FACT CHECK | ಧಾರ್ಮಿಕ ಉಪದೇಶ ನೀಡುವ 10 ವರ್ಷದ ಬಾಲಕ ಅಭಿನವ ಆರೋರ ಮೇಲೆ ಗೂಳಿಯೊಂದು ದಾಳಿ ನಡೆಸಿದೆಯೇ?
ಹತ್ತು ವರ್ಷದ ಧಾರ್ಮಿಕ ಬೋಧಕನಾದ ಅಭಿನವ ಆರೋರ ಇತ್ತೀಚಿಗೆ ಹಲವು ವಿವಾದಗಳಿಗೆ ಸಿಲುಕಿ ಕೊಳ್ಳುತ್ತಿದ್ದಾನೆ. ಈತನ ಹಲವು ಧಾರ್ಮಿಕ ಬೋಧನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗುತ್ತಿದ್ದು, ಈತನಿಗೆ ಶಾಲೆಗೆ ತೆರಳಿ ಉತ್ತಮ ಶಿಕ್ಷಣ ಪಡೆಯುವಂತೆ ಹಲವು ನಾಗರಿಕರು ಸಲಹೆಗಳನ್ನು ನೀಡುತ್ತಿದ್ದಾರೆ. ಆದರೂ ಈತ ಧಾರ್ಮಿಕ ಉಪದೇಶ ನೀಡುವುದನ್ನು ಮುಂದುವರಿಸಿರುವುದು ಟೀಕೆಗೆ ಗುರಿಯಾಗಿದೆ. ಇದರ ಜೊತೆಗೆ ಇತ್ತೀಚಿಗೆ ಈತನ ಮೇಲೆ ಗೂಳಿಯೊಂದು ದಾಳಿ ನಡೆಸಿದೆ ಎಂಬ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ನೋಡಿದ ಹಲವರು ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವು ಮಂದಿ ಈ ವಿಡಿಯೋವನ್ನು ಟ್ರೋಲ್ಗೆ ಕೂಡ ಬಳಸಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶವೇನು ಎಂಬುದನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು, ವಿಡಿಯೋದ ವಿವಿಧ ಕಿ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 8 ನವಂಬರ್ 2024 ರಂದು ವೈರಲ್ ವಿಡಿಯೋವಿನ ಮೂಲ ವಿಡಿಯೋ ಇನ್ಸ್ಟಾಗ್ರಾಂ ಖಾತೆಯೊಂದರಲ್ಲಿ ಹಂಚಿಕೊಂಡಿರುವುದು ಪತ್ತೆಯಾಗಿದೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆರೋರ ಪ್ರವಚನ ನೀಡಿರುವುದು ಕಂಡುಬಂದಿದೆ.
ಈ ಮೂಲ ವಿಡಿಯೋವನ್ನು ಗಮನಿಸಿದಾಗ ವೈರಲ್ ವಿಡಿಯೋ ಎಡಿಟ್ ಮಾಡಿರುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದು ಕಂಡುಬಂದಿದೆ. ಹೀಗಾಗಿ AI ಪತ್ತೆ ಸಾಧನ ಟ್ರೂ ಮೀಡಿಯಾ ಮೂಲಕ ವಿಡಿಯೋವನ್ನು ಪರಿಶೀಲಿಸಿದಾಗ, AI ವೆಬ್ಸೈಟ್ ಶೇಕಡ 90ರಷ್ಟು ಈ ವಿಡಿಯೋವನ್ನು AIನಿಂದ ರಚಿಸಲಾಗಿದೆ ಎಂಬ ಫಲಿತಾಂಶ ಲಭ್ಯವಾಗಿದೆ.

ಒಂದು ವೇಳೆ ಆರೋರ ಈ ರೀತಿಯಾದ ಗೂಳಿಯ ದಾಳಿಗೆ ಒಳಗಾಗಿದ್ದರೆ ಆ ಕುರಿತು ಸುದ್ದಿ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಇದಕ್ಕಾಗಿ ಪರಿಶೀಲನೆಯನ್ನು ನಡೆಸಿದಾಗ ಈ ಘಟನೆಗೆ ಸಂಬಂಧಪಟ್ಟಂತೆ ಯಾವುದೇ ವರದಿಗಳು ಲಭ್ಯವಾಗಿಲ್ಲ. ಹೀಗಾಗಿ ವೈರಲ್ ವಿಡಿಯೋ ಸಂಪೂರ್ಣವಾಗಿ ಎಡಿಟೆಡ್ ಮಾಡಿ AIನಿಂದ ನಿರ್ಮಿಸಲಾಗಿದೆ ಎಂಬುದು ನಮಗೆ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಧಾರ್ಮಿಕ ಬೋಧಕನಾದ ಬಾಲಕ ಅಭಿನವ್ ಆರೋರ ಗೂಳಿಯ ದಾಳಿಗೆ ಒಳಗಾಗಿದ್ದಾನೆ ಎಂಬ ವಿಡಿಯೋ AIನಿಂದ ರಚಿಸಲಾಗಿದೆ. ಮೂಲ ವಿಡಿಯೋದಲ್ಲಿ ಬಾಲಕ ತನ ಧಾರ್ಮಿಕ ಪ್ರವಚನವನ್ನು ಯಶಸ್ವಿಯಾಗಿ ಮುಗಿಸಿರುವುದು ಕಂಡು ಬಂದಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ನನಗೆ ಕಾಳಜಿ ಇಲ್ಲ ಎಂಬ ಬರಹದ ಬ್ಯಾಗ್ ಪ್ರದರ್ಶಿಸಿದ್ರಾ ಪ್ರಿಯಾಂಕ ಗಾಂಧಿ?

