FACT CHECK | ಅಮೆರಿಕಾದ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಭಾರತೀಯ ಮಹಿಳೆ ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ

ಮಹಿಳೆಯೊಬ್ಬರು ತನ್ನ ಉಡುಪಿನೊಳಗೆ ಅಡಗಿಸಿಟ್ಟಿದ್ದ ಬಟ್ಟೆಗಳನ್ನು ಹೊರತೆಗೆಯುತ್ತಿರುವಾಗ ಪುರುಷನೊಬ್ಬ ಅವಳನ್ನು ಹಿಡಿದುಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಭಾರತೀಯ ಪ್ರವಾಸಿ ಜಿಮಿಶಾ ಅವ್ಲಾನಿ ಎಂಬ ಮಹಿಳೆ ಅಮೆರಿಕಾದ ಅಂಗಡಿಯಿಂದ ಸುಮಾರು $1,300 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದಾಗ ಸಿಕ್ಕಿಬಿದ್ದಿರುವ ಘಟನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ದೇಶದ ಮಾನ ಸಮ್ಮಾನ ಕಳೆಯುವುದು ಎಷ್ಟು ನಾಚಿಕೆಗೇಡು ಈ ಮಹಿಳೆಯ ಹೆಸರು ಅನಾಯಾ ಅವಲಾನಿ ಅಮೇರಿಕಾದಲ್ಲಿ ಒಂದು ಸ್ಟೋರ್ ನಲ್ಲಿ 5 ತಾಸು ಶಾಪಿಂಗ್ ಮಾಡಿ 1300 ಡಾಲರ್ ಸಾಮಾನು ಕದ್ದು ಕೊಂಡು ಹೋಗುತ್ತಿರುವಾಗ ಸಿಸಿಟಿವಿಯಲ್ಲಿ ಸೆರೆಯಾದ ಇವರ ಕಳ್ಳತನ ನೋಡಿ ಪೊಲೀಸ್ ಅರೆಸ್ಟ್ ಮಾಡಿತು” ಎಂದು ಬರೆದಿದ್ದಾರೆ.  ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೇ 2 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ಸ್ಪ್ಯಾನಿಷ್ ಶೀರ್ಷಿಕೆಯೊಂದಿಗೆ, ಇಂಗ್ಲಿಷ್‌ಗೆ ಅನುವಾದಿಸಿದಾಗ, “ಸಾಲ್ಟಿಲ್ಲೊ, ಕೊವಾಹಿಲಾ ಐ ಸಿಯುಡಾಡ್ ಡೆಸ್ನುಡಾದಲ್ಲಿನ ವಾಣಿಜ್ಯ ಕೇಂದ್ರದಲ್ಲಿ ಗರ್ಭಿಣಿ ವೇಷದಲ್ಲಿ ಬಟ್ಟೆಗಳನ್ನು ಬಚ್ಚಿಟ್ಟ ಮಹಿಳೆ” ಎಂದು ಬರೆಯಲಾಗಿದೆ.

ಇದಲ್ಲದೆ, ವೈರಲ್ ವೀಡಿಯೊದಲ್ಲಿ, ಕೊಪ್ಪೆಲ್ ಎಂಬ ಅಂಗಡಿಯ ಮುಂದೆ ಒರ್ವ ಮಹಿಳೆ ನಿಂತಿರುವುದನ್ನು ನೋಡಬಹುದು. ಕೊಪ್ಪೆಲ್ ಮೆಕ್ಸಿಕೋದಲ್ಲಿ ಒಂದು ಡಿಪಾರ್ಟ್‌ಮೆಂಟಲ್ ಸ್ಟೋರ್ ಎಂದು ನಾವು ಕಂಡುಕೊಂಡಿದ್ದೇವೆ.

ಮೇ 1 ರಂದು ಮೆಕ್ಸಿಕೋ ಮೂಲದ ಝೊಕಾಲೊ ಎಂಬ ಮತ್ತೊಂದು ಯೂಟ್ಯೂಬ್ ಚಾನೆಲ್ ಕೂಡ ಇದೇ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. “ಮಹಿಳೆ ಗರ್ಭಿಣಿಯಂತೆ ನಟಿಸಿ ಪ್ಲಾಜಾ ಪ್ಯಾಟಿಯೊದಲ್ಲಿ ಅಂಗಡಿ ಕಳ್ಳತನ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಇದನ್ನು ಆಧಾರವಾಗಿಟ್ಟುಕೊಂಡು ಕೀವರ್ಡ್‌ ಬಳಸಿಕೊಂಡು ಸರ್ಚ್ ಮಾಡಿದಾಗ,  ಅದೇ ವಿಡಿಯೋವನ್ನು ಮೇ 2 ರಂದು ಮೆಕ್ಸಿಕನ್ ಸುದ್ದಿ ವೆಬ್‌ಸೈಟ್ ಸಹ ಹಂಚಿಕೊಂಡಿರುವುದು ಕಂಡುಬಂದಿದೆ.

ಮೆಕ್ಸಿಕೋದ ಸಾಲ್ಟಿಲ್ಲೊದಲ್ಲಿ, ಕೊಪ್ಪೆಲ್ ಡಿಪಾರ್ಟ್‌ಮೆಂಟ್ ಅಂಗಡಿಯಿಂದ ಕನಿಷ್ಠ 10 ಜೋಡಿ ಜೀನ್ಸ್‌ಗಳನ್ನು ಕದ್ದು ಗರ್ಭಿಣಿಯಂತೆ ನಟಿಸುತ್ತಿದ್ದ ಮಹಿಳೆಯೊಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ. ಅವರು ಸ್ಥಳೀಯವಾಗಿ ‘ಫಾರ್ಡೆರಿಸ್ಮೊ’ ಎಂದು ಕರೆಯಲ್ಪಡುವ ವಿಧಾನವನ್ನು ಗರ್ಭಿಣಿ ಹೊಟ್ಟೆಯನ್ನು ಅನುಕರಿಸುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಉಡುಪಿನ ಅಡಿಯಲ್ಲಿ ಸರಕುಗಳನ್ನು ಮರೆಮಾಡಿದ್ದರು. ವೀಡಿಯೊದಲ್ಲಿ ದಾಖಲಾಗಿರುವ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಕೆಯ ಮೇಲೆ ಔಪಚಾರಿಕ ಆರೋಪಗಳು ದಾಖಲಾಗಿವೆಯೇ ಎಂಬುದು ಸ್ಪಷ್ಟವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮೆಕ್ಸಿಕೋದ ಸಾಲ್ಟಿಲ್ಲೊದಲ್ಲಿ, ಕೊಪ್ಪೆಲ್ ಡಿಪಾರ್ಟ್‌ಮೆಂಟ್ ಅಂಗಡಿಯಿಂದ  ಜೀನ್ಸ್‌ಗಳನ್ನು ಕದ್ದು ಸಿಕ್ಕಿಬಿದ್ದ ಘಟನೆಯ ಹಳೆಯ ವಿಡಿಯೋವನ್ನು ಅಮೆರಿಕಾದಲ್ಲಿ ಭಾರತೀಯ ಮಹಿಳೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಂದೂ ಬಾಲಕಿಗೆ ಚಾಕು ತೋರಿಸಿ ಬೆದರಿಸಿದ ವ್ಯಕ್ತಿ ಮುಸ್ಲಿಂ ಅಲ್ಲ..!!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights