ಹಳ್ಳಿ ಮಾತು-6: ರೈತಾಪಿ ಬದುಕಿಗೆ ಕೊಳ್ಳಿ ಇಡುವ ವಿನಾಶಕಾರಿ ಭೂ ಸುಧಾರಣಾ ತಿದ್ದುಪಡಿಗಳು

“ಬೆಳಗಾಗಿ ನಾನೆದ್ದು ಯಾರ್ಯಾರಾ ನೆನಯಲಿ; ಎಳ್ಳು ಜೀರಿಗೆ ಬೆಳೆಯೋಳಾ; ಎಳ್ಳು ಜೀರಿಗೆ ಬೆಳೆಯೋಳಾ ಭೂಮ್ತಾಯಿ ಎದ್ದೊಂದು ಗಳಿಗೆ ನೆನೆದಾನಾ” ಎಂಬ ಜನಜನಿತ ಜಾನಪದ ಸಾಹಿತ್ಯಕ್ಕೆ ಮನ ಸೋಲದವರೇ ಇಲ್ಲ. ಇಡೀ ಮಾನವ ಕುಲ ಕೋಟಿಯನ್ನು ಸಹಸ್ರಾರು ವರ್ಷಗಳಿಂದ ಪೋಷಿಸಿದ ಭೂಮಿಗೆ ನಮ್ಮ ಜನಪದರ ತಲಾತಲಾಂತರದ ನಿಷ್ಠೆಯ ಸಂಕೇತವಿದು.

ಇಂತಹ ಭೂಮಿ, ಜಾಗತೀಕರಣ ಧೋರಣೆಗಳ ಕಾಲಘಟ್ಟದಲ್ಲಿ ಅತೀವ ತಲ್ಲಣ-ಪಲ್ಲಟಗಳ ರಣ ಭೂಮಿಯಾಗಿದೆ. ಗ್ರಾಮೀಣ ಭಾರತದಲ್ಲಿ ಭೂಮಿ, ಸಾಮಾಜಿಕ ಅಂತಸ್ತಿನ ಅಳತೆಗೋಲು, ಜೀವನೋಪಾಯ ಗುಣಮಟ್ಟದ ಸಾಧನ. ಸುಮಾರು 30 ವರ್ಷಗಳ ಜಾಗತೀಕರಣ ಧೋರಣೆಗಳ ನಿರಂತರ ಅನುಷ್ಠಾನದ ನಂತರವೂ ಭಾರತದ ಸುಮಾರು ಶೇ 70 ರಷ್ಟು ಜನ ಹಳ್ಳಿಗಳಲ್ಲೇ ನೆಲೆಸಿದ್ದಾರೆ. ಶೇ 50 ಕ್ಕಿಂತ ಹೆಚ್ಚಿನ ಜನಸಂಖ್ಯೆ ತಮ್ಮ ದುಡಿಮೆಗಾಗಿ ಕೃಷಿಯನ್ನೇ ಅವಲಂಬಿಸಿದೆ.

ನಗರ ಮತ್ತು ಗ್ರಾಮಗಳ ಜನಸಂಖ್ಯಾ ಹಂಚಿಕೆ ಈ ರೀತಿ ಇರುವಾಗಲೂ ಭೂ ಒಡೆತನ ತದ್ವಿರುದ್ಧವಾಗಿ ಕ್ರೂಢೀಕರಣಗೊಳ್ಳುತ್ತಿದೆ. ನಗರಗಳ ಶ್ರೀಮಂತರು ಹಳ್ಳಿಗಳ ಕೃಷಿ ಜಮೀನಿನ ಒಡೆಯರಾಗುತ್ತಿದ್ದಾರೆ. ಹಳ್ಳಿಗಳ ಕೃಷಿಕರು ಜೀವನೋಪಾಯಕ್ಕಾಗಿ ಗ್ರಾಮದಿಂದ ಗ್ರಾಮಗಳಿಗೆ, ಗ್ರಾಮದಿಂದ ನಗರ – ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ.   ಒಂದರ್ಥದಲ್ಲಿ ಭಾರತ ಚಲಿಸುತ್ತಿದೆ. ಹಸಿವು, ಸಂಕಟ ಮತ್ತು ಘನತೆಯನ್ನೇ ಕಳೆದುಕೊಂಡ ಬದುಕು ಈ ಚಲನೆಯ ಒಡಲಾಳ. ಕೋವಿಡ್ ಸಂದರ್ಭದಲ್ಲಿ ಒಡಲಾಳದ ದರ್ಶನವಾಗಿದೆ ಅಷ್ಟೇ.

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆನಂತರದ ಕೆಲವು ದಶಕಗಳವರೆಗೂ ಗ್ರಾಮೀಣ ಭಾರತದ ಬಹುತೇಕರು ಉಳುಮೆ ಹಿಡುವಳಿಯನ್ನು ಹೊಂದಿದವರೇ ಆಗಿದ್ದರು. ಅವತ್ತಿನ ಗ್ರಾಮೀಣ ಭೂ ಸಂಬಂದ ಪ್ರಧಾನವಾಗಿ, ಪಾಳೇಗಾರಿ ಭೂ ಮಾಲೀಕ – ಗೇಣಿದಾರ ರೈತ ಸಮೂಹ ನಡುವಿನ ಭೂ ಸಂಬಂದ ವಾಗಿತ್ತು. 1955 ರ ಇನಾಂ ರದ್ದತಿ ಕಾಯ್ದೆ, ಜೋಡಿದಾರರು-ಜಮೀನ್ದಾರ್ ರ ವಿರುದ್ಧದ ಪ್ರಬಲ ರೈತ ಹೋರಾಟಗಳು, ಗೇಣಿ ಪದ್ದತಿ ಸುಧಾರಣೆಗಾಗಿ ನಡೆದ ಹಕ್ಕೊತ್ತಾಯಗಳು, ಈ ಎಲ್ಲದರ ಪರಿಣಾಮವಾಗಿ ಬಂದ ಭೂ ಸುಧಾರಣಾ ಕಾನೂನುಗಳು ಗ್ರಾಮೀಣ ಭಾರತದ ಭೂ ಸಂಭಂದಗಳನ್ನು ಪ್ರಭಾವಿಸಿದವು. ಒಟ್ಟಾರೆಯಾಗಿ ಗೇಣಿದಾರರ ಚಳುವಳಿ ಪ್ರಬಲವಾಗಿದ್ದ ಕಡೆ ಸ್ವಲ್ಪ ಪ್ರಮಾಣದಲ್ಲಿ ಉಳುಮೆ ಹಿಡುವಳಿದಾರರು, ಮಾಲೀಕತ್ವ ಹಿಡುವಳಿದಾರರಾಗಿ ಪರಿವರ್ತನೆಯಾದರೂ, ಭೂ ಸುಧಾರಣಾ ಕಾನೂನುಗಳ ದೋಷಗಳಿಂದಾಗಿ ಹಾಗೂ ಕಾರ್ಯಾಂಗದ ಭೂ ಮಾಲೀಕ ವರ್ಗ ಹಿತಾಸಕ್ತಿಯ ಕಾರಣದಿಂದಾಗಿ ಬಹಳ ದೊಡ್ಡ ಸಂಖ್ಯೆಯಲ್ಲಿ ಗೇಣಿದಾರರನ್ನು ಒಕ್ಕಲೆಬ್ಬಿಸಲಾಯಿತು.

ಕರ್ನಾಟಕ ಭೂ ಸುಧಾರಣಾ ಕಾನೂನು 1961 ಮತ್ತು ದೇವರಾಜು ಅರಸು ನೇತೃತ್ವದ ಸರ್ಕಾರದ ತಿದ್ದುಪಡಿ ಕಾನೂನುಗಳು ಸಹ ಇದೇ ಫಲಿತಾಂಶವನ್ನು ಉಂಟು ಮಾಡಿದವು ಎಂದರೆ ಬಹಳಷ್ಟು ಜನರಿಗೆ ಅಶ್ಚರ್ಯವಾಗಬಹುದು. ಆದರೂ ಇದು ವಾಸ್ತವ. (ಹೆಚ್ಚಿನ ವಿವರಗಳಿಗೆ ಯಾಕೀಗ ಭೂಮಿ ಪ್ರಶ್ನೆ- ಪ್ರೊ. ಚಂದ್ರ ಪೂಜಾರಿ ನೋಡಿ).

ಪರಿಸ್ಥಿತಿ ಹೀಗಿದ್ದ ಗ್ರಾಮೀಣ ಭಾರತದ ಮೇಲೆ ಹಸಿರು ಕ್ರಾಂತಿ ಯೋಜನೆಗಳು, ನಂತರದ ಜಾಗತೀಕರಣ ಧೋರಣೆಗಳು ಗಂಭೀರ ಸಂರಚನಾ ಬದಲಾವಣೆಗಳನ್ನು ಉಂಟು ಮಾಡಿವೆ. ಇವೆಲ್ಲದರ ಒಟ್ಟು ಪರಿಣಾಮ ತೀವ್ರಗತಿಯಲ್ಲಿ ಏರಿರುವ ಭೂಹೀನತೆಯ ಪ್ರಮಾಣ. 2013 ರ ವಿಕಾಸ್ ರಾವಲ್ ರವರ ಅಧ್ಯಯನ ಕಂಡುಕೊಂಡಂತೆ ಭೂಹೀನ ಗ್ರಾಮೀಣ ಕುಟುಂಬಗಳ ಪ್ರಮಾಣ ಶೇ 41.63. ಫೌಂಡೇಷನ್ ಫಾರ್ ಅಗ್ರೇರಿಯನ್ ಸ್ಟಡೀಸ್ 2009 ರ ತನ್ನ ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಆಲಭುಜನಹಳ್ಳಿಯಲ್ಲಿ ಹಾಗೂ ಗುಲ್ಬರ್ಗಾದ ಝಾಪುರ್ ಗ್ರಾಮದಲ್ಲಿ ಈ ಭೂಹೀನತೆ ಪ್ರಮಾಣ ಕ್ರಮವಾಗಿ ಶೇ 20 ಹಾಗೂ ಶೇ 57 ರಷ್ಟಿದೆ.

ಹೀಗಿರುವ ಗ್ರಾಮೀಣ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರುವ ಭೂ ಸುಧಾರಣಾ ಕಾನೂನು-1961 ಅನ್ನು ಇದುವರೆಗಿನ ಎಲ್ಲ ತಿದ್ದುಪಡಿಗಳಲ್ಲೇ ಅತ್ಯಂತ ಮಾರಕವಾಗಿರುವ, ಇಡೀ ಭೂ ಸುಧಾರಣಾ ಕಾನೂನಿನ ಅಸ್ತಿತ್ವವೇ ನಾಶವಾಗುವ ರೀತಿಯಲ್ಲಿ ಕರ್ನಾಟಕ ಸರ್ಕಾರ ಮೇ 13, 2020 ರಂದು ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020 ನ್ನು ಪ್ರಕಟಿಸಿದೆ. ಅದೇ ರೀತಿ ಜೂನ್ 11, 2020 ರಂದು ನಡೆದ ಮಂತ್ರಿ ಮಂಡಲದ ಸಭೆಯಲ್ಲಿ ಮೂಲ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಹಲವು ಕಲಂಗಳಿಗೆ ಮತ್ತಷ್ಟು ತಿದ್ದುಪಡಿ ತರಲು ನಿರ್ಧರಿಸಿದೆ.

ಈಗ ಈ ತಿದ್ದುಪಡಿಗಳನ್ನು ಒಂದಾಂದಾಗಿ ನೋಡೋಣ.

ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961 ರ ಇತರೆ ಅಂಶಗಳಲ್ಲಿ ಏನೇ ಹೇಳಿದ್ದರೂ 109 ಕಲಂ, ಕೃಷಿಯೇತರ ಉದ್ದೇಶಗಳಿಗಾಗಿ ಅಂದರೆ ಬಂಡವಾಳದಾರರ ಕೈಗಾರಿಕೆಗಳಿಗೆ, ಮಾನ್ಯತೆಯ ಶಿಕ್ಷಣ ಸಂಸ್ಥೆಗಳಿಗೆ, ದೇವಾಲಯಗಳಿಗೆ ಮತ್ತು ಹೂ-ಹಣ್ಣು ಬೇಸಾಯಕ್ಕಾಗಿ ಒಟ್ಟು 55 ಯೂನಿಟ್ ಗಳ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿಸಲು ಇದ್ದ ಇದುವರೆಗಿನ ಮಿತಿಯನ್ನು 110 ಯೂನಿಟ್ ಗಳಿಗೆ (ಎರಡು ಪಟ್ಟು) ವಿಸ್ತರಿಸಿ ಒಟ್ಟು 594 ಎಕರೆ ಜಮೀನು ಹೊಂದಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಜಮೀನುಗಳ ಭೂ ಪರಿವರ್ತನೆಯನ್ನು ವಿಳಂಬವಿಲ್ಲದೇ ಮಾಡಿಕೊಡಬೇಕು. ಒಂದು ವೇಳೆ ಜಿಲ್ಲಾಧಿಕಾರಿಗಳು ಒಂದು ತಿಂಗಳೊಳಗೆ ಭೂ ಪರಿವರ್ತನೆ ಮಾಡಿಕೊಡದಿದ್ದರೆ, ಮಾಡಿಕೊಟ್ಟಂತೆಯೇ ಎಂದೇ ಭಾವಿಸಿ ಜಮೀನು ಬಳಕೆ ಮಾಡಬಹುದೆಂದು ಈ ತಿದ್ದುಪಡಿಯು ಆದೇಶಿಸಿದೆ. ಇಂತಹ ಜಮೀನುಗಳ ಬಳಕೆ ಮಾಡದೇ ಹಾಗೇ ಇಟ್ಟುಕೊಂಡರೂ ಈ ತಿದ್ದುಪಡಿ ರಕ್ಷಣೆ ಒದಗಿಸಿದೆ.

‘ಕೃಷಿಯೇತರ ಉದ್ದೇಶಗಳಿಗಾಗಿ ಜಮೀನುಗಳನ್ನು ಪಡೆಯಲು ಭೂ ಸ್ವಾಧೀನ ಕಾಯ್ದೆ 2013: ಇರುವಾಗ ಇಂತಹ ತಿದ್ದುಪಡಿಯ ಔಚಿತ್ಯವೇನು’ ಎಂದು ಪ್ರಶ್ನಿಸುವ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜುರವರು “ಫಲವತ್ತಾದ ಕೃಷಿ ಜಮೀನುಗಳನ್ನು ಸಂಕಷ್ಟದಲ್ಲಿರುವ ರೈತರ ಕೈಗಳಿಂದ ವೇಗವಾಗಿ ಕೃಷಿಯೇತರ ಉದ್ದೇಶದ ಹೆಸರಿನಲ್ಲಿ ಕಿತ್ತುಕೊಂಡು, ಕಪ್ಪು ಹಣವನ್ನು ಬಿಳಿಯಾಗಿಸಲು ಮತ್ತು ಹೆಚ್ಚು ಹೆಚ್ಚು ಭೂಮಿ ಹೊಂದುವ ದಾಹದ ವ್ಯಕ್ತಿ ಮತ್ತು ಸಂಸ್ಥೆಗಳು ರೈತರನ್ನು ದೋಚಲು ಅವಕಾಶ ಕಲ್ಪಿಸುವುದಾಗಿದೆ ಎಂದು ಆರೋಪಿಸುತ್ತಾರೆ.

ಈಗಾಗಲೇ ಈ ತಿದ್ದುಪಡಿ ಬರುವ ಮೊದಲೇ ಕೃಷಿಯೇತರ ಉದ್ದೇಶಗಳಿಗಾಗಿ ಕೃಷಿ ಭೂಮಿ ದುರ್ಬಳಕೆಯಾಗುತ್ತಿರುವಾಗ, ಕಲಂ 109 ಕ್ಕೆ ತಂದಿರುವ ಈ ತಿದ್ದುಪಡಿ ಉಂಟು ಮಾಡುವ ಆನಾಹುತ – ಆಪಾಯಗಳನ್ನು ಲೆಕ್ಕ ಹಾಕಬಹುದು.

ಆದರೆ ಸರ್ಕಾರದ ಲೆಕ್ಕಚಾರವೇ ಬೇರೆ; 2020 ಜನವರಿ 21 ರಿಂದ ಮೂರು ದಿನಗಳ ಕಾಲ ನಡೆದ ಡಾವೋಸ್ ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದಂತೆ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಮುಕ್ತಗೊಳಿಸಬೇಕಿದೆ. ಜಾಗತೀಕರಣದ ನಂತರ ಬಂಡವಾಳದ ಭಜನೆಯನ್ನು ದೊಡ್ಡದಾಗಿ ಮಾಡಲಾಗುತ್ತಿದೆ. ಆದರೆ ವಾಸ್ತವ ಬೇರೆಯದೇ ಚಿತ್ರಣ ನೀಡುತ್ತದೆ. ಉದ್ಯೋಗಗಳನ್ನು ಒದಗಿಸುವ ಅವಕಾಶ ನಿರಂತರವಾಗಿ 1990 ರಿಂದ ಕಡಿಮೆ ಆಗಿರುವುದನ್ನು ಸಾಕಷ್ಟು ಅಧ್ಯಯನಗಳು ಸಾಬೀತು ಪಡಿಸಿವೆ. ವಿಶೇಷ ಆರ್ಥಿಕ ವಲಯಗಳು ತಮ್ಮ ಉದ್ಯೋಗ ಸೃಷ್ಟಿಯ ಅಂದಾಜನ್ನು ಮುಟ್ಟಲು ದಯನೀಯವಾಗಿ ವಿಫಲವಾಗಿವೆ ಎಂಬುದನ್ನು 2014 ರ ಮಹಾಲೆಕ್ಕಪರಿಶೋಧಕರ ವರದಿ ಬೊಟ್ಟು ಮಾಡಿದೆ. ಜಿ.ಡಿ.ಪಿ ಬೆಳವಣಿಗೆ ದರ ಏರುಗತಿಯಲ್ಲಿ ಇದ್ದ 1999-2000 ಮತ್ತು 2011-12 ರ ವರೆಗಿನ ಕಾಲಾವಧಿಯಲ್ಲಿ, ಉದ್ಯೋಗದಲ್ಲಿ ಕೈಗಾರಿಕೆಗಳ ಕೊಡುಗೆ ಶೇ 1.7 ಮಾತ್ರ ಹೆಚ್ಚಾಗಿದೆ. 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳು ಗೋಚರಿಸಿದ ಅವಧಿಯಲ್ಲಿ ಮತ್ತು ಕೋವಿಡ್ ನ ಹಿನ್ನಲೆಯ ಆರ್ಥಿಕ ಕುಸಿತದ ಈಗಿನ ಸಂದರ್ಭದಲ್ಲಿ ಉದ್ಯೋಗಗಳ ಬೆಳವಣಿಗೆ ಎಷ್ಟು ಮಾತ್ರ ಹೆಚ್ಚಾಗಬಹುದು? ಇದು ಕಾರ್ಪೊರೇಟ್ ಕಂಪನಿಗಳ ಸ್ಥಿರಾಸ್ತಿ ಪ್ರಮಾಣವನ್ನು ಮಾತ್ರ ಹೆಚ್ಚಿಸಬಹುದು ಅಷ್ಟೇ.

ಇನ್ನು, ಕರ್ನಾಟಕ ಸರ್ಕಾರದ, ಮೂಲ ಕಾಯ್ದೆ1961 ಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಿರುವ ಕಲಂಗಳಾದ 5, 63, 79(ಎ)(ಬಿ)(ಸಿ), 80 ಇವುಗಳು ಏನು ಹೇಳುತ್ತಾವೆ ನೋಡೋಣ. ಕಲಂ 5, ಗೇಣಿ ಪದ್ದತಿಯನ್ನು ನಿಷೇದಿಸಿರುವ ಕಲಂ ಆಗಿದೆ. ಭೂ ಸುಧಾರಣಾ ಕಾನೂನು ಪ್ರಕಾರ ಪ್ರತಿಯೊಬ್ಬ ಉಳುಮೆಗಾರನಿಗೂ ಭೂಮಿ ಸಿಕ್ಕಿದೆಯಾದ್ದರಿಂದ ಗೇಣಿಗೆ ನೀಡುವಂತಿಲ್ಲ ಎಂದು ನಿರ್ಭಂದಿಸುವ ಕಲಂ. ಇದು ವಾಸ್ತವವಾಗಿ ಪಾಳೇಗಾರಿ ಭೂ ಮಾಲೀಕರನ್ನು ಗೇಣಿದಾರರಿಂದ ರಕ್ಷಿಸಿದ ಕಲಂ. ಗೇಣಿದಾರರ ಸಂರಕ್ಷಣೆಗೆ ಅವಕಾಶ ಇಲ್ಲದ್ದರಿಂದ ಜಮೀನ್ದಾರರು ಸುರಕ್ಷಿತವಾಗಿದ್ದರು. ಈ ಕಾರಣದಿಂದಲೇ ಬಡ ಗೇಣಿದಾರ ರೈತರನ್ನು ಸಂರಕ್ಷಿಸುವ ಹೋರಾಟ ಇಲ್ಲಿಯವರೆಗೆ ಸಫಲವಾಗಲಿಲ್ಲ. ಆದರೆ ಇದನ್ನು ಈಗ ಪೂರ್ತಿ ತೆಗೆದುಹಾಕಲಾಗುತ್ತದೆ. ಇನ್ನು ಮುಂದೆ ಯಾರೂ ಬೇಕಾದರೂ, ಎಷ್ಟು ಎಕರೆ ಬೇಕಾದರೂ ಜಮೀನುಗಳನ್ನು ಗುತ್ತಿಗೆಗೆ ಪಡೆದು ಗುತ್ತಿಗೆ ಬೇಸಾಯದಲ್ಲಿ ತೊಡಗಬಹುದು. ಬಡ ಗೇಣಿದಾರರ ಬೇಡಿಕೆಗೆ ಸ್ಪಂದಿಸದೇ ಈಗ ಮಾತ್ರ ಏಕೆ ಮಾಡಲಾಗುತ್ತಿದೆ ಎನ್ನುವುದೇ ವಿಸ್ಮಯ. ಕೇಂದ್ರ ಸರ್ಕಾರ ಜೂನ್ 3, 2020 ರ ತನ್ನ ಸಂಪುಟದಲ್ಲಿ ಕೃಷಿ ಸೇವೆಗಳ ಕುರಿತ ರೈತ (ಸಶಕ್ತೀಕರಣ ಮತ್ತು ರಕ್ಷಣೆ) ಸುಗ್ರಿವಾಜ್ಞೆ 2020 ಕ್ಕೆ ಒಪ್ಪಿಗೆ ನೀಡಿತು. ಇದು ರೈತಾಪಿ ಬೇಸಾಯವನ್ನು ಕಾರ್ಪೋರೇಟೀಕರಣಕ್ಕೆ ಒಳಪಡಿಸಲು ಬೇಕಾದ ಅತ್ಯಗತ್ಯ ಕಾಯ್ದೆ. ಈ ಕಾಯ್ದೆಯು ಒಪ್ಪಂದ ಕೃಷಿ, ಗುತ್ತಿಗೆ ಕೃಷಿ ನಡೆಸಲು ಕೃಷಿ ವ್ಯಾಪಾರ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುತ್ತದೆ. ಕರ್ನಾಟಕದಲ್ಲಿ ಗೇಣಿ ನಿಷೇಧದ ಕಲಂ 5, ಈ ಸುಗ್ರಿವಾಜ್ಞೆ ಗೆ ಇರುವ ಪ್ರಮುಖ ಅಡ್ಡಿ. ಹೀಗೆ ಈ ತೊಡಕನ್ನು ನಿವಾರಿಸಿಕೊಳ್ಳಲಾಗುತ್ತಿದೆ.

ಕಲಂ 63, ರೈತ ಕುಟುಂಬಗಳು ಹೊಂದಲಿರುವ ಗರಿಷ್ಠ ಜಮೀನುಗಳ ಕುರಿತು ಭೂ ಮಿತಿ ಕಾಯ್ದೆ; ಇಲ್ಲಿಯವರೆಗೆ ಗಂಡ, ಹೆಂಡತಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಇರುವ ಒಂದು ಕುಟುಂಬವನ್ನು ಒಂದು ಘಟಕವೆಂದು ಪರಿಗಣಿಸಿ ಮಳೆಯಾಶ್ರಿತ ಜಮೀನಾದರೆ ಗರಿಷ್ಠ 10 ಯೂನಿಟ್ ಅಂದರೆ 54 ಎಕರೆ ಜಮೀನು ಹೊಂದಲು ಅವಕಾಶ ನೀಡಿತ್ತು. ಒಂದು ವೇಳೆ ಆ ಕುಟುಂಬವು ಪ್ರಾಯದ ಮಕ್ಕಳನ್ನು ಹೊಂದಿದ್ದರೆ, ಅವರುಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿಗಣಿಸಿ ಹೆಚ್ಚುವರಿಯಾಗಿ ತಲಾ ಎರಡು ಯೂನಿಟ್ ಜಮೀನು ಹೊಂದಲು ಅವಕಾಶ ನೀಡಿತ್ತಲ್ಲದೇ, ಐದಕ್ಕಿಂತ ಹೆಚ್ಚಿನ ಕುಟುಂಬದ ಸದಸ್ಯರನ್ನು ಹೊಂದಿದ್ದರೇ, ಗರಿಷ್ಠ 20 ಯೂನಿಟ್ ಅಂದರೆ 110 ಎಕರೆ ಮಳೆಯಾಶ್ರಿತ ಜಮೀನು ಹೊಂದಲು ಅವಕಾಶ ಮಾಡಿಕೊಟ್ಟಿತ್ತು. ಈಗ ಈ ಕಲಂಗೆ ತಿದ್ದುಪಡಿ ಮಾಡಿ ಇಂತಹ ಕುಟುಂಬ ಮಳೆಯಾಧರಿತ ಜಮೀನನ್ನು ಗರಿಷ್ಠ 40 ಯೂನಿಟ್ ಅಂದರೆ 220 ಎಕರೆಯವರೆಗೆ ಹೊಂದಲು ಅವಕಾಶ ಮಾಡಿಕೊಡಲಾಗಿದೆ.

ಕಲಂ 79 ಎ,ಬಿ,ಸಿ ಹಾಗೂ 80, ಕೃಷಿಕರು ಕೃಷಿ ಕೂಲಿಕಾರರು, ಗೇಣಿದಾರರು ಮಾತ್ರವೇ ಕೃಷಿ ಜಮೀನುಗಳನ್ನು ಹೊಂದಲು ನಿರ್ಭಂದಿಸುತ್ತವೆ. ಕೃಷಿಗೆ ಸಂಬಂಧಿಸದ ಕುಟುಂಬಗಳ ಯಾರೇ ಆದರೂ ಕೃಷಿ ಭೂಮಿ ಹೊಂದಲು ಅವಕಾಶ ನೀಡುತ್ತಿರಲಿಲ್ಲ, ಮಾತ್ರವಲ್ಲ, ಆಕ್ರಮವಾಗಿ ಹೊಂದಿದ್ದರೆ ಶಿಕ್ಷಿಸಲು, ವಾಪಸ್ಸು ಪಡೆಯಲು ಅವಕಾಶ ಇತ್ತು. ಕೃಷಿ ಕುಟುಂಬಗಳು ಕೂಡ ಜಮೀನು ಖರೀದಿಸಬೇಕಿದ್ದರೆ ಕೃಷಿಯೇತರ ಆದಾಯ ಮಿತಿಗೆ ಒಳಪಟ್ಟಿರಬೇಕಿತ್ತು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಆದಾಯದ ಮಿತಿಯನ್ನು 2 ಲಕ್ಷದಿಂದ 25 ಲಕ್ಷ ರೂಗೆ ಏರಿಸಿ ಈ ಆದಾಯ ಮಿತಿ ನಿರ್ಬಂಧ ಕೃಷಿಕರ ಕೃಷಿ ಭೂಮಿ ರಕ್ಷಣೆಗೆ ಸಿಗದಂತೆ ದುರ್ಬಲಗೊಳಿಸಿತ್ತು. ಆದಾಗ್ಯೂ ಈ ಕಲಂಗಳೇ ಭೂ ಸುಧಾರಣಾ ಕಾನೂನುಗಳ ಹೃದಯ ಮತ್ತು ಆತ್ಮಗಳಾಗಿದ್ದವು. ಕೃಷಿಕ ಸಮುದಾಯದ ಉದ್ಯೋಗ ಭದ್ರತೆಯನ್ನು, ಉದ್ಯೋಗದ ಆಧಾರವಾದ ಜಮೀನುಗಳ ಭದ್ರತೆಯನ್ನು ಕೃಷಿಕ ಸಮುದಾಯಕ್ಕೆ ನೀಡಿದ್ದಂತಹ ಕಲಂಗಳು. ಆದರೆ ಇವುಗಳು ರಾಜ್ಯ, ಕೇಂದ್ರ ಸರ್ಕಾರಗಳ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಉದ್ಯಮಿಗಳ ಒಕ್ಕೂಟದ ಪ್ರಕಾರ ಕೃಷಿ ಬೆಳವಣಿಗೆಗೆ ಅಡ್ಡಿಯಾಗಿವೆ. ಕೃಷಿಯಲ್ಲಿ ಬಂಡವಾಳ ತೊಡಗಿಸಲು ತೊಡಕಾಗಿವೆ. “ಮಂಡ್ಯ ತಾಲ್ಲೂಕು ಆಲಕೆರೆ ಗ್ರಾ.ಪಂ. ಅನ್ನು ಕೇಂದ್ರವಾಗಿಟ್ಟುಕೊಂಡು ಕೇವಲ ಒಂದು ಕಿ.ಮೀ. ವ್ಯಾಸದಲ್ಲೇ ಕನಿಷ್ಠ 25 ಪಾರಂ ಹೌಸ್ ಗಳಿವೆ ” ಎನ್ನುತ್ತಾರೆ ಆಲಕೆರೆ ಗ್ರಾಮದ ಭೂಹೀನ ಕೃಷಿಕ ರಾಜೇಶ್. ಬೆಂಗಳೂರು-ಮೈಸೂರು ಹೆದ್ದಾರಿ ಯಿಂದ 7 ಕಿ.ಮೀ ದೂರ ಇರುವ ಆಲಕೆರೆ ಗ್ರಾ.ಪಂ.ವ್ಯಾಸದಲ್ಲೇ ಇಷ್ಟು ಪಾರಂ ಹೌಸ್ ಗಳಿದ್ದರೆ ಹೆದ್ದಾರಿ ಆಸು-ಪಾಸು ಪರಿಸ್ಥಿತಿ ಊಹಿಸಬಹುದು. ತಿದ್ದುಪಡಿಗಳು ಬರುವ ಮುಂಚೆಯೇ ಕೃಷಿ ಭೂಮಿ ಈ ರೂಪ ಪಡೆದಿದ್ದರೆ, ಈ ತಿದ್ದುಪಡಿಗಳು ಯಾವ ಪ್ರಮಾಣದ ಪರಿಣಾಮಗಳನ್ನುಂಟು ಮಾಡಬಹುದು ಎಂದು ಲೆಕ್ಕಿಸಬಹುದು.

ಹೋಗಲಿ; ಈ ಪಾರಂ ಹೌಸ್ ಗಳು ಕೃಷಿ ಉತ್ಪಾದಕತೆಯನ್ನು, ಭೂ ಬಳಕೆ ಪ್ರಮಾಣದ ತೀವ್ರತೆಯನ್ನು ಹೆಚ್ಚಿಸಿವೆಯೇ; ಇದು ಮತ್ತೊಂದು ಆಸಕ್ತಿಕರವಾದ ಸಂಗತಿ. ರಜೆ ಕಳೆಯಲು ಬಹುತೇಕ ಕೃಷಿ ಪಾರಂ ಹೌಸ್ ಗಳಲ್ಲಿ ಸುಸಜ್ಜಿತವಾದ ಮನೆ ನಿರ್ಮಿಸಲಾಗಿದೆ. ಕೆಲವು ಈಜುಕೊಳವನ್ನು ಹೊಂದಿವೆ. ಕಾರುಗಳು ಓಡಾಡಲು, ಪಾರ್ಕ್ ಮಾಡಲು ಕಾಂಕ್ರೀಟ್ ತಾಣಗಳನ್ನು ನಿರ್ಮಿಸಲಾಗಿದೆ. ಈ ಯಾವುದೇ ಪಾರಂ ಹೌಸ್ ಗಳಲ್ಲಿ ಆಹಾರದ ಬೆಳೆ ಇಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ಸಾಕಷ್ಟು ಕೃಷಿಯೇತರ ಉಳಿತಾಯದ, ಕೃಷಿಯೇತರ ಕುಟುಂಬಗಳ ಆಸಕ್ತ ಯುವಕರಿಗೆ ಅವಕಾಶ ಕಲ್ಪಿಸಲು ಈ ತಿದ್ದುಪಡಿ ತರುತ್ತಿರುವುದಾಗಿ ದೊಡ್ಡ ಗಂಟಲಿನಲ್ಲಿ ಕೂಗುತ್ತಾ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸುತ್ತಿದೆ. ಆದರೆ ಈಗಾಗಲೇ ದಶಕಗಳ ಕಾಲದಿಂದ ಬಹುತೇಕ ಆಹಾರ ಬೆಳೆಗಳನ್ನೇ ಬೆಳೆಯುತ್ತಾ ಜಮೀನು ಮಂಜೂರಾತಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿರುವ ಸುಮಾರು 18 ಲಕ್ಷ ಎಕರೆಗಳಷ್ಟು ವಿಸ್ತೀರ್ಣದಲ್ಲಿ ಬಗರ್ ಹುಕಂ ಬೇಸಾಯ ಮಾಡುತ್ತಿರುವ 10 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡದೇ ಸತಾಯಿಸುತ್ತಿದೆ. ದಲಿತ, ಹಿಂದುಳಿದ ವರ್ಗಗಳ ಕುಟುಂಬಗಳೇ ಪ್ರಧಾನವಾಗಿರುವ ಈ ಬಗರ್ ಹುಕಂ ಸಾಗುವಳಿದಾರರು ಸಲ್ಲಿಸಿರುವ ಕೋರಿಕೆ ಅರ್ಜಿಗೆ ಈಗಾಗಲೇ 30 ವರ್ಷ ವಯಸ್ಸಾಗಿದೆ. ಎಂತಹ ವಿಪರ್ಯಾಸ ನೋಡಿ; ಸರ್ಕಾರ ಉಳುಮೆ ಆಸಕ್ತಿಯನ್ನು ಗಮನಿಸುತ್ತಲೇ ..ಇದೆ!

(ಎಲ್ಲ ಅಭಿಪ್ರಾಯಗಳು ಲೇಖಕರದ್ದೆ)

  • ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್‌, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್‌ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಈ ಸರಣಿ ಬರೆಯುತ್ತಿದ್ದಾರೆ.
  • ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ [email protected],  [email protected] ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights