FACT CHECK | ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ನನಗೆ ಕಾಳಜಿ ಇಲ್ಲ ಎಂಬ ಬರಹದ ಬ್ಯಾಗ್ ಪ್ರದರ್ಶಿಸಿದ್ರಾ ಪ್ರಿಯಾಂಕ ಗಾಂಧಿ?
ಸಂಸತ್ ಅದಿವೇಶನಕ್ಕೆ ಆಗಮಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ಗೆ ಬೆಂಬಲ ಸೂಚಿಸುವ ಬ್ಯಾಗ್ನೊಂದಿಗೆ ಡಿಸೆಂಬರ್ 16 ರಂದು ಕಾಣಿಸಿಕೊಂಡಿದ್ದರು. ಆದರೆ ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾದ ಹಿಂದೂಗಳ ಬಗ್ಗೆ ಕಾಳಜಿ ಇಲ್ಲ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ಮನೋಜ್ ಶರ್ಮಾ ಎಂಬ ಫೇಸ್ಬುಕ್ ಬಳಕೆದಾರರೊಬ್ಬರು, ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿನ ಒಳಗೆ ಪ್ರವೇಶಿಸುವ ಮುನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಹಾಕಿಕೊಂಡಿರುವ ಬ್ಯಾಗ್ ಮೇಲೆ “ನಾನು ಬಾಂಗ್ಲಾದೇಶಿ ಹಿಂದೂಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಬರೆಯಲಾಗಿದೆ. ಹಾಗಿದ್ದರೆ ಪ್ರಿಯಾಂಕ ಗಾಂಧಿ ನಿಜವಾಗಿಯೂ ಬಾಂಗ್ಲಾ ಹಿಂದೂಗಳ ಬಗ್ಗೆ ಕಾಳಜಿ ಇಲ್ಲ ಎಂಬ ಬರಹವಿರುವ ಬ್ಯಾಗ್ಅನ್ನು ಪ್ರದರ್ಶಿಸಿದ್ದಾರೆಯೇ ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಗಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ವೈರಲ್ ಫೋಟೋ ಸತ್ಯಾಸತ್ಯತೆಯನ್ನುಪರಿಶೀಲಿಸಲು ಗೂಗಲ್ ಲೆನ್ಸ್ ಟೂಲ್ ಬಳಸಿ ಸರ್ಚ್ ಮಾಡಿದಾಗ, ಇದೇ ಚಿತ್ರವನ್ನು ಹಂಚಿಕೊಂಡು ಅನೇಕ ಸುದ್ದಿ ಮಾಧ್ಯಮ ಮಾಡಿದ ವರದಿಗಳು ಲಭ್ಯವಾಗಿದೆ . ಡಿಸೆಂಬರ್ 16, 2024 ರಂದು ಇಂಡಿಯಾ ಟುಡೆ ಮಾಡಿರುವ ಸುದ್ದಿಯ ಪ್ರಕಾರ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ಬೆಂಬಲಿಸುವ ಬ್ಯಾಗ್ ನೊಂದಿಗೆ ಸೋಮವಾರ ಸಂಸತ್ತಿಗೆ ಬಂದಿದ್ದರು, ನಂತರ ಬಿಜೆಪಿ ಅವರನ್ನು ಸಾಕಷ್ಟು ಟೀಕಿಸಿತ್ತು.

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ನಿನ್ನೆಯಷ್ಟೇ ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ನ್ನು ಸಂಸತ್ತಿಗೆ ತೆಗೆದುಕೊಂಡು ಬಂದಿದ್ದರಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಆದರೆ ಇಂದು ಬಾಂಗ್ಲಾದೇಶದಲ್ಲಿರುವ ಹಿಂದೂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ನಿಲ್ಲೋಣ ಎನ್ನುವ ಬರಹವಿರುವ ಬ್ಯಾಗ್ ಹಿಡಿದು ಬಂದಿದ್ದರು. ಕೇರಳದ ವಯನಾಡ್ನಿಂದ ಇತ್ತೀಚಿನ ಚುನಾವಣಾ ಗೆಲುವಿನ ನಂತರ ತಮ್ಮ ಚೊಚ್ಚಲ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಲೋಕಸಭೆಯ ಅಧಿವೇಶನದಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರು ಎಂಬ ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ಮಾಡಿದೆ.

ಪ್ರಿಯಾಂಕಾ ಗಾಂಧಿ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಲಭ್ಯವಾಗಿದೆ. ಇದರಲ್ಲೂ ನೈಜ ಚಿತ್ರಗಳು ಮತ್ತು ವಿಡಿಯೋಗಳನ್ನು ಬಳಸಲಾಗಿದೆ. ಈ ರೀಲ್ ಅನ್ನು ಡಿಸೆಂಬರ್ 17 ರಂದು ಅಪ್ಲೋಡ್ ಮಾಡಲಾಗಿದೆ.

ಡಿಸೆಂಬರ್ 16, 2024 ರಂದು ‘ಪ್ಯಾಲೆಸ್ಟೈನ್’ ಪರವಾದ ಬ್ಯಾಗ್ನೊಂದಿಗೆ ಪ್ರಿಯಾಂಕಾ ಗಾಂಧಿಯವರ ಹಲವು ಫೋಟೋಗಳನ್ನು ಒಳಗೊಂಡಿರುವ ದಿ ಹಿಂದೂ ಮಾಧ್ಯಮ Instagram ಪೋಸ್ಟ್ ಲಭ್ಯವಾಗಿದೆ.
ಕಾಂಗ್ರೆಸ್ ಮಾಧ್ಯಮದ ಪ್ಯಾನೆಲಿಸ್ಟ್ ಡಾ. ಅಜಯ್ ಉಪಾಧ್ಯಾಯ ಅವರು ಬಾಂಗ್ಲಾದೇಶದ ಅಲ್ಪಸಂಖ್ಯಾತರನ್ನು ಬೆಂಬಲಿಸುವ ಕುರಿತು ಮಾತನಾಡಿರುವ ಪ್ರಿಯಾಂಕಾ ಗಾಂಧಿಯವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬ್ಯಾಗ್ನಲ್ಲಿ ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ಗೆ ಬೆಂಬಲ ವ್ಯಕ್ತಪಡಿಸಿರುವ ಫೋಟೋವನ್ನು ತಿರುಚಿರುವುದು ಸ್ಪಷ್ಟವಾಗಿದೆ. ಬಾಂಗ್ಲಾದೇಶ ಹಿಂದೂಗಳ ಬಗ್ಗೆ ನನಗೆ ಕಾಳಜಿ ಇಲ್ಲ ಎಂದು ಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಇಂಗ್ಲಿಷ್ನಲ್ಲಿ ಬರೆಯಲಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸುಪ್ರಿಯಾ ಶ್ರೀನೆಟ್ ಕೂಡ ವೈರಲ್ ಚಿತ್ರ ನಕಲಿ ಎಂದು ಹೇಳಿದ್ದಾರೆ. ಡಿಸೆಂಬರ್ 17, 2024 ರಂದು ಸಂಸತ್ತಿನಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತರನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ಫೋಟೋಗಳನ್ನು ಸಹ ಪ್ರಿಯಾಂಕ ಗಾಂಧಿ ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದದರೆ, “ನಾನು ಬಾಂಗ್ಲಾದೇಶಿ ಹಿಂದೂಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂಬ ಬ್ಯಾಗ್ನೊಂದಿಗೆ ಪ್ರಿಯಾಂಕಾ ಗಾಂಧಿ ಸಂಸತ್ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೊಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಾಜಿ ಸಿಎಂ ಕೇಜ್ರಿವಾಲ್ ಮತ್ತು ಎಲಾನ್ ಮಸ್ಕ್ರನ್ನು ಭೇಟಿಯಾಗಿದ್ದಾರೆ ಎಂಬ ಫೋಟೊದ ಅಸಲೀಯತ್ತೇನು?

