FACT CHECK | ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಎಂಬ ವಾಟ್ಸಾಪ್ ಸಂದೇಶದ ಬಗ್ಗೆ ಇರಲಿ ಎಚ್ಚರ
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಕುರಿತು ವಾಟ್ಸಾಪ್‌ನಲ್ಲಿ ಲಿಂಕ್‌ನೊಂದಿಗೆ ಸಂದೇಶವೊಂದು ವೈರಲ್ ಆಗುತ್ತಿದೆ. ವೈರಲ್ ಸಂದೇಶದಲ್ಲಿ, ‘‘ವಿದ್ಯಾರ್ಥಿ ಲ್ಯಾಪ್‌ಟಾಪ್ ಯೋಜನೆ 2024 ಗಾಗಿ ಅಪ್ಲಿಕೇಶನ್‌ಗಳು ಲಭ್ಯವಿದೆ. ಆರ್ಥಿಕ ಕಾರಣಗಳಿಂದಾಗಿ ಸ್ವಂತ ಲ್ಯಾಪ್‌ಟಾಪ್ ಖರೀದಿಸುವ ಸ್ಥಿತಿಯಲ್ಲಿಲ್ಲದ ಮತ್ತು ಅವರ ಶಿಕ್ಷಣದ ಮಟ್ಟಕ್ಕೆ ಅನುಗುಣವಾಗಿ ಲ್ಯಾಪ್‌ಟಾಪ್‌ನ ಅಗತ್ಯವನ್ನು ಪೂರೈಸಲು ಎಲ್ಲ ವಿದ್ಯಾರ್ಥಿಗಳಿಗೆ ಈ ಯೋಜನೆಯಾಗಿದೆ’’ ಎಂದು ಮಾಹಿತಿ ಹರಿದಾಡುತ್ತಿದೆ.

ಅಲ್ಲದೆ 2024 ರಲ್ಲಿ 960,000 ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಹೆಚ್ಚಿಸಲು ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುವುದು. ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ಗಳನ್ನು ಸ್ವೀಕರಿಸಲು ಆರಂಭಿಸಿದ್ದಾರೆ. ಇಲ್ಲಿ ನೋಂದಾಯಿಸಿ ಮತ್ತು ಅರ್ಜಿ ಸಲ್ಲಿಸಿ ಎಂದು https://lc.ke/Students-Free-Laptop ಈ ಲಿಂಕ್ ಅನ್ನು ನೀಡಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ನಲ್ಲಿ ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಸರ್ಚ್ ಮಾಡಿದಾಗ, ಲ್ಯಾಪ್‌ಟಾಪ್ ವಿತರಣೆಗೆ ಸಂಬಂಧಿಸಿದಂತೆ ಅಂತಹ ಯೋಜನೆಯ ಬಗ್ಗೆ ನಮಗೆ ಯಾವುದೇ ಸುದ್ದಿ ಲಭ್ಯವಾಗಿಲ್ಲ. ಈ ಸುದ್ದಿ ನಿಜವಾಗಿದ್ದರೆ ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು.
ವೈರಲ್ ಪೋಸ್ಟ್‌ಗೆ ಸಂಬಂದಿಸಿದಂತೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವುದು ಲಭ್ಯವಾಗಿದೆ. ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಸಂದೇಶ ಸುಳ್ಳು ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಅಲ್ಲದೆ ಇಂತಹ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರದಿಂದಿರಿ ಎಂದು ಕೇಳಿಕೊಂಡಿದೆ. ಪಿಐಬಿಯ ಪೋಸ್ಟ್ ಹೀಗಿದೆ, ‘‘ನೀವು ಸಹ ವಾಟ್ಸಾಪ್‌ನಲ್ಲಿ ಉಚಿತ ಲ್ಯಾಪ್‌ಟಾಪ್ ನೀಡುವ ಸಂದೇಶವನ್ನು ಸ್ವೀಕರಿಸಿದ್ದೀರಾ? ಜಾಗರೂಕರಾಗಿರಿ, ಇದು ನಿಮ್ಮನ್ನು ವಂಚಿಸಲು ಉದ್ದೇಶಿಸಿರುವ ಹಗರಣವಾಗಿದೆ, ಅಂತಹ ಅನುಮಾನಾಸ್ಪದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ ಮತ್ತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ.’’ ಎಂದು ಬರೆದುಕೊಂಡಿದೆ.
Did you also receive a #WhatsApp message offering free laptops ⁉️
Beware⚠️ This is a scam to dupe you ‼️#PIBFactCheck
Never click on such suspicious links
Be cautious while sharing personal information. pic.twitter.com/ZXXmCWGw0Z
— PIB Fact Check (@PIBFactCheck) November 17, 2024
ಉಚಿತ ಲ್ಯಾಪ್‌ಟಾಪ್ ವಿತರಣೆಯ ಅಂತಹ ಯಾವುದೇ ಯೋಜನೆಯನ್ನು ಜಾರಿಯಲ್ಲಿಲ್ಲ. ಇದು ಜನರ ವೈಯಕ್ತಿಕ ಡೇಟಾವನ್ನು ಕದಿಯುವ ಹಗರಣವಾಗಿರಬಹುದು. ಅಂತಹ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಮತ್ತು ಸೈಬರ್ ವಂಚನೆಯ ಬಗ್ಗೆ ಎಚ್ಚರದಿಂದಿರಿ.
ಈ ಸಂದೇಶದಲ್ಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಒಂದು ವೆಬ್‌ಸೈಟ್‌ಗೆ ಹೋಗುತ್ತಿದೆ. ಇದು ಥೇಟ್ ಸರ್ಕಾರಿ ವೆಬ್ಸೈಟ್ ಮಾದರಿಯಲ್ಲೇ ಇದೆ. ಆದರೆ, ಇದು ಯಾವುದೇ ಅಧಿಕೃತ ಸರ್ಕಾರಿ ಸೈಟ್ ಅಲ್ಲ. ಇದಲ್ಲದೆ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ. ಹಾಗಾಗಿ ಇಂತಹ ವಂಚನೆಯ ಜಾಲಗಳ ಬಗ್ಗೆ ಎಚ್ಚರವಿರಲಿ.
FACT CHECK | 2024ರಲ್ಲಿ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆಯೇ?
ಸಾಮಾಜಿಕ ಮಾಧ್ಯಮಗಳಲ್ಲಿ, ಕಳೆದ ವಾರ ಇದೇ ರೀತಿಯ ಮತ್ತೊಂದು ಪೋಸ್ಟ್ ವೈರಲ್ ಆಗಿತ್ತು. ಭಾರತ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಮತ್ತು ಜನರು ಕೆಲವು ವಿವರಗಳೊಂದಿಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಆಫರ್ ಅನ್ನು ಪಡೆಯಬಹುದು ಎಂದು ವಂಚನೆಯ ಪೋಸ್ಟ್ ವೈರಲ್ ಆಗಿತ್ತು. ಹಾಗಾಗಿ ಇದರ ಬಗ್ಗೆ ಇರಲಿ ಎಚ್ಚರ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪ್ರಚಾರದಲ್ಲಿ ಪಾಕಿಸ್ತಾನ ಧ್ವಜದ ಪ್ರರ್ದಶನ ಮಾಡಲಾಗಿದೆಯೇ?

