FACT CHECK | ಪಿಕಪ್ ವಾಹನದ ಸಹಾಯದಿಂದ ವಿಮಾನ ಲ್ಯಾಂಡ್ ಆಗುವ ವಿಡಿಯೋದ ಅಸಲೀಯತ್ತೇನು ಗೊತ್ತೇ?
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಇಂಡಿಗೋ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ನಡೆದಿತ್ತು. ಇಲ್ಲಿ ಅಂತಹದ್ದೆ ಒಂದು ಘಟನೆ ನಡೆದಿದ್ದು ಸ್ವಲ್ಪ ಭಿನ್ನವಾಗಿದೆ. ವಿಮಾನದ ಲ್ಯಾಂಡಿಂಗ್ ಗೇರ್ ಕೆಟ್ಟುಹೋಗಿದ್ದರಿಂದ ಚಲಿಸುತ್ತಿರುವ ಪಿಕಪ್ ಟ್ರಕ್ ಮೇಲೆ ಫ್ಲೈಟ್ ಲ್ಯಾಂಡ್ ಆಗಿದೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
Airport Worker Saves Airplane pic.twitter.com/QFPFb4HWzL
— CLEAN CAR CLUB (@TheCleanCarClub) April 23, 2025
‘ಕ್ಲೀನ್ ಕಾರ್ ಕ್ಲಬ್‘ ಎಂಬ ಎಕ್ಸ್ ಖಾತೆಯಲ್ಲಿ ವಿಮಾನವೊಂದು ಪಿಕಪ್ ಕಾರಿನ ಮೇಲೆ ಇಳಿಯುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರ ಜೊತೆಗೆ “ಏರ್ಪೋರ್ಟ್ ಸಿಬ್ಬಂದಿ ವಿಮಾನವನ್ನು ರಕ್ಷಿಸಿದರು” ಎಂದು ಬರೆಯಲಾಗಿದೆ.
Real Stunt By airport Worker
Save the life of Hundreds pic.twitter.com/X1ujYGdQL5— Salman (@salmangreen) April 23, 2025
ಇದೇ ವಿಡಿಯೋವನ್ನು ‘ಸಲ್ಮಾನ್’ ಎಂಬವರೂ ಹಂಚಿಕೊಂಡಿದ್ದು, “ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ನಿಜವಾದ ಸಾಹಸ, ನೂರಾರು ಜನರ ಜೀವ ರಕ್ಷಣೆ,” ಎಂದು ಬರೆದಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 13 ವರ್ಷಗಳ ಹಿಂದೆ ಅಂದರೆ 2012ರಲ್ಲಿ ಅಪ್ಲೋಡ್ ಮಾಡಲಾಗಿದ್ದ ನಿಸ್ಸಾನ್ ಕಂಪನಿಯ ಅಧಿಕೃತ ವಿಡಿಯೋವೊಂದು ಲಭ್ಯವಾಗಿದೆ.
ಇದನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಪರಿಶೀಲಿಸಿದಾಗ ಇದು ನಿಸ್ಸಾನ್ ಕಂಪನಿಯ ಜಾಹೀರಾತು ಎಂದು ತಿಳಿದು ಬಂತು. ಇದೊಂದು ಕೇವಲ ಕಾಲ್ಪನಿಕ ವಿಡಿಯೋ ಆಗಿದ್ದು, ನಿಸ್ಸಾನ್ ಕಂಪನಿಯು ತನ್ನ ವಾಹನದ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ವಿಡಿಯೋವನ್ನು ಮಾಡಿದೆ. ಕೇವಲ ಜಾಹೀರಾತಿನ ಉದ್ದೇಶದಿಂದ ಮಾತ್ರ ಈ ವಿಡಿಯೋ ಮಾಡಲಾಗಿದೆ ಎಂದು ಸ್ಪಷ್ಟವಾಯಿತು.
ಮೋಟಾರ್ ಟ್ರೆಂಡ್ ಎಂಬ ವೆಬ್ಸೈಟ್ನಲ್ಲಿಯೂ 2021ರಲ್ಲಿ ಪ್ರಕಟವಾದ ವರದಿ ಲಭ್ಯವಾಗಿದೆ. ಆ ವರದಿಯಲ್ಲಿಯೂ ಇದು ಜಾಹೀರಾತು ಎಂದು ಉಲ್ಲೇಖವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಮಾನವೊಂದು ಕಾರಿನ ಮೇಲೆ ಲ್ಯಾಂಡ್ ಆಗುವ ವಿಡಿಯೋ ನೈಜ ಘಟನೆಯ ದೃಶ್ಯಾವಳಿಗಳಲ್ಲ. ಇದೊಂದು ಜಾಹಿರಾತಿಗೆ ಸಂಬಂಧಿಸಿದ್ದಾಗಿದೆ. ಇದರಿಂದ ‘ಏರ್ಪೋರ್ಟ್ ಸಿಬ್ಬಂದಿ ವಿಮಾನವನ್ನು ರಕ್ಷಿಸಿ, ನೂರಾರು ಜನರ ಪ್ರಾಣ ಉಳಿಸಿದರು’ ಎಂಬುದು ಸಂಪೂರ್ಣ ಸುಳ್ಳು. ಇದು ನಿಸ್ಸಾನ್ ಕಂಪನಿಯ ಜಾಹೀರಾತಾಗಿದ್ದು, ಕಾಲ್ಪನಿಕ ವಿಡಿಯೋ ಆಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಹಲ್ಗಾಮ್ ದಾಳಿಯ ನಂತರ ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಮುಸ್ಲಿಂ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ರಾ?

