರಂದು ಪತ್ರ ಬರೆದ ನಂತರ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
‘ಜೀವ ವಿಮೆ ಮತ್ತು ಆರೋಗ್ಯ ವಿಮೆ ಕಂತುಗಳ ಮೇಲೆ GST ವಿಧಿಸುವುದರಿಂದ ಬದುಕಿನ ಅನಿಶ್ಚಿತತೆಯ ಮೇಲೆ ತೆರಿಗೆ ವಿಧಿಸಿದಂತೆ ಆಗುತ್ತದೆ. ಜೀವನದ ಅನಿಶ್ಚಿತತೆಯ ಸಂದರ್ಭದಲ್ಲಿ ಕುಟುಂಬಕ್ಕೆ ರಕ್ಷಣೆ ಒದಗಿಸುವ ಉದ್ದೇಶದಿಂದ ವ್ಯಕ್ತಿಯೊಬ್ಬ ಖರೀದಿಸಿದ ವಿಮೆಗೆ ತೆರಿಗೆ ವಿಧಿಸಬಾರದು ಎಂದು ವಿಮಾ ನೌಕರರ ಒಕ್ಕೂಟ ಅಭಿಪ್ರಾಯಪಟ್ಟಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದರು. ವಿಮೆ ಮೇಲಿನ GST ತೆಗೆದು ಹಾಕಬೇಕು ಎಂದೂ ಅವರು ಕೋರಿದ್ದರು. ಗಡ್ಕರಿ ಹೇಳಿಕೆಗೆ ವಿವಿಧ ವಲಯಗಳಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆಗಸ್ಟ್‌ನಲ್ಲಿ ನಡೆದಿದ್ದ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ಇದೇ ವಿಚಾರವನ್ನು ಪ್ರಸ್ತಾಪಿಸಿದ್ದವು. ಸದನದ ಒಳಗೆ ಮಾತ್ರವಲ್ಲದೆ ಹೊರಗೂ ಹೋರಾಟ ನಡೆಸಿದ್ದವು.
ಒಟ್ಟಾರೆಯಾಗಿ ಹೇಳುವುದಾದರೆ, ವಿಮೆ ಮೇಲೆ GST ವಿಧಿಸಬಾರದು ಎಂಬ ಒತ್ತಾಯ ಹಲವು ಸಮಯದಿಂದ ಕೇಳಿಬರುತ್ತಿದೆಯಾದರೂ ವಿಮೆ ಮೇಲಿನ ಜಿಎಸ್‌ಟಿಯನ್ನು ಶೇಕಡ 18% ರಿಂದ ಶೇಖಡ 5% ಇಳಿಸಲಾಗಿದೆ ಎಂಬುದು ಸುಳ್ಳು. ಈ ಬಗ್ಗೆ ನವೆಂಬರ್ 2024ರಲ್ಲಿ ನಡೆಯುವ ಜಿಎಸ್‌ಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಈ ಹಿಂದೂ ಮಹಿಳೆಗೆ 24 ಮಕ್ಕಳಾ? ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?