FACT CHECK | ರೈಲನ್ನು ಆಕ್ಸಿಡೆಂಟ್ ಮಾಡುವ ಉದ್ದೇಶದಿಂದ ಜಿಹಾದಿಗಳು ರೈಲ್ವೇ ಹಳಿಯ ಮೇಲೆ ಕಂಬವನ್ನು ಇಟ್ಟಿದ್ದು ನಿಜವೇ? ಈ ಸ್ಟೋರಿ ಓದಿ

ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಹಳಿ ಮೇಲೆ ಕಬ್ಬಿಣದ ಕಂಬ ಇಟ್ಟಿರುವ ಫೋಟೋ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದಕ್ಕೆ ಕೋಮು ಬಣ್ಣ ಬಳಿಯಲಾಗಿದೆ. ಕೆಲ ಬಳಕೆದಾರರು ಇದು ‘ಮುಸ್ಲಿಂ ಕಾಲೋನಿಯ ಹಿಂದೆ ಹಾದುಹೋಗುವ ರೈಲು’ ಮತ್ತು ‘ರೈಲ್ ಜಿಹಾದ್’ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ ಅನ್ನುಹಂಚಿಕೊಳ್ಳಲಾಗಿದೆ.

ಆನಂದಗಿರಿ ರಾಮೇಗೌಡ ಎಂಬ ಫೇಸ್​ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 21, 2024 ರಂದು ಈ ಫೋಟೋವನ್ನು ಅಪ್ಲೋಡ್ ಮಾಡಿದ್ದು, ‘‘ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಪಲ್ಟಿ ಮಾಡಬೇಕು ಅಂತ ಜೀಹಾದಿಗಳು ರೈಲ್ವೆ ಹಳಿ ಮೇಲೆ ಸುಮಾರು 8 ರಿಂದ 9 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ. ಆದರೆ, ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ನ ಜಾಣತನದಿಂದ ಅನಾಹುತ ತಪ್ಪಿದೆ. ಲೊಕೊ ಪೈಲಟ್ ಕಬ್ಬಿಣದ ಕಂಬವನ್ನು ನೋಡಿದ ತಕ್ಷಣ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದರು. ಆದರೆ ಎಷ್ಟು ಕಾಲ?. ಎಲ್ಲಿಯವರೆಗೆ?, ಅವರು ನಮ್ಮನ್ನು ಎಲ್ಲಾ ಕಡೆಯಿಂದ ಸುತ್ತುವರೆದಿದ್ದಾರೆ!’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಜೈ ಶ್ರೀರಾಮ್ ಎಂಬ ಎಕ್ಸ್ ಖಾತೆಯಲ್ಲಿ ಇದೇ ಫೋಟೋ ಹಂಚಿಕೊಂಡು ಹೀಗೆ ಬರೆಯಲಾಗಿದೆ. ‘‘ಮುಖ ಮುಚ್ಚಿಕೊಂಡು ಪ್ರೀತಿಯ ಬಗ್ಗೆ ಮಾತನಾಡುವ ಮುಲ್ಲಾಗಳು ಎಲ್ಲಿದ್ದಾರೆ?. ಇಂದು ಸಾವಿರಾರು ಹಿಂದೂಗಳ ಜೀವ ಉಳಿದಿದೆ. ರೈಲನ್ನು ಉರುಳಿಸುವ ಉದ್ದೇಶದಿಂದ ರಾಂಪುರದ ಮುಸ್ಲಿಂ ಕಾಲೋನಿಯ ಹಿಂದೆ ಹಾದು ಹೋಗುವ ರೈಲು ಮಾರ್ಗದ ಮೇಲೆ ಉಗ್ರರು ಕಬ್ಬಿಣದ ಕಂಬವನ್ನು ಹಾಕಿದ್ದರು. ಆದರೆ ಡೆಹ್ರಾಡೂನ್ ಎಕ್ಸ್ ಪ್ರೆಸ್ ಲೋಕೋ ಪೈಲಟ್ ಸಕಾಲದಲ್ಲಿ ತುರ್ತು ಬ್ರೇಕ್ ಹಾಕುವ ಮೂಲಕ ಸಾವಿರಾರು ಹಿಂದೂಗಳ ಪ್ರಾಣ ಉಳಿಸಿದ್ದಾರೆ. ರೈಲ್ವೆ ಸಚಿವಾಲಯ ಕಣ್ಣು ತೆರೆಯುವುದು ಯಾವಾಗ?’’ ಎಂದು ಬರೆದಿದ್ದಾರೆ.

ಇತ್ತೀಚೆಗಷ್ಟೆ ಕಾನ್ಪುರದ ಪ್ರೇಮಪುರ ರೈಲು ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಖಾಲಿ ಗ್ಯಾಸ್‌ ಸಿಲಿಂಡರ್‌ ಇಟ್ಟು ಗೂಡ್ಸ್‌ ರೈಲನ್ನು ಹಳಿ ತಪ್ಪಿಸಲು ಯತ್ನಿಸಿದ ಘಟನೆ ನಡೆದಿತ್ತು. ಇದಲ್ಲದೆ ಕಳೆದ ಕೆಲವು ವಾರಗಳಿಂದ ರೈಲ್ವೆ ಸಂಚಾರವನ್ನು ಅಸ್ತವ್ಯಸ್ತಗೊಳಿಸುವ ಅನೇಕರ ಪ್ರಕರಣಗಳು ವರದಿಯಾಗಿದ್ದವು. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾದ ಪೋಸ್ಟ್‌ಗಳನ್ನು ನೀವು  ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಮಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2024ಎಪ್ಟಂಬರ್ 22ರಂದು ಎಬಿಪಿ ನ್ಯೂಸ್ ಮಾಡಿದ ವರದಿಯೊಂದು ಲಭ್ಯವಾಗಿದೆ.

ಎಬಿಪಿ ನ್ಯೂಸ್ ವರದಿಯ ಪ್ರಕಾರ, ‘‘ಸೆಪ್ಟೆಂಬರ್ 18 ರಂದು ಬಿಲಾಸ್‌ಪುರ ರಸ್ತೆ ಮತ್ತು ರುದ್ರಾಪುರ ಸಿಟಿ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯಲ್ಲಿ ಆರು ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇರಿಸುವ ಮೂಲಕ ನೈನಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ಹಳಿತಪ್ಪಿತು ಪ್ರಯತ್ನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ರಾಂಪುರ ಜಿಲ್ಲೆಯ ನಿವಾಸಿಗಳಾದ ಸನ್ನಿ ಅಲಿಯಾಸ್ ಸಾನಿಯಾ ಅಲಿಯಾಸ್ ಸಂದೀಪ್ ಚೌಹಾಣ್ ಮತ್ತು ಬಿಜೇಂದ್ರ ಅಲಿಯಾಸ್ ಟಿಂಕು ಎಂಬುವರನ್ನು ಬಂಧಿಸಲಾಗಿದೆ.’’

 

‘‘ಆರೋಪಿಗಳು ಕಬ್ಬಿಣದ ಕಂಬವನ್ನು ಕಳ್ಳತನ ಮಾಡಿ ಕೊಂಡೊಯ್ಯುತ್ತಿದ್ದರು. ಆಗ ರೈಲ್ವೇ ಹಾರ್ನ್ ಸದ್ದು ಕೇಳಿದ ಆರೋಪಿಗಳು ಕಂಬವನ್ನು ಟ್ರ್ಯಾಕ್ ಮೇಲೆ ಬಿಟ್ಟು ಓಡಿ ಹೋಗಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ರಾಂಪುರದಿಂದ ಸುಮಾರು 43 ಕಿಲೋಮೀಟರ್ ದೂರದಲ್ಲಿರುವ ರುದ್ರಪುರ ಸಿಟಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.’’ ಎಂದು ವರದಿಯಲ್ಲಿದೆ.

ಹಾಗೆಯೆ ಈಟಿವಿ ಭಾರತ್  ಈ ಬಗ್ಗೆ ಮಾಡಿರುವ ವರದಿ ಲಭ್ಯವಾಗಿದ್ದ, ‘‘ಕಬ್ಬಿಣದ ಕಂಬವನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು, ಆಗ ಶತಾಬ್ದಿ ಎಕ್ಸ್ ಪ್ರೆಸ್ ಬಂದಿದ್ದು, ರಾಂಪುರದಲ್ಲಿ ರೈಲು ಉರುಳಿಸುವ ಸಂಚು ಬಯಲು’’ ಎಂಬ ಹೆಡ್​ಲೈನ್​ನೊಂದಿಗೆ ಸುದ್ದಿ ಪ್ರಕಟವಾಗಿದೆ.

ಈಟಿವಿ ಭಾರತ್ ಪ್ರಕಟಿಸಿದ ವರದಿಯಲ್ಲಿ ಮೊರಾದಾಬಾದ್ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ವರ್ಮಾ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ‘‘ಈ ಘಟನೆಯ ಹಿಂದೆ ಇವರಿಗೆ ಬೇರೆ ಯಾವುದೇ ದುರುದ್ದೇಶವಿರಲಿಲ್ಲ. ಸಂದೀಪ್ ವಿರುದ್ಧ ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ಈಗಾಗಲೇ 14 ಪ್ರಕರಣಗಳು ದಾಖಲಾಗಿದ್ದು, ಆತ ಕ್ರಿಮಿನಲ್ ಸ್ವಭಾವದ ವ್ಯಕ್ತಿ. ಎರಡನೇ ಆರೋಪಿ ವಿಜಯೇಂದ್ರ, ಆತನ ವಿರುದ್ಧ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರು ತಮ್ಮ ಮಾದಕ ವ್ಯಸನವನ್ನು ಪೂರೈಸಲು, ಕಬ್ಬಿಣದ ಕಂಬವನ್ನು ಕದ್ದು ಕೊಂಡೊಯ್ಯೂವಾಗ ರೈಲು ಬಂದಿದ್ದು, ಕಬ್ಬಿಣದ ಕಂಬವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.’’ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಹಾಗೆಯೆ ಅಮರುಜಲ ಕೂಡ ಈ ಘಟನೆಯ ಕುರಿತು ವರದಿ ಮಾಡಿರುವುದನ್ನು  ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸೆಪ್ಟೆಂಬರ್ 18 ರಂದು ಬಿಲಾಸ್‌ಪುರ ರಸ್ತೆ ಮತ್ತು ರುದ್ರಾಪುರ ಸಿಟಿ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯಲ್ಲಿ ಆರು ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಸಂದೀಪ್ ಮತ್ತು ವಿಜೇಂದ್ರ ಎಂಬುವವರು ಕಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ರೈಲಿಸ ಸದ್ದು ಕೇಳಿ ಕಬ್ಬಿಣದ ಪೈಪನ್ನು ರೈಲ್ವೆ ಹಳಿಯ ಮೇಲೆ ಬಿಟ್ಟು ಪರಾರಿಯಾಗಲು ಯತ್ನಿಸುವಾಗ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕೋಮು ಆಯಾಮವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಿರುಪತಿ ಪ್ರಸಾದಕ್ಕೆ ತುಪ್ಪ ಪೂರೈಕೆ ಮಾಡಿದ A.R.ಡೈರಿಯಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರು ಮುಸಲ್ಮಾನರಂತೆ ಹೌದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights