FACT CHECK | HMPV ಸೋಂಕಿನಿಂದ ಚೀನಾದಲ್ಲಿ ಜನ ಸಾಯುತ್ತಿದ್ದಾರೆ ಎಂದು 2022ರ ಹಳೆಯ ವಿಡಿಯೋ ಹಂಚಿಕೆ
ಕರೋನವನ್ನೆ ಹೋಲುವ, ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವ್ಯಾಪಕವಾಗಿ ಹರಡುತ್ತಿದೆ ಮತ್ತು ಚೀನಾದಲ್ಲಿ ಅನೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. HMPV ಜೊತೆಗೆ, ಇನ್ಫ್ಲುಯೆನ್ಸ A, ಮೈಕೋಪ್ಲಾಸ್ಮಾ, ನ್ಯುಮೋನಿಯಾ ಮತ್ತು ಕೋವಿಡ್-19 ವೈರಸ್ಗಳು ಸಹ ಹರಡುತ್ತಿವೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಈ ಹಿನ್ನೆಲೆಯಲ್ಲಿ, “ಹೊಸ HMPV ವೈರಸ್ನಿಂದಾಗಿ ಚೀನಾದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ.”ಎಂಬ ಶೀರ್ಷಿಯೊಂದಿಗೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಚೀನಾದಲ್ಲಿ HMPV ವೈರಸ್ನಿಂದಾಗಿ ಜನ ಸಾವನಪ್ಪುತ್ತಿದ್ದು ಪರಿಸ್ಥಿತಿ ಕೈ ಮೀರಿದ್ದು, ಭಾರತದಲ್ಲೂ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಚೀನಾದಲ್ಲಿ ನಿಜವಾಗಿಯೂ HMPV ವೈರಸ್ನಿಂದ ಸಾವನಪ್ಪುತ್ತಿರುವುದು ನಿಜವ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ನವೆಂಬರ್ 2022 ರಲ್ಲಿ ಅದೇ ದೃಶ್ಯಗಳನ್ನು ಒಳಗೊಂಡ ಡೈಲಿ ಸ್ಟಾರ್ ವಾಹಿನಿಯೊಂದು ವರದಿ ಪ್ರಕಟಿಸಿರುವುದು ಲಭ್ಯವಾಗಿದೆ. ಈ ಲೇಖನದ ಪ್ರಕಾರ, ಈ ವೈರಲ್ ವೀಡಿಯೊ ಚೀನಾ ತನ್ನ ಶೂನ್ಯ ಕೋವಿಡ್ ನೀತಿಯ ಭಾಗವಾಗಿ 2022 ರಲ್ಲಿ ಕರೋನಾ ಸಮಯದಲ್ಲಿ ತನ್ನ ಜನರನ್ನು ಕೋವಿಡ್ ಶಿಬಿರಗಳಿಗೆ ಹೋಗಲು ಒತ್ತಾಯಿಸುತ್ತದೆ ಎಂದು ತೋರಿಸುತ್ತದೆ.

ಅದೇ ವೈರಲ್ ವೀಡಿಯೊದಲ್ಲಿನ ದೃಶ್ಯಗಳನ್ನು ವರದಿ ಮಾಡುವ 2022 ರಲ್ಲಿ ಪ್ರಕಟವಾದ ಹೆಚ್ಚಿನ ಸುದ್ದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಅಕ್ಟೋಬರ್ 2022 ರಲ್ಲಿ X(ಟ್ವಿಟರ್) ನಲ್ಲಿ ಇದೇ ದೃಶ್ಯಗಳನ್ನು ಹಂಚಿಕೊಂಡ (ಆರ್ಕೈವ್ ಮಾಡಲಾಗಿದೆ) ಬಳಕೆದಾರರು “ಕ್ಸಿ ಜಿನ್ಪಿಂಗ್ ಆಡಳಿತದಲ್ಲಿ, ಪ್ರತಿ ರಾತ್ರಿ, ಸಾವಿರಾರು ಜನರನ್ನು ಕೋವಿಡ್ ಕ್ವಾರಂಟೈನ್ ಶಿಬಿರಗಳಿಗೆ ಬಲವಂತವಾಗಿ ಕಳುಹಿಸಲಾಗುತ್ತಿದೆ” ಎಂದು ಹೇಳಿದ್ದಾರೆ. ಈ ವೀಡಿಯೊ ಪ್ರಸ್ತುತ ಚೀನಾದಲ್ಲಿ ಹರಡುತ್ತಿರುವ HMPV ವೈರಸ್ಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸುತ್ತದೆ.
Chinese wind of change pic.twitter.com/JuZghwb4An
— Russian Market (@runews) October 22, 2022
ಅಧಿಕೃತ ಮಾಹಿತಿಯ ಪ್ರಕಾರ, ಭಾರತದಲ್ಲಿ ಮೊದಲ HMPV ಪಾಸಿಟಿವ್ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿಗೆ ಎಚ್ಎಂಪಿವಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಐಸಿಎಂಆರ್ ದೆಹಲಿಯು ಕರ್ನಾಟಕದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್ಎಂಪಿವಿ) ಎರಡು ಪ್ರಕರಣಗಳನ್ನು ಗುರುತಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಭಾರತ ಸರ್ಕಾರವು ಕರ್ನಾಟಕದಲ್ಲಿ ಎರಡು HMPV ಪ್ರಕರಣಗಳು ವರದಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಿದೆ.
ಎಚ್ ಎಂಪಿವಿ (HMPV) ಎಂದರೇನು?
ಹ್ಯೂಮನ್ ಮೆಟಾಪ್ನ್ಯುಮೋ (HMPV) ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಉಸಿರಾಟದ ಸೋಂಕನ್ನು ಹರಡುವ ವೈರಸ್ ಆಗಿದೆ. ಸಾಮಾನ್ಯವಾಗಿ ಸೌಮ್ಯ ಮತ್ತು ಮಧ್ಯಮ ಫ್ಲೂ ತರಹದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಈ ವೈರಸ್ ಚಳಿಗಾಲ ಮತ್ತು ವಸಂತಕಾಲದ ಆರಂಭದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪುಟ್ಟಮಕ್ಕಳು ಹಾಗೂ ವೃದ್ಧರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ.
HMPV ರೋಗ ಲಕ್ಷಣಗಳು
* ಕೆಮ್ಮು
* ಮೂಗು ಕಟ್ಟುವಿಕೆ
* ಗಂಟಲು ನೋವು
* ಜ್ವರ
* ಉಬ್ಬಸ
* ಉಸಿರಾಟ ಸಮಸ್ಯೆ
* ಗಂಭೀರ ಪ್ರಕರಣಗಳಲ್ಲಿ ಶ್ವಾಸಕೋಶ ಸೋಂಕು ಅಥವಾ ನ್ಯುಮೋನಿಯಾ ಕೂಡ ಉಂಟಾಗಬಹುದು.
HMPV ಹರಡುವುದು ಹೇಗೆ?
* ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನುವಾಗ ಹೊರಬರುವ ಹನಿಗಳ ಮೂಲಕ ಹೆಚ್ ಎಂಪಿವಿ ಹರಡುತ್ತದೆ.
* ಸೋಂಕಿತ ವ್ಯಕ್ತಿಯ ಸ್ಪರ್ಶಿಸಿದ ವಸ್ತುಗಳನ್ನು ಸ್ಪರ್ಶಿಸಿದ ನಂತರ ಮುಖವನ್ನು ಸ್ಪರ್ಶಿಸುವ ಮೂಲಕ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
* ಕಲುಷಿತ ವಸ್ತುಗಳನ್ನು ಸ್ಪರ್ಶಿಸಿ ನಂತರ ನಿಮ್ಮ ಕಣ್ಣುಗಳು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವ ಮೂಲಕ ಹರಡಬಹುದು ಎಂದಿದ್ದಾರೆ ವೈದ್ಯರು.
HMPV ಸೋಂಕು ತಡೆಗಟ್ಟುವ ವಿಧಾನ :
* ಆಗಾಗ್ಗೆ ಕೈತೊಳೆಯುವುದು: ವೈರೆಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸುತ್ತ ಇರಿ.
* ಮಾಸ್ಕ್ ಧರಿಸುವುದು : ಕಿಕ್ಕಿರಿದ ಜನಸಂದಣಿ ಇರುವ ಸ್ಥಳಗಳಲ್ಲಿ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಮಾಸ್ಕ್ ಕಡ್ಡಾಯವಾಗಿ ಧರಿಸಿ.
* ನಿಕಟ ಸಂಪರ್ಕವನ್ನು ತಪ್ಪಿಸಿ: ಅನಾರೋಗ್ಯದಿಂದ ಬಳಲುತ್ತಿರುವ ಜನರಿಂದ ಅದರಲ್ಲೂ ವಿಶೇಷವಾಗಿ ಶೀತದಂತಹ ರೋಗಲಕ್ಷಣಗಳನ್ನು ಕಂಡು ಬಂದರೆ ಆ ವ್ಯಕ್ತಿಗಳಿಂದ ದೂರವಿರಿ.
* ನಿಮ್ಮ ಬಾಯಿ ಹಾಗೂ ಮೂಗು ಮುಚ್ಚಿಕೊಳ್ಳಿ: ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದರೊಂದಿಗೆ ಟಿಶ್ಯೂ ಬಳಸಿ.
* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ: ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲವಾಗಿಡಲು ಪೋಷಣೆಯುಕ್ತ ಆಹಾರ, ನಿಯಮಿತ ವ್ಯಾಯಾಮ ಹಾಗೂ ಸಾಕಷ್ಟು ನಿದ್ರೆ ಮಾಡಿ.
* ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳದಿರಿ : ಸೋಂಕು ಹರಡುವುದನ್ನು ತಡೆಯಲು ಪಾತ್ರೆ, ಕಪ್ ಅಥವಾ ಇತರ ವಸ್ತುಗಳನ್ನು ಹಂಚಿಕೊಳ್ಳದಿರಿ.
* ವ್ಯಾಕ್ಸಿನೇಷನ್: ಹೆಚ್ ಎಂಪಿವಿ ಸೋಂಕಿಗೆ ಇನ್ನೂ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲದಿದ್ದರೂ, ಪ್ರತಿರಕ್ಷಣಾ ವ್ಯವಸ್ಥೆ ಮೇಲಿನ ಹೊರೆ ಕಡಿಮೆ ಮಾಡಲು ಜ್ವರ ಮತ್ತು ಕೋವಿಡ್ 19 ನಂತಹ ಇತರ ಉಸಿರಾಟದ ಸೋಂಕುಗಳಿಗೆ ಲಸಿಕೆಯನ್ನು ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ.
ಭಾರತದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಈ ವೈರಸ್ ಕಾರಣವಾಗುತ್ತದೆಯೇ?
ಎಚ್ ಎಂಪಿವಿ ಒಂದು ಉಸಿರಾಟದ ಸೋಂಕನ್ನು ಹರಡುವ ವೈರಸ್ ಆಗಿದ್ದು, ಇದು ಕೋವಿಡ್ 19 ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಸಾಧ್ಯತೆಯಿಲ್ಲ. ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಜನರಲ್ಲಿ ಗಂಭೀರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು. ಈ ಸೋಂಕನ್ನು ಏಕಾಏಕಿ ತಡೆಗಟ್ಟಲು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಇತರ ಉಸಿರಾಟದ ಕಾಯಿಲೆಗಳ ವಿರುದ್ಧ ವ್ಯಾಕ್ಸಿನೇಷನ್ ಉತ್ತೇಜಿಸುವುದು ಅತ್ಯಗತ್ಯ ಎಂದಿದ್ದಾರೆ ವೈದ್ಯರು.
ಎಚ್ ಎಂ ಪಿವಿ ಸೋಂಕು ಕೋವಿಡ್ ನಂತೆ ಗಂಭೀರವಾಗಬಹುದೇ?
ಎಚ್ ಎಂ ಪಿವಿ ಮತ್ತು ಕೋವಿಡ್ 19 ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆನಂತಹ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೂ ಅವು ವಿಭಿನ್ನ ವೈರಸ್ಗಳಿಂದ ಬರುವ ಸೋಂಕಾಗಿದೆ. ಕೋವಿಡ್ ಗೆ ಹೋಲಿಸಿದರೆ ಹೆಚ್ ಎಂಪಿವಿ ಸೌಮ್ಯ ಸ್ವರೂಪ ಸೋಂಕಾಗಿದ್ದು, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಗಮನಾರ್ಹವಾದ ಅನಾರೋಗ್ಯವನ್ನು ಉಂಟುಮಾಡಬಹುದು. ಆದರೆ ಈ ಪ್ರಕರಣಗಳಿಗೆ ಸಂಬಂಧಿಸಿದ ತೀವ್ರ ನಿಗಾ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ವಿಶೇಷವಾಗಿ ದುರ್ಬಲವರ್ಗದ ಗುಂಪುಗಳಲ್ಲಿ ಸರಿಯಾದ ಮುನ್ನೆಚ್ಚರಿಕೆಗಳು ಹಾಗೂ ಜಾಗೃತಿಯೊಂದಿಗೆ ಸೋಂಕು ಹರಡುವಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 2022 ಚೀನಾದಲ್ಲಿ ಕರೋನಾ ಸಮಯದಲ್ಲಿ ಕ್ವಾರಂಟೈನ್ ಮಾಡಲು ಸೋಂಕಿತರನ್ನು ಶಿಬಿರಗಳಿಗೆ ಕರೆದೊಯ್ಯೂತ್ತಿರುವ ಹಳೆಯ ದೃಶ್ಯಗಳನ್ನು, ಎಚ್ಎಂಪಿವಿ ವೈರಸ್ನಿಂದ ಚೀನಾದಲ್ಲಿ ಅನೇಕ ಸಾವುಗಳು ಸಂಭವಿಸಿವೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಚೀನಾದಲ್ಲಿ ಈ ವೈರಸ್ ವೇಗವಾಗಿ ಹರಡುತ್ತಿದೆ ಮತ್ತು ಚೀನಾದಲ್ಲಿ ಅನೇಕ ಜನರು ಈ ಕಾಯಿಲೆಯಿಂದ ಬಳಲುತ್ತಿರುವುದು ನಿಜವಾಗಿದ್ದರು, ವೈರಲ್ ವಿಡಿಯೋದಲ್ಲಿ ಪ್ರತಿಪಾದಿಸಿದಂತೆ ಜನ ಸೋಂಕಿನಿಂದ ಸಾವನಪ್ಪುತ್ತಿದ್ದಾರೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಮಮಂದಿರ ಸ್ಪೋಟಿಸುವುದಾಗಿ ಮುಸ್ಲಿಮರ ಹೆಸರಿನಲ್ಲಿ ಬೆದರಿಕೆ ಕರೆ ಮಾಡಿದ್ದು ಹಿಂದೂ ಯುವಕರು ಎಂಬುದು ನಿಜ

