FACT CHECK | ಮುಸ್ಲಿಮರು ರೈಲಿನ ಸೀಟಿಗೆ ಬೆಂಕಿ ಹಚ್ಚಿದ್ದಾರೆ ಎಂದು ಕೋಮು ನಿರೂಪಣೆಯೊಂದಿಗೆ ಹಳೆಯ ವಿಡಿಯೋ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಮೊದಲಿಗೆ ಓರ್ವ ವ್ಯಕ್ತಿ ರೈಲಿನ ಸೀಟಿನ ಮೇಲೆ ಪೇಪರ್ ಇಟ್ಟು ಬೆಂಕಿಕಡ್ಡಿಯಿಂದ ಬೆಂಕಿ ಹಚ್ಚುತ್ತಿರುವುದನ್ನು ಕಾಣಬಹುದು. ಮತ್ತೋರ್ವ ವ್ಯಕ್ತಿ ಮೊಬೈಲ್​ನಲ್ಲಿ ವೀಡಿಯೊ ಮಾಡುತ್ತಿರುತ್ತಾನೆ. ಇದೇ ರೀತಿ ಇವರು ರೈಲಿನ ಬೇರೆ ಬೇರೆ ಸೀಟುಗಳಿಗೆ ಬೆಂಕಿ ಇಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಜನವರಿ 27,2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ದೇಶದ ಅಬಿವೃದ್ದಿ ಸಹಿಸದ ಮುಸ್ಲಿಂ ಬೋ… ಮಕ್ಕಳ ಕೆಲಸ ನೋಡಿ….. ಬಾಂಬ್ ಇಕ್ಕೋರು ದರೋಡೆಕೋರರು ಸುಲಿಗೆಗಾರರು ಅತ್ಯಾಚಾರಿಗಳು.. ಡಿಕೆ ಇರೋವರೆಗೆ ಈ ದೇಶ ಅಭಿವೃದ್ಧಿ ಅಗಲ್ಲ’’ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Lokmat Times (@lokmattimesmedia)

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ರೈಲಿನ ಸೀಟಿಗೆ ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯ ನಡೆಸುತ್ತಿರುವ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು, ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದಾಗ, ಇದೇ ವೀಡಿಯೊ ಎಕ್ಸ್​ನಲ್ಲಿ ಕೂಡ ವೈರಲ್ ಆಗುತ್ತಿರುವುದು ಕಂಡುಬಂತು. ಈ ವೀಡಿಯೊದ ಕಮೆಂಟ್ ಬಾಕ್ಸ್ ಪರಿಶೀಲಿಸಿದಾಗ ಬಳಕೆದಾರರೊಬ್ಬರು, ಇದು ಹಳೇಯ ವೀಡಿಯೊ ಎಂದು 2022 ರಲ್ಲಿ ವಾರ ಪತ್ರಿಕೆ Organiser Weekly ಹಂಚಿಕೊಂಡಿರುವ ಇದೇ ವೈರಲ್ ವೀಡಿಯೊವನ್ನು ಕಮೆಂಟ್ ಬಾಕ್ಸ್​ನಲ್ಲಿ ಹಾಕಿದ್ದಾರೆ.

 

Organiser Weekly ಈ ವೀಡಿಯೊವನ್ನು ಜೂನ್ 23, 2022 ರಂದು ತನ್ನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಇದು ಸಿಕಂದರಾಬಾದ್‌ನ ವೀಡಿಯೊ. ಆರೋಪಿ ಆದಿಲಾಬಾದ್‌ನ ಪೃಧ್ವಿರಾಜ್ ರೈಲ್ವೆ ಬೋಗಿಗಳಿಗೆ ಮೊದಲು ಬೆಂಕಿ ಹಚ್ಚಿದ ವ್ಯಕ್ತಿ. ಜೂನ್ 17 ರಂದು ಹಿಂಸಾತ್ಮಕ ಗುಂಪೊಂದು ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಮೇಲೆ ದಾಳಿ ಮಾಡಿ ರೈಲ್ವೆ ಆಸ್ತಿಗೆ ಹಾನಿ ಮಾಡಿತು.

ಈ ಮಾಹಿತಿಯ ಆಧಾರದ ಮೇಲೆ ನಾವು ‘prudhviraj-Adilabad-rail-fire’ ಎಂಬ ಕೀವರ್ಡ್ ಬಳಸಿ ಗೂಗಲ್​ನಲ್ಲಿ ಸರ್ಚ್ ಮಾಡಿದ್ದೇವೆ. ಆಗ Aaj Tak ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಜೂನ್ 25, 2022 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ದೇಶದ ಹಲವೆಡೆ ಭಾರೀ ಪ್ರತಿಭಟನೆಗಳು ನಡೆದಿದ್ದವು. ಅಗ್ನಿಪಥ್ ಯೋಜನೆ ವಿರುದ್ಧ ತೆಲಂಗಾಣದಲ್ಲೂ ಉಗ್ರ ಪ್ರತಿಭಟನೆಗಳು ನಡೆದಿವೆ. ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಪ್ರತಿಭಟನಾಕಾರರು ಕೋಲಾಹಲ ಸೃಷ್ಟಿಸಿದರು. ಪ್ರತಿಭಟನಾಕಾರರು ನಿಲ್ದಾಣವನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇದೀಗ ಈ ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ’’ ಎಂದು ಬರೆದುಕೊಂಡಿದೆ.

ಜೊತೆಗೆ ರೈಲು ಕಂಪಾರ್ಟ್‌ಮೆಂಟ್‌ಗೆ ನುಗ್ಗಿ ಬೆಂಕಿ ಹಚ್ಚಿದವರ ವಿರುದ್ಧ ರೈಲ್ವೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಆರ್‌ಪಿಎಫ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಟ್ವೀಟ್ ಅನ್ನು ಆಜ್ ತಕ್ ಹಂಚಿಕೊಂಡಿದೆ.

‘‘ಈ ವೀಡಿಯೊ ಜೂನ್ 17 ರಂದು ಸಿಕಂದರಾಬಾದ್ ಠಾಣೆಯಲ್ಲಿ ನಡೆದಿದೆ. ವೀಡಿಯೊದಲ್ಲಿರುವ ವ್ಯಕ್ತಿಗಳನ್ನು ಸಂತೋಷ್ ಮತ್ತು ಪೃದ್ವಿ ಎಂದು ಗುರುತಿಸಲಾಗಿದೆ, ಐಪಿಸಿ, ಪಿಡಿಪಿಪಿ ಕಾಯ್ದೆ ಮತ್ತು ರೈಲ್ವೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಜಿಆರ್‌ಪಿ/ಆರ್‌ಪಿಎಫ್ ಬಂಧಿಸಿದ 60 ಕ್ಕೂ ಹೆಚ್ಚು ಜನರಲ್ಲಿ ಇವರೂ ಇದ್ದಾರೆ. ಹೆಚ್ಚಿನ ಬಂಧನಗಳು ನಂತರ ನಡೆಯಲಿವೆ’’ ಎಂದು ಟ್ವೀಟ್​ನಲ್ಲಿದೆ.

The Kashmir Monitor ಕೂಡ ಜೂನ್ 23, 2022 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ‘‘ಅಗ್ನಿಪಥ್ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚುವ ಆಘಾತಕಾರಿ ದೃಶ್ಯಗಳು’’ ಎಂಬ ಹೆಡ್​ಲೈನ್ ಬರೆದು ಸುದ್ದಿ ಪ್ರಕಟಿಸಿದೆ. ‘‘ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಹಿಂಸಾಚಾರ ಪ್ರಕರಣದ ಶಂಕಿತರಲ್ಲಿ ಒಬ್ಬನಾದ ಪೃಥ್ವಿರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅವನು ತನ್ನ ಸ್ನೇಹಿತನನ್ನು ಕರೆದು ವೀಡಿಯೊ ಮಾಡಲು ಕೇಳಿಕೊಂಡನು. ನಂತರ ಅವುಗಳನ್ನು ಸಾಮಾಜಿಕ ಜಾನತಾಣಗಳಲ್ಲಿ ಹಂಚಿಕೊಂಡಿದ್ದಾನೆ’’ ಎಂದು ಬರೆಯಲಾಗಿದೆ.

Amar Ujala ಹಾಗೂ Deccan Herald ಕೂಡ ರೈಲಿನ ಕೋಚ್‌ಗೆ ಬೆಂಕಿ ಹಚ್ಚಿ ವ್ಯಕ್ತಿಗಳನ್ನು ಸಂತೋಷ್ ಮತ್ತು ಪ್ರುದ್ವಿ ಎಂದು ಗುರುತಿಸಲಾಗಿದೆ ಎಂದು ಬರೆದುಕೊಂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರೈಲಿನ ಸೀಟಿಗೆ ಬೆಂಕಿ ಇಡುತ್ತಿರುವ ವಿಡಿಯೋ 2022 ರಲ್ಲಿ ಸಿಕಂದರಾಬಾದ್​ನಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ದೆಭದ್ದಾಗಿದೆ. ಮತ್ತು ಇದರಲ್ಲಿ ಯಾವುದೇ ಕೋಮು ದ್ವೇಷದ ಹಿನ್ನಲೆಯಾಗಲಿ, ಸಂಘರ್ಷವಾಗಲಿ ಇಲ್ಲ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇವರು ಹಿಂದೂಗಳಾಗಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೊನಾಲಿಸ ಭೋಸ್ಲೆಯೊಂದಿಗೆ ನಟ ಸಲ್ಮಾನ್ ಖಾನ್ ಫೋಟೊ ಎಡಿಟ್ ಮಾಡಲಾಗಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights