FACT CHECK | ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ 150 ಎಕರೆ ಜಮೀನು ಕಸಿದುಕೊಂಡ್ರಾ ಮುಸ್ಲಿಮರು?
ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ವಿರೋಧಿ ಹೋರಾಟಗಳು ಮತ್ತಷ್ಟು ಹಿಂಸಾರೂಪ ಪಡೆದಿದ್ದು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು ಸುಮಾರು 150ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ಮುರ್ಷಿದಾಬಾದ್ನ ಮುಸ್ಲಿಮ್ ಪ್ರಾಬಲ್ಯದ ಪ್ರದೇಶಗಳಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು ಲೂಟಿಗಳು ಕೂಡ ಶುರುವಾಗಿವೆ ಎಂದು ವರದಿ ಆಗಿವೆ. ಇದರ ಮಧ್ಯೆ ಮುಸ್ಲಿಮರು ಹಿಂದೂಗಳ 12 ಗ್ರಾಮಗಳನ್ನು ಖಾಲಿ ಮಾಡಿಸಿ, 150 ಎಕರೆ ಜಮೀನು ಕಸಿದುಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
#AllEyesOnWestBangalZihadiAttack
पश्चिमबंगाल में 12 गांव खाली कराकर 150 एकड़ हिन्दू का खेत खत्म कर दिया,पशु, वृक्ष, गाड़ी, बंगला, फूंक रहें हैं… जिहादी #Murshidabad_Zihadi_Attack pic.twitter.com/uok3TiVcsJ— गौ_पुत्र (3rd Account) Twittes are personal. (@binodojha999) April 15, 2025
ಲಾಲ್ ಕಿಶೋರ್ ಯಾದವ್ ಎಂಬ ಎಕ್ಸ್ ಬಳಕೆದಾರರು ತಮ್ಮ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. “ಪಶ್ಚಿಮ ಬಂಗಾಳದಲ್ಲಿ 12 ಗ್ರಾಮಗಳನ್ನು ಖಾಲಿ ಮಾಡಿಸಿ, ಹಿಂದೂಗಳ 150 ಎಕರೆ ಜಮೀನು ಕಸಿದುಕೊಳ್ಳಲಾಗಿದ್ದು, ಪ್ರಾಣಿಗಳು, ಮರಗಳು, ವಾಹನಗಳು ಮತ್ತು ಬಂಗಲೆಗಳನ್ನು ಸುಡಲಾಗಿದೆ. . ನಮಾಜ್ ಮಾಡುವವರು ಮತ್ತು ಭಾರತದ ಸೆಕ್ಯುಲರ್ ಮತ್ತು ಬುದ್ಧಿಜೀವಿ ಮಾಧ್ಯಮಕ್ಕೆ ಭಯವಿಲ್ಲ. ನನ್ನ ಮುಸ್ಲಿಂ ಹುಲಿಗಳೇ, ಇದೇ ರೀತಿ ಹಿಂದೂಗಳನ್ನು ತುಳಿಯುತ್ತಲೇ ಇರಿ. ಅರ್ಥ ಮಾಡಿಕೊಳ್ಳಿ ಬಂಗಾಳ ನಿಮ್ಮದು, ಆಮೇಲೆ ಒಂದು ದಿನ ಇಡೀ ಹಿಂದೂಸ್ತಾನ ನಿಮ್ಮದಾಗುತ್ತದೆ. ಸರ್ಕಾರದ ವಿರುದ್ಧ ಹೋರಾಡುವ ಬದಲು ಹಿಂದೂಗಳನ್ನು ಈ ಜಿಹಾದಿ ಮತಾಂಧರು ಟಾರ್ಗೆಟ್ ಮಾಡುತ್ತಿದ್ದಾರೆ. ಗಜ್ವಾ-ಎ-ಹಿಂದ್ ಜಿಂದಾಬಾದ್,” ಎಂದು ಬರೆದಿದ್ದರು.
#पश्चिमबंगाल में 12 गांव खाली कराकर 150 एकड़ हिन्दू का खेत खत्म कर दिया पशु वृक्ष गाड़ी बंगला, फूंक रहें हैं
ममता बनर्जी इस पर जवाब क्यों नहीं देतीं हिंदूओ कुछ तो बोलोगे….. pic.twitter.com/Z7UWgmP9Hb— Prashant RSS (@prashant_RSSorg) April 14, 2025
ಇದೇ ರೀತಿಯ ಹೇಳಿಕೆಗಳೊಂದಿಗೆ ಈ ವಿಡಿಯೋವನ್ನು ಗೌ ಪುತ್ರ, ಪ್ರಶಾಂತ್ ಆರ್ಎಸ್ಎಸ್, ದುರ್ಗೇಶ್ ಸಿಂಗ್ ರಜಪೂತ್, ಅರ್ಜುನ್ ಕುಂದರವಾಲ್, ಕಾಫಿರ್ ರಾಜನ್, ರಾಷ್ಟ್ರೀಯ ಸನಾತನಿ ಹಿಂದೂ ಮತ್ತು ವಿಪಿನ್ ಮೌರ್ಯ ಸೇರಿದಂತೆ ಹಲವು ಎಕ್ಸ್ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಗಳನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ವೈರಲ್ ಆಗಿರುವ ವಿಡಿಯೋದ ಭಾಗವು ಇದರಲ್ಲಿ ಕಂಡುಬಂದಿದೆ. ಈ ವಿಡಿಯೋ ಸುಮಾರು 4 ತಿಂಗಳ ಹಿಂದಿನದು ಮತ್ತು ಪಶ್ಚಿಮ ಬಂಗಾಳದ್ದಲ್ಲ ಎಂದು ತಿಳಿದುಬಂದಿದೆ. ಅಸಲಿಗೆ ಇದು ಬಾಂಗ್ಲಾದೇಶದ ವಿಡಿಯೋ ಆಗಿದೆ.
ಬಾಂಗ್ಲಾ ಅಫೇರ್ಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ನವೆಂಬರ್ 28, 2024ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. “ಪಶ್ಚಿಮ ಬಂಗಾಳದ ಶೇರ್ಪುರದಲ್ಲಿ ಧಾರ್ಮಿಕ ಸ್ಥಳದ ಮೇಲೆ ದಾಳಿ ಮಾಡಿ ಲೂಟಿ ಮತ್ತು ಬೆಂಕಿ ಹಚ್ಚಲಾಗಿದೆ. ದಾಳಿಗೆ ಕಾರಣ ಏನೆಂದು ಇನ್ನೂ ತಿಳಿದಿಲ್ಲ, ಆದರೆ ಈ ಘಟನೆಯಿಂದ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ,” ಎಂದು ವಿಡಿಯೋದ ವಿವರಣೆಯಲ್ಲಿ ಬರೆಯಲಾಗಿದೆ.
ವಿಡಿಯೋದಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, 2024 ನವೆಂಬರ್ 27 ರಂದು ಪ್ರಕಟವಾದ ‘ಢಾಕಾ ಟ್ರಿಬ್ಯೂನ್’ ವರದಿಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಯಿತು. “ಬಾಂಗ್ಲಾದೇಶದ ಶೇರ್ಪುರದ ಲಚ್ಮನ್ಪುರ ಪ್ರದೇಶದಲ್ಲಿ ಮುರ್ಷಿದ್ಪುರ ದರ್ಬಾರ್ ಷರೀಫ್ ಅನ್ನು ಧ್ವಂಸಗೊಳಿಸಿ ಲೂಟಿ ಮಾಡಲಾಗಿದೆ,” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದರ್ಬಾರ್ ಷರೀಫ್ ಖ್ವಾಜಾ ಬದ್ರುದ್ದುಜಾ ಹೈದರ್ (ದೋಜಾ ಪೀರ್) ಅವರ ಧಾರ್ಮಿಕ ಸ್ಥಳವಾಗಿದೆ.
“ದಾಳಿ ಮಾಡಿದವರು ಮತ್ತು ದರ್ಬಾರ್ ಷರೀಫ್ ಅನ್ನು ರಕ್ಷಿಸಲು ಬಂದವರ ನಡುವೆ ಘರ್ಷಣೆ ಸಂಭವಿಸಿದ್ದು, ಇದರಲ್ಲಿ 13 ಜನರು ಗಾಯಗೊಂಡಿದ್ದಾರೆ. ಸ್ಥಳೀಯ ಮದರಸದ ಶಿಕ್ಷಕರು ಮತ್ತು ನಿವಾಸಿಗಳು ದರ್ಬಾರ್ನಲ್ಲಿ ಇಸ್ಲಾಮಿ ವಿರೋಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಕಾರಣದಿಂದ ದಾಳಿ ನಡೆದಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೆ, 7 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ,” ಎಂದು ವರದಿಯಲ್ಲಿ ವಿವರ ಇದೆ. ಇದೇ ಮಾಹಿತಿಯನ್ನು ‘ದ ಡೈಲಿ ಸ್ಟಾರ್’ ವರದಿಯಲ್ಲೂ ಕಾಣಬಹುದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಹಿಂದೂಗಳ 12 ಗ್ರಾಮಗಳನ್ನು ಖಾಲಿ ಮಾಡಿಸಿ ಅವರ ಜಮೀನನ್ನು ಕಸಿದುಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋಗಳು ಸುಳ್ಳು ಎಂದು ತಿಳಿದುಬಂದಿದೆ. ವಾಸ್ತವವಾಗಿ ವೈರಲ್ ಆಗುತ್ತಿರುವ ವಿಡಿಯೋ ಬಾಂಗ್ಲಾದೇಶದ್ದು ಮತ್ತು ನಾಲ್ಕು ತಿಂಗಳ ಹಿಂದಿನದ್ದು . ಹಾಗಾಗಿ ಪೋಸ್ಟ್ನ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಂಬೇಡ್ಕರ್ ಜಯಂತಿಯಂದು ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಲಾಗಿದೆಯೇ?

