FACT CHECK | ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದು ಸುಳ್ಳು

ಜೂನ್ 12, 2025ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಒಬ್ಬನೇ ಒಬ್ಬ ಪ್ರಯಾಣಿಕ ಎಂದರೆ ವಿಶ್ವಾಸ್‌ ರಮೇಶ್‌ ಕುಮಾರ್‌. ಈಗ ಆತನನ್ನು ಬಂಧಿಸಲಾಗಿದೆ ಎಂಬ ಪೊಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

 

View this post on Instagram

 

A post shared by Omalians crib (@omalians__crib)

ವಿಶ್ವಾಸ್‌ ರಮೇಶ್‌ ಕುಮಾರ್‌ ತಾನು ದುರಂತ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ ಎಂದು ಸುಳ್ಳು ಹೇಳಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಪ್ರತಿಪಾದಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಜೂನ್‌ 18, 2025ರಂದು ಮತ್ತೊಂದು ಇನ್‌ಸ್ಟಾಗ್ರಾಮ್‌ ಖಾತೆದಾರರೂ ಸಹ ವೈರಲ್‌ ಆ ವಿಡಿಯೋವನ್ನು ʼಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಏರ್ ಇಂಡಿಯಾದ AI171 ವಿಮಾನ ಬೋಯಿಂಗ್ 787 -8 ಡ್ರೀಮ್‌ಲೈನರ್ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ 242 ಜನರಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ವಿಮಾನದಲ್ಲಿ ಇರುವುದಾಗಿ ಸುಳ್ಳು ಹೇಳಿದ ನಂತರ ಅವರ ಮನೆಯಲ್ಲಿ ಬಂಧಿಸಲಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ,

ನಮಗೆ ವಿಶ್ವಾಸ್‌ ಕುಮಾರ್‌ ರಮೇಶ್‌ರನ್ನು ಬಂಧಿಸಲಾಗಿದೆ ಎಂದು ಯಾವುದೇ ವರದಿಯೂ ಕಂಡುಬಂದಿಲ್ಲ. ನಂತರ ನಾವು ಗುಜರಾತ್ ಡಿಜಿಪಿ , ಗುಜರಾತ್ ಪೊಲೀಸ್ ಮತ್ತು ಅಹಮದಾಬಾದ್ ಪೊಲೀಸರ ಅಧಿಕೃತ ಎಕ್ಸ್ ಖಾತೆಗಳನ್ನು ಪರಿಶೀಲಿಸಿದೆವು , ಅದರಲ್ಲೂ ನಮಗೆ ಅವರ ಬಂಧನದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಜೂನ್ 12 ರಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದ್ದು, ಅದರಲ್ಲಿ ಬೋರ್ಡಿಂಗ್ ಪಾಸ್‌ನ ಚಿತ್ರವಿದ್ದು, ಅದರಲ್ಲಿ ಪ್ರಯಾಣಿಕನ ಹೆಸರು ವಿಶ್ವಾಸ್‌ ಕುಮಾರ್ ರಮೇಶ್ ಮತ್ತು ಅವರ ಸೀಟ್ ಸಂಖ್ಯೆ 11A ಅನ್ನು ಹೈಲೈಟ್ ಮಾಡಲಾಗಿದೆ. ಇದರಿಂದ ಸಾಭೀತಾಗಿದ್ದೇನೆಂದರೆ, ವಿಶ್ವಶ್ ಕುಮಾರ್ ರಮೇಶ್ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಖಚಿತವಾಗಿದೆ. ಬೋರ್ಡಿಂಗ್ ಪಾಸ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.

ಈ ಬಗ್ಗೆ ಮತ್ತಷ್ಟು ಸರ್ಚ್ ಮಾಡಿದಾಗ, ಅವರು ವಿಮಾನ ಹತ್ತಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು, ನಾವು ಪ್ರಯಾಣಿಕರ ಪಟ್ಟಿಯನ್ನು ಹುಡುಕಿದೆವು. ಹುಡುಕಾಟದಲ್ಲಿ ನಮಗೆ, ಜೂನ್‌ 12, 2025ರಂದು ʼಟೈಮ್ಸ್‌ ಆಫ್‌ ಇಂಡಿಯಾʼ ವೆಬ್‌ಸೈಟ್‌ನಲ್ಲಿ ʼಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ: ಪ್ರಯಾಣಿಕರ ಸಂಪೂರ್ಣ ಪಟ್ಟಿ ಬಿಡುಗಡೆ, ಇದರಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಸೇರಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ಪ್ರಯಾಣಿಕರ ಪಟ್ಟಿಯನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ಮುಂದುವರಿದು, 12ರಂದು ಪತನಗೊಂಡ ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸಿದಾಗ ಅದರಲ್ಲಿ ವಿಶ್ವಾಸ್‌ ಹೆಸರು ಇತ್ತು. ಅಹಮದಾಬಾದ್‌ ನಗರದ ವಲಯ–2ರ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಜೈಪಾಲ್‌ ಸಿಂಗ್‌ ರಾಥೋಡ್‌ ಅವರನ್ನು ಸಂಪರ್ಕಿಸಿದಾಗ, ವಿಶ್ವಾಸ್‌ ಅವರನ್ನು ಬಂಧಿಸಲಾಗಿದೆ ಎಂಬುದು ಸುಳ್ಳು ಎಂದು ದೃಢಪಡಿಸಿದರು ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

ಜೂನ್‌ 18, 2025ರಂದು ನ್ಯೂಸ್‌ ಫಸ್ಟ್‌ ಕನ್ನಡ ವೆಬ್‌ಸೈಟ್‌ನಲ್ಲಿ ʼವಿಮಾನ ದುರಂತದಿಂದ ಪಾರಾಗಿದ್ದ ವಿಶ್ವಾಸ್ ಕುಮಾರ್ ಡಿಸ್ಚಾರ್ಜ್.. ದುಃಖದಲ್ಲೇ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿʼ ಎಂಬ ಹೆಡ್‌ಲೈನ್‌ನೊಂಡಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ಕಾಣಬಹುದು. ವರದಿಯಲ್ಲಿ ʼಅಹಮದಾಬಾದ್ ವಿಮಾನ ಪತನಗೊಂಡ ವೇಳೆ 242 ಪ್ರಯಾಣಿಕರು ಜೀವ ಉಸಿರು ಚೆಲ್ಲಿದ್ದರು. ಈ ಪೈಕಿ ಓರ್ವ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಎನ್ನುವರು ಮಾತ್ರ ಬದುಕುಳಿದು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಇದೀಗ ವಿಶ್ವಾಸ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆʼ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವಾಸ್‌ ಕುಮಾರ್‌ ರಮೇಶ್‌ ಅವರನ್ನು ಯಾವುದೇ ಪ್ರಕರಣದಲ್ಲೂ ಬಂಧಿಸಲಾಗಿಲ್ಲ. ವಿಶ್ವಾಸ್‌ ಕುಮಾರ್‌ AI 171 ವಿಮಾನದಲ್ಲಿ ಪ್ರಯಾಣಿಸಿದ್ದು, ವಿಮಾನ ಅಪಘಾತದಿಂದ ಬದುಕುಳಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಜೂನ್ 18, 2025 ರಂದು ಅವರು ತಮ್ಮ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವಿಮಾನದಲ್ಲಿ 11A ಸೀಟಿಗಾಗಿ ಪ್ರಯಾಣಿಕರು ಜಗಳ ಮಾಡುತ್ತಿದ್ದಾರೆ ಎಂದು ಸ್ಕ್ರಿಪ್ಟ್‌ ಮಾಡಿದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights