FACT CHECK | ವಕ್ಪ್‌ ತಿದ್ದುಪಡಿ ಮಸೂದೆ ಅಂಗೀಕಾರದ ಬೆನ್ನಲ್ಲೆ ಅಕ್ರಮ ಆಸ್ತಿಗಳ ವಿಚಾರಣೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಲೋಕಸಭೆ ಮತ್ತು ರಾಜ್ಯಸಭೆ ಸಂಸತ್ತಿನ ಎರಡೂ ಸದನಗಳಲ್ಲಿಯೂ ವಕ್ಪ್‌ ತಿದ್ದುಪಡಿ ಮಸೂದೆ2025 ಅಂಗೀಕರಿಸಲಾಗಿದೆ. ಆದರೆ, ಅನೇಕ ಮುಸ್ಲಿಂ ಸಂಘಟನೆಗಳು ಇದನ್ನು ಒಪ್ಪದೆ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ವಕ್ಫ್​ನ ಅಕ್ರಮ ಆಸ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

ಏಪ್ರಿಲ್ 7, 2025 ರಂದು ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇಷ್ಟು ಬೇಗ ಕಾರ್ಯಕ್ಷಮತೆಯನ್ನು ಕೈಗೊಳ್ಳುವುದರಲ್ಲಿ ಯೋಗಿ ಸರ್ಕಾರ ಎತ್ತಿದ ಕೈ ಉತ್ತರ ಪ್ರದೇಶದ ವಕ್ಫ್‌ನ ಅಕ್ರಮ ಮತ್ತು ದಾಖಲೆರಹಿತ ಆಸ್ತಿಗಳ ಮೇಲಿನ ವಿಚಾರಣೆ ಆರಂಭವಾಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)

ವೈರಲ್ ವಿಡಿಯೋದಲ್ಲಿ, ಕೆಲ ಅಧಿಕಾರಿಗಳು ಪೊಲೀಸರೊಂದಿಗೆ ಕ್ಯಾಂಪಸ್‌ಗೆ ಪ್ರವೇಶಿಸುವುದನ್ನು ಕಾಣಬಹುದು. ಒಳಗೆ ಹೋದಾಗ ಒಬ್ಬ ಅಧಿಕಾರಿ ಅಲ್ಲಿ ನಿಂತಿದ್ದ ವೃದ್ಧ ಮುಸ್ಲಿಮರಿಗೆ ಮದರಸಾವನ್ನು ಸೀಲ್ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಆಗ ಆ ಮುಸ್ಲಿಂ ವ್ಯಕ್ತಿ ಒಳಗಡೆಯಿಂದ ಯಾವುದೋ ದಾಖಲೆಯನ್ನು ಅಧಿಕಾರಿಗಳಿಗೆ ತೋರಿಸಲು ಮುಂದಾಗುತ್ತಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ  ವಕ್ಪ್‌ ಮಸೂದೆ ತಿದ್ದುಪಡಿಯ ನಂತರ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗೆ ಸಂಬಂಧಿಸಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರವ ವಿಡಿಯೋವನ್ನು ಪರಿಶೀಲಿಸಲು, ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ರೂರ್ಕಿ ಹರಿದ್ವಾರ ಸಮಾಚಾರ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಮಾರ್ಚ್ 22, 2025 ರಂದು ಇದೇ ವೈರಲ್ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಲಭ್ಯವಾಗಿದೆ. ಈ ವಿಡಿಯೋಗೆ ‘‘ಭಗವಾನ್‌ಪುರ ತಹಸಿಲ್ ಆಡಳಿತವು ಅಕ್ರಮವಾಗಿ ಕಾರ್ಯನಿರ್ವಹಿಸುವ ಮದರಸಾಗಳ ಬಗ್ಗೆ ತನಿಖೆ ನಡೆಸಿತು’’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವೈರಲ್ ವಿಡಿಯೋ ವಕ್ಫ್ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೂ ಮುಂಚೆಯೇ ನಡೆದ ಘಟನೆಯದ್ದಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ಯೂಟ್ಯೂಬ್​ನಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, ಮಾರ್ಚ್ 26, 2025 ರಂದು ಡಿಡಿ ನ್ಯೂಸ್ ಉತ್ತರಾಖಂಡ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ “ಹರಿದ್ವಾರದಲ್ಲಿ ಅಕ್ರಮ ಮದರಸಾಗಳ ವಿರುದ್ಧ ಆಡಳಿತದ ಕ್ರಮ ಮುಂದುವರೆದಿದೆ” ಎಂಬ ಶೀರ್ಷಿಕೆಯ ಸುದ್ದಿ ವರದಿಯನ್ನು ಕಂಡುಕೊಂಡಿದ್ದೇವೆ. ವೀಡಿಯೊದಲ್ಲಿನ 1:23 ಸಮಯದ ಸ್ಟ್ಯಾಂಪ್‌ನಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಅಧಿಕಾರಿಗಳನ್ನು ಕಾಣಬಹುದು.

ಇದೇ ವೇಳೆ ಮಾರ್ಚ್ 24, 2025 ರಂದು ನ್ಯೂಸ್ ನೇಷನ್ ಯೂಟ್ಯೂಬ್ ಚಾನೆಲ್​ನಲ್ಲಿ ಕೂಡ ಈ ಕುರಿತು ವೀಡಿಯೋ ವರದಿ ಮಾಡಲಾಗಿದ್ದು,  ಉತ್ತರಾಖಂಡದ ಆಡಳಿತವು ಕಠಿಣ ನಿಲುವನ್ನು ತೆಗೆದುಕೊಂಡು ಹರಿದ್ವಾರ ಮತ್ತು ಹತ್ತಿರದ ಭಗವಾನ್‌ಪುರ ಮತ್ತು ಲಕ್ಸರ್ ಪ್ರದೇಶಗಳಲ್ಲಿ ಹಲವಾರು ಮದರಸಾಗಳನ್ನು ಸೀಲ್ ಮಾಡಿದೆ ಎಂದು ಹೇಳಲಾಗಿದೆ. ಸುದ್ದಿಯ ಪ್ರಕಾರ, ಆಡಳಿತವು ಆಗ 110 ಕ್ಕೂ ಹೆಚ್ಚು ಮದರಸಾಗಳನ್ನು ಕಾನೂನುಬಾಹಿರ ಎಂದು ಕರೆದು ನಿಷೇಧಿಸಿತ್ತು. ಈ ವೀಡಿಯೊದಲ್ಲಿನ 1:24 ಸಮಯದ ಸ್ಟ್ಯಾಂಪ್‌ನಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಅಧಿಕಾರಿಗಳನ್ನು ಕಾಣಬಹುದು.

Waqf

ಉತ್ತರಾಖಂಡ ಆಡಳಿತವು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿಸದ ಮದರಸಾಗಳನ್ನು ಮುಚ್ಚುವ ಅಭಿಯಾನವನ್ನು ಪ್ರಾರಂಭಿಸಿದೆ. ಮುಸ್ಲಿಂ ಸಂಘಟನೆಗಳು ಈ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ ಎಂಬ ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಇದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು ಎಂದು ಸೌತ್ ಚೆಕರ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ವಿಡಿಯೋಗೂ ವಕ್ಫ್ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ, ಉತ್ತರಾಖಂಡದಲ್ಲಿ ನೋಂದಾಯಿಸದ ಮದರಸಾಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರುವ ಹಳೆಯ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಮನ ಮೂರ್ತಿಗೆ ಕೈಮುಗಿದ್ರಾ ಅಸಾದುದ್ದೀನ್ ಓವೈಸಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights