FACT CHECK | ಬಲಿ ನೀಡಲು ಗೋವು ಯೋಗ್ಯವಾದ ಪ್ರಾಣಿ ಎಂದು ಹೇಳಿದ್ರಾ ಪ್ರಧಾನಿ ಮೋದಿ?
ಪ್ರಧಾನಮಂತ್ರಿ ನರೇಂದ್ರ ಮೋದಿ, ಗೋವುಗಳನ್ನು ಉಲ್ಲೇಖಿಸಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಗೋವುಗಳನ್ನು ಕುರ್ಬಾನಿ (ಬಲಿ) ಗೆ ಉತ್ತಮ ಪ್ರಾಣಿ ಎಂದು ಹೇಳಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ವಿಡಿಯೊ 2025ರ ಜೂನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದ್ದು, ಇದು ಭಾರತದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ವಿವಾದವನ್ನು ಸೃಷ್ಟಿಸುವ ಉದ್ದೇಶದಿಂದ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೊವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡು, ಪ್ರಧಾನಮಂತ್ರಿ ಅವರ ವಿರುದ್ಧ ಜನ ಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದೆ. ವಿಶೇಷವಾಗಿ ಹಿಂದೂ ಸಮುದಾಯದವರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಹಲವರು ಇದನ್ನು ಸುಳ್ಳು ಎಂದು ಹೇಳುತ್ತಿದ್ದು, ಪ್ರಧಾನಿ ಮೋದಿ ಅವರು ತಮ್ಮ ಯಾವ ಭಾಷಣಗಳಲ್ಲಿಯೂ ಅಪ್ಪಿತಪ್ಪಿ ಕೂಡ ಈ ಮಾತುಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ, ಆದರೂ ಹಲವರು ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆಯನ್ನು ಪರಿಶಿಲಿಸಲು ವೈರಲ್ ಪೋಸ್ಟ್‌ನ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಜೂನ್ 7, 2024 ರಂದು ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಲಭ್ಯವಾಗಿದೆ.
ಇದರಲ್ಲಿ ಅವರು ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಅದೇ ಉಡುಪನ್ನು ಧರಿಸಿರುವುದನ್ನು ಮತ್ತು ಅದೇ ಹಿನ್ನೆಲೆಯನ್ನು ಹೊಂದಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಅವರು ಎನ್‌ಡಿಎ ಸರ್ಕಾರದ ಗುರಿಗಳ ಕುರಿತು ಮಾತನಾಡಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋ ತಿರುಚಿರುವ ವಿಡಿಯೋವಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತದೆ.

ಹೀಗಾಗಿ ವೈರಲ್ ವಿಡಿಯೋವನ್ನು ನಾವು AI ವಿಡಿಯೋ ಮತ್ತು ಫೋಟೋಗಳನ್ನು ಪತ್ತೆ ಹಚ್ಚುವ ವೆಬ್‌ಸೈಟ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ವೈರಲ್ 61 ಅನುಮಾನ ರೇಟಿಂಗ್ ನೀಡಿದೆ, ಅಂದರೆ “ವೀಡಿಯೊದ ಕೆಲವು ಭಾಗಗಳು ಅನುಮಾನಾಸ್ಪದವಾಗಿವೆ.” ಎಂಬ ಫಲಿತಾಂಶ ಬಂದಿದೆ. ಇನ್ನೂ ಕೆಲವೊಂದು ಆಡಿಯೋ ಡಿಟೆಕ್ಟರ್ ವೆಬ್‌ಸೈಟ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಆಡಿಯೋ AIನಿಂದ ನಿರ್ಮಿಸಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ಬಗ್ಗೆ ನಾವು “PM Modi,” “cow” ಮತ್ತು “sacrifice” ಎಂಬ ಕೀವರ್ಡ್‌ಗಳನ್ನು ಬಳಸಿ ಪ್ರಧಾನಿ ಮೋದಿ ಅವರ ಹೇಳಿಕೆಯ ವರದಿಗಳಿಗಾಗಿ ಸರ್ಚ್ ಮಾಡಿದಾಗ, ಈ ಕುರಿತು ನಮಗೆ ಯಾವುದೇ ರೀತಿಯಾದ ವರದಿಗಳು ಕೂಡ ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಬಲಿ ನೀಡಲು ಗೋವುಗಳು ಉತ್ತಮ ಪ್ರಾಣಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ AI ನಿಂದ ನಿರ್ಮಿಸಲಾಗಿದೆ. ಹೀಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | Parle-G ಬಿಸ್ಕೆಟ್ ಪ್ಯಾಕ್ ಮೇಲೆ ಇರುವ ಮಗುವಿನ ಚಿತ್ರ ನನ್ನದೇ ಎಂದು ಹುಡುಗಿಯೊಬ್ಬಳ ಕ್ಲೈಮ್ ನಿಜವೇ?

